ಪ್ರಚಲಿತ

ಪ್ರಜ್ವಲ್ ರೇವಣ್ಣ ವಿರುದ್ಧ ಎಫ್ ಐ ಆರ್ ದಾಖಲಿಸಲು ವಿಳಂಬ ಯಾಕೆ? : ಕೈ ಸರ್ಕಾರಕ್ಕೆ ಜೋಶಿ ಪ್ರಶ್ನೆ

ಪ್ರಜ್ವಲ್ ರೇವಣ್ಣ ಅವರದು ಎನ್ನಲಾದ ಅಶ್ಲೀಲ ವಿಡಿಯೋಗಳಿಗೆ ಸಂಬಂಧಿಸಿದ ಹಾಗೆ ಕಾಂಗ್ರೆಸ್ ಪಕ್ಷ ಬಿಜೆಪಿ ವಿರುದ್ಧ ಬೇಕಾಬಿಟ್ಟಿ ಹೇಳಿಕೆಗಳನ್ನು ನೀಡುತ್ತಿದ್ದು, ಈ ಸಂಬಂಧ ಕಾಂಗ್ರೆಸ್ ವಿರುದ್ಧ ಬಿಜೆಪಿ ನಾಯಕ ಪ್ರಲ್ಹಾದ ಜೋಶಿ ಅವರು ಕಿಡಿ ಕಾರಿದ್ದಾರೆ.

ಪ್ರಜ್ವಲ್ ರೇವಣ್ಣ ವಿಚಾರಕ್ಕೆ ಸಂಬಂಧಿಸಿದ ಹಾಗೆ ರಾಜ್ಯದ ಕಾಂಗ್ರೆಸ್ ಸರ್ಕಾರ ರಾಜಕೀಯ ಮಾಡುತ್ತಿದೆ. ಪ್ರಜ್ವಲ್ ವಿರುದ್ಧ ಎಫ್‌ಐಆರ್ ದಾಖಲು ಮಾಡಲು ವಿಳಂಬ ನೀತಿಯನ್ನು ಕಾಂಗ್ರೆಸ್ ಸರ್ಕಾರ ಅನುಸರಿಸುತ್ತಿದೆ. ಯಾವುದೇ ಎಫ್‌ಐಆರ್ ದಾಖಲು ಮಾಡದೆ ಕೇಂದ್ರದ ಪ್ರಧಾನಿ ಮೋದಿ ಸರ್ಕಾರದ ವಿರುದ್ಧ ಗೂಬೆ ಕೂರಿಸುವ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪ್ರಜ್ವಲ್ ರೇವಣ್ಣ ವಿಷಯಕ್ಕೆ ಸಂಬಂಧಿಸಿದ ಹಾಗೆ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಇದಕ್ಕೆ ಸಂಬಂಧಿಸಿದ ಹಾಗೆ ಜೋಶಿ ಪ್ರತಿಕ್ರಿಯೆ ನೀಡಿರುವುದಾಗಿದೆ. ಕಾಂಗ್ರೆಸ್ ಸಿ ಎಂ ಸಿದ್ದರಾಮಯ್ಯ ತಮ್ಮ ಜವಾಬ್ದಾರಿಯಿಂದ ನುಣುಚಿಕೊಳ್ಳುವ ಪ್ರಯತ್ನ ಮಾಡಿದ್ದಾರೆ. ಜೊತೆಗೆ ಬೇರೆಯವರ ಮೇಲೆ ತಪ್ಪು ಹೊರಿಸುವ ಕೆಲಸವನ್ನು ಮಾಡುತ್ತಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದ ಹಾಗೆ ನಾವು ಕೇಳಲಾದ ಯಾವ ಪ್ರಶ್ನೆಗೂ ಉತ್ತರ ನೀಡುವ ಕೆಲಸವನ್ನು ಕಾಂಗ್ರೆಸ್ ಮಾಡಿಲ್ಲ ಎಂದು ಅವರು ವ್ಯಂಗ್ಯ ಮಾಡಿದ್ದಾರೆ.

ರಾಜ್ಯದ ಕಾಂಗ್ರೆಸ್ ಸರ್ಕಾರ ಪ್ರಜ್ವಲ್ ರೇವಣ್ಣ ವಿರುದ್ಧ ಎಫ್‌ಐಆರ್ ದಾಖಲು ಮಾಡಲು ಯಾತಕ್ಕಾಗಿ ವಿಳಂಬ ನೀತಿಯನ್ನು ಅನುಸರಿಸಿದ್ದಾರೆ ಎಂದು ಹೇಳಲಿ. ಈ ವಿಡಿಯೋಗಳು ಕಳೆದ ವರ್ಷದ್ದಲ್ಲ. ಬದಲಾಗಿ 2018 ರಿಂದಲೂ ನಡೆದಿದೆ ಎನ್ನಲಾದ ವಿಡಿಯೋಗಳಿವೆ. ಆ ಸಂದರ್ಭದಲ್ಲಿ ಡಿ.ಕೆ. ಶಿವಕುಮಾರ್ ಮತ್ತು ಸಿದ್ದರಾಮಯ್ಯ ಪ್ರಜ್ವಲ್ ಪರ ಮತ ಯಾಚನೆ ನಡೆಸಿದ್ದಾಗಿ ಅವರು ಹೇಳಿದ್ದಾರೆ.

ಈ ವಿಷಯದಲ್ಲಿ ಕಾಂಗ್ರೆಸ್ ಮತ ಬ್ಯಾಂಕ್ ರಾಜಕಾರಣ ಮಾಡಲು ಹುನ್ನಾರ ನಡೆಸುತ್ತಿದೆ. ದೇವೇಗೌಡರ ಮೊಮ್ಮಗನನ್ನು ಮುಟ್ಟಿದರೆ ತಮ್ಮ ಮತ ಎಲ್ಲಿ ಕಳೆದು ಹೋಗುವುದೋ ಎನ್ನುವ ಭಯ ಕಾಂಗ್ರೆಸ್ ಪಕ್ಷದ ನಾಯಕರನ್ನು ಮಾಡುತ್ತಿದೆ. ಹೀಗಾಗಿ ಯಾವುದೇ ರೀತಿಯ ಕ್ರಮ ಕೈಗೊಳ್ಳದೆ ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸುವ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದೆ ಎಂದು ಅವರು ಆರೋಪಿಸಿದ್ದಾರೆ.

ಹಾಗೆಯೇ ರಾಜ್ಯ ಸರ್ಕಾರ ಎಫ್‌ಐಆರ್ ದಾಖಲು ಮಾಡದೆಯೇ ಕೇಂದ್ರ ಸರ್ಕಾರ ಯಾವ ರೀತಿಯ ಕ್ರಮ ಕೈಗೊಳ್ಳಬೇಕು ಎಂದು ಅವರು ಪ್ರಶ್ನೆ ಮಾಡಿದ್ದಾರೆ.

Tags

Related Articles

Close