ಪ್ರಚಲಿತ

ದೈವದ ಹೆಸರಲ್ಲಿ ಹಣ ಮಾಡಲು ಹೊರಟ ಟ್ರಾವೆಲ್ ಏಜೆನ್ಸಿ: ಸಾರ್ವಜನಿಕರಿಂದ ಛೀಮಾರಿ

ಕಾಂತಾರಾ ಸಿನೆಮಾದ ಖ್ಯಾತಿ ದೇಶ ವಿದೇಶಗಳಲ್ಲಿನ ಜನರಿಗೆ ದೈವ ದೇವರ ಮೇಲೆ ನಂಬಿಕೆ, ಪ್ರೀತಿ, ಗೌರವ ಹುಟ್ಟುವಂತೆ ಮಾಡಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಇದು ಸಕಾರಾತ್ಮಕ ಸುದ್ದಿಯಾದರೆ, ಕೆಲವು ಎಡಬಿಡಂಗಿಗಳು ದೈವಾರಾಧನೆಯ ಹೆಸರಲ್ಲಿ ಜನರನ್ನು ಮರುಳು ಮಾಡಿ ಹಣ ಮಾಡುವ ದಂಧೆಗೆ ಕೈ ಹಾಕಿದ್ದಾರೆ ಎನ್ನುವುದು ಸತ್ಯ.

ಕಾಂತಾರದ ನಂತರ ಜನರಲ್ಲಿ ದೈವ ಕೋಲ ನೋಡಬೇಕು ಎನ್ನುವ ಆಸೆ ಹೆಚ್ಚಾಗಿದೆ. ಇದಕ್ಕಾಗಿ ಕರಾವಳಿ ಭಾಗಕ್ಕೆ ದೇಶ‌ ವಿದೇಶಗಳಿಂದ ಜನರು ಬರುತ್ತಿದ್ದಾರೆ. ದೈವಕೋಲಗಳನ್ನು ನೋಡುತ್ತಿದ್ದಾರೆ. ತಮ್ಮ ಕಷ್ಟಗಳನ್ನು ಹೇಳಿ, ಪರಿ ಹರಿ ಸಿ ಕೊಡುವಂತೆ ಬೇಡಿಕೊಳ್ಳುತ್ತಿದ್ದಾರೆ. ಆದರೆ ಇದರ ನಡುವೆಯೇ ಕೆಲವು ಮಂದಿ ದೈವ ಕೋಲ ಎಂಬ ತುಳುನಾಡಿನ ನಂಬಿಕೆಯನ್ನು ಹಣ ಮಾಡುವ ಉದ್ದೇಶಕ್ಕೆ ಬಳಕೆ ಮಾಡಿಕೊಳ್ಳುತ್ತಿರುವುದು ಖೇದಕರ.

ಹೀಗೆಯೇ ದೈವದ ಹೆಸರಲ್ಲಿ ಜನರಿಂದ ದುಡ್ಡು ಹೊಡೆಯಲು ಮಾಸ್ಟರ್ ಪ್ಲ್ಯಾನ್ ಮಾಡಿಕೊಂಡಿರುವ ಟ್ರಾವೆಲ್ ಏಜೆನ್ಸಿಯೊಂದು ಇದೀಗ ಕರಾವಳಿ ಭಾಗದ ಜನರ ಕೆಂಗಣ್ಣಿಗೆ ಗುರಿಯಾಗಿದೆ.

ಟ್ರಾವೆಲ್‌ಬಡೀ ಎಂಬ ಏಜೆನ್ಸಿ ಜನರಿಗೆ ಕರಾವಳಿ ಭಾಗಕ್ಕೆ ಟೂರ್ ಪ್ಯಾಕೇಜ್ ಹಾಕಿಕೊಂಡಿದೆ. 2899 ರೂ. ಗಳನ್ನು ಇದಕ್ಕಾಗಿ ನಿಗದಿ ಮಾಡಿದೆ. ಇದರಲ್ಲೇನಿದೆ. ಇದು ಸಾಮಾನ್ಯ ಸಂಗತಿ. ಎಲ್ಲಾ ಟ್ರಾವೆಲ್ ಏಜೆನ್ಸಿಗಳೂ ಹೀಗೆಯೇ ತಾನೆ ಟೂರ್ ಪ್ಯಾಕೇಜ್ ಹಾಕಿಕೊಳ್ಳುವುದು ಎಂದುಕೊಂಡಿರಾ.. ವಿಷಯ ಇದೆ, ಇದು ಎಲ್ಲಾ ಪ್ಯಾಕೇಜ್‌ಗಳ ಹಾಗಲ್ಲ. ಇದರ ಆಫರ್‌ಗಳನ್ನು ಕೇಳಿದರೆ ನೀವು ಮೂರ್ಚೆ ಹೋಗುವುದು ಗ್ಯಾರಂಟಿ.

ದೈವಾರಾಧನೆ ತೋರಿಸುವುದರ ಜೊತೆಗೆ ಪ್ರವಾಸಿ ತಾಣಗಳನ್ನು ತೋರಿಸುವುದಾಗಿ ಈ ಪ್ಯಾಕೇಜ್ ನಲ್ಲಿ ಹೇಳಲಾಗಿದೆ. ಟೂರ್ ಪ್ಯಾಕೇಜ್ ಆಗಿ ‘ಭೂತ ಕೋಲ: A night with ancient spirits’ ಎಂಬುದಾಗಿ ಘೋಷಣೆ ಮಾಡಿಕೊಂಡಿದ್ದು, ಕರಾವಳಿಯ ನಂಬಿಕೆ, ಕಾಪಾಡಿಕೊಂಡು ಬಂದಿರುವ ಶಕ್ತಿಗಳನ್ನು ಟೂರ್ ಪ್ಯಾಕೇಜ್ ಹೆಸರಿನಲ್ಲಿ ಹಣ ಮಾಡುವ ವಿಷಯವಾಗಿ ಉಪಯೋಗ ಮಾಡಿರುವುದಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗಿದೆ. ಈ ರೀತಿ ಪೋಸ್ಟ್ ಮಾಡಿರುವ ಟ್ರಾವೆಲ್ ಏಜೆನ್ಸಿ ವಿರುದ್ಧ ಕರಾವಳಿಯ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಟ್ರಾವೆಲ್ ಏಜೆನ್ಸಿಯ ಈ ಟ್ರಿಕ್‌ಗೆ ಕೆಂಡ ಕಾರಿರುವ ಕರಾವಳಿಗರು, ದೈವಾರಾಧನೆಯನ್ನು ಈ ರೀತಿ ಬಳಕೆ ಮಾಡಿ ಹಣ ಮಾಡುವುದಕ್ಕೆ ನಾವು ಅವಕಾಶ ನೀಡುವುದಿಲ್ಲ ಎಂದು ಹೇಳಿದ್ದಾರೆ‌. ಇಂತಹ ಘಟನೆಗಳಿಗೆ ನಮ್ಮ ತುಳುನಾಡಿನಲ್ಲಿ ಅವಕಾಶ ಇಲ್ಲ ಎಂಬುದಾಗಿಯೂ ದೈವಾರಾಧಕರು ಕೆಂಡ ಕಾರಿದ್ದಾರೆ.

ಒಟ್ಟಿನಲ್ಲಿ ದೈವ ದೇವರನ್ನು ಮನಸ್ಸಿಗೆ ಬಂದಂತೆ ಬಳಕೆ ಮಾಡಿ, ಆ ಮೂಲಕ ಜೇನು ತುಂಬಿಸಲು ಹೊರಟವರಿಗೆ ತುಳುವರ ನಂಬಿಕೆಯ ಆ ದೈವದೇವರೇ ತಕ್ಕ ಶಾಸ್ತಿ ಮಾಡುವಂತಾಗಲಿ ಎಂಬುದು ದೈವೈರಾದಕರ ಪ್ರಾರ್ಥನೆ.

Tags

Related Articles

Close