ಪ್ರಚಲಿತ

ಗುಜರಾತ್ ಚುನಾವಣಾ ಫಲಿತಾಂಶದಿಂದ ಕರ್ನಾಟಕ ಬಿಜೆಪಿ ಕಲಿಯಬೇಕಾಗಿರುವುದಾದರೂ ಏನು?

“ಗುಜರಾತ್‍ನಲ್ಲಿ ಮೋದಿ ಅಲೆ ಮೋಡಿ ಮಾಡಿತ್ತು. ಮೋದಿ ಗುಜರಾತ್‍ನ್ನು ಗೆದ್ದು ತೋರಿಸಿದ್ದರು. ಗುಜರಾತ್ ಮತ್ತೊಮ್ಮೆ ಕೇಸರಿಮಯವಾಗಿದೆ. ಗುಜರಾತ್‍ನಲ್ಲಿ ಭಾರತೀಯ ಜನತಾ ಪಕ್ಷ ಭರ್ಜರಿ ಜಯಬೇರಿ ಬಾರಿಸಿದೆ. ಅಮಿತ್ ಶಾ ಮತ್ತು ನರೇಂದ್ರ ಮೋದಿ ಜಯವನ್ನು ತಂದು ಕೊಟ್ಟಿದ್ದಾರೆ. ಗುಜರಾತ್‍ನಲ್ಲಿ 22 ವರ್ಷದಿಂದಲೂ ಭಾರತೀಯ ಜನತಾ ಪಕ್ಷ ಇದ್ದು ಈ ಬಾರಿಯೂ ಭಾರತೀಯ ಜನತಾ ಪಕ್ಷ ಅಧಿಕಾರದ ಗದ್ದುಗೆ ಹಿಡಿಯುಯವಲ್ಲಿ ಯಶಸ್ವಿಯಾಗಿದೆ”.

ಇದು ಗುಜರಾತ್ ಚುನಾವಣೆಯಲ್ಲಿ ಬಿಜೆಪಿ ಪಕ್ಷ ಅನುಭವಿಸಿದ ಗೆಲುವಿಗೆ ಮಾಧ್ಯಮಗಳು ಸುದ್ಧಿ ಬಿತ್ತರಿಸುವ ಶೈಲಿ ಹಾಗೂ ಬಿಜೆಪಿ ಕಾರ್ಯಕರ್ತರು ಸಂಭ್ರಮಿಸುವ ಕ್ಷಣಗಳು. ಆದರೆ ಅಲ್ಲಿ ನಡೆದಿದ್ದಾದರೂ ಏನು ಎಂಬುವುದನ್ನು ಕೂಲಂಕುಶವಾಗಿ ಗಮಿನಿಸಿದರೆ ಅದೊಂದು ಚಮತ್ಕಾರವೆನಿಸದೆ ಇರದು.

ಗುಜರಾತ್ ಚುನಾವಣೆಯಲ್ಲಿ ನಿಜವಾಗಿಯೂ ನಡೆದಿದ್ದೇನು..?

ನಿಸ್ಸಂಶಯವಾಗಿ ಗುಜರಾತ್‍ನಲ್ಲಿ ನಡೆದಿದ್ದು ಮೋದಿ ಮ್ಯಾಜಿಕ್ ಅಲ್ಲದೆ ಮತ್ತೇನೂ ಅಲ್ಲ. ನರೇಂದ್ರ ಮೋದಿ ಗುಜರಾತ್‍ನಲ್ಲಿ 4 ಬಾರಿ ಮುಖ್ಯಮಂತ್ರಿಯಾಗಿದ್ದು ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದರು ಎನ್ನುವುದರಲ್ಲಿ ಸಂದೇಹವೇ ಇಲ್ಲ. ಮೋದಿಯವರ ಜನಪರ ಯೋಜನೆಗಳು ಅಲ್ಲಿ ಮೋದಿಯನ್ನು ಅಷ್ಟೊಂದು ಪ್ರೀತಿಸಲು ಕಾರಣವಾಗಿತ್ತು. ಅವರು ಮಾಡಿರುವ ಅಭಿವೃದ್ಧಿ ಕಾರ್ಯಗಳೇ ಅವರಿಗೆ ಶ್ರೀ ರಕ್ಷೆ ಎನ್ನುವುದರಲ್ಲಿ ಅತಿಶಯೋಕ್ತಿಯೇ ಇಲ್ಲ. ಆದರೆ ಮೋದಿ ದಿಲ್ಲಿ ಗದ್ದುಗೆ ಹಿಡಿದ ನಂತರ ಗುಜರಾತ್ ಅಕ್ಷರಷಃ ಆಡಳಿತ ವಿರೋಧಿ ಅಲೆಯಲ್ಲಿ ಮುಳುಗಿ ಹೋಗಿತ್ತು.

ಮೋದಿ ಅಭೂತಪೂರ್ವ ಗೆಲುವಿನೊಂದಿಗೆ ಭಾರತವನ್ನು ಭಾರತೀಯ ಜನತಾ ಪಕ್ಷದ ತೆಕ್ಕೆಗೆ ತಂದಿಟ್ಟು ಪ್ರಧಾನಿ ಮಂತ್ರಿ ಹುದ್ದೆಯನ್ನು ಅಲಂಕರಿಸಿದರು. ಮೋದಿ ಮೋಡಿ ದೇಶವ್ಯಾಪಿಯಾಗಿ ಅದ್ಭುತವಾಗಿ ನಡೆದಿತ್ತು. ದೇಶ ವಿದೇಶಗಳಲ್ಲೂ ಮೋದಿಯದ್ದೇ ಹವಾ. ಆದರೆ ಗುಜರಾತ್‍ನಲ್ಲಿ ಮಾತ್ರ ಆಡಳಿತ ವಿರೋಧಿ ಅಲೆಯನ್ನು ಎದರಿಸಲು ಸಿದ್ದರಾಗಬೇಕಿತ್ತು. ಮೋದಿಯಿಂದ ತೆರವಾದ ಮುಖ್ಯಮಂತ್ರಿ ಸ್ಥಾನ ಮಹಿಳಾ ನಾಯಕಿ ಆನಂದಿ ಬೆನ್ ಇವರಿಗೆ ನೀಡಲಾಯಿತು. ಆದರೆ ಅವರಿಂದ ಗುಜರಾತ್ ಎನಿಸಿದಷ್ಟು ವೇಗವಾಗಿ ಸಾಗಲೇ ಇಲ್ಲ. ಹೀಗಾಗಿ ಅವರನ್ನು ಬದಲಾಯಿಸಿ ಮತ್ತೊಬ್ಬ ಬಿಜೆಪಿ ನಾಯಕ ವಿಜಯ ರೂಪಾಣಿಯನ್ನು ಮುಖ್ಯಮಂತ್ರಿ ಮಾಡಿ ನಿತಿನ್ ಪಟೇಲರನ್ನು ಉಪಮುಖ್ಯಮಂತ್ರಿಯನ್ನಾಗಿ ಮಾಡಲಾಯಿತು. ಆದರೆ ಅಷ್ಟರೊಳಗೆ ಕಾಂಗ್ರೆಸ್ ಪಕ್ಷ ತಣ್ಣಗೆ ತನ್ನ ಕೆಲಸವನ್ನು ಮಾಡಲು ಆರಂಭಿಸಿತು.

ಒಡೆದು ಆಳುವ ನೀತಿ ಕಾಂಗ್ರೆಸ್‍ಗೆ ವರವಾಯಿತಾ..?

ಕಾಂಗ್ರೆಸ್ ಅಂದರೆ ಹಾಗೇನೇ. ಅದು ಹಿಂದಿನಿಂದಲೂ ಒಡೆದು ಆಳುವ ನೀತಿಯನ್ನೇ ಅನುಸರಿಸಿಕೊಂಡು ಬಂದ ಪಕ್ಷ. ಧರ್ಮವೊಂದು ಸಾಂಘಿಕವಾಗಿದ್ದರೆ ಅದರಿಂದ ರಾಜಕೀಯವಾಗಿ ನಮಗೆ ಹಿನ್ನೆಡೆಯಾಗುತ್ತದೆ ಎನ್ನುವುದು ಕಾಂಗ್ರೆಸ್ ಅರಿತುಕೊಂಡ ಸತ್ಯ. ಹಿಂದೂ ಧರ್ಮ ಒಗ್ಗಟ್ಟಾದರೆ ಅದು ನೇರವಾಗಿ ಭಾರತೀಯ ಜನತಾ ಪಕ್ಷಕ್ಕೆ ಲಾಭ ತಂದು ಕೊಡುತ್ತದೆ. ಹೀಗಾಗಿಯೇ ಹಿಂದೂ ಧರ್ಮವನ್ನು ಜಾತಿಗಳ ಆಧಾರದಲ್ಲಿ ತುಂಡರಿಸಿದರೆ ಅದರಲ್ಲಿ ಹೆಚ್ಚು ಲಾಭವನ್ನು ಗಳಿಸಬಹುದು ಎಂಬುವುದು ಕಾಂಗ್ರೆಸ್ ಲೆಕ್ಕಾಚಾರ.

ಹೀಗಾಗಿಯೇ ಗುಜರಾತ್‍ನಲ್ಲಿ ಬಿಜೆಪಿ ಗೆದ್ದಿದ್ದರೂ ಅಷ್ಟೊಂದು ಬೀಗುವ ವಾತಾವರಣ ನಿರ್ಮಾಣವಾಗಲೇ ಇಲ್ಲ. ಯಾಕೆಂದರೆ ಜಾತಿ ರಾಜಕೀಯ ಅನ್ನೋದು ಆವಾಗಲೇ ಗುರಾತ್‍ನಲ್ಲಿ ಆವರಿಸಿಯಾಗಿತ್ತು. ಕಾಂಗ್ರೆಸ್ ಕೃಪಾ ಪೋಷಿತ ನಾಟಕ ತಂಡವಾದ ಹಾರ್ದಿಕ್ ಪಟೇಲ್ ನೇತೃತ್ವದ ಪಾಟೀದಾರ್ ಮೀಸಲಾತಿ ಹೋರಾಟಗಾರರ ತಂಡವೊಂದು ಜನ್ಮ ತಾಳಿತ್ತು. ಪಟೇಲ್ ಸಮುದಾಯಕ್ಕೆ ಮೀಸಲಾತಿ ಸಿಗಬೇಕೆನ್ನುವ ಹೋರಾಟದ ನಾಟಕವಾಡಿ ಕಮಲದ ಪರವಾಗಿದ್ದ ಮತದಾರರನ್ನು ಬೇರ್ಪಡಿಸುವ ತಂತ್ರವನ್ನು ಹೆಣೆಯುತ್ತಾರೆ.

ಅತ್ತ ಹಾರ್ದಿಕ್ ಪಟೇಲನಿಂದ ಈ ಹೋರಾಟ ನಡೆದಿದ್ದರೆ ಇತ್ತ ದಲಿತ ನಾಯಕನೆಂದು ಬಿಂಬಿಸಿಕೊಂಡು ಜಿಗ್ನೇಶ್ ಮೇವಾನಿಯನ್ನು ತಂದು ದಲಿತರ ಮತಗಳನ್ನು ಓಲೈಸಿ, ಅವರನ್ನೂ ಭಾರತೀಯ ಜನತಾ ಪಕ್ಷದಿಂದ ದೂರ ಮಾಡುತ್ತಾರೆ. ಈ ಮೂಲಕ ದಲಿತರನ್ನೂ ಬಿಜೆಪಿಯಿಂದ ಎತ್ತಿ ಕಟ್ಟುವಲ್ಲಿ ಯಶಸ್ವಿಯಾಗುತ್ತಾರೆ. ಮಾತ್ರವಲ್ಲದೆ ಮತ್ತೊಂದು ಕಡೆ ಹಿಂದುಳಿದ ವರ್ಗದವರನ್ನೂ ಮೋದಿಯಿಂದ ದೂರ ಎಳೆದು ತರುವಲ್ಲಿ ಯಶಸ್ವಿಯಾಗುತ್ತಾರೆ.

ಈ ಎಲ್ಲಾ ಕಾಂಗ್ರೆಸ್ ಮಾಡಿದ ತಂತ್ರಗಳಲ್ಲಿ ಬಿಜೆಪಿ ಭಾರೀ ಹಿಂದೆ ಬೀಳುತ್ತೆ. ಮಾತ್ರವಲ್ಲದೆ ಸೋಲು ಎಂಬ ಭೂತ ಗುಜರಾತ್ ಬಿಜೆಪಿಯನ್ನು ಆವರಿಸುತ್ತೆ. ಆವಾಗ ಮತ್ತೆ ಗುಜರಾತಿಗೆ ಬಂದ ಆಪಾತ್ಬಾಂದವನೇ ಮೋದಿ. ಅದೇಗೋ ಮೋದಿ ಮತ್ತು ಅಮಿತ್ ಶಾ ಜೋಡಿ ಗುಜರಾತಿನಲ್ಲಿ ಮೋಡಿ ಮಾಡುತ್ತೆ. ಶತಾಯ ಗತಾಯ ಕೆಲಸ ಮಾಡಿ ಗುಜರಾತ್‍ನಲ್ಲಿ ಕಮಲವನ್ನು ಅರಳಿಸಲು ಪ್ರಯತ್ನಿಸುತ್ತಾರೆ. ಬರೋಬ್ಬರಿ 60ಕ್ಕಿಂತಲೂ ಅಧಿಕ ಕಡೆಗಳಲ್ಲೂ ರ್ಯಾಲಿ ಮಾಡಿ ಅದೇಗೋ ಗುಜರಾತಿನಲ್ಲಿ ಕಮಲ ಅರಳಿಸಿಯೇ ಬಿಟ್ಟಿದ್ದರು.

ಹೀಗೇ ಆದರೆ ಕರ್ನಾಟಕದಲ್ಲಿ ಹೇಗೆ..?

ಗುಜರಾತ್ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ ಕಂಡಂತಹ ಗೆಲುವು ಕರ್ನಾಟಕಕ್ಕೂ ಪಾಠವಾಗಿದೆ. ಗುಜರಾತ್ ಗೆಲುವು ಸುಲಭದ ತುತ್ತಾಗದೆ ಕಬ್ಬಿಣದ ಕಡಲೆಯಾಗಿದ್ದಂತು ಸತ್ಯ. ಜಾತಿ ಜಾತಿಗಳ ತಿಕ್ಕಾಟವನ್ನು ಕಾಂಗ್ರೆಸ್ ಸಮರ್ಥವಾಗಿ ನಿರ್ವಹಿಸಿದ್ದು ಕಾಂಗ್ರೆಸ್‍ಗೆ ಭಾರೀ ಲಾಭವನ್ನು ತಂದು ಕೊಟ್ಟಿದೆ. ಬಹುತೇಕ ಸ್ಥಾನಗಳನ್ನು ಗಳಿಸಲು ಜಾತಿ ರಾಜಕಾರಣವೇ ಕಾರಣವಾಗಿತ್ತು.

ಈ ಸ್ಟಾಟರ್ಜಿಯನ್ನು ಕರ್ನಾಟಕದಲ್ಲೂ ಮುಂದುವರಿಸಲು ಕಾಂಗ್ರೆಸ್ ಈಗಾಗಲೇ ಯೋಜನೆಯನ್ನು ರೂಪಿಸಿದ್ದು ಅದನ್ನು ಸಂಪೂರ್ಣವಾಗಿ ಕಾರ್ಯಗತಗೊಳಿಸಲು ಸನ್ನದ್ದ ವಾಗಿದೆ. ಈಗಾಗಲೇ ಕರ್ನಾಟಕದಲ್ಲಿ ಜಾತಿ ಜಾತಿಗಳ ಮಧ್ಯೆ ವೈಷಮ್ಯವನ್ನು ಸೃಷ್ಟಿಸಿದ್ದು ಇದಕ್ಕೆ ಸಾಕ್ಷಿಯಾಗಿದೆ. ಇನ್ನೇನಿದ್ದರೂ ಜಾತಿಗಳನ್ನು ಒಡೆದು ಆಳಲು ಕಾಂಗ್ರೆಸ್ ಪಕ್ಷ ತನ್ನ ಬತ್ತಳಿಕೆಯಲ್ಲಿರುವ ಅಸ್ತ್ರಗಳನ್ನು ಕರ್ನಾಟಕದ ಮೇಲೆ ಪ್ರಯೋಗಿಸಲು ತಯಾರಾಗಿ ನಿಂತಿದೆ.

ಕರ್ನಾಟಕದ ಬಿಜೆಪಿ ನಾಯಕರಿಗೆ ಇದು ಎಚ್ಚರಿಕೆಯ ಕರೆಘಂಟೆ..!!!

ಸಂಶಯವೇ ಇಲ್ಲ. ಕಾಂಗ್ರೆಸ್ಸಿಗರ ಮುಂದಿನ ಗುರಿಯೇ ಕರ್ನಾಟಕ. ಈಗಾಗಲೇ ಮೋದಿ ಹಾಗೂ ಶಾ ಜೋಡಿ ಎಲ್ಲೆಡೆ ಮೋಡಿಯನ್ನು ಮಾಡಿದ್ದು ಎಲ್ಲಾ ರಾಜ್ಯಗಳಲ್ಲೂ ಕಮಲವನ್ನು ಅರಳಿಸಿದೆ. ಮೋದಿ ಮತ್ತು ಅಮಿತ್ ಶಾ ಬಂದರೆ ರಾಜ್ಯ ಕೇಸರಿಮಯವಾಗುತ್ತೆ. ಇದನ್ನು ಮನಗಂಡೇ ಕಾಂಗ್ರೆಸ್ ನಾಯಕರು ಕರ್ನಾಟಕದಲ್ಲಿದ್ದ ಸ್ಥಾನವನ್ನು ತಮ್ಮಲ್ಲಿಯೇ ಉಳಿಸಿಕೊಳ್ಳಲು ಹರಸಾಹಸಪಡುತ್ತಿದ್ದಾರೆ. ಇದಕ್ಕೆ ರಾಜ್ಯದಲ್ಲೂ ಗುಜರಾತ್ ಮಾದರಿಯನ್ನು ಅನುಸರಿಸಲು ಸಿದ್ಧರಾಗಿ ನಿಂತಿದ್ದಾರೆ.

ಕರ್ನಾಟಕದಲ್ಲಿ ಈಗಾಗಲೇ ಲಿಂಗಾಯತ ಹಾಗೂ ವೀರಶೈವ ಜಾತಿಗಳನ್ನು ಹಿಂದೂ ಧರ್ಮದಿಂದ ಬೇರ್ಪಡಿಸಲು ಯಶಸ್ವಿಯಾಗಿದೆ. ಈಗಾಗಲೇ ಕಾಂಗ್ರೆಸ್ ನಾಯಕರು ಜಾತಿ ಒಡೆಯುವ ಕಾರ್ಯದಲ್ಲಿ ಈಗಾಗಲೆ ಸಕ್ರಿಯರಾಗಿದ್ದಾರೆ. ಕರ್ನಾಟಕದ ಸಚಿವರಾದ ಎಂ.ಬಿ.ಪಾಟೀಲ್, ವಿನಯ ಕುಲಕರ್ಣಿ ಸಹಿತ ಅನೇಕ ರಾಜಕಾರಣಿಗಳು ಈ ಕಾರ್ಯದಲ್ಲಿ ನಿರತರಾಗಿದ್ದಾರೆ. ಈವರೆಗೂ ಲಿಂಗಾಯುತ ಸಮಾಜ ಬಿಜೆಪಿ ಬೆಂಬಲಿತವಾಗಿದ್ದು ಈ ಬಾರಿ ಕಾಂಗ್ರೆಸ್ ನಾಯಕರ ಒಡೆದು ಆಳುವ ನೀತಿಗೆ ಬಲಿಪಶುಗಳಾಗಿದ್ದಾರೆ.

ಮಾತ್ರವಲ್ಲದೆ ರಾಜ್ಯದಲ್ಲಿರುವ ಪ್ರಮುಖ ಜಾತಿಗಳನ್ನು ಉಪಯೋಗಿಸಿಕೊಂಡು, ಹಿಂದುತ್ವದ ಮಂತ್ರವನ್ನು ಪಠಿಸುತ್ತಿರುವ ಭಾರತೀಯ ಜನತಾ ಪಕ್ಷಕ್ಕೆ ನೇರ ಸವಾಲನ್ನು ಒಡ್ಡಲು ತಯಾರಾಗಿ ನಿಂತಿದ್ದಾರೆ.

ಹಿಂದುತ್ವ ವಿರೋಧಿ ಸರ್ಕಾರವನ್ನು ಇಳಿಸಲಾಗದೇ..?

ಕರ್ನಾಟಕ ಕಾಂಗ್ರೆಸ್ ಸರ್ಕಾರ ಅಕ್ಷರಷಃ ಹಿಂದೂ ವಿರೋಧಿ ಸರ್ಕಾರವಾಗಿದೆ. ಈವರೆಗೂ 20ಕ್ಕಿಂತಲೂ ಅಧಿಕ ಹಿಂದೂ ಕಾರ್ಯಕರ್ತರ ಹತ್ಯೆಗಳು ಈ ರಾಜ್ಯದಲ್ಲಿ ನಡೆದಿದ್ದು ಇದನ್ನು ತಡೆಯಲು ರಾಜ್ಯ ಸರ್ಕಾರ ವಿಫಲವಾಗಿದೆ. ಮಾತ್ರವಲ್ಲದೆ ಇದನ್ನು ಪ್ರತಿಭಟಿಸಲು ಪ್ರಬಲ ವಿರೋಧ ಪಕ್ಷವಾದ ಬಿಜೆಪಿಗೂಯೂ ಕಷ್ಟವಾಗಿದೆ. ಅದೆಷ್ಟೇ ಪ್ರತಿಭಟನೆ ನಡೆಸಿದರೂ ಕಾಂಗ್ರೆಸ್ ಪಕ್ಷವನ್ನು ಮಣಿಸಲು ಕಾಂಗ್ರೆಸ್ ನಾಯಕರನ್ನು ಅಧಿಕಾರದಿಂದ ಇಳಿಸಲು ಕಷ್ಟಕರವಾಗಿದ್ದು ಬಿಜೆಪಿ ಪ್ರತಿಭಟನೆಗೆ ಹಿನ್ನೆಡೆಯಾಗುತ್ತಿದೆ. ಕಾಂಗ್ರೆಸ್ ಗೆ ಮುಖ್ಯಮಂತ್ರಿ ಹಾಗೂ ಕೈಕಮಾಂಡ್‍ಗಳ ಸಂಪೂರ್ಣ ಸಪೋರ್ಟ್ ದೊರಕಿದ್ದು ಯಾವುದೇ ಕಾರಣಕ್ಕೂ ರಾಜೀನಾಮೆ ಕೊಡಬೇಡಿ ನಾವಿದ್ದೇವೆ ಎನ್ನುವ ಸಂದೇಶದಿಂದ ಭ್ರಷ್ಟ ಹಾಗೂ ಕೊಲೆಗಡುಕ ಸಚಿವರುಗಳು ಇನ್ನೂ ಆ ಸ್ಥಾನದಲ್ಲಿ ಭದ್ರವಾಗಿ ಕುಳಿತಿದ್ದಾರೆ. ಅದೆಷ್ಟೇ ಹಗರಣಗಳು ನಡೆದರೂ ಡೋಂಟ್ ಕೇರ್ ಎನ್ನುತ್ತಿವೆ ರಾಜ್ಯ ಕಾಂಗ್ರೆಸ್ ಸರ್ಕಾರ.

ಬಲಿಷ್ಟ ನಾಯಕತ್ವದ ಅಗತ್ಯವಿದೆ..!

ಕಹಿಯಾದರೂ ಸತ್ಯ. ರಾಜ್ಯದಲ್ಲಿ ತಾನೇ ಎಲ್ಲ ಎನ್ನುವ ಬಿಜೆಪಿ ನಾಯಕರ ದೋರಣೆ ಕಡಿಮೆ ಮಾಡಿಕೊಳ್ಳಬೇಕಾಗಿದೆ. ಈಗಾಗಲೇ ತನ್ನ ಸ್ವಪ್ರತಿಷ್ಟೆಯನ್ನು ಬಹುತೇಕ ನಾಯಕರು ಬದಿಗೆ ಸರಿಸಿದ್ದು ಅದನ್ನು ಇನ್ನಷ್ಟು ಮುಂದುವರೆಸಿಕೊಂಡು ಹೋಗಬೇಕಾಗಿದೆ. ಈಗಾಗಲೇ ಪ್ರತೀ ವಿಧಾನ ಸಭಾ ಕ್ಷೇತ್ರಗಳಲ್ಲೂ ಭಾರತೀಯ ಜನತಾ ಪಕ್ಷದ ಪರಿವರ್ತನಾ ರ್ಯಾಲಿ ಬಿಡುವಿಲ್ಲದೆ ಸಾಗುತ್ತಿದೆ. ಅನೇಕ ಕಡೆಗಳಲ್ಲೂ ಇದು ಅಭೂತಪೂರ್ವ ಯಶಸ್ಸು ಕಂಡಿದ್ದರೂ ಕೆಲವು ಕಡೆಗಳಲ್ಲಿ ಗೊಂದಲಮಯವಾಗಿತ್ತು. ಪ್ರತಿ ವಿಧಾನ ಸಭಾ ಕ್ಷೇತ್ರಗಳಲ್ಲೂ ಅಭ್ಯರ್ಥಿಗಳ ಸಂಖ್ಯೆ ಅಧಿಕವಾಗಿದ್ದು ಅದನ್ನು ಸಮರ್ಥವಾಗಿ ನಿವಾರಿಸಬೇಕಾಗಿದೆ. ಇಲ್ಲವಾದಲ್ಲಿ ಮತ್ತೆ ಕರ್ನಾಟಕದಲ್ಲಿ ಬಿಜೆಪಿ ಸೋಲನುಭವಿಸುವ ಲಕ್ಷಣಗಳು ಗೋಚರಿಸುತ್ತಿವೆ.

ಕಾಂಗ್ರೆಸ್ ನಡೆಸುವ ಒಡೆದು ಆಳುವ ನೀತಿ ಹಾಗೂ ಜಾತಿ ಜಾತಿಗಳ ತಿಕ್ಕಾಟವನ್ನು ಕರ್ನಾಟಕ ಬಿಜೆಪಿ ಸಮರ್ಥವಾಗಿ ಎದುರಿಸಿದರೆ ಗೆಲುವು ಅನ್ನೋದು ಸುಲಭದ ತುತ್ತಾಗಬಹುದು. ಇಲ್ಲವಾದಲ್ಲಿ ಮತ್ತೆ ಕಷ್ಟದ ಪರಿಸ್ಥಿತಿಯನ್ನು ಎದುರಿಸಬೇಕಾಗುವುದರಲ್ಲಿ ಅನುಮಾನವೇ ಇಲ್ಲ.

ಎಲ್ಲಾದಕ್ಕೂ ಮೋದಿ-ಶಾ ಅಂದರೆ ಹೇಗೆ..?

ಸದ್ಯದ ಪರಿಸ್ಥಿತಿಯಲ್ಲಿ ಇದೊಂದು ಕಹಿ ಪ್ರಶ್ನೆ. ದೇಶದ ಎಲ್ಲಾ ಬಿಜೆಪಿ ನಾಯಕರೂ ನಂಬಿರುವುದು ಮೋದಿ ಹಾಗೂ ಅಮಿತ್ ಶಾ ರವರನ್ನು. ಗುಜರಾತ್ ಚುನಾವಣೆಯಲ್ಲೂ ಇದೇ ನಡೆದದ್ದು. ಎಲ್ಲಾದಕ್ಕೂ ಮೋದಿ-ಶಾ ಅಂದರೆ ಸ್ಥಳೀಯ ನಾಯಕರು ಇರುವುದಾದರೂ ಯಾಕೆ. ಪ್ರತೀ ಚುನಾವಣೆಗೂ ಮೋದಿ-ಶಾ ಸ್ಟಾರ್ ಪ್ರಚಾರಕರು ನಿಜ. ಆದರೆ ಚುನಾವಣೆಯನ್ನು ಅವರೇ ಗೆಲ್ಲಿಸಿಕೊಡಬೇಕೆಂದರೆ ಸ್ಥಳೀಯ ನಾಯಕರಿಗೆ ಇರುವ ಅರ್ಹತೆಯನ್ನು ಪ್ರಶ್ನೆ ಮಾಡಬೇಕಾಗುತ್ತದೆ.

ತುಲನೆ ಮಾಡಿ ಟಿಕೆಟ್ ನೀಡಿ…

ಈ ಬಾರಿಯ ಕರ್ಣಾಟಕ ವಿಧಾನ ಸಭಾ ಚುನಾವಣೆಯೂ ಸುಲಭದ ವಿಚಾರ ಅಲ್ವೇ ಅಲ್ಲ. ಅದೆಷ್ಟೋ ಸಮೀಕ್ಷೆಗಳೂ ಬಜೆಪಿ ಗೆಲ್ಲುತ್ತೆ ಅಂದರೂ ಚುನಾವಣಾ ಸಮಯದ ಸ್ಟಾಟರ್ಜಿ ಬೇರೆಯದೇ ಆಗಿರುತ್ತದೆ. ಗೆಲ್ಲುವ ಕುದುರೆಗೆ ಟಿಕೆಟ್ ಖಾತ್ರಿ ಪಡಿಸಿದರೆ ಉತ್ತಮ. ಅನೇಕರು ಆಕಾಂಕ್ಷಿಗಳಿದ್ದು, ಸಾಮಾಜಿಕ ಕಳಕಳಿ ಹಾಗೂ ಪಕ್ಷಕ್ಕೆ ಕೊಡುಗೆಯನ್ನು ನೀಡಿದವರಿಗೆ ಟಿಕೆಟ್ ನೀಡಿದರೆ ಉತ್ತಮ. ಹಣ ಖರ್ಚು ಮಾಡಿದ್ದಾರೆ ಎಂದು ಸಿಕ್ಕ ಸಿಕ್ಕವರಿಗೆ ಟಿಕೆಟ್ ನೀಡಿದರೆ ಈ ಬಾರಿಯೂ ಗೆಲುವು ಅನ್ನೋದು ಮರೀಚೆಕೆಯಾಗುವುದರಲ್ಲಿ ಅನುಮಾನವೇ ಇಲ್ಲ.

-ಸುನಿಲ್ ಪಣಪಿಲ

Tags

Related Articles

Close