ಪ್ರಚಲಿತ

ಟಿಆರ್‌ಪಿಗಾಗಿ ಇನ್ನೆಷ್ಟು ಜನರಿಗೆ ಹೊಡೆದು ಮಾನ ಕಳೆಯುತ್ತೀರಿ ಬಿಗ್‌ಬಾಸ್‌?!

ಹುಚ್ಚ ವೆಂಕಟ್‌ ಇದ್ದ ಸೀಸನ್‌ನಲ್ಲಿ ರವಿ ಮೂರೂರುಗೆ ಹೊಡೆತ ಬೀಳುತ್ತೆ. ಕಳೆದ ಸೀಸನ್‌ನಲ್ಲಿ ಹುಚ್ಚ ವೆಂಕಟ್‌ ರೀತಿ ಯಾರೊಬ್ಬರೂ ವರ್ತಿಸದೇ ಇದ್ದದ್ದಕ್ಕೋ ಏನೋ ಮತ್ತೆ ಹುಚ್ಚ ವೆಂಕಟ್‌ರನ್ನೇ ಕರೆಸಿದ್ದರು. ಪರಿಣಾಮವಾಗಿ ಪ್ರಥಮ್‌ ಒದೆ ತಿಂದರು. ಈ ಸಲ ಸಂಯುಕ್ತಾ ಹೆಗಡೆ ಹುಚ್ಚಾಟ. ಕಳೆದ ಮೂರು ಸೀಸನ್‌ನಿಂದಲೂ ಒಬ್ಬರಲ್ಲ ಒಬ್ಬರು ಹೊಡೆತ ತಿನ್ನುತ್ತಲೇ ಇದ್ದಾರೆ, ಹಾಗೂ ಇದು ಆಕಸ್ಮಿಕ ಎಂದು ಆಯೋಜಕರು ವಾದಿಸುತ್ತಿದ್ದಾರೆಂದರೆ ನಾಚಿಕೆಯಾಗಬೇಕು ಅಂಥವರಿಗೆ.

ನೀವು ಬಿಗ್‌ ಬಾಸ್‌ ಬಗ್ಗೆ ಯಾರನ್ನೇ ಕೇಳಿದರೂ ಅದೊಂದು ಪ್ರಾಮಾಣಿಕ ಶೋ ಅದು, ಇದು ಅಂತೆಲ್ಲ ಕಂತೆ ಪುರಾಣ ಹೊಡೆಯುವುದನ್ನು ಕೇಳಿರುತ್ತೀರಿ. ಆದರೆ ಇವತ್ತಿಗೂ ಈ ಶೋ ಇನ್ನೂ ಅಂಥ ಪ್ರಾಮಾಣಿಕತೆ ಉಳಿಸಿಕೊಂಡಿದೆಯಾ ಎನ್ನುವ ಪ್ರಶ್ನೆ ಕಾಡುತ್ತದೆ. ಕಲರ್ಸ್‌ ಕನ್ನಡ ನಡೆಸುತ್ತಿರುವ ಈ ಕಾರ್ಯಕ್ರಮದ ಪ್ರಾಮಾಣಿಕತೆಯನ್ನು ಪರೀಕ್ಷಿಸಲೇಬೇಕಿದೆ.

ಈಗ ಆಗಿದ್ದಿಷ್ಟೇ, ಸಂಯುಕ್ತಾ ಹೆಗಡೆ ಎಂಬ ಒಂದು ಚಿತ್ರದಲ್ಲಿ ನಟಿಸಿ ತಾನೇನೋ ದೊಡ್ಡ ಸಾಧನೆ ಮಾಡಿದ್ದೇನೆ ಎಂಬಂತೆ ಪೋಸು ಕೊಡುತ್ತಿರುವ ನಟಿ ಬಿಗ್‌ಬಾಸ್‌ ಮನೆಯಲ್ಲಿ ಸಮೀರ್‌ ಆಚಾರ್ಯ ಎಂಬುವವರಿಗೆ ಹೊಡೆದಿದ್ದಾಳೆ. ಟಾಸ್ಕ್‌ ವೇಳೆ ಅವಳ ಪಕ್ಕೆಲುಬಿನ ಬಳಿ ಯಾರೋ ಹಿಡಿದು ಎಳೆದಂತಾಗಿದ್ದಕ್ಕೆ ಅಲ್ಲೇ ಇದ್ದ ಸಮೀರ್‌ ಆಚಾರ್ಯ ಅವರಿಗೆ ಕೆನ್ನೆಗೆ ಬಾರಿಸಿದ್ದಾಳೆ. ಇದನ್ನು ಪ್ರಶ್ನಿಸಿದ್ದಕ್ಕೆ, ದೊಡ್ಡದಾಗಿ ಅತ್ತು ಕರೆದು ರಂಪ ಮಾಡಿ ಹೋಗಿದ್ದಾಳೆ. ಅಷ್ಟೇ.

ಇದನ್ನು ವೀಕ್ಷಕ ನೋಡಿದಾಗ ಏನೋ ಟಾಸ್ಕ್‌ ವೇಳೆ ಆಗೋಯ್ತು ಎಂದುಕೊಳ್ಳುತ್ತಾರೆ. ಆದರೆ ಅಲ್ಲಿ ಸಂಯುಕ್ತಾ ತನಗೆ ವಹಿಸಿದ್ದ ಕೆಲಸ ಅಚ್ಚಕಟ್ಟಾಗಿ ಮಾಡಿ ಮುಗಿಸಿ ಹೋಗಿದ್ದಾಳೆ ಅಷ್ಟೇ. ಸ್ವತಃ ಸಂಯುಕ್ತಾ ತಾವು ಬಂದಿದ್ದು ಹೇಗೆ, ಯಾಕೆ ಎಂಬುದನ್ನು ಸೂಕ್ಷ್ಮವಾಗಿ ಹೇಳಿದ್ದಾಳೆ.

ಎಷ್ಟು ಚೆನ್ನಾಗಿ ಪ್ಲಾನ್‌ ಆಗುತ್ತದೆ ನೋಡಿ. ಬಿಗ್‌ಬಾಸ್‌ಗೆ ಈ ಬಾರಿ ಕಳೆದ ಸೀಸನ್‌ನಷ್ಟು ಟಿಆರ್‌ಪಿ ಇಲ್ಲ. ಮೂರು ನಾಲ್ಕು ರೇಟಿಂಗ್‌ನಲ್ಲೇ ಅಕ್ವೇರಿಯಮ್‌ ಮೀನಿನಂತೆ ಸುತ್ತುತ್ತಿದೆ. ಬಿಗ್‌ಬಾಸ್‌ ಮನೆಯೊಳಗಿರುವ ಎಲ್ಲರಿಗೂ ಆಟಕ್ಕಿಂತ ತಮ್ಮ ಇಮೇಜ್‌ ಮುಖ್ಯ. ಅದಕ್ಕಾಗೇ ಎಲ್ಲರೂ ತಮ್ಮ ತಾಳ್ಮೆಯ ಗಡಿ ದಾಟುತ್ತಲೇ ಇರಲಿಲ್ಲ. ಇದನ್ನು ದಾಟಿಸಬಹುದಾಗಿದ್ದ ಏಕೈಕ ವ್ಯಕ್ತಿ ಅಂದರೆ ಅದು ತಮಿಳಿಗ ದಯಾಳ್‌ ಪದ್ಮನಾಭನ್‌ ಆಗಿದ್ದರು. ಕನ್ನಡ ಪರ ಸಂಘಟನೆಗಳು ದಯಾಳ್‌ ವಿರುದ್ಧ ಬಿಗ್‌ಬಾಸ್‌ ಸ್ಟುಡಿಯೋ ಇನೋವೇಟಿವ್‌ ಫಿಲ್ಮ್‌ ಸಿಟಿಯ ಮುಂದೆಯೇ ಪ್ರತಿಭಟನೆ ಮಾಡಿದ್ದರಿಂದ ಅನಿವಾರ್ಯವಾಗಿ ದಯಾಳ್‌ರನ್ನು ಹೊರಗೆ ದಬ್ಬಬೇಕಾಯಿತು. ಇದು ಬಿಗ್‌ಬಾಸ್‌ನವರ ಮೊದಲ ಲಾಸ್‌.

ಎರಡನೇ ವ್ಯಕ್ತಿ ಚಂದ್ರು.. ಕೋಪದಲ್ಲಿ ಏನೋ ಮಾತಾಡುವುದಕ್ಕೆ ಹೋಗಿ ವಡ್ಡರ ಜನಾಂಗಕ್ಕೆ ಅವಮಾನ ಮಾಡಿದ್ದರಿಂದ, ಆ ಜನಾಂಗದವರು ಹೋರಾಟ ಮಾಡಿ, ಪೊಲೀಸ್‌ ಕಂಪ್ಲೇಂಟ್‌ ಕೊಟ್ಟಿದ್ದಕ್ಕೆ ಚಂದ್ರು ಬಳಿ ಕಾರ್ಯಕ್ರಮದಲ್ಲೇ ಕ್ಷಮೆ ಕೇಳಿಸಲಾಗಿತ್ತು. ಇದಾದ ನಂತರ ಯಾವಾಗಲೂ ಉರಿದುರಿದು ಬೀಳುತ್ತಿದ್ದ ಚಂದ್ರು ತಣ್ಣಗಾದರು. ತಣ್ಣಗಿದ್ದರೆ ಟಿಆರ್‌ಪಿಯೂ ತಣ್ಣಗಾಗಬಹುದು ಎಂದು ಅವರನ್ನೂ ಹೊರಗಟ್ಟಿದರು. ಜಗಳಗಂಟ ಎಂದೇ ಖ್ಯಾತಿ ಪಡೆದಿದ್ದ ಜಗನ್‌ ಗಮನ ಕೂಡ ಮಾವಿನ ಮರದ ಮೇಲಿರುವ ಕೋಗಿಲೆಯ ಕಡೆಗೆ ಬಿದ್ದಿದ್ದರಿಂದ ತಣ್ಣಗಾಗಿದ್ದ. ಹಾಗಾಗಿ ಅವರನ್ನೂ ಹೊರದಬ್ಬಲಾಗಿತ್ತು. ಇದಾದ ಮೇಲೆ ಮನೆ ನಂದಗೋಕುಲದ ಹಾಗೆ ಇತ್ತು.

ಆದರೆ ಮನೆಯರೆಲ್ಲ ಆರಾಮಾಗಿ ಇರುವುದಕ್ಕೆ ಇವರನ್ನೆಲ್ಲ ಬಿಗ್‌ಬಾಸ್‌ಗೆ ಕಳಿಸಿಲ್ಲ ಸ್ವಾಮಿ? ಹುಚ್ಚಾಟ ಇದ್ದರೆ ಟಿಆರ್‌ಪಿ ಬರುತ್ತದೆಂದು ಅವರಿಗೂ ಗೊತ್ತು. ಆಗ ಸಿಕ್ಕಿದವಳೇ ಸಂಯುಕ್ತಾ ಹೆಗಡೆ. ಕನ್ಫೆಷನ್‌ ರೂಮ್‌ನಲ್ಲಿ ಆಕೆಯೇ ಹೇಳಿಕೊಳ್ಳುವ ಹಾಗೆ, ಸಂಯಕ್ತಾ ಸ್ಪರ್ಧಿಯಾಗಿ ಬಂದಿಲ್ಲ. ಹಾಗಾದರೆ ಯಾಕಾಗಿ ಬಂದಳು? ಮನೆಯಲ್ಲಿ ಹಾಕಿಕೊಳ್ಳುವ ಹಾಗೆ ಚಡ್ಡಿ ಹಾಕಿಕೊಂಡಿರುವುದಕ್ಕೇನು ಅವಳಿಗೆ ಹಣ ಕೊಟ್ಟು ಕರೆದುಕೊಂಡು ಬಂದಿಲ್ಲ.

ಯಸ್‌, ಬಿಗ್‌ಬಾಸ್‌ ಆಯೋಜಕರ ನಿಜವಾದ ಬಣ್ಣ ಬಯಲಾಗುವುದೇ ಇಲ್ಲಿ.

ಆಯೋಜಕರು ಬಿಗ್‌ಬಾಸ್‌ ಸ್ಪರ್ಧಿಗಳನ್ನು ಆಯ್ಕೆ ಮಾಡುವುದೇ ಅವರೆಷ್ಟು ಕಿರಿಕ್‌ ಪಾರ್ಟಿ ಎನ್ನುವುದರ ಮೇಲೆ. ಇನ್ನು ಒಳಗೆ ಗೆಸ್ಟ್‌ ಆಗಿ ಹೋಗುವವರಿಗೆ ಒಂದೊಂದು ಗುರಿಯನ್ನು ಇವರೇ ಹಾಕಿಕೊಟ್ಟು ಕಳುಹಿಸಿರುತ್ತಾರೆ. ಕೆಲವರಿಗೆ ಆ ಗುರಿಯನ್ನು ಮುಟ್ಟಲು ಒಂದು ದಿನವಾದರೆ ಇನ್ನು ಕೆಲವರಿಗೆ ವಾರಗಟ್ಟಲೆ ಸಮಯ. ಜಗಳ, ಕಿರಿಕ್ಕು, ಗ್ಲಾಮರ್‌ ಇಲ್ಲದೇ ಟಿಆರ್‌ಪಿ ಕುಸಿಯುತ್ತಿದ್ದಾಗಲೇ ಸಂಯಕ್ತಾರನ್ನು ಕರೆದುಕೊಂಡು ಬಂದಿದ್ದು. ಅವರಿಗೂ ಒಂದು ಗುರಿ ಕೊಟ್ಟಿದ್ದರು. ಸಂಯುಕ್ತಾ ಹೊಡೆಯುವ ಮೂಲಕ ಗುರಿ ಸಾಧಿಸಲು ಪ್ರಯತ್ನಿಸಿದ್ದಾರಾ ಅಥವಾ ಯಾರಿಗಾದರೂ ಹೊಡೆಯುವುದೇ ಗುರಿಯೋ?

ಹೊಡೆಯುವುದೇ ಗೆಸ್ಟ್‌ಗಳ ಗುರಿ ಎನ್ನುವುದಕ್ಕೆ ಇನ್ನೊಂದು ಉದಾಹರಣೆ ಸಿಗುತ್ತದೆ ನೋಡಿ. ಹುಚ್ಚ ವೆಂಕಟ್‌ಗೂ ಕಳೆದ ಸೀಸನ್‌ನಲ್ಲಿ ಒಂದು ಟಾಸ್ಕ್‌ ನೀಡಿಯೇ ಒಳಗೆ ಕಳುಹಿಸಲಾಗಿತ್ತು. ಹುಚ್ಚ ವೆಂಕಟ್‌ ಶತಾಯ ಗತಾಯ ಒಳಗೆ ಹೋದ ಮೇಲೆ ಅಲ್ಲಿರುವ ಸ್ಪರ್ಧಿಗಳನ್ನು ಮಾತಾಡಿಸಬೇಕು ಎಂದು. ವೆಂಕಟ್‌, ಸ್ಪರ್ಧಿಗಳನ್ನು ಮಾತಾಡಿಸುವ ಭರದಲ್ಲಿ ಪ್ರಥಮ್‌ಗೆ ಹೊಡೆದೇ ಬಿಟ್ಟರು. ಈ ಮೊದಲು ರವಿ ಮೂರೂರಿಗೆ ಹೊಡೆದು ಮನೆಯಿಂದ ಹೊರ ಹೋಗಿದ್ದವರನ್ನು ಆಯೋಜಕರು ಮತ್ತೊಮ್ಮೆ ಕರೆದುಕೊಂಡು ಬರುತ್ತಾರೆ ಎಂದರೆ ಅವರ ಉದ್ದೇಶವೇ ಕೆಟ್ಟದ್ದು ಎಂದೋ ಅಲ್ಲವೋ?

ಬಿಗ್‌ಬಾಸ್‌ ಆಯೋಜಕರೇ ಮತ್ತು ಕಲರ್ಸ್‌ ಕನ್ನಡದವರೇ, ನಿಮ್ಮ ಸಂಬಳಕ್ಕಾಗಿ ಟಿಆರ್‌ಪಿ ತರಬೇಕು ಎಂಬ ಹಠಕ್ಕೆ ಬಿದ್ದು ಇನ್ನೊಬ್ಬರಿಗೆ ಹೊಡೆಯುವುದಕ್ಕೆ ಅವಕಾಶ ಮಾಡಿಕೊಡುವ ನಿಮ್ಮ ಆತ್ಮಸಾಕ್ಷಿ ಸತ್ತುಬಿದ್ದಿದೆಯಾ? ಇನ್ನೊಬ್ಬರಿಗೆ ಹೊಡೆದು ಹಣ ಮಾಡುವವನಿಗೆ ಗೂಂಡಾ, ರೌಡಿ ಎನ್ನುತ್ತಾರೆ. ನೀವು ಯಾರು ಹಾಗಾದರೆ?

ಇದು ಮಾನವ ಹಕ್ಕುಗಳ ವ್ಯಾಪ್ತಿಗೆ ಬರುವುದಿಲ್ಲವೇ? ಹೊಡೆತ ತಿನ್ನುವುದು ಯಾರೋ, ಕಾಸು ಮಾಡಿಕೊಳ್ಳುವುದು ಯಾರೋ! ಈ ಪುರುಷಾರ್ಥಕ್ಕೆ ಬಿಗ್‌ಬಾಸ್‌ ನಡೆಸುವ ಬದಲು, ಹೊಡೆದಾಟದ ಸ್ಪರ್ಧೆ ಮಾಡಿಬಿಡಲಿ. ಬ್ರಾಡ್ಕಾಸ್ಟ್‌ ಮಿನಿಸ್ಟ್ರಿಗೆ ಹೇಳುವುದು ಇದು ಬಿಗ್‌ಬಾಸ್‌ ಎಂದು. ಆದರೆ ಆಗುತ್ತಿರುವುದು ಹೊಡೆದಾಟ. ಯಾರಿಗೆ ಮೋಸ ಮಾಡಲು ಹೊರಟಿದ್ದೀರಿ ಆಯೋಜಕರೇ?

ಸಂಯುಕ್ತಾ ಹೆಗಡೆಯವರಿಗೂ ಬಿಗ್‌ಬಾಸ್‌ ಮನೆಯಲ್ಲಿ ಇದ್ದ ಶಾಂತಿಯನ್ನು ಹಾಳು ಮಾಡಲು ಮತ್ತು ಜಗಳವಾಡಿ ರಂಪ ಮಾಡಲು ಹೇಳಿ ಕಳುಹಿಸಲಾಗಿತ್ತು. ಹೀಗೆಂದು ಆಕೆಯೇ ಬಿಗ್‌ಬಾಸ್‌ ಸೆಟ್‌ ತುಂಬಾ ಹೇಳಿಕೊಂಡು ತಿರುಗಾಡುತ್ತಿದ್ದಾಳೆ ಎಂದು ಜನರು ಮಾತಾಡಿಕೊಳ್ಳುತ್ತಿದ್ದಾರೆ. ಸಂಯುಕ್ತಾ ಒಂದು ಹೆಜ್ಜೆ ಮುಂದೆ ಹೋಗಿ ಸಮೀರ್‌ ಆಚಾರ್ಯರಿಗೆ ಹೊಡೆದೇ ಹೊರ ಬಂದಳು.

ಪ್ರತಿ ಸಲ ಬಿಗ್‌ಬಾಸ್‌ನಲ್ಲಿ ಒಬ್ಬರಲ್ಲ ಒಬ್ಬರು ಹೊಡೆತ ತಿನ್ನುವುದು ಸಹಜವಾಗಿ ಕಂಡರೂ, ಇಂಥದಕ್ಕೆ ಪ್ರತಿ ಸಲವೂ ಹೊಡೆಯುವವರನ್ನು ಪ್ರೇರೇಪಿಸುವುದು ಅನುವು, ಆಸ್ಪದ ಮಾಡಿಕೊಡುವುದು ನೂರಕ್ಕೆ ನೂರು ಪ್ರತಿಶತ ಆಯೋಜಕರೇ.

ಸಂಯುಕ್ತಾ ಹೆಗಡೆ ಹೊಡೆದ ಮೇಲೆ ಎತ್ತಿ ಹೊರಗೆ ಹಾಕುವ ಬದಲು ಆಕೆಯನ್ನು ಸ್ಪರ್ಧಿಗಳು ಮಿಸ್‌ ಯೂ, ಲವ್‌ ಯೂ ಅಂತೆಲ್ಲ ಹೇಳಿ, ತಬ್ಬಿಕೊಂಡು ಮುತ್ತು ಕೊಟ್ಟು ಕಳುಹಿಸುವವರೆಗೂ ಆಯೋಜಕರು ಕಾಯುತ್ತಾರೆ ಎಂದರೆ, ನಿಜವಾಗಿಯೂ ಇವರಿಗೆ ಮನುಷ್ಯನ ಜೀವದ ಮೇಲೆ ಕವಡೆ ಕಾಸಿನ ಕಿಮ್ಮತ್ತಿಲ್ಲ ಎಂಬುದನ್ನು ಮತ್ತೆ ಮತ್ತೆ ಸಾಬೀತು ಮಾಡಿ ತೋರಿಸುತ್ತಿದ್ದಾರೆ. ಈ ಬಿಗ್‌ಬಾಸ್‌ ಆಯೋಜಕರಿಗೆ ಅವರು ಮಾಡಿದ್ದ ತಪ್ಪನ್ನು ಹೇಳಿದರೆ, “ನೀವೆಲ್ಲ ಬುದ್ಧಿವಂತರು, ನಾವೆಲ್ಲ ದಡ್ಡರು” ಎಂದು ದುರಹಂಕಾರದಿಂದ ಸ್ಲಂ ಏರಿಯಾದ ಪುಂಡ ಹುಡುಗನೊಬ್ಬನ ಹಾಗೆ ಊರೆಲ್ಲ ಹೇಳಿಕೊಂಡು ಓಡಾಡುವುದು ಸಾಮಾನ್ಯವಾಗಿಬಿಟ್ಟಿದೆ. ಹಾಗಾಗಿ ಇವರಿಗೆ ಯಾರೂ ಬುದ್ಧಿವಾದವೂ ಹೇಳುತ್ತಿಲ್ಲ.

ಯಾರದ್ದೋ ಮಕ್ಕಳನ್ನು ಬಾವಿಗೆ ತಳ್ಳಿ ಟಿಆರ್‌ಪಿ ದೇಪುವ ಇಂಥ ಆಯೋಜಕರು ಮತ್ತು ಕಾರ್ಯಕ್ರಮ ನಮಗೆ ಅವಶ್ಯಕತೆಯಿದೆಯಾ ಎಂಬ ಪ್ರಶ್ನೆಯನ್ನು ಇನ್ನಾದರೂ ನಾವೇ ಮಾಡಿಕೊಳ್ಳಬೇಕು. ನಾವು ಇವರ ಮಂಗನಾಟದ ಕಾರ್ಯಕ್ರಮ ನೋಡದಿದ್ದರೆ ಅಥವಾ ನೂರು ಜನ ಆಯೋಜಕರಿಗೆ ಕರೆ ಮಾಡಿ ಬುದ್ಧಿವಾದ ಹೇಳಿ. ಅದ್ಯಾವುದು ಇಲ್ಲವಾದರೆ ಕ್ರೌರ್ಯವನ್ನು ತೋರಿಸುತ್ತಿರುವ ಇಂಥ ಕಾರ್ಯಕ್ರಮಗಳ ವಿರುದ್ಧ ಬ್ರಾಡ್ಕಾಸ್ಟ್‌ ಮಿನಿಸ್ಟ್ರಿಗೆ ದೂರು ಬರೆಯಿರಿ. ಆಮೇಲೆ ನೀವೇ ನೋಡಿ.. ಬದಲಾವಣೆ ಹೇಗೆ ಆಗುತ್ತದೆ ಎಂದು.

– ಚಿರಂಜೀವಿ ಭಟ್‌

Tags

Related Articles

Close