ಪ್ರಚಲಿತ

ಪಠ್ಯ ಪುಸ್ತಕಗಳಲ್ಲಿ ರಾಮಾಯಣ, ಮಹಾಭಾರತ ಪಠ್ಯ ಅಳವಡಿಕೆಗೆ ಶಿಫಾರಸು

ಮಕ್ಕಳಿಗೆ ಶಾಲಾ ಹಂತದಲ್ಲಿಯೇ ಉತ್ತಮ ಶಿಕ್ಷಣ, ಮಾನವೀಯ, ಸಂಸ್ಕಾರಯುತ ‌ಶಿಕ್ಷಣ ದೊರೆತಲ್ಲಿ ಅವರು ರಾಷ್ಟ್ರದ ಸತ್ಪ್ರಜೆಗಳಾಗಲು ಸಾಧ್ಯ. ಎಳವೆಯಲ್ಲಿ‌ ನಾವು ಎಂತಹ ಮೌಲ್ಯಗಳನ್ನು ರೂಢಿಸಿಕೊಳ್ಳುತ್ತೇವೆಯೋ, ಆ ಮೌಲ್ಯಗಳು ಬದುಕಿನಲ್ಲಿ ನಾವು ಯಾವ ಹಾದಿಯನ್ನು ತುಳಿಯಲಿದ್ದೇವೆ ಎಂಬುದರ ಸಂಕೇತವಾಗಿರುತ್ತದೆ. ಹಾಗಾಗಿಯೇ, ಬೆಳೆಯುವ ಸಿರಿ ಮೊಳಕೆಯಲ್ಲೇ ಅಂದರೆ ನಾವು ಯಾವ ರೀತಿಯ ವ್ಯಕ್ತಿತ್ವ ಹೊಂದುತ್ತೇವೆ ‌ಎನ್ನುವುದು ನಮ್ಮ ಬಾಲ್ಯದ ಶಿಕ್ಷಣವನ್ನೇ ಅವಲಂಬಿಸಿರುತ್ತದೆ ಎನ್ನುವುದು ಸತ್ಯ.

ದೇಶದಲ್ಲಿ ಹೊಸ ಶಿಕ್ಷಣ ಕ್ರಮ ಸದ್ಯದ ಸುದ್ದಿ.‌ ಎನ್‌ಇಪಿ ಜಾರಿಗೆ ದೇಶಾದ್ಯಂತ ದೊಡ್ಡ ಮಟ್ಟದಲ್ಲಿ ಪರ ಮತ್ತು ವಿರೋಧ ವ್ಯಕ್ತವಾಗಿತ್ತು. ಇದೀಗ ಹೊಸ ಪಠ್ಯ ಕ್ರಮದ ಅನುಸಾರ ಪಠ್ಯಪುಸ್ತಕಗಳ ಪರಿಷ್ಕರಣಾ ಸಂಬಂಧ ರಚನೆ ಮಾಡಲಾಗಿರುವ ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿಯು ಮಹತ್ವದ ಶಿಫಾರಸ್ಸೊಂದನ್ನು ಮಾಡಿದೆ.

ಶಾಲಾ ಪಠ್ಯಪುಸ್ತಕಗಳಲ್ಲಿ ಶ್ರೀ ರಾಮಾಯಣ ಮತ್ತು ಮಹಾಭಾರತದ ವಿಚಾರಗಳ ಸೇರ್ಪಡೆಗೆ ಸರ್ಕಾರಕ್ಕೆ ಶಿಫಾರಸು ಮಾಡುವ ಕೆಲಸವನ್ನು ಮಂಡಳಿಯು ಮಾಡಿದೆ. ಹಾಗೆಯೇ ಶಾಲಾ‌ಗೋಡೆಗಳ‌ ಮೇಲೆ ಸಂವಿಧಾನ ಪೀಠಿಕೆಗಳನ್ನು ಬರೆಯುವಂತೆಯೂ ಶಿಫಾರಸ್ಸಿನಲ್ಲಿ ತಿಳಿಸಿದೆ.

ಪಠ್ಯ ಪುಸ್ತಕ ಪರಿಷ್ಕರಣೆಗೆ‌ ಸಂಬಂಧಿಸಿದ ಹಾಗೆ ಕಳೆದ ವರ್ಷ ಏಳು ಸದಸ್ಯರ ಸಮಿತಿಯೊಂದನ್ನು ರಚನೆ ಮಾಡಲಾಗಿತ್ತು. ಸಮಾಜದ ವಿಜ್ಞಾನ ಪಠ್ಯ ಪುಸ್ತಕ ಪರಿಷ್ಕರಣೆಗೆ ಸಂಬಂಧಿಸಿದ ಹಾಗೆ ಹಲವಾರು ಶಿಫಾರಸುಗಳನ್ನು ನೀಡಿದೆ. ಈ ಶಿಫಾರಸ್ಸಿನಲ್ಲಿರುವ ಅಂಶಗಳನ್ನು ಹತ್ತೊಂಬತ್ತು ಸದಸ್ಯರ ರಾಷ್ಟ್ರೀಯ ಪಠ್ಯಕ್ರಮ ಮತ್ತು ಬೋಧನಾ ಕಲಿತ ಸಾಮಗ್ರಿ ಸಮಿತಿ ಪರಿಶೀಲಿಸಿ‌ ಪರಿಗಣಿಸಲಿದೆ.

ಶ್ರೀ ರಾಮಾಯಣ ಹಾಗೂ ಮಹಾಭಾರತ‌ ಕಾವ್ಯಗಳನ್ನು ಪಠ್ಯದಲ್ಲಿ ಸೇರಿಸಿ, ಆ ಮೂಲಕ ಮಕ್ಕಳಿಗೆ ಉತ್ತಮ ಮೌಲ್ಯಗಳನ್ನು ತಿಳಿಸುವ ಕೆಲಸವಾಗಬೇಕು. ಮಕ್ಕಳ‌ ಮೌಲ್ಯಯುತ ಜೀವನಕ್ಕೆ ಇಂತಹ ಪಠ್ಯಗಳು ಅತ್ಯವಶ್ಯ ಎಂದು‌‌‌ ಸಮಿತಿಯ ಮುಖ್ಯಸ್ಥ ಸಿ ಐ ಐಸಾಕ್ ತಿಳಿಸಿದ್ದಾರೆ.

7 – 12 ನೇ ತರಗತಿಯ ವಿದ್ಯಾರ್ಥಿಗಳಿಗೆ ಮಹಾಭಾರತ, ರಾಮಾಯಣ ಮಹಾಕಾವ್ಯಗಳನ್ನು ಅಳವಡಿಸುವ ಹಾಗೆ ಶಿಫಾರಸಿನಲ್ಲಿ ಹೇಳಲಾಗಿದೆ. ದೇಶಭಕ್ತಿ, ರಾಷ್ಟ್ರ ಗೌರವ, ಮಾನವ ಕೆ ಕಲಿಯುವ ನಿಟ್ಟಿನಲ್ಲಿ ಈ ಮೌಲ್ಯಯುತ‌ ಪಠ್ಯಗಳು ಸಹಕಾರಿಯಾಗಲಿವೆ. ಭಾರತೀಯರು ತಮ್ಮ ಮೂಲವನ್ನು ಅರಿತುಕೊಳ್ಳಬೇಕಾಗಿದ್ದು, ನಮ್ಮ ದೇಶದ ಸಂಸ್ಕೃತಿ, ಆಚಾರ, ವಿಚಾರಗಳ ಬಗ್ಗೆ ತಿಳಿಯಬೇಕಾಗಿದೆ. ಈ ನಿಟ್ಟಿನಲ್ಲಿ ಇಂತಹ ಪಠ್ಯಗಳು ಬದುಕಿಗೆ ಪೂರಕವಾಗಲಿವೆ ಎಂದು ಮಂಡಳಿ ಅಭಿಪ್ರಾಯ ವ್ಯಕ್ತಪಡಿಸಿದೆ.

Tags

Related Articles

Close