ಪ್ರಚಲಿತ

ತಮಿಳು ತಲೈವಾ ರಾಜಕೀಯ ಪ್ರವೇಶ… ‘ನಮೋ’ ಎನ್ನುತ್ತಾರಾ ರಜನಿಕಾಂತ್..? ಕರ್ನಾಟಕ ಬಿಜೆಪಿ ಲೀಡರ್ಸ್ ಏನಂದ್ರು ಗೊತ್ತಾ..?!

ರಜನೀಕಾಂತ್. ತಮಿಳು ಚಿತ್ರರಂಗದ ಸೂಪರ್ ಸ್ಟಾರ್ ನಟ.ತನ್ನ ವಿಭಿನ್ನ ಶೈಲಿಯ ನಟನೆಯಿಂದಲೇ ಮನೆಮಾತಾದ ಈ ಕಬಾಲಿ ಕೋಟ್ಯಾಂತರ ಅಭಿಮಾನಿಗಳನ್ನು ಹೊಂದಿರುವ ದೇಶದ ಏಕೈಕ ಚಿತ್ರ ನಟ. ಕನ್ನಡ ನಾಡಿನಲ್ಲಿ ಜನಿಸಿ ಕನ್ನಡ ಚಿತ್ರರಂಗದಲ್ಲೇ ಮಿಂಚಿ ನಂತರ ಸಾಹಸಸಿಂಹ ವಿಷ್ಣುವರ್ಧನ್ ಸಲಹೆಯ ಮೇರೆಗೆ ತಮಿಳು ಚಿತ್ರರಂಗ ಪ್ರವೇಶಿಸಿದ ಈ ನಟ ಈಗ ಕೋಟ್ಯಾಂತರ ಅಭಿಮಾನಿಗಳ ಪಾಲಿನ ಹಾಟ್ ಫೇವರೇಟ್…

ಸದ್ಯ ಈ ನಟ ಸುಧ್ಧಿಯಲ್ಲಿರುವುದು ರಾಜಕೀಯ ಕಾರಣಕ್ಕಾಗಿ. ಅದೆಷ್ಟೋ ವರ್ಷಗಳಿಂದ ರಜನೀಕಾಂತ್ ರಾಜಕೀಯ ಪ್ರವೇಶ ಮಾಡುತ್ತಾರೆ ಎಂಬ ಸುಧ್ಧಿ ಮಾಧ್ಯಮಗಳಲ್ಲಿ ಹರಿದಾಡುತ್ತಿತ್ತು. ಇನ್ನೇನು ರಜನೀಕಾಂತ್ ರಾಜಕೀಯಕ್ಕೆ ಎಂಟ್ರಿ ಕೊಟ್ಟೇ ಬಿಟ್ಟರು ಎನ್ನುವ ಸುದ್ಧಿಯೂ ಪ್ರಸಾರವಾಗುತ್ತಿತ್ತು.ಆದರೆ ಅದ್ಯಾಕೋ ಇಷ್ಟು ದಿನ ರಾಜಕೀಯ ಪ್ರವೇಶದ ಬಗ್ಗೆ ರಜನೀಕಾಂತ್ ಯಾವುದೇ ವಿಷಯವನ್ನು ಬಹಿರಂಗಪಡಿಸಿರಲಿಲ್ಲ. ಮಾಧ್ಯಮಗಳು ಅದೆಷ್ಟೇ ಬಾರಿ ಸುತ್ತಿ ಬಳಸಿ ಪ್ರಶ್ನಿಸಿದ್ದರೂ ತನ್ನ ಜಾನ್ಮೆಯನ್ನು ಮೆರೆದು ಹಾಗೆನೇ ನೀರಸ ಪ್ರತಿಕ್ರಿಯೆಯನ್ನು ನೀಡುತ್ತಿದ್ದರು.

ಒಂದೆಡೆ ಮಾಧ್ಯಮಗಳು ಮೇಲಿಂದ ಮೇಲೆ ರಜನಿ ರಾಜಕೀಯವನ್ನು ಪ್ರಶ್ನಿಸುತ್ತಿದ್ದರೆ ಮತ್ತೊಂದೆಡೆ ಅಭಿಮಾನಿಗಳೂ ಒತ್ತಡವನ್ನು ಹೇರಿ ರಾಜಕೀಯ ಪ್ರವೇಶಿಸುವಂತೆ ಒತ್ತಾಯಿಸುತ್ತಿದ್ದಾರೆ.ಆದರೆ ರಜನಿ ತಾಳ್ಮಾ ಮೂರ್ತಿಯಂತೆ ಈವರೆಗೂ ಯಾವುದೇ ಗುಟ್ಟನ್ನು ಬಿಟ್ಟುಕೊಟ್ಟಿರಲಿಲ್ಲ.ತನ್ನ ಹುಟ್ಟುಹಬ್ಬದಂದು ರಾಜಕೀಯ ಪ್ರವೇಶದ ಬಗ್ಗೆ ಘೋಷಿಸುತ್ತಾರೆ ಎಂಬ ಊಹಾ ಪೋಹಳಿದ್ದರೂ ರಜನಿ ಯಾವುದೇ ವಿಷಯವನ್ನು ಬಿಟ್ಟುಕೊಟ್ಟಿರಲಿಲ್ಲ.

ಕೇಸರಿ ಪಾಳಯಕ್ಕೆ ಜಿಗಿಯುತ್ತಿದ್ದರಾ ರಜನಿ..?

ರಜನಿಕಾಂತ್ ಪ್ರಧಾನಿ ನರೇಂದ್ರ ಮೋದಿಯವರ ಆಪ್ತ ಸ್ನೇಹಿತ. ಹಿಂದಿನಿಂದಲೂ ಅವರ ಅವರೊಂದಿಗೆ ನಿಕಟ ಸಂಪರ್ಕವನ್ನು ಹೊಂದಿದ್ದವರು. ಮೋದಿ ಗುಜರಾತಿನ ಮುಖ್ಯಮಂತ್ರಿಯಾಗಿದ್ದಾಗಲೂ ರಜನಿಕಾಂತರೊಂದಿಗೆ ಬಲು ಸಲುಗೆಯಿಂದಲೇ ವ್ಯವಹರಿಸುವ ವ್ಯಕ್ತಿಯಾಗಿದ್ದರು. ಕಳೆದ ಬಾರಿಯ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ರಜನಿ ರಾಜಕೀಯಕ್ಕೆ ಬರ್ತಾರೆ.ಆಂದ್ರಪ್ರದೇಶದಲ್ಲಿ ಪವನ್ ಕಲ್ಯಾಣ್ ರಾಜಕೀಯಕ್ಕೆ ಎಂಟ್ರಿ ಕೊಟ್ಟು ಮೋದಿಗೆ ಬೆಂಬಲ ಕೊಟ್ಟಂತೆ ತಮಿಳು ತಲೈವಾ ರಜನಿ ಕೂಡಾ ಬೆಂಬಲ ನೀಡುತ್ತಾರಾ ಎಂಬ ಗಾಸಿಪ್ ಗಳೂ ಹರಿದಾಡುತ್ತಿದ್ದವು.ಆದರೆ ರಜನಿ ಮೋದಿಗೆ ಬೆಂಬಲ ಕೊಟ್ಟಿದ್ದರೂ ರಾಜಕೀಯಕ್ಕೆ ಪ್ರವೇಶ ಮಾಡಲೇ ಇಲ್ಲ.

Image result for modi with rajinikanth

ಲೋಕಸಭೆಗೆ ಹೊಸಪಕ್ಷ…

ಹೌದು. ಸದ್ಯ ರಜನೀಕಾಂತ್ ಪಕ್ಷ ರಚನೆ ಮಾಡದಿದ್ದರೂ ಹೊಸ ಪಕ್ಷ ಘೋಷಣೆ ಮಾಡುವುದಾಗಿ ಘೋಷಣೆ ಮಾಡಿದ್ದಾರೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಹೊಸಪಕ್ಷ ಘೋಷಣೆಯಾಗಲಿದ್ದು,ತಮಿಳುನಾಡಿನ ಎಲ್ಲಾ ಸ್ಥಾನಗಳಲ್ಲೂ ತನ್ನ ಪಕ್ಷ ಪ್ರಭಾವ ಬೀರಲಿದೆ ಎಂದಿದ್ದಾರೆ. ತಮಿಳುನಾಡಿನ ಚೆನ್ನೈನ ರಾಘವೇಂದ್ರ ಸಭಾ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಜನಿ ಈ ಮಾತನ್ನು ಹೇಳಿದರು. ಮುಂಬರುವ ಲೋಕಸಭಾ ಚುನಾವಣೆ ವೇಳೆ ಅಭಿಮಾನಿಗಳ ಸಮ್ಮುಖದಲ್ಲೇ ಹೊಸ ಪಕ್ಷವನ್ನು ಘೋಷಿಸುತ್ತೇನೆ ಎಂದು ತಾನು ರಾಜಕೀಯ ಪ್ರವೇಶವಾಗುತ್ತಿರುವ ಬಗ್ಗೆ ಅಧಿಕೃತವಾಗಿ ಘೋಷಿಸಿದರು.

ತಮಿಳುನಾಡಿನಲ್ಲಿ ರಾಜಕೀಯ ಬಿರುಗಾಳಿ..!!!

ಸಂಶಯವೇ ಇಲ್ಲ.ತಮಿಳುನಾಡಿನಲ್ಲಿ ಈಗಾಗಲೇ ರಾಜಕೀಯ ಬಿರುಗಳಿ ಬೀಸಿಯಾಗಿದೆ.ತಮಿಳುನಾಡಿನ ಅಮ್ಮಾ ಎಂದೇ ಪ್ರಸಿಧ್ಧಿಯಾದ ಮಾಜಿ ಮುಖ್ಯಮಂತ್ರಿ ಜಯಲಲಿತಾ ನಿಧನದ ನಂತರ ರಾಜಕೀಯ ಅರಾಜಕತೆ ತಾಂಡವವಾಡುತ್ತಿತ್ತು. ಶಶಿಕಲಾ ಜೈಲುವಾಸ,ಪನ್ನೀರ್ ಸೆಲ್ವಂ ರಾಜೀನಾಮೆ,ಟಿಟಿವಿ ದಿನಕರಣ್ ಉಪಚುನಾವಣೆಯಲ್ಲಿ ಜಯಿಸಿದ್ದು ಸಹಿತ ಅನೇಕ ರಾಜಕೀಯ ಚದುರಂಗದಾಟಗಳು ಅಲ್ಲಿ ನಡೆಯುತ್ತಿದ್ದವು.ಪ್ರಾದೇಶಿಕ ಪಕ್ಷಗಳೇ ಪ್ರಾಬಲ್ಯ ಮೆರೆಯುತ್ತಿದ್ದ ತಮಿಳುನಾಡಿನಲ್ಲಿ ರಾಷ್ಟ್ರೀಯ ಪಕ್ಷಗಳಿಗೆ ಜಾಗನೇ ಇಲ್ಲ. ಅಲ್ಲೇನಿದ್ದರೂ ಪ್ರಾದೇಶಿಕ ಪಕ್ಷಗಳದ್ದೇ ಕಾರುಬಾರು. ಡಿಎಂಕೆ ಹಾಗೂ ಎಐಡಿಎಂಕೆ ಯ ಜಿದ್ದಿನ ರಾಜಕೀಯ ಬೆಳವಣಿಗೆಗಳು ಬಿರುಸಿಲ್ಲದೆ ನಡೆಯುತ್ತಿವೆ. ಕರುಣಾನಿದಿಯ ಕುಟುಂಬ ಕೂಡಾ ರಾಜಕೀಯ ಚಟುವಟಿಕೆಯಲ್ಲಿ ಗರಿಗೆದರಿದ್ದು ಅಮ್ಮಾ ಅನುಪಸ್ಥಿತಿಯನ್ನು ಸಮರ್ಥವಾಗಿ ಉಪಯೋಗಿಸುವ ಲೆಕ್ಕಾಚಾರ ಹಾಕಿಕೊಳ್ಳುತ್ತಿದ್ದರು.

ಈಗ ರಜನಿಕಾಂತ್ ರಾಜಕೀಯ ಪ್ರವೇಶವನ್ನು ಘೋಷಣೆಯನ್ನು ಮಾಡಿದ್ದು ಸ್ಥಳೀಯ ಪಕ್ಷಗಳಿಗೆ ಭಾರೀ ನಡುಕವುಂಟಾಗಿದೆ. ಕೋಟ್ಯಾಂತರ ಅಭಿಮಾನಿಗಳನ್ನು ಹೊಂದಿರುವ ರಜನಿಕಾಂತ್ ರಾಜಕೀಯಕ್ಕೆ ಬಂದ್ರೆ ತಮಗೆ ನೆಲೆ ಇಲ್ಲದಂತಾಗುತ್ತದೆ ಎಂಬ ಭಯ ಈ ಮೊದಲೇ ಇತರೆ ಪಕ್ಷಗಳಿಗೆ ಇತ್ತು.ಈಗ ರಾಜಕೀಯದ ಬಗ್ಗೆ ಅಧಿಕೃತ ಘೋಷಣೆಯನ್ನು ಮಾಡಿದ್ದು ಉಳಿದ ಪಕ್ಷಗಳಿಗೆ ಬಿರುಗಾಳಿ ಬೀಸಿದಂತಾಗಿದೆ.

Image result for rajinikanth

224 ಕ್ಷೇತ್ರಗಳಲ್ಲೂ ಸ್ಪರ್ಧೆ…

ತಾನು ಘೋಷಣೆ ಮಾಡುತ್ತಿರುವ ಪಕ್ಷ ಕೇವಲ ಲೋಕಸಭಾ ಚುನಾವಣೆ ಮಾತ್ರವಲ್ಲದೆ ಮುಂದಿನ ವಿಧಾನಸಭಾ ಚುನಾವಣೆಯನ್ನೂ ದೃಷ್ಟಿಕೋನದಲ್ಲಿಟ್ಟುಕೊಂಡಿದೆ. ಮುಂದಿನ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ತಮಿಳುನಾಡಿನ 234 ಕ್ಷೇತ್ರಗಳಲ್ಲೂ ತನ್ನ ಪಕ್ಷ ಸ್ಪರ್ಧಿಸಲಿದೆ ಎಂದು ಘೋಷಣೆ ಮಾಡಿದ್ದಾರೆ. ಇದು ತಮಿಳುನಾಡು ರಾಜ್ಯ ರಾಜಕೀಯದಲ್ಲಿ ಹೊಸ ಸಂಚಲನವನ್ನೇ ಮೂಡಿಸಿದೆ.

ನಮೋ ಅನ್ನುತ್ತಾರಾ ತಮಿಳು ತಲೈವಾ…!!!

ಇಂತಹದ್ದೊಂದು ಪ್ರಶ್ನೆಯನ್ನು ಖಂಡಿತವಾಗಿಯೂ ಅಲ್ಲಗಳೆಯುವಂತಿಲ್ಲ. ಈ ಮೊದಲೇ ರಜನಿ ಮೋದಿ ಆಪ್ತರು.ಮಾತ್ರವಲ್ಲ ಭಾರತೀಯ ಜನತಾ ಪಕ್ಷದ ಬಗ್ಗೆ ಒಲವು ಇಟ್ಟುಕೊಂಡವರೂ ಕೂಡ. ಈ ಮೊದಲೇ ರಜನಿ ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಯಾಗುತ್ತಾರೆ ಎಂಬ ಊಹಾಪೋಹಗಳಿದ್ದವು. ಆದರೆ ಅವರ ನಿರ್ಧಾರ ಬದಲಾಯಿತು.

ಇನ್ನು ರಜನಿಕಾಂತ್ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷಕ್ಕೆ ಬೆಂಬಲ ನೀಡುತ್ತಾರೆ ಎಂಬ ಮಾತುಗಳನ್ನೂ ತಳ್ಳಿಹಾಕುವಂತಿಲ್ಲ. ರಾಜಕೀಯದಲ್ಲಿ ಏನೂ ಆಗಬಹುದು. ಆಂದ್ರಪ್ರದೇಶದಲ್ಲಿ ಖ್ಯಾತ ನಟ ಪವನ್ ಕಲ್ಯಾಣ್ ಕೂಡ ಹೊಸ ಪಕ್ಷವನ್ನು ರಚಿಸಿ ಲೋಕಸಭಾ ಚುನಾವಣೆಯಲ್ಲಿ ಮೋದಿಯನ್ನು ಬೆಂಬಲಿಸಿ ಘೋಷಿಸಿದ್ದರು. ಈ ಮೂಲಕ ಆಂದ್ರ ಪ್ರದೇಶದಲ್ಲೂ ಭಾರತೀಯ ಜನತಾ ಪಕ್ಷಕ್ಕೆ ಭಾರೀ ಕೊಡುಗೆಯನ್ನು ಪವನ್ ಕಲ್ಯಾಣ್ ನೀಡಿದ್ದರು. ಈ ರೀತಿಯೇ ತಮಿಳುನಾಡಿನಲ್ಲೂ ಆಗಬಹುದು ಎಂಬುವುದನ್ನು ಅಲ್ಲಗಳೆಯುವಂತಿಲ್ಲ. ಈಗಾಗಲೇ ಬಹುತೇಕ ಭಾರತೀಯ ಜನತಾ ಪಕ್ಷದ ನಾಯಕರೇ ರಜನಿಗೆ ಸಾಥ್ ನೀಡಿದ್ದು, ಮುಂದೆ ಅವರು ನಮೋ ಅನ್ನಲೂಬಹುದು ಎಂಬ ಮಾತುಗಳೂ ಕೇಳಿಬರುತ್ತಿದೆ…

ತಮಿಳಿನ ಸೂಪರ್​ ಸ್ಟಾರ್​ ರಾಜಕೀಯಕ್ಕೆ ಬರುವುದಾಗಿ ಘೋಷಿಸಿ ಕೆಲವೆ ಗಂಟೆಗಳು ಕಳೆದಿವೆ. ಆದರೆ, ಈಗಾಗಲೇ ವಿವಿಧ ಕ್ಷೇತ್ರಗಳ ಗಣ್ಯರು ಅವರಿಗೆ ಸ್ವಾಗತ ಕೋರಿ, ಅಭಿನಂದಿಸಿದ್ದಾರೆ. ಕರ್ನಾಟಕದ ಬಿಜೆಪಿ ರಾಜಕೀಯ ಧುರೀಣರು ಕೂಡ ರಜನಿಗೆ ಶುಭಾಶಯ ಕೋರಿ, ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಹಾಗಾದರೆ ಯಾರ್ಯಾರೂ, ಏನು ಹೇಳಿದರು ಅನ್ನೋದಕ್ಕೆ ಇಲ್ಲಿದೆ ಮಾಹಿತಿ..

ತಾರಾ ಅನುರಾಧಾ, ನಟಿ ಹಾಗೂ MLC

ನಾನೊಬ್ಬ‌ ನಟಿಯಾಗಿ ರಜನಿಕಾಂತ್​ ಅವರ ರಾಜಕೀಯ ಪ್ರವೇಶ ಸ್ವಾಗತಿಸುವೆ. ಕರ್ನಾಟಕದಲ್ಲಿ ನಟ ಉಪೇಂದ್ರ ಕೂಡಾ ಪಕ್ಷ ಕಟ್ಟಿದ್ದಾರೆ. ಅದೇ ರೀತಿ‌ ರಜನಿಕಾಂತ್ ಧೈರ್ಯದಿಂದ ಪಕ್ಷ ಕಟ್ಟಿದ್ದಾರೆ. ಅವರಿಗೆ ಶುಭವಾಗಲಿ.

ಸಿ.ಟಿ.ರವಿ, ಬಿಜೆಪಿ ನಾಯಕ ಹಾಗೂ ತಮಿಳುನಾಡು ಬಿಜೆಪಿ ಸಹ ಉಸ್ತುವಾರಿ

ರಜನಿಕಾಂತ್ ರಾಜಕೀಯಕ್ಕೆ ಬಂದಿರುವುದು ಸ್ವಾಗತಾರ್ಹ. ರಾಷ್ಟ್ರೀಯ ಹಿತಕ್ಕಾಗಿ ಅವರು ರಾಜಕೀಯಕ್ಕೆ ಬರುತ್ತಿದ್ದಾರೆಂಬ ನಂಬಿಕೆ ಇದೆ. ಅವರ ಪಕ್ಷದ ಬಗ್ಗೆ ಈಗಲೇ ಮಾತಾಡಲ್ಲ. ರಜನಿಕಾಂತ್ ಪ್ರಧಾನಿ ಮೋದಿ ಜತೆ ಉತ್ತಮ ಸಂಬಂಧ ಹೊಂದಿದ್ದಾರೆ. ಅವರ ಕಾರ್ಯವೈಖರಿ ನೋಡಿ ಮುಂದೆ ಮಾತನಾಡುತ್ತೇನೆ.

ಜಗದೀಶ ಶೆಟ್ಟರ್, ವಿಪಕ್ಷ ನಾಯಕ

ರಜನಿಕಾಂತ್ ರಾಜಕೀಯಕ್ಕೆ ಬರುವುದು ಸ್ವಾಗತಾರ್ಹ. ಆದರೆ ಇದು ನಮ್ಮ ರಾಜ್ಯದ ಮೇಲೆ ಪರಿಣಾಮ ಬೀರಲ್ಲ. ಅವರ ರಾಜಕೀಯ ಪ್ರವೇಶಕ್ಕೂ, ರಾಜ್ಯಕ್ಕೂ ಸಂಬಂಧ ಇಲ್ಲ. ಜಯಾ ಬಳಿಕ ರಜನಿಕಾಂತ್​ರಿಂದ ಆ ಶೂನ್ಯ ತುಂಬುವ ಕೆಲಸವಾಗಲಿ. ರಾಜಕೀಯ ಯಶಸ್ಸಿನ ಬಗ್ಗೆ ಭವಿಷ್ಯದಲ್ಲಿ ಗೊತ್ತಾಗುತ್ತೆ.

ಪ್ರಲ್ಹಾದ್ ಜೋಶಿ, ಸಂಸದ

ರಜನಿಕಾಂತ್ ಹೊಸ ಪಕ್ಷ ಕಟ್ಟುವ ವಿಚಾರ ಸ್ವಾಗತಾರ್ಹ. ಈ ಹಿಂದೆ ಹಲವು ನಟರು ರಾಜಕೀಯ ಪಕ್ಷ ಕಟ್ಟಿದ್ದಾರೆ. ಆದರೆ ತುಂಬಾ ಜನ ಯಶಸ್ವಿಯಾಗಲಿಲ್ಲ. ರಜನಿಕಾಂತ್ ಯಶಸ್ವಿಯಾಗುತ್ತಾರ ನೋಡೋಣ. ಜಯಲಲಿತಾ ಬಳಿಕ ಆ ಕೊರತೆಯನ್ನು ರಜನಿ ತುಂಬಬಹುದು.

ಗಣೇಶ್ ಕಾರ್ಣಿಕ್, ವಿಧಾನ ಪರಿಷತ್​ ಸದಸ್ಯ

ನಟ ರಜನಿಕಾಂತ್​ ಪ್ರವೇಶ ತಮಿಳುನಾಡು ರಾಜಕೀಯದಲ್ಲಿ ಹೊಸ ಬದಲಾವಣೆ. ಅವರ ಹೊಸ ಪಕ್ಷಕ್ಕೆ ಒಳ್ಳೆಯದಾಗಲಿ. ರಜನಿಕಾಂತ್ ವಿಚಾರದಲ್ಲಿ ಬಿಜೆಪಿ ಪಾತ್ರ ಇಲ್ಲ.

ರಮೇಶ್ ಜಿಗಜಿಣಗಿ, ಕೇಂದ್ರ ಸಚಿವ

ರಜನಿಕಾಂತ್ ರಾಜಕೀಯಕ್ಕೆ ಬರುತ್ತಿರುವುದು ಒಳ್ಳೆಯದು. ಜಯಾಲಲಿತಾ ಬಳಿಕ ರಜನಿಕಾಂತ್ ಹೊಸ ಪಕ್ಷ ಕಟ್ಟುತ್ತಿದ್ದಾರೆ. ಆದರೆ ರಾಜಕೀಯ ಪ್ರವೇಶ ಇಷ್ಟು ಬೇಗ ಅಗತ್ಯ ಇರಲಿಲ್ಲ.

ಸಚಿವ ಸದಾನಂದಗೌಡ, ಕೇಂದ್ರ ಸಚಿವ

ರಜನಿಕಾಂತ್ ರಾಜಕೀಯ ಪ್ರವೇಶ ಸ್ವಾಗತಾರ್ಹ. ಪ್ರಜಾತಂತ್ರ ವ್ಯವಸ್ಥೆಯ ಒಂದು ಭಾಗವಾಗಲು ಮುಂದಾಗಿದ್ದಾರೆ. ಮೋದಿ ಪ್ರಧಾನಿ ಆದ ಮೇಲೆ ರಜನಿಗೂ ರಾಜಕೀಯ ಇಷ್ಟವಾಗ ತೊಡಗಿದೆ. ಬಿಜೆಪಿ ಜತೆ ಕೈಜೋಡಿಸುವ ಕುರಿತು ಮುಂದೆ ನೋಡೋಣ. ರಜನಿಕಾಂತ್​​ ಅವರಿಗೆ ಒಳ್ಳೆಯದಾಗಲಿ.

ಶೋಭಾ ಕರಂದ್ಲಾಜೆ, ಸಂಸದೆ

ನಟ ರಜನಿಕಾಂತ್ ರಾಜಕೀಯ ಪ್ರವೇಶಕ್ಕೆ ಸ್ವಾಗತಾರ್ಹ. ದೇಶದ ಹಿತದೃಷ್ಟಿಯಿಂದ ಬಿಜೆಪಿ ಜತೆ ಕೈಜೋಡಿಸಿದ್ರೆ ಉತ್ತಮ.

ಒಟ್ಟಾರೆ ರಜನಿಕಾಂತ್ ರಾಜಕೀಯಕ್ಕೆ ಪ್ರವೇಶ ಮಾಡಿದ್ದು ತಮಿಳುನಾಡು ಮಾತ್ರವಲ್ಲದೆ ದೇಶದಲ್ಲೂ ಹೊಸ ಬದಲಾವಣೆಗೆ ನಾಂದಿಹಾಡಿದೆ. ಹೊಸಪಕ್ಷ ಕಟ್ಟಿ ಹೊಸ ರಾಜಕೀಯದ ಬಗ್ಗೆ ಚಿಂತಿಸುವ ರಜನೀಕಾಂತ್ ಗೆ ಶುಭಹಾರೈಸೋಣ…
ತಮಿಳು ತಲೈವಾ ರಾಜಕೀಯ ಪ್ರವೇಶ… ‘ನಮೋ’ ಎನ್ನುತ್ತಾರಾ ರಜನಿಕಾಂತ್..? ಕರ್ನಾಟಕ ಬಿಜೆಪಿ ಲೀಡರ್ಸ್ ಏನಂದ್ರು ಗೊತ್ತಾ..?

-ಸುನೀಲ್ ಪಣಪಿಲ

Tags

Related Articles

Close