ಪ್ರಚಲಿತ

ಲೂಟಿ ಹೊಡೆಯುವುದೇ ಕಾಂಗ್ರೆಸ್ ಪಕ್ಷದ ಹೆಗ್ಗುರುತು: ಪ್ರಧಾನಿ ಮೋದಿ

ಕರ್ನಾಟಕ ಕಾಂಗ್ರೆಸ್ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಅವರು ಕಿಡಿ ಕಾರಿದ್ದಾರೆ.

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ನಡೆಸುತ್ತಿಲ್ಲ. ಬದಲಾಗಿ ವಸೂಲಿ ಗ್ಯಾಂಗ್‌ನ ಹಾಗೆ ಕಾರ್ಯಾಚರಣೆ ಮಾಡುತ್ತಿದೆ. ಕೈ ಪಕ್ಷ ಅಧಿಕಾರಕ್ಕೆ ಬಂದ ಬಳಿಕ ರಾಜ್ಯವನ್ನು ಎಟಿಎಂ ಕಾರ್ಡ್‌ನ ಹಾಗೆ ಬಳಕೆ ಮಾಡುತ್ತಿದೆ. ಅಧಿಕಾರ ವಹಿಸಿಕೊಂಡ ಕಡಿಮೆ ಅವಧಿಯಲ್ಲೇ ರಾಜ್ಯವನ್ನು ಲೂಟಿ ಹೊಡೆಯುವ ಕೆಲಸವನ್ನು ಕಾಂಗ್ರೆಸ್ ಮಾಡಿದೆ ಎಂದು ಅವರು ತಿಳಿಸಿದ್ದಾರೆ.

ಕಾಂಗ್ರೆಸ್ ಪಕ್ಷ ತುಷ್ಟೀಕರಣ ರಾಜಕಾರಣದ ಮೂಲಕ ಜನರಿಗೆ ವಂಚನೆ ಮಾಡುತ್ತಿದೆ. ಆದರೆ ನಮ್ಮ ಸರ್ಕಾರ ಜನರ ಅಗತ್ಯಗಳನ್ನು ಪೂರೈಸುವ ಕಾರ್ಯವನ್ನು ಮಾಡುತ್ತಿರುವುದಾಗಿ ಅವರು ತಿಳಿಸಿದ್ದಾರೆ. ಕರ್ನಾಟಕ ಒಂದು ಕಾಲದಲ್ಲಿ ಐಟಿ ಹಬ್ ಎಂದು ಗುರುತಿಸಿಕೊಂಡಿತ್ತು. ಆದರೆ ಈಗ ಟ್ಯಾಂಕರ್ ಹಬ್ ಆಗಿ ಮಾಡಿದೆ.‍ ರಾಜ್ಯದ ಜನರು ಕುಡಿಯುವ ನೀರಿನ ಸಮಸ್ಯೆಯಿಂದ ಪರದಾಡುತ್ತಿದ್ದರೆ, ಕೈ ಸರ್ಕಾರ ಲೂಟಿ ಹೊಡೆಯುವ ಕೆಲಸ ಮಾಡುತ್ತಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತಮ್ಮ ಕ್ಷೇತ್ರದ ಅಭಿವೃದ್ಧಿಯ ಕೆಲಸಗಳಿಗೂ ಸರಿಯಾದ ಅನುದಾನ ಒದಗಿಸುವ ಕೆಲಸವನ್ನು ರಾಜ್ಯ ಸರ್ಕಾರ ಮಾಡುತ್ತಿಲ್ಲ. ಹೀಗೆಯೇ ಆದಲ್ಲಿ ಮುಂದಿನ ದಿನಗಳಲ್ಲಿ ಸರ್ಕಾರಿ ನೌಕರರಿಗೂ ಸಂಬಳ ನೀಡಲು ಪರದಾಡುವ ಸ್ಥಿತಿ ಬರಲಿದೆ. ಅಧಿಕಾರ ವಹಿಸಿಕೊಂಡ ಕಡಿಮೆ ಅವಧಿಯಲ್ಲೇ ಖಜಾನೆ ಖಾಲಿ ಮಾಡಿರುವ ಕಾಂಗ್ರೆಸ್ ಕೊಳ್ಳೆ ಹೊಡೆಯುವುದರಲ್ಲಿ ‌ತೊಡಗಿಸಿಕೊಂಡಿದೆ. ಕಾಂಗ್ರೆಸ್ ಪಕ್ಷದ ಹೆಗ್ಗುರುತೇ ಲೂಟಿ ಎಂದು ಅವರು ವ್ಯಂಗ್ಯ ಮಾಡಿದ್ದಾರೆ.

ಬಿಜೆಪಿ ಅಧಿಕಾರದಲ್ಲಿ ರೈತರ ಆದಾಯ ದ್ವಿಗುಣ ಮಾಡಿದ್ದೇವೆ. ಜಲಜೀವನ್ ಯೋಜನೆಯ ಮೂಲಕ ಕುಡಿಯುವ ನೀರನ್ನು ಮನೆ ಮನೆಗೆ ತಲುಪಿಸಿದ್ದೇವೆ‌. ಉಜ್ವಲಾ ಯೋಜನೆ ಮೂಲಕ ಗ್ಯಾಸ್ ಸಿಲಿಂಡರ್, ಕಿ ಸಾನ್ ಸಮ್ಮಾನ್ ನಿಧಿ ಮೂಲಕ ರೈತರ ಖಾತೆಗೆ ನೇರವಾಗಿ ಹಣ ಜಮೆ ಮಾಡಿದ್ದೇವೆ. ನಮ್ಮ ಎಲ್ಲಾ ಯೋಜನೆಗಳೂ ಜನರಿಗೆ ಸರಿಯಾಗಿ ತಲುಪಿದೆ ಎಂದು ಅವರು ತಿಳಿಸಿದ್ದಾರೆ.

ನಮ್ಮದು ನಯಾ ಭಾರತ್ ಎಂದು ಹೇಳಿರುವ ಪ್ರಧಾನಿ ಮೋದಿ, ನಾವು ಅಮಾಯಕರ ಹತ್ಯೆ ಮಾಡುವವರ ಮನೆಗೆ ನುಗ್ಗಿ ಹೊಡೆಯುವುದಕ್ಕೂ ಹಿಂದೆ ಮುಂದೆ ನೋಡುವುದಿಲ್ಲ ಎಂದು ತಿಳಿಸಿದ್ದಾರೆ. ಯಾರ ಮೇಲೆಯೂ ನಾವು ಹಿಂದಿನಿಂದ ದಾಳಿ ಮಾಡುವುದಿಲ್ಲ. ನಮ್ಮದೇನಿದ್ದರೂ ನೇರಾನೇರ ಜಾಯಮಾನ ಎಂದು ಅವರು ಹೇಳಿದ್ದಾರೆ.

ಮುಸ್ಲಿಂ ತುಷ್ಟೀಕರಣ ನೀತಿಯನ್ನು ಅನುಸರಿಸುವ ಕಾಂಗ್ರೆಸ್ ವಿರುದ್ಧ ಅವರು ಈ ಸಂದರ್ಭದಲ್ಲಿ ಸಹ ವಾಗ್ದಾಳಿ ನಡೆಸಿದ್ದಾರೆ. ದಲಿತರು, ಹಿಂದುಳಿದ ವರ ಮೀಸಲಾತಿಯನ್ನು ಮುಸಲ್ಮಾನರಿಗೆ ನೀಡುವ ಕಾಂಗ್ರೆಸ್ ಹುನ್ನಾರದ ವಿರುದ್ಧ ಪ್ರಧಾನಿ ಕೆಂಡ ಕಾರಿದ್ದಾರೆ. ಮೀಸಲಾತಿ ವಿಷಯದಲ್ಲಿ ಯಾರಿಗೂ ಅನ್ಯಾಯವಾಗಲು ನಾನು ಬಿಡಲಾರೆ ಎಂದು ಅವರು ಭರವಸೆ ನೀಡಿದ್ದಾರೆ.

Tags

Related Articles

Close