ಪ್ರಚಲಿತ

ಶಿಶಿರನಂಗಳದಲ್ಲಿ ಕಾರ್ಯಾಚರಣೆ ಆರಂಭಿಸಿದ ಪ್ರಗ್ಯಾನ್

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೋದ ಬಹುನಿರೀಕ್ಷಿತ ಚಂದ್ರಯಾನ -3 ರ ಯಶಸ್ಸಿಗೆ ಭಾರತ ಮಾತ್ರವಲ್ಲದೆ, ಇಡೀ ವಿಶ್ವದಿಂದಲೇ ಭರಪೂರ ಅಭಿನಂದನೆಗಳ ಸುರಿಮಳೆಯೇ ಸುರಿಯುತ್ತಿದೆ. ಇತ್ತ ತಮ್ಮ ಯೋಜನೆ ಸಫಲವಾದ ಹಿನ್ನೆಲೆಯಲ್ಲಿ ಸಾಧಕ ಇಸ್ರೋ ವಿಜ್ಞಾನಿಗಳು, ಅವರ ಸಾಧನೆಗೆ ಇಡೀ ಭಾರತವೇ ಹಬ್ಬದ ಸಂಭ್ರಮದಲ್ಲಿದ್ದಾರೆ.

ನಿನ್ನೆಯಷ್ಟೇ ಚಂದ್ರಯಾನ -3 ಅಂದುಕೊಂಡ ಗುರಿಯನ್ನು ಸಾಧಿಸುವ ಮೂಲಕ ಚಂದ್ರನಂಗಳಕ್ಕೆ ಯಶಸ್ವಿಯಾಗಿ ಇಳಿದಿದೆ. ವಿಕ್ರಮ ಲ್ಯಾಂಡರ್ ಮೂಲಕ ಪ್ರಾಗ್ಯಾನ್ ರೋವರ್ ಚಂದಿರನ ದಕ್ಷಿಣ ಧ್ರುವವನ್ನು ಮುತ್ತಿಕ್ಕಿ, ಅಲ್ಲಿ ಈಗಾಗಲೇ ಆ ರೋವರ್‌ಗೆ ಸೂಚಿಸಲಾದ ಕೆಲಸ ಕಾರ್ಯಗಳನ್ನು ಮಾಡಿ, ಸಂಶೋಧನೆ ನಡೆಸಿ ಇಸ್ರೋ‌ಗೆ ಕಳುಹಿಸಲಿದೆ.

ಈ ಸಂಬಂಧ ಇಂದು ಇಸ್ರೋ ಸಂಸ್ಥೆ ಟ್ವೀಟ್ ಮಾಡಿದ್ದು, ಚಂದ್ರಯಾನ -3 ರೋವರ್: ಮೇಡ್ ಇನ್ ಇಂಡಿಯಾ ಮೇಡ್ ಫಾರ್ ದ ಮೂನ್! ಚಂದ್ರಯಾನ -3 ರೋವರ್, ಲ್ಯಾಂಡರ್‌ನಿಂದ ಕೆಳಗಿಳಿದಿರುವುದಾಗಿ ತಿಳಿಸಿದೆ. ಭಾರತ ಚಂದ್ರನ ಮೇಲೆ ನಡೆದಾಡಿರುವುದಾಗಿ ತಿಳಿಸಿ ಸಂಸ್ಥೆ ಹರ್ಷ ವ್ಯಕ್ತಪಡಿಸಿದೆ. ಚಂದ್ರಯಾನದ ಕನಸನ್ನು ನಿನ್ನೆಯಷ್ಟೇ ಭಾರತ ಯಶಸ್ವಿಯಾಗಿ ಪೂರೈಸಿದ್ದು, ಆ ಮೂಲಕ ಬಹು ಕಠಿಣ ಎಂದೇ ಪರಿಗಣಿಸಲಾದ ಚಂದ್ರನ ದಕ್ಷಿಣ ಭಾಗದಲ್ಲಿ ಇಳಿಯುವ ಮೂಲಕ ‘ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿದ ಮೊದಲ ದೇಶ ಭಾರತ’ ಎಂಬ ಹಿರಿಮೆಯನ್ನೂ ತನ್ನದಾಗಿಸಿಕೊಂಡಿದೆ. ಆ ಮೂಲಕ ಕೋಟ್ಯಾಂತರ ಭಾರತೀಯರ ಭರವಸೆಯನ್ನು ಇಸ್ರೋ ಸಾಕಾರಗೊಳಿಸಿತು.

ಭಾರತದೆಲ್ಲೆಡೆ ಈ ಸಾಧನೆಯ ಸಂಭ್ರಮಾಚರಣೆ ನಡೆಯುತ್ತಿದೆ. ಇದರ ನಡುವೆಯೇ ವಿಕ್ರಮ ಲ್ಯಾಂಡರ್ ಮತ್ತು ಪ್ರಗ್ಯಾನ್ ರೋವರ್‌ಗಳು ಶಿಶಿರನ ಅಂಗಳದಲ್ಲಿ ತಮಗೆ ಸೂಚಿಸಲಾದ ಕೆಲಸಗಳನ್ನು ಆರಂಭ ಮಾಡಿದ್ದು, ಈ ಮಾಹಿತಿಯನ್ನು ಸಹ ಇಸ್ರೋ ಸಂಸ್ಥೆ ನೀಡಿದೆ. ರೋವರ್ ಈಗಾಗಲೇ ಚಂದ್ರನ ಮೈಮೇಲೆ ಇಳಿದು ತನ್ನ ಕೆಲಸವನ್ನು ಆರಂಭಿಸಿರುವ ಬಗ್ಗೆ ಇಸ್ರೋ ಸಂತಸ ವ್ಯಕ್ತಪಡಿಸಿದೆ.

ಹಾಗೆಯೇ ಇಸ್ರೋ ಕಳುಹಿಸಿರುವ ವಿಕ್ರಮ ಲ್ಯಾಂಡರ್ ಮತ್ತು ಪ್ರಗ್ಯಾನ್ ರೋವರ್ ಎರಡರ ಆರೋಗ್ಯ ಸ್ಥಿತಿಯೂ ಸ್ಥಿತಿಯೂ ಸ್ಥಿರವಾಗಿರುವುದಾಗಿಯೂ ಅಧ್ಯಕ್ಷ ಎಸ್. ಸೋಮನಾಥ್ ತಿಳಿಸಿದ್ದಾರೆ. ಮುಂದಿನ 14 ದಿನಗಳಲ್ಲಿ ಈ ರೋವರ್ ಚಂದಿರನ ಮೇಲೆ ಹಲವಾರು ಪ್ರಯೋಗಗಳನ್ನು ನಡೆಸಲಿದೆ. ಲ್ಯಾಂಡರ್ ಮತ್ತು ರೋವರ್‌ಗಳೆರಡೂ ಚಂದ್ರನ ಮೇಲಿನ ಒಂದು ದಿನ ಅಂದರೆ ಭೂಮಿಯ ಮೇಲಿನ 14 ದಿನಗಳ ಸಮಯದ ಜೀವಿತಾವಧಿಯನ್ನು ಹೊಂದಿವೆ. ನಿರ್ದಿಷ್ಟ ಕಾರ್ಯಗಳ ಕಾರಣಕ್ಕಾಗಿ ವಿಕ್ರಮ ಲ್ಯಾಂಡರ್ ಮಾಡ್ಯೂಲ್ ಐದು ಪೇ‌ಲೋಡ್‌ಗಳನ್ನು ಸಹ ಹೊತ್ತೊಯ್ದಿರುವುದಾಗಿ ಇಸ್ರೋ ಹೇಳಿದೆ. ರೋವರ್‌ನ ಆಲ್ಫಾ ಪಾರ್ಟಿಕಲ್ ಎಕ್ಸ್-ರೇ ಸೆಕ್ಟೋಮೀಟರ್‌ ಅನ್ನು ರಾಸಾಯನಿಕ ಸಂಯೋಜನೆಯನ್ನು ಪಡೆಯುವ ದೃಷ್ಟಿಯಿಂದ ಮತ್ತು ಚಂದ್ರನ ಮೇಲ್ಮೈಗೆ ಸಂಬಂಧಿಸಿದ ತಿಳಿವಳಿಕೆಯನ್ನು ಮತ್ತಷ್ಟು ಹೆಚ್ಚಿಸಲು, ಖನಿಜ ಸಂಯೋಜನೆಯನ್ನು ನಿರ್ಣಯ ಮಾಡಲು ಬಳಕೆ ಮಾಡಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.

Tags

Related Articles

Close