ಪ್ರಚಲಿತ

ಆಗಸ್ಟ್ 23 ನ್ನು ‘ಬಾಹ್ಯಾಕಾಶ ದಿನ’ವಾಗಿ ಘೋಷಿಸಿದ ನಮೋ

ಕಳೆದ ಮೂರು ದಿನಗಳ ಹಿಂದಷ್ಟೇ ಭಾರತದ ಹೆಮ್ಮೆಯ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೋ‌ವು ಚಂದ್ರಯಾನ -3 ಯನ್ನು ಯಶಸ್ವಿಯಾಗಿ ನಡೆಸುವ ಮೂಲಕ ಸಾಧನೆ ಮೆರೆದಿತ್ತು. ಇಸ್ರೋ ವಿಜ್ಞಾನಿಗಳ ಈ ಸಾಧನೆಗೆ ಶುಭಾಶಯ ತಿಳಿಸಲು, ಅವರ ಶ್ರಮವನ್ನು ಅಭಿನಂದಿಸಲು ಪ್ರಧಾನಿ ಮೋದಿ ಅವರು ಇಂದು ಬೆಂಗಳೂರಿನ ಇಸ್ರೋ ಕಚೇರಿಗೆ ಆಗಮಿಸಿದರು.

ಚಂದ್ರಯಾನ-3 ಯಶಸ್ವಿ ಲ್ಯಾಂಡಿಂಗ್ ನಡೆದ ಆಗಸ್ಟ್ 23 ನ್ನು ವರ್ಷಂಪ್ರತಿ ‘ಬಾಹ್ಯಾಕಾಶ ದಿನ’ ವನ್ನಾಗಿ ಆಚರಣೆ ಮಾಡಲಾಗುವುದು ಎಂದು ಪ್ರಧಾನಿ ಮೋದಿ ಅವರು ಇದೇ ಸಂದರ್ಭದಲ್ಲಿ ತಿಳಿಸಿದ್ದಾರೆ. ಇಸ್ರೋ ಚಂದ್ರನ ದಕ್ಷಿಣ ಧ್ರುವದಲ್ಲಿ ಸಂಶೋಧನಾ ನೌಕೆಯನ್ನು ಇಳಿಸುವ ಮೂಲಕ, ಚಂದ್ರನ ದಕ್ಷಿಣ ಧ್ರುವ ತಲುಪಿದ ಮೊದಲ ದೇಶ ಎಂಬ ಹಿರಿಮೆಯನ್ನು ಭಾರತದ ಮುಡಿಗೇರಿಸಿದೆ. ಈ ಸಾಧನೆಯ ಸವಿ ನೆನಪಿಗಾಗಿ ಆಗಸ್ಟ್ 23 ನ್ನು ಬಾಹ್ಯಾಕಾಶ ದಿನವನ್ನಾಗಿ ಆಚರಣೆ ಮಾಡುವುದಾಗಿ ಪ್ರಧಾನಿ ಮೋದಿ ಘೋಷಿಸಿದ್ದಾರೆ. ಆ ಮೂಲಕ ಇಸ್ರೋ ವಿಜ್ಞಾನಿಗಳ ಸಾಧನೆ, ಶ್ರಮಕ್ಕೆ ತಕ್ಕ ಗೌರವವನ್ನು ನೀಡುವುದಾಗಿ ಹೇಳಿದ್ದಾರೆ.

ಇಂದು ಮುಂಜಾನೆ ಪ್ರಧಾನಿ ಮೋದಿ ಅವರು ಇಸ್ರೋ ಕಚೇರಿಗೆ ಭೇಟಿ ನೀಡಿದ್ದು, ಈ ಸಂದರ್ಭದಲ್ಲಿ ಈ ಮಹತ್ವದ ನಿರ್ಣಯವನ್ನು ಪ್ರಕಟಿಸುವ ಮೂಲಕ ಇಸ್ರೋ ಸಂಸ್ಥೆ, ವಿಜ್ಞಾನಿಗಳನ್ನು ಅಭಿನಂದಿಸಿದ್ದಾರೆ.

ಚಂದ್ರಯಾನ ಮೂರರ ಲ್ಯಾಂಡರ್ ಯಾವ ಸ್ಥಾನದಲ್ಲಿ ಇಳಿಯಿತೋ, ಆ ಸ್ಥಾನವನ್ನು ಇನ್ನು ಮುಂದೆ‌ ಶಿವಶಕ್ತಿ ಹೆಸರಿನಿಂದ ಕರೆಯಲಾಗುವುದು. ಶಿವನಲ್ಲಿ ಮಾನವತೆಯ ಕಲ್ಯಾಣ ಗುಣಗಳು ತುಂಬಿಕೊಂಡಿವೆ. ಶಕ್ತಿಯಲ್ಲಿ ಯಾವುದೇ ಸಂಕಲ್ಪವನ್ನು ಪೂರ್ಣಗೊಳಿಸುವ ಸಾಮರ್ಥ್ಯ ಇರುವುದಾಗಿಯೂ ಪ್ರಧಾನಿಗಳು ಇದೇ ಸಂದರ್ಭದಲ್ಲಿ ತಿಳಿಸಿದ್ದಾರೆ. ಹಾಗೆಯೇ ಚಂದ್ರನ ಯಾವ ಸ್ಥಾನದಲ್ಲಿ ಚಂದ್ರಯಾನ -2 ತನ್ನ ಹೆಜ್ಜೆ ಗುರುತು ಮೂಡಿಸಿದೆಯೋ, ಆ ಸ್ಥಾನವನ್ನು ಇನ್ನು ಮುಂದೆ ತಿರಂಗಾ ಎಂದು ಕರೆಯಲಾಗುವುದು. ಇದು ಯಾವುದೇ ವಿಫಲತೆಯು ಪ್ರಯತ್ನ ನಡೆಸುವುದಕ್ಕೆ ಕೊನೆಯಾಗಲಾರದು ಎಂಬುದನ್ನು ಸೂಚಿಸುತ್ತದೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಹಾಗೆಯೇ ಕಠಿಣ ಇಚ್ಛಾಶಕ್ತಿ ಸಫಲತೆಯ ಜೊತೆ ಸದಾ ಇರುತ್ತದೆ ಎಂಬುದಾಗಿಯೂ ಅವರು ತಿಳಿಸಿದ್ದಾರೆ.

ನಮ್ಮ ದೇಶದ ಹೆಮ್ಮೆಯನ್ನು ನಾವು ಚಂದ್ರನ ಮೇಲೆ ಸ್ಥಾಪಿಸಿದ್ದೇವೆ. ಈಗ ಭಾರತ ಚಂದ್ರನ ಮೇಲಿದೆ. ಯಾರೂ ಮುಟ್ಟದ ಸ್ಥಾನವನ್ನು ಭಾರತ ತಲುಪಿದೆ. ಈವರೆಗೆ ಯಾರಿಂದಲೂ ಸಾಧಿಸಲಾಗದ್ದನ್ನು ಭಾರತ ಸಾಧಿಸಿದೆ. ಚಂದ್ರಯಾನ ಸಫಲವಾದ ಆ ದಿನದ ಪ್ರತಿಯೊಂದು ಸೆಕೆಂಡುಗಳೂ ನನ್ನ ಕಣ್ಣ ಮುಂದೆ ಬರುತ್ತಿವೆ. ಲ್ಯಾಂಡರ್ ಮತ್ತು ರೋವರ್ ಚಂದ್ರನ ಮೇಲೆ ಇಳಿದಾಗಿನ ಕೋಟ್ಯಂತರ ಭಾರತೀಯರ ಸಂಭ್ರಮದ ಘಳಿಗೆಯನ್ನು ಯಾರು ತಾನೆ ಮರೆಯುವುದು ಸಾಧ್ಯ. ಚಂದ್ರನ ಮೇಲೆ ಒಂದು ಕಡೆ ವಿ ಕ್ರ ಮನ ವಿಶ್ವಾಸವಿದ್ದರೆ, ಇನ್ನೊಂದು ಕಡೆ ಪ್ರಗ್ಯಾನನ ಪರಾಕ್ರಮ ಇದೆ ಎಂದು ಅವರು ನುಡಿದಿದ್ದಾರೆ.

ಒಟ್ಟಿನಲ್ಲಿ ಚಂದ್ರಯಾನದ ಸಫಲತೆ ವೈಜ್ಞಾನಿಕ ಕ್ಷೇತ್ರದಲ್ಲಿಯೂ ಭಾರತವನ್ನು ವಿಶ್ವದ ದೊಡ್ಡ ಶಕ್ತಿಯಾಗಿ ಗುರುತಿಸಿಕೊಳ್ಳುವ ಹಾಗೆ ಮಾಡಿದೆ. ನಮ್ಮ ವಿಜ್ಞಾನಿಗಳ ಶ್ರಮಕ್ಕೆ ತಕ್ಕ ಫಲ ದೊರೆತಿದ್ದು, ಆ ಮೂಲಕ ಮತ್ತಷ್ಟು ಸಾಧನೆ ಮೆರೆಯುವ ಅವರ ಉತ್ಸಾಹಕ್ಕೆ ಆನೆ ಬಲ ಬಂದಂತಾಗಿದೆ ಎಂದರೂ ತಪ್ಪಾಗಲಾರದು.

Tags

Related Articles

Close