ಪ್ರಚಲಿತ

ಚಂದ್ರಯಾನ -3: ಇಸ್ರೋ ಮಾಜಿ ಮುಖ್ಯಸ್ಥ ಕೆ. ಶಿವನ್ ಹೇಳಿದ್ದೇನು?

ಚಂದ್ರಯಾನ -3 ನಡೆಸಿ ಭಾರತ ಐತಿಹಾಸಿಕ ದಾಖಲೆಯನ್ನು ಈಗಾದಲೇ ಬರೆದಿದೆ. ಆ ಮೂಲಕ ಚಂದ್ರನ ದಕ್ಷಿಣ ಧ್ರುವದಲ್ಲಿ ಲ್ಯಾಂಡರ್, ರೋವರ್ ಇಳಿಸಿದ ಮೊದಲ ದೇಶ ಭಾರತ ಹಿರಿಮೆಗೂ ನಾವು ಭಾಜನರಾಗಿದ್ದೇವೆ. ಇಡೀ ದೇಶವೇ ಇಸ್ರೋ‌ ವಿಜ್ಞಾನಿಗಳ ಈ ಸಾಧನೆಗೆ ಮಾರು ಹೋಗಿದೆ. ಭಾರತದತ್ತ ವಿಶ್ವವೇ ಅಚ್ಚರಿಯಿಂದ ನೋಡಿದ ಆ ಸಂದರ್ಭವನ್ನು ಕಣ್ತುಂಬಿಕೊಂಡ ಭಾರತೀಯರ ಸಂತೋಷ, ಇದರ ಹಿಂದಿರುವ ಇಸ್ರೋ ವಿಜ್ಞಾನಿಗಳ ಶ್ರಮ ವರ್ಣಿಸಲಸದಳ.

ಈ ಹಿಂದೆ ನಮ್ಮ ಇಸ್ರೋ ವಿಜ್ಞಾನಿಗಳ ತಂಡ ಚಂದ್ರಯಾನ -2 ಸಂದರ್ಭದಲ್ಲಿ ಅನುಭವಿಸಿದ ಸೋಲುಗಳಿಂದ ಕಲಿತ ಪಾಠ, ಈ‌ ಬಾರಿ ಚಂದ್ರಯಾನ ಮೂರರ ಯಶಸ್ಸಿಗೆ ಕಾರಣವಾಯ್ತು. ಹಿಂದಿನ ತಪ್ಪುಗಳಿಗೆ ಪರಿಹಾರ ಕಂಡುಕೊಂಡು, ಆ ಬಳಿಕ ಅವುಗಳನ್ನು ಸರಿಪಡಿಸಿ, ಮತ್ತೆ ಅಂತಹ ತಪ್ಪುಗಳಾಗದ ಹಾಗೆ ಎಚ್ಚರಿಕೆ ವಹಿಸಿ ಈ ಬಾರಿಯ ಈ ಚಂದ್ರಯಾನವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ಕೀರ್ತಿ ಏನಿದ್ದರೂ ಇಸ್ರೋ ವಿಜ್ಞಾನಿಗಳಿಗೆ ಸ್ವಂತ.

ಈ ಸಂದರ್ಭದಲ್ಲಿ ನಾವು ನೆನಪಿಸಿಕೊಳ್ಳಲೇ ಬೇಕಾದ ವ್ಯಕ್ತಿ ಶಕ್ತಿಯೊಬ್ಬರಿದ್ದಾರೆ. ಚಂದ್ರಯಾನ -2 ರ ಸಂದರ್ಭದಲ್ಲಿ ಇಸ್ರೋ‌ದ ಮುಖ್ಯಸ್ಥರಾಗಿದ್ದ ಕೆ. ಶಿವನ್. ಈ ಯೋಜನೆ ಕೊನೆಯ ಹಂತದಲ್ಲಿ ವಿಫಲರಾದಾಗ ನೊಂದವರು. ಕಣ್ಣೀರಾದವರು. ನೋವು ಅನುಭವಿಸಿದವರು. ಈ ಬಾರಿಯ ಚಂದ್ರಯಾನ ಯಶಸ್ಸನ್ನು ಕಂಡು ಭಾವಪರವಶರಾದ ವಿಜ್ಞಾನಿ ಕೆ. ಶಿವನ್. ಇಸ್ರೋದ ರೋವರ್ ಚಂದ್ರನ ದಕ್ಷಿಣ ತುದಿಯಲ್ಲಿ ತನ್ನ ಹೆಜ್ಜೆಗಳನ್ನಿರಿಸಿದ ಕ್ಷಣವನ್ನು ಕಣ್ತುಂಬಿಕೊಂಡು, ಕೊನೆಗೂ ನಾವು ಸಾಧಿಸಿ ಬಿಟ್ಟೆವು, ನಮ್ಮ ಗಮ್ಯ ತಲುಪಿದೆವು ಎಂದು ಸಂಭ್ರಮಿಸಿದವರಲ್ಲಿ ಕೆ. ಶಿವನ್ ಕೂಡಾ ಒಬ್ಬರು. ಭಾರತದ ಕೋಟಿ ಕೋಟಿ ಜನರ ಕನಸು ನನಸಾದ ಸಂಭ್ರಮದಲ್ಲಿ ಇಸ್ರೋದ ಮಾಜಿ ಮುಖ್ಯಸ್ಥ ಕೆ. ಶಿವನ್ ತಮ್ಮ ಸಂತಸವನ್ನು ಕಂಡಿದ್ದರು.

ಈ ಸಾರ್ಥಕ ಘಳಿಗೆಯ ಬಗ್ಗೆ ತಮ್ಮ ಸಂತಸ ಹಂಚಿಕೊಂಡಿರುವ ಶಿವನ್, ಇಸ್ರೋ ಕಳುಹಿಸಿದ ನೌಕೆ ಚಂದ್ರನ ಮೇಲೆ ಇಳಿದಾಗ ತಮಗಾದ ರೋಮಾಂಚನದ ಬಗ್ಗೆ ಮಾತನಾಡಿದ್ದಾರೆ. ಕೊನೆಗೂ ನಮ್ಮ ಪ್ರಾರ್ಥನೆ ಫಲಿಸಿತು. ಲ್ಯಾಂಡರ್ ಮತ್ತು ರೋವರ್ ಚಂದ್ರನನ್ನು ಮುತ್ತಿಕ್ಕಿದ ಕೂಡಲೇ ನಾನುಇಸ್ರೋ ನಿಯಂತ್ರಣ ಕಚೇರಿಯಿಂದ ಮನೆಗೆ ಹೋಗಲಿಲ್ಲ. ಬದಲಾಗಿ ಆ ರೋವರ್ ಚಂದ್ರನ ಮೇಲ್ಮೈ ಮೇಲೆ ಹರಿದಾಡುವುದನ್ನು ನೋಡಿದ ಬಳಿಕ, ತಡರಾತ್ರಿ ನಾನು ಮನೆಗೆ ಮರಳಿದೆ ಎಂದು ಆ ಕ್ಷಣದ ತಮ್ಮ ಅನುಭೂತಿಯನ್ನು ಹಂಚಿಕೊಂಡಿದ್ದಾರೆ. ಈ ಸಾಧನೆಗಾಗಿ ಕಳೆದ ನಾಲ್ಕು ವರ್ಷಗಳಿಂದ ಕಾಯುತ್ತಿರುವುದಾಗಿಯೂ ಅವರು ತಿಳಿಸಿದರು.

ಚಂದ್ರಯಾನ ಮೂರರ ಯಶಸ್ಸು ನಮಗೆ ಮತ್ತು ಸಂಪೂರ್ಣ ದೇಶಕ್ಕೆ ಸಿಹಿ ಸುದ್ದಿಯಾಗಿದೆ ಎಂದು ಅವರು ತಮ್ಮ ಸಂಭ್ರಮವನ್ನು ವ್ಯಕ್ತಪಡಿಸಿದರು.

2019 ರಲ್ಲಿ ಕೆ. ಶಿವನ್ ಅವರು ಇಸ್ರೋ‌ದ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಚಂದ್ರಯಾನ -2 ನಡೆದಿತ್ತು. ಜುಲೈ 22 ರಂದು ಬಾಹ್ಯಾಕಾಶ ನೌಕೆಯನ್ನು ಉಡಾವಣೆ ಮಾಡಲಾಗಿತ್ತು. ಈ ನೌಕೆ ಸೆಪ್ಟೆಂಬರ್ 6 ರಂದು ಚಂದ್ರನಂಗಳ ಪ್ರವೇಶಿಸಬೇಕಿತ್ತು. ಅಲ್ಲಿ ತನ್ನ ಕೆಲಸ ಆರಂಭಿಸಬೇಕಿತ್ತು. ಆದರೆ ಇನ್ನೇನು ಗುರಿ ಮುಟ್ಟುವ ಸಮಯದಲ್ಲಿ ಲ್ಯಾಂಡರ್ ವಿಚಲನಗೊಂಡು, ಇಸ್ರೋ ನಿಯಂತ್ರಣ ಕೊಠಡಿಯ ಜೊತೆಗಿನ ತನ್ನ ಸಂಪರ್ಕ ಕಳೆದುಕೊಂಡಿತ್ತು. ಚಂದ್ರನ ಮೇಲ್ಮೈ ‌ನಲ್ಲಿ ಕ್ರ್ಯಾಶ್ ಲ್ಯಾಂಡಿಂಗ್ ಆಗುವ ಮೂಲಕ ಇಸ್ರೋ ವಿಜ್ಞಾನಿಗಳ, ಕೋಟ್ಯಂತರ ಭಾರತೀಯರ ಕನಸು ಭಗ್ನವಾಗಿತ್ತು. ಆದರೆ ಆ ಬಳಿಕವೂ ಪ್ರಯತ್ನ ಬಿಡದ ಇಸ್ರೋ ವಿಜ್ಞಾನಿಗಳ ತಂಡ ಮರಳಿ ಯತ್ನವ ಮಾಡು ಎಂಬಂತೆ ಪ್ರಯತ್ನಿಸಿ ಮೊನ್ನೆಯಷ್ಟೆ ಮೂರನೇ ಚಂದ್ರಯಾನದ ಮೂಲಕ ತಮ್ಮ ಕನಸನ್ನು ಯಶಸ್ವಿಯಾಗಿ ಸಾಧಿಸಿದ್ದರು.

ಚಂದ್ರಯಾನ ಎರಡರ ವಿಫಲತೆಯ ಸಮಯದಲ್ಲಿ ತಮ್ಮ ಶ್ರಮಕ್ಕೆ ಬೆಲೆ ಸಿಗಲಿಲ್ಲ, ಗುರಿ ತಲುಪಲಾಗಲಿಲ್ಲ ಎಂದು ಕೆ. ಶಿವನ್ ಕಣ್ಣೀರಾಗಿದ್ದರು. ಈ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರೇ ಶಿವನ್ ಅವರನ್ನು ತಬ್ಬಿ, ಸಾಂತ್ವನ ಹೇಳಿದ್ದರು. ಅವರನ್ನು ಇಸ್ರೋ ವಿಜ್ಞಾನಿಗಳನ್ನು ಹುರಿದುಂಬಿಸುವ ಕಾರ್ಯ ಮಾಡಿದ್ದರು.

Tags

Related Articles

Close