ಪ್ರಚಲಿತ

ವಿಕ್ರಮ ಲ್ಯಾಂಡರ್ ಸೇಫ್ ಲ್ಯಾಂಡಿಂಗ್: ಇಸ್ರೋ ಅಧ್ಯಕ್ಷರು ಹೇಳಿದ್ದೇನು?

ಭಾರತದ ಹಿರಿಮೆಯನ್ನು ಚಂದ್ರನ ನೆಲಕ್ಕೆ ಮುಟ್ಟಿಸುವ ಬಹುನಿರೀಕ್ಷಿತ ಇಸ್ರೋ‌ದ ಚಂದ್ರಯಾನ -3 ಉಡಾವಣೆ ಕೆಲ ದಿನಗಳ ಹಿಂದಷ್ಟೇ ಯಶಸ್ವಿಯಾಗಿ ನಡೆದಿದೆ. ಚಂದ್ರಯಾನ -2 ರಲ್ಲಾದ ಎಲ್ಲಾ ಸಮಸ್ಯೆಗಳನ್ನು ಸರಿಪಡಿಸಿಕೊಂಡು ಚಂದ್ರಯಾನ -3 ಗೆ ಬೇಕಾದ ಎಲ್ಲಾ ಅಗತ್ಯ ಸಿದ್ಧತೆಗಳನ್ನು ಮಾಡಿಕೊಂಡ ಇಸ್ರೋ, ಆ ಬಳಿಕ ಚಂದ್ರನಂಗಳಕ್ಕೆ ಬಾಹ್ಯಾಕಾಶ ನೌಕೆಯನ್ನು ಕಳುಹಿಸುವ ಕೆಲಸ ಮಾಡಿತ್ತು. ಹೀಗೆ ಇಸ್ರೋ ಕಳುಹಿಸಿರುವ ಬಾಹ್ಯಾಕಾಶ ನೌಕೆ ಆಗಸ್ಟ್ 23 ರಂದು ಚಂದ್ರನ ಅಂಗಳದಲ್ಲಿ ಇಳಿಯಲಿದೆ.

ಈ ಕೆಲಸವೂ ಯಶಸ್ವಿಯಾಗಿ ನಡೆಯಲು, ಆ ಮೂಲಕ ಇಸ್ರೋ ವಿಜ್ಞಾನಿಗಳ ಶ್ರಮಕ್ಕೆ ಫಲ ದೊರೆಯುವುದಕ್ಕಾಗಿ ದೇಶದೆಲ್ಲೆಡೆ ಸಾರ್ವಜನಿಕರು ಪೂಜೆ ಪುನಸ್ಕಾರಗಳನ್ನು ಸಹ ಸಲ್ಲಿಸುತ್ತಿದ್ದಾರೆ. ವಿಕ್ರಮ ಲ್ಯಾಂಡರ್ ಸಾಫ್ಟ್ ಲ್ಯಾಂಡಿಂಗ್‌ಗಾಗಿ ಭಾರತದ ಜೊತೆಗೆ ಇಡೀ ವಿಶ್ವವೇ ಪ್ರಾರ್ಥಿಸುತ್ತಿದ್ದು, ಕಾತರದಿಂದ ಕಾಯುತ್ತಿದೆ ಎನ್ನುವುದು ಸತ್ಯ.

ಚಂದ್ರಯಾನ -3 ಸಫಲತೆಯ ಬಗ್ಗೆ ಇಸ್ರೋದ ಅಧ್ಯಕ್ಷ ಎಸ್. ಸೋಮನಾಥ್ ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಚಂದ್ರಯಾನ -3 ರ ವಿಕ್ರಮ ಲ್ಯಾಂಡರ್ ನಾಳೆ ಅಂದರೆ ಆಗಸ್ಟ್ 23 ರಂದು ಚಂದ್ರನಲ್ಲಿ ಸಾಫ್ಟ್ ಲ್ಯಾಂಡ್ ಆಗಲಿರುವುದಾಗಿ ಅವರು ತಿಳಿಸಿದ್ದಾರೆ. ಈ ಮಿಷನ್ ಕುತೂಹಲಕಾರಿ ಘಟ್ಟವನ್ನು ತಲುಪಿದೆ. ಇಸ್ರೋ ಅಧಿಕಾರಿಗಳು, ವಿಜ್ಞಾನಿಗಳು ಈ ಯೋಜನೆಗೆ ಸಂಬಂಧಿಸಿದ ಹಾಗೆ ಎಲ್ಲಾ ಕಾರ್ಯಗಳನ್ನು ಬಹಳ ಕೂಲಂಕುಷವಾಗಿ ಪರಿಶೀಲನೆ ಮಾಡಿ, ಅದನ್ನು ಸರಿಯಾದ ದಾರಿಯಲ್ಲಿ ನಿರ್ವಹಣೆ ಮಾಡುವ ಕೆಲಸವನ್ನು ಮಾಡುತ್ತಿದ್ದಾರೆ ಎನ್ನುವುದಾಗಿಯೂ ಇಸ್ರೋ ಅಧ್ಯಕ್ಷರು ತಿಳಿಸಿದ್ದಾರೆ.

ಈ ಯೋಜನೆ ಸರಿಯಾಗಿ ತನ್ನ ಗುರಿಯನ್ನು ತಲುಪುವ ನಿಟ್ಟಿನಲ್ಲಿ ವಿಜ್ಞಾನಿಗಳು ಕಂಟ್ರೋಲ್ ರೂಂ ನಲ್ಲಿ ಕುಳಿತು ಉತ್ಸಾಹದಿಂದ ಕೆಲಸ ಮಾಡುತ್ತಿದ್ದಾರೆ. ಈ ಮಿಷನ್‌ಗೆ ಸಂಬಂಧಿಸಿದ ಹಾಗೆ ಇರುವ ಎಲ್ಲಾ ವಿಷಯಗಳನ್ನು ಕಣ್ಣಿಗೆ ಎಣ್ಣೆ ಬಿಟ್ಟು ಎರಡೆರಡು ಬಾರಿ ಪರಿಶೀಲನೆ ಮಾಡುವುದು, ಲೆಕ್ಕಾಚಾರ ಮಾಡುವ ಕೆಲಸವನ್ನು ಇಸ್ರೋ ವಿಜ್ಞಾನಿಗಳ ತಂಡ ಮಾಡುತ್ತಿದ್ದು, ಈ ಯೋಜನೆಯ ಸಫಲತೆಗೆ ಬೇಕಾದ ಎಲ್ಲಾ ತರಹದ ಅಗತ್ಯತೆಗಳನ್ನು ಪೂರೈಸುವ ಕೆಲಸವನ್ನು ಮಾಡುತ್ತಿದ್ದಾರೆ.

ಉಡಾವಣೆಯ ಹಿಂದಿನ ಎಲ್ಲಾ ಸಿದ್ದತೆಗಳಿಂದ, ಸಂಯೋಜಿತ ಮಾಡ್ಯೂಲ್ ಮತ್ತು ಲ್ಯಾಂಡಿಂಗ್ ಮಾಡ್ಯೂಲ್ ಚಂದಿರನತ್ತ ಸಾಗುವಲ್ಲಿ ಮಾಡಲಾದ ಅಡೆತಡೆ ರಹಿತ ಪ್ರಗತಿಯಿಂದ ವಿಕ್ರಮ ಲ್ಯಾಂಡರ್ ಸಾಫ್ಟ್ ಲ್ಯಾಂಡಿಂಗ್ ಆಗಮ ವಿಶ್ವಾಸವನ್ನು ಸೋಮನಾಥ್ ಅವರು ವ್ಯಕ್ತಪಡಿಸಿದ್ದಾರೆ. ಈ ವರೆಗೆ ಎಲ್ಲವೂ ಸರಿಯಾಗಿವೆ. ಈ ಕ್ಷಣದ ವರೆಗೆ ಯಾವುದೇ ರೀತಿಯ ಅನಿಶ್ಚಿತ ಪರಿಸ್ಥಿತಿ ಎದುರಾಗಿಲ್ಲವಾದ್ದರಿಂದ ಇದು ಯಶಸ್ವಿಯಾಗುವ ವಿಶ್ವಾಸವನ್ನು ನಾವು ಹೊಂದಿದ್ದೇವೆ ಎನ್ನುವ ಭರವಸೆಯನ್ನು ಅವರು ಪ್ರಕಟಿಸಿದ್ದಾರೆ.

ಇದರ ಯಶಸ್ವಿಗಾಗಿ ನಾವು ಎಲ್ಲಾ ರೀತಿಯ ಸಿದ್ದತೆಗಳನ್ನು ಮಾಡಿಕೊಂಡಿದ್ದೇವೆ. ಈ ವರೆಗೆ ನಮಗೆ ಅಗತ್ಯವಾದ ಎಲ್ಲಾ ವ್ಯವಸ್ಥೆಗಳು ಸರಿಯಾಗಿ ಕಾರ್ಯ ನಿರ್ವಹಿಸಿವೆ. ಪ್ರಸ್ತುತ ನಾವು ಬಹು ಸಿಮ್ಯುಲೇಶನ್‌ಗಳ ಜೊತೆಗೆ ಸೇಫ್ ಲ್ಯಾಂಡಿಂಗ್‌ಗೆ ತಯಾರಿ ನಡೆಸುತ್ತಿದ್ದೇವೆ. ಸಿಸ್ಟಂ‌ಗಳ ಪರಿಶೀಲನೆ, ಡಬಲ್ ವೆರಿಫಿಕೇಷನ್, ಉಪಕರಣಗಳ ಆರೋಗ್ಯವನ್ನು ಸಹ ನಿನ್ನೆ ಮತ್ತು ಇಂದು ಪರಿಶೀಲನೆ ಮಾಡಿರುವುದಾಗಿಯೂ ಸೋಮನಾಥ್ ಹೇಳಿದ್ದಾರೆ.

ಒಟ್ಟಿನಲ್ಲಿ ಭಾರತೀಯರು ಹೆಮ್ಮೆಯಿಂದ ಕಾಯುತ್ತಿರುವ, ಕಾತರಿಸುತ್ತಿರುವ ಚಂದ್ರಯಾನ-3 ಯ ವಿಕ್ರಮ ಲ್ಯಾಂಡರ್ ನಾಳೆ ಚಂದ್ರನ ಅಂಗಳಕ್ಕೆ ತಲುಪಲಿದ್ದು, ನಾಳೆ ಸಂಜೆ 6 ಗಂಟೆಗೆ ಈ ಮಹತ್ವದ ಘಟನೆ ಸಂಭವಿಸಲಿದೆ. ಈ ಅಪೂರ್ವ ಕ್ಷಣವನ್ನು ಆಸ್ವಾದಿಸಿ, ಆನಂದ ಪಡಲು ಇಡೀ ಭಾರತ ಕಾಯುತ್ತಿದ್ದು, ಇದರ ಯಶಸ್ಸಿಗಾಗಿ ಪ್ರಾರ್ಥಿಸುತ್ತಿದೆ.

Tags

Related Articles

Close