ಪ್ರಚಲಿತ

ಕನ್ನಡಿಗರ ಭಾಷಾ ಸಮಸ್ಯೆ ಪರಿಹಾರಕ್ಕೆ ರಾಜ್ಯಸಭೆಯಲ್ಲಿ ಪ್ರಧಾನಿ ಮೋದಿ ಅವರಿಗೆ ಮನವಿ

ಕನ್ನಡ ನಾಡು, ಕರ್ನಾಟಕದಲ್ಲಿ ಇದ್ದು ಇಲ್ಲಿನ ಕನ್ನಡ ಭಾಷೆಯ ಬಗ್ಗೆ ಕೀಳರಿಮೆ, ತಾತ್ಸಾರ ಮನೋಭಾವ ಹೊಂದಿರುವವರು ಅನೇಕರಿದ್ದಾರೆ. ಜೊತೆಗೆ ಅನ್ಯ ರಾಜ್ಯಗಳಿಂದ ಬಂದು, ಇಲ್ಲಿ ಕೆಲಸ ಗಿಟ್ಟಿಸಿಕೊಂಡು ಕನ್ನಡ ಕಲಿಯದೆಯೇ, ತಮ್ಮ ರಾಜ್ಯದ ಭಾಷೆ ಅಥವಾ ಆಂಗ್ಲ ಭಾಷೆಯನ್ನೇ ಬಳಕೆ ಮಾಡುವವರೂ ಇದ್ದಾರೆ. ಜೊತೆಗೆ ಬಹಳ ಮುಖ್ಯವಾಗಿ ಸರ್ಕಾರಿ ಉದ್ಯೋಗಗಳಲ್ಲಿಯೂ ಅನ್ಯ ರಾಜ್ಯದವರು ಕನ್ನಡವನ್ನು ಬಳಸದೆ, ತಮ್ಮ ಭಾಷೆ ಅಥವಾ ಆಂಗ್ಲ ಅಥವಾ ಹಿಂದಿಯಲ್ಲಿ ಮಾತನಾಡುವವರಿಗೂ ನಮ್ಮಲ್ಲೇನೂ ಕಡಿಮೆ ಇಲ್ಲ.

ಕನ್ನಡ ಭಾಷೆ ಮಾತನಾಡದೆ ಬ್ಯಾಂಕ್‌ಗಳು ಅಥವಾ ಇನ್ನಿತರ ಸಾರ್ವಜನಿಕ ಸೇವಾ ಕೇಂದ್ರಗಳಲ್ಲಿ ಉದ್ಯೋಗದಲ್ಲಿ ಇರುವ ಜನರಿಂದ ಕನ್ನಡಿಗರು ಹಲವಾರು ಸಮಸ್ಯೆಗಳನ್ನು ಅನುಭವಿಸಬೇಕಾಗುತ್ತದೆ. ಇಲ್ಲಿ ಕಾರ್ಯ ನಿರ್ವಹಿಸುವ ಅವರು ಕನ್ನಡ ಮಾತನಾಡದೆ ಅಥವಾ ಅವರು ಮಾತನಾಡುವ ಭಾಷೆ ಕನ್ನಡಿಗರಿಗೆ (ಹೆಚ್ಚಾಗಿ ಹಳ್ಳಿಗಳಲ್ಲಿನ ಜನರಿಗೆ) ಅರ್ಥವಾಗದೆ ಹಲವಾರು ಬಾರಿ ಗೊಂದಲಗಳಾಗುವುದನ್ನು ನಾವು ಮಾಧ್ಯಮಗಳಲ್ಲಿ ನೋಡಿದ್ದೇವೆ.

ಈ ಬಗ್ಗೆ ರಾಜ್ಯಸಭಾ ಸದಸ್ಯ ಜಗ್ಗೇಶ್ ಅವರು ರಾಜ್ಯಸಭೆಯಲ್ಲಿ ಕನ್ನಡದಲ್ಲಿಯೇ ಮಾತನಾಡಿದ್ದು, ಆ ಮೂಲಕ ಕನ್ನಡದ ಕಂಪನ್ನು ಎತ್ತಿ ಹಿಡಿದಿದ್ದಾರೆ. ಜೊತೆಗೆ ಅನ್ಯ ರಾಜ್ಯದ ಜನರಿಂದ ಭಾಷಾ ವಿಷಯಕ್ಕೆ ಸಂಬಂಧಿಸಿದ ಹಾಗೆ ಕರ್ನಾಟಕದ ಜನರು ಅನುಭವಿಸಬೇಕಾಗುವ ಸಮಸ್ಯೆಗಳ ಬಗೆಗೂ ಬೆಳಕು ಚೆಲ್ಲಿದ್ದಾರೆ.

ಕರ್ನಾಟಕದ ಜನರು ಮುಕ್ತ ಮತ್ತು ವಿಶಾಲ ಹೃದಯದವರು. ಅವರು ಎಲ್ಲವನ್ನೂ, ಎಲ್ಲರನ್ನೂ ಮುಕ್ತವಾಗಿ ಸ್ವೀಕರಿಸುತ್ತಾರೆ ಎಂದು ಹೇಳಿದ್ದಾರೆ. ಜೊತೆಗೆ ಬಹಳ ಮುಖ್ಯವಾಗಿ ರಾಜ್ಯದ ಬ್ಯಾಂಕುಗಳಲ್ಲಿ ಕನ್ನಡ ಬರದ ಉದ್ಯೋಗಿಗಳಿಂದಾಗಿ ಕನ್ನಡಿಗರಿಗೆ ಆಗುತ್ತಿರುವ ಸಮಸ್ಯೆಗಳ ಬಗೆಗೂ ಅವರು ಕೇಂದ್ರ ಸರ್ಕಾರದ ಗಮನಕ್ಕೆ ತಂದಿದ್ದು, ಬ್ಯಾಂಕುಗಳ ಫ್ರಂಟ್ ಡೆಸ್ಕ್ ಸಿಬ್ಬಂದಿಗಳ ಹುದ್ದೆಗೆ ಕರ್ನಾಟಕದಲ್ಲಿ ಕನ್ನಡ ತಿಳಿದವರನ್ನೇ ನಿಯೋಜಿಸುವಂತೆ ಮನವಿ ಮಾಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ಪ್ರಾದೇಶಿಕ ಭಾಷೆಗಳಿಗೆ ಯಾವಾಗಲೂ ಪ್ರೋತ್ಸಾಹ ನೀಡುತ್ತಾರೆ. ಕನ್ನಡ ಭಾಷೆ ಬಿಟ್ಟು ಅನ್ಯ ಭಾಷೆ ಬಾರದ ಜನರಿಗೆ ಕನ್ನಡ ಬಾರದ ಉದ್ಯೋಗಿಗಳ ಜೊತೆ ವ್ಯವಹರಿಸಲು ಕಷ್ಟವಾಗುತ್ತಿದೆ. ಇದನ್ನಾದರೂ ನಿಭಾಯಿಸಬಹುದು. ಆದರೆ ಭಾಷೆಯ ವಿಷಯದಲ್ಲಿ ನಡೆಯುವ ಸಣ್ಣ ಸಣ್ಣ ಗೊಂದಲಗಳೂ ರಾಜ್ಯ – ರಾಜ್ಯಗಳ ನಡುವಿನ ಗಲಭೆಗೆ ಕಾರಣವಾಗುತ್ತದೆ. ಆ ಹಿನ್ನೆಲೆಯಲ್ಲಿ ಕನ್ನಡ ಬಲ್ಲವರನ್ನೇ ಫ್ರಂಟ್ ಡೆಸ್ಕ್ ಸಿಬ್ಬಂದಿಗಳಾಗಿ ಕರ್ನಾಟಕದಲ್ಲಿ ನೇಮಕ ಮಾಡುವಂತೆ ಅವರು ಮನವಿ ಮಾಡಿದ್ದಾರೆ.

ಬೇರೆ ರಾಜ್ಯದ ಜನರು ನಮ್ಮ ರಾಜ್ಯಕ್ಕೆ ಉದ್ಯೋಗಕ್ಕೆ ಬರುವುದನ್ನು ನಾವು ಮುಕ್ತ ಮನಸ್ಸಿನಿಂದ ಸ್ವಾಗತಿಸುತ್ತೇವೆ. ನಮ್ಮ ರಾಜ್ಯಕ್ಕೆ ಬಂದವರನ್ನು ನಾವು ನಮ್ಮ ಕುಟುಂಬದ ಸದಸ್ಯರ ಹಾಗೆ ನೋಡಿಕೊಳ್ಳುತ್ತೇವೆ. ನಮ್ಮ ಭಾಷೆಯನ್ನು ಇತರರ ಮೇಲೆ ಹೇರುವ ಪ್ರಯತ್ನವನ್ನು ನಾವು ಮಾಡುವುದಿಲ್ಲ. ಅವರ ಭಾಷೆಯಲ್ಲೇ ವ್ಯವಹರಿಸುವ ಪ್ರಯತ್ನ ಕನ್ನಡಿಗರು ಮಾಡುತ್ತಿರುವುದಾಗಿ ಅವರು ತಿಳಿಸಿದ್ದಾರೆ.

Tags

Related Articles

Close