ಅಂಕಣಪ್ರಚಲಿತ

ನಗರಗಳ ಪುನರುತ್ಥಾನಕ್ಕಾಗಿ ಪ್ರಧಾನಿ ನರೇಂದ್ರ ಮೋದಿಯವರ “ಸ್ಮಾರ್ಟ್‍ಸಿಟಿ” ಯೋಜನೆ

ಪ್ರಧಾನಿ ನರೇಂದ್ರ ಮೋದಿ ಅವರ ಮಹಾತ್ವಾಕಾಂಕ್ಷೆಯ ಯೋಜನೆಗಳಲ್ಲೊಂದಾದ “ಸ್ಮಾರ್ಟ್ ಸಿಟಿ” ಯೋಜನೆ ದೇಶದಾದ್ಯಂತ ನೂರು ನಗರಗಳನ್ನು ಸ್ಮಾರ್ಟ್ ಸಿಟಿಗಳನ್ನಾಗಿ ಗುರುತಿಸಿ ಅಭಿವೃದ್ಧಿಪಡಿಸುವ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯ ಒಂದು ದಿಟ್ಟ ಹೆಜ್ಜೆಯಾಗಿದೆ!! “ಸ್ಮಾರ್ಟ್ ಸಿಟಿ”ಗಳಾಗಲಿರುವ ಒಟ್ಟು 100 ನಗರಗಳ ಪಟ್ಟಿಯನ್ನು ಕೇಂದ್ರ ಸರ್ಕಾರವು ಬಿಡುಗಡೆ ಮಾಡಿದ್ದು, ಇವುಗಳಲ್ಲಿ ಕರ್ನಾಟಕದ ಆರು ನಗರಗಳಿದ್ದು, ದೇಶದ ವಿವಿಧ ರಾಜ್ಯಗಳ 24 ರಾಜಧಾನಿ ನಗರಗಳನ್ನು ಸ್ಮಾರ್ಟ್ ಸಿಟಿಗಳಾಗಿ ಅಭಿವೃದ್ಧಿಪಡಿಸಲು ನಿರ್ಧರಿಸಲಾಗಿದೆ.

ಇದೊಂದು ಸ್ವಾಗತಾರ್ಹ ಯೋಜನೆಯಾಗಿದ್ದು, ಹಳ್ಳಿಗಳಿಂದ ನಗರ ಪ್ರದೇಶಗಳಿಗೆ ಉದ್ಯೋಗ ಮತ್ತು ಬದುಕು ಹುಡುಕಿಕೊಂಡು ವಲಸೆ ಹೋಗುವವರ ಸಂಖ್ಯೆ ಒಂದೇ ಸಮನೆ ಏರುತ್ತಿದೆ. ಸಮೀಕ್ಷೆಯ ಪ್ರಕಾರ, ವಿಶ್ವದಲ್ಲಿ 2050ರೊಳಗೆ ಒಟ್ಟು ಜನಸಂಖ್ಯೆಯ ಶೇಕಡ 70ರಷ್ಟು ಜನ ನಗರಗಳಲ್ಲೇ ವಾಸವಾಗಲಿದ್ದಾರೆ. ಈ ಬೆಳವಣಿಗೆಗೆ ಭಾರತವೂ ಹೊರತಲ್ಲ. ಅಂದರೆ, ಈಗಾಗಲೇ ಕುಡಿಯುವ ನೀರು, ತಲೆಗೊಂದು ಸೂರು, ಉತ್ತಮ ಆರೋಗ್ಯ ಸೌಲಭ್ಯಗಳಿಲ್ಲದೆ ಪರದಾಡುತ್ತಿರುವ ನಗರಗಳು ಇನ್ನಷ್ಟು ಕೊಳೆಗೇರಿಗಳನ್ನು ಸೃಷ್ಟಿಸುವ ಸಾಧ್ಯತೆ ಹೆಚ್ಚಿದೆ.

ಇನ್ನು ಸ್ಮಾರ್ಟ್ ಸಿಟಿಗಳೆಂದರೆ, ಶುದ್ಧ ನೀರು, ಸ್ವಚ್ಛತೆ, ತ್ಯಾಜ್ಯಗಳ ಪರಿಣಾಮಕಾರಿ ನಿರ್ವಹಣೆ, ಪರಿಸರಸ್ನೇಹಿ ಸಾರಿಗೆ, ಇ-ಆಡಳಿತಕ್ಕೆ ಆದ್ಯತೆ ನೀಡುವ ನಗರಗಳು. ನಗರಗಳು ಎದುರಿಸುತ್ತಿರುವ ಆಡಳಿತದ ಮತ್ತು ಸ್ವಚ್ಛತೆಯ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಕಂಡುಕೊಂಡರೆ ಮಾಲಿನ್ಯವೂ?ಕಡಿಮೆಯಾಗಿ ಜನರ ಆರೋಗ್ಯ ಸುಧಾರಿಸಲಿದೆ. ಒಟ್ಟಾರೆ, ಸುಸ್ಥಿರ ಮೂಲಸೌಲಭ್ಯಗಳ ವಿಸ್ತರಣೆಗಾಗಿ ಸರಳ ತಂತ್ರಜ್ಞಾನದ ಬಳಕೆ ಸ್ಮಾರ್ಟ್‍ಸಿಟಿಗಳ ಮೂಲ ಕಾರ್ಯತಂತ್ರವಾಗಿದೆ!!

ಕೇಂದ್ರ ಸರಕಾರ ನಗರಗಳ ಪುನರುತ್ಥಾನಕ್ಕೆ ಹೊರಟಿದೆ. ದೇಶದ ನೂರು ನಗರಗಳನ್ನು ಸ್ಮಾರ್ಟ್ ನಗರಗಳನ್ನಾಗಿ ಪುನರೂಪಿಸುವ ಹೊಣೆ ಹೊತ್ತಿದೆ. ಅದಕ್ಕಾಗಿ ಆಯ್ಕೆ ಮಾಡಿದ 98 ನಗರಗಳಲ್ಲಿ 24 ರಾಜಧಾನಿಗಳಾಗಿವೆ. 24 ವಾಣಿಜ್ಯ ಮತ್ತು ಕೈಗಾರಿಕಾ ಕೇಂದ್ರಗಳಾಗಿವೆ. 12 ಸಾಂಸ್ಕೃತಿಕ ಮತ್ತು ಪ್ರವಾಸೋದ್ಯಮ ಕೇಂದ್ರಗಳಾಗಿವೆ. ಐದು ಬಂದರು ಕೇಂದ್ರಗಳಾದರೆ, ಮೂರು ಶಿಕ್ಷಣ-ಆರೋಗ್ಯ ಕೇಂದ್ರವಾಗಿ ಬೆಳೆಯುವ ಸಾಧ್ಯತೆ ಇರುವಂಥವು. ನಮ್ಮ ರಾಜ್ಯದ ದಾವಣಗೆರೆ, ಬೆಳಗಾವಿ, ಮಂಗಳೂರು, ತುಮಕೂರು, ಹುಬ್ಬಳ್ಳಿ ಧಾರವಾಡ, ಶಿವಮೊಗ್ಗಗಳು ಸ್ಮಾರ್ಟ್ ಸಿಟಿಗಳಾಗಿ ಅಭಿವೃದ್ಧಿಗೊಳ್ಳಲು ಸಿದ್ಧವಾಗಿರುವಂಥವು. ಕೇಂದ್ರ ಸರಕಾರದ ಪ್ರಕಾರ ಐದು ವರ್ಷಗಳಲ್ಲಿ ಈ ನಗರಗಳು ಸ್ಮಾರ್ಟ್ ನಗರಗಳಾಗಿ ಪುನರೂಪಗೊಳ್ಳಲಿವೆ.

ಸ್ಮಾರ್ಟ್ ಸಿಟಿಯ ಮೂಲ ಉದ್ದೇಶ

* ನಗರಗಳಿಗೆ ಮೂಲ ಸೌಕರ್ಯ ಒದಗಿಸುವುದು

* ಕುಡಿಯುವ ನೀರು, ನಿರಂತರ ವಿದ್ಯುತ್ ಕಲ್ಪಿಸುವುದು

* ತಂತ್ರಜ್ಞಾನ ಬಳಸಿ ಯೋಜನೆ ಅನುಷ್ಠಾನಗೊಳಿಸುವುದು

* ನಗರದ ಜನರ ಜೀವನ ಮಟ್ಟ ಸುಧಾರಿಸುವುದು

ಯೋಜನೆ ಅನುಷ್ಠಾನಗೊಳಿಸಲು ಸಂಬಂಧ ಪಟ್ಟ ಮಹಾನಗರ ವ್ಯಾಪ್ತಿಯಲ್ಲಿ ಸ್ಪೆಷಲ್ ಪರ್ಪಸ್ ವೆಹಿಕಲ್ ಅಂತ ವಿಶೇಷ ಸಮಿತಿ ರಚಿಸಿದೆ. ಈ ಸಮಿತಿಯಲ್ಲಿ ಸ್ಥಳೀಯ ಮಹಾನಗರ ಪಾಲಿಕೆ ಸದಸ್ಯರು, ತಜ್ಞರು, ಸರ್ಕಾರದ ಪ್ರತಿನಿಧಿಗಳು ಕಾರ್ಯ ನಿರ್ವಹಿಸುತ್ತಾರೆ. ಆದ್ರೆ, ಸ್ಮಾರ್ಟ್ ಸಿಟಿ ಘೊಷಣೆಯಂತೆ ಬಜೆಟ್ ಕೂಡಾ ಸ್ಮಾರ್ಟ್ ಆಗಿರ್ಬೇಕು ಅನ್ನೋದು ಜನರ ಒತ್ತಾಯ.
ಹಣಕಾಸಿನ ನೆರವು ಹೇಗೆ ?

* ಕೇಂದ್ರ ಸರ್ಕಾರದಿಂದ ಪ್ರತಿ ವರ್ಷ 100 ಕೋಟಿ

* ಕೇಂದ್ರದಿಂದ 5 ವರ್ಷದಲ್ಲಿ 500 ಕೋಟಿ ನೆರವು

* ರಾಜ್ಯ ಸರ್ಕಾರ ಮತ್ತು ಸ್ಥಳೀಯ ಸಂಸ್ಥೆಯಿಂದ ಪ್ರತಿ ವರ್ಷ 100 ಕೋಟಿ

* ಶೇಕಡಾ 50|50 ಮಾದರಿಯಲ್ಲಿ ಹಣಕಾಸಿನ ನೆರವು

ಸ್ಮಾರ್ಟ್ ಸಿಟಿ ಯೋಜನೆಗೆ ಕೇಂದ್ರ ಸರ್ಕಾರ ಪ್ರತಿ ನಗರಕ್ಕೆ ವಾರ್ಷಿಕ 100 ಕೋಟಿ ರೂಪಾಯಿ ಅನುದಾನ ನೀಡುತ್ತದೆ. ಅಷ್ಟೇ ಪ್ರಮಾಣದಲ್ಲಿ ರಾಜ್ಯ ಸರ್ಕಾರ ಹಾಗೂ ನಗರದ ಪಾಲಿಕೆ ಪ್ರತಿ ವರ್ಷ ಸೇರಿ ನೂರು ಕೋಟಿ ಹಣ ಮೀಸಲಿಡಬೇಕು. ಒಟ್ಟು ಒಂದು ನಗರಕ್ಕೆ ವರ್ಷಕ್ಕೆ 200 ಕೋಟಿ ರೂಪಾಯಿ ವೆಚ್ಚವಾಗುತ್ತದೆ. ಒಟ್ಟಿನಲ್ಲಿ, ಐದು ವರ್ಷಗಳಲ್ಲಿ ಘೋಷಣೆಯಾದ ನೂರು ನಗರಗಳನ್ನು ಅಭಿವೃದ್ಧಿ ಪಡಿಸುವುದು ಸ್ಮಾರ್ಟ್ ಸಿಟಿ ಉದ್ದೇಶ.

ವÉ್ದೀಶಿತ 100 ಸ್ಮಾರ್ಟ್ ಸಿಟಿಗಳ ಪೈಕಿ ರಾಜ್ಯದ ಆರು ನಗರಗಳನ್ನು ಅಭಿವೃದ್ಧಿ ಪಡಿಸಲು ಅವಕಾಶವಿದೆ. ಹುಬ್ಬಳ್ಳಿ-ಧಾರವಾಡ, ಶಿವಮೊಗ್ಗ, ಬೆಳಗಾವಿ, ಮಂಗಳೂರು, ತುಮಕೂರು ಮತ್ತು ದಾವಣಗೆರೆ ನಗರಗಳನ್ನು ರಾಜ್ಯ ಸರಕಾರ ಶಿಫಾರಸು ಮಾಡಿತ್ತು. ಪ್ರಸ್ತಾವದಲ್ಲಿದ್ದ ಲೋಪ-ದೋಷಗಳ ಹಿನ್ನೆಲೆಯಲ್ಲಿ ಉಳಿದ ನಗರಗಳಿಗೆ ಅವಕಾಶ ಸಿಕ್ಕಿಲ್ಲ. ಎರಡು ಮತ್ತು ಮೂರನೇ ಸುತ್ತಿನ ಸ್ಪರ್ಧೆಯಲ್ಲಿ ಲೋಪಗಳನ್ನು ಸರಿ ಪಡಿಸಿಕೊಂಡು ಪ್ರಸ್ತಾವನೆ ಸಲ್ಲಿಸಿದರೆ ಉಳಿದ ನಾಲ್ಕು ನಗರಗಳಿಗೂ ಸ್ಮಾರ್ಟ್ ಸಿಟಿ ಭಾಗ್ಯ ಸಿಗಲಿದೆ.

ಇನ್ನು ಈ ನಗರಗಳ ಆಯ್ಕೆ ಪ್ರಕ್ರಿಯೆ ತೀರಾ ವ್ಯವಸ್ಥಿತವಾಗಿದ್ದು, ಮೊದಲಿಗೆ ರಾಜ್ಯಗಳು ನೀಡಿರುವ ಪ್ರಸ್ತಾವನೆಯ ಪರಿಶೀಲನೆ ನಡೆಸಲಾಗುತ್ತದೆ. ಆಗ ಯೋಜನೆ ಜಾರಿಯ ಸಾಮರ್ಥ್ಯ, ಅಭಿವೃದ್ಧಿಗೆ ಅವಕಾಶ, ಆರ್ಥಿಕತೆ, ಪರಿಸರದ ಮೇಲಾಗುವ ಪರಿಣಾಮ ಸೇರಿ ಆರು ಮಾನದಂಡಗಳ ಮೂಲಕ ಮೌಲ್ಯಮಾಪನ ಮಾಡಲಾಗುತ್ತದೆ. ಆಯ್ಕೆಯಾದ ನಗರಗಳಿಗೆ ಮೊದಲ ವರ್ಷ ಕೇಂದ್ರದಿಂದ 200 ಕೋಟಿ ರೂ. ಮುಂದಿನ ಮೂರು ವರ್ಷಗಳ ಕಾಲ ತಲಾ 100 ಕೋಟಿ ರೂ. ಅನುದಾನ ಸಿಗುತ್ತದೆ. ರಾಜ್ಯ ಸರಕಾರ ಮತ್ತು ಸ್ಥಳೀಯ ಆಡಳಿತ ಸಂಸ್ಥೆಗಳು ಕೂಡ ಇಷ್ಟೇ ಮೊತ್ತವನ್ನು ವಿನಿಯೋಗಿಸಬೇಕಾಗುತ್ತದೆ.

ಅಭಿವೃದ್ಧಿಗೊಂದು ಥೀಮ್ ಬೇಕು

ಎಲ್ಲ ನಗರಗಳೂ ತಮ್ಮ ನಗರಗಳ ವಿಶೇಷತೆ, ಲಭ್ಯವಿರುವ ಅವಕಾಶ, ಸಂಪನ್ಮೂಲಗಳನ್ನು ಆಧರಿಸಿ ಒಂದು ಥೀಮ್ ಆಧರಿಸಿ ಸ್ಮಾರ್ಟ್‍ಸಿಟಿ ಅಭಿವೃದ್ಧಿಪಡಿಸಲು ಯೋಜನೆ ರೂಪಿಸಬೇಕು ಎಂಬುದು ಕೇಂದ್ರದ ಆಶಯ. ಉದಾಹರಣೆಗೆ ಧಾರವಾಡದಲ್ಲಿ ‘ನಾಲೇಜ್ ಸಿಟಿ’ ಅಭಿವೃದ್ಧಿಪಡಿಸಬೇಕು, ಅದಕ್ಕೆ ಸಂಬಂಧಿಸಿದ ಉದ್ಯಮಿಗಳನ್ನು ಅಲ್ಲಿಗೆ ಆಕರ್ಷಿಸಬೇಕು ಎಂಬ ಇರಾದೆಯನ್ನು ಅಲ್ಲಿನ ಜಿಲ್ಲಾಡಳಿತ ಮುಂದಿಟ್ಟಿದೆ. ಹಾಗೆಯೇ ಗುಜರಾತ್‍ನ ಸಬರಮತಿ ನದಿ ಅಭಿವೃದ್ಧಿಪಡಿಸಿದ ಮಾದರಿಯಲ್ಲಿ ತುಂಗಾ ನದಿಯ ಎರಡೂ ದಡದಲ್ಲಿ ಅಭಿವೃದ್ಧಿಪಡಿಸಬೇಕು ಎಂಬ ಆಶಯವನ್ನು ಶಿವಮೊಗ್ಗದ ಆಡಳಿತ ಹೊಂದಿದೆ. ಹೀಗೆ ಸಿದ್ಧವಾಗುವ ಬಗೆಬಗೆಯ ಥೀಮ್‍ಗಳಲ್ಲಿ ಅತ್ಯುತ್ತಮವಾದ 20 ಥೀಮ್‍ಗಳನ್ನು ಕೇಂದ್ರ ಆಯ್ಕೆ ಮಾಡಲಿದೆ. ಈ ಪಟ್ಟಿ 20ಕ್ಕಿಂತ ಕಡಿಮೆ ಆಗುವ ಸಾಧ್ಯತೆಯೂ ಇದೆ ಎನ್ನಲಾಗಿದೆ.

ಅಂತಿಮ ಸುತ್ತಿಗೆ ಆಯ್ಕೆಯಾಗುವ ನಗರಗಳಿಗೆ ಮೊದಲ ವರ್ಷ 200 ಕೋಟಿ ರೂ. ಮತ್ತು ನಂತರದ ಮೂರು ವರ್ಷಗಳಲ್ಲಿ 300 ಕೋಟಿ ರೂ. ಅನುದಾನವನ್ನು ಕೇಂದ್ರ ಸರಕಾರ ನೀಡಲಿದ್ದು, ಅಷ್ಟೇ ಮೊತ್ತದ ಹಣವನ್ನು ರಾಜ್ಯ ಸರಕಾರವೂ ನೀಡಬೇಕಿದೆ. ಎರಡೂ ಸರಕಾರಗಳ ಅನುದಾನದಲ್ಲಿ ಸ್ಮಾರ್ಟ್ ಸಿಟಿಯ ಪರಿಕಲ್ಪನೆ ಸಾಕಾರಗೊಳಿಸಿ ನಂತರ ಅಲ್ಲಿಗೆ ಬಂಡವಾಳ ಆಕರ್ಷಣೆಯ ಹೊಣೆಯನ್ನು ಸ್ಥಳೀಯ ಆಡಳಿತವೇ ಮಾಡಬೇಕಾಗುತ್ತದೆ.

ವಿಶ್ವಾದ್ಯಂತ ಸ್ಮಾರ್ಟ್ ಸಿಟಿಗಳ ಕಲ್ಪನೆ ಹೇಗಿದೆ ಎಂಬುದನ್ನು ಆಧರಿಸಿ ಒಂದಷ್ಟು ಪ್ರಮುಖ ಅಂಶಗಳನ್ನ ಪರಿಗಣಿಸಲಾಗಿದೆ. ಫೀಡ್’ಬ್ಯಾಕ್ ಇನ್ಫ್ರಾ ಕಂಪನಿಯ ಅಧ್ಯಕ್ಷ ವಿನಾಯಕ್ ಚಟರ್ಜಿ ಅವರು ಬ್ಯುಸಿನೆಸ್ ಸ್ಟ್ಯಾಂಡರ್ಡ್ ಪತ್ರಿಕೆಯಲ್ಲಿ ಸ್ಮಾರ್ಟ್ ಸಿಟಿ ಮಾನದಂಡಗಳ ಬಗ್ಗೆ ಬರೆದಿದ್ದಾರೆ. ಈ ಅಂಶಗಳು ಕೆಳಕಂಡಂತಿವೆ.

1) ಇ-ಆಡಳಿತ:

ಸ್ಮಾರ್ಟ್ ಸಿಟಿಯ ಮುಖ್ಯಾಂಶಗಳಲ್ಲಿ ಇ-ಆಡಳಿತ ಕೂಡ ಒಂದು. ಸ್ಮಾರ್ಟ್ ಸಿಟಿಯಲ್ಲಿ ಮಾಹಿತಿ, ಸಂವಹನ ಹಾಗೂ ತಂತ್ರಜ್ಞಾನ ಶಕ್ತ ಆಡಳಿತ ಇರುತ್ತದೆ. ಇದಕ್ಕೆ ಒಂದು ಪುಟ್ಟ ಉದಾಹರಣೆ, ಕರ್ನಾಟಕದ ಮೊಬೈಲ್ ಒನ್ ಆಪ್. ಈ ಆಪ್’ನಲ್ಲಿ ನಮ್ಮ ಅನೇಕ ಸರಕಾರೀ ಸೇವೆಗಳನ್ನು ಒಂದೇ ಆಪ್’ನಲ್ಲಿ ತಲುಪಬಹುದಾಗಿದೆ. ಎಲೆಕ್ಟ್ರಿಕ್ ಬಿಲ್, ವಾಟರ್ ಬಿಲ್, ಖಾತೆ ಪಡೆಯುವುದು ಇತ್ಯಾದಿ ಸೇವೆಗಳನ್ನ ಒಂದೇ ಕ್ಲಿಕ್’ನಲ್ಲಿ ಮಾಡಬಹುದಾಗಿದೆ. ಒಟ್ಟಿನಲ್ಲಿ ನಮ್ಮ ಅನೇಕ ಕಾರ್ಯಗಳನ್ನು ಹೊಸ ತಂತ್ರಜ್ಞಾನದ ಮೂಲಕ ಸುಲಭವಾಗಿ ಮಾಡುವ ವ್ಯವಸ್ಥೆ ಹೊಂದಿರಲಾಗುತ್ತದೆ.

2) ಸಂಪನ್ಮೂಲ ಸದ್ಬಳಕೆ:

ಪುನರ್ಬಳಕೆ ಇಂಧನ, ಜಲ ಸಂರಕ್ಷಣೆ, ವೈಜ್ಞಾನಿಕವಾಗಿ ಕಸ ವಿಲೇವಾರಿ, ಕಸದಿಂದ ರಸ ಇತ್ಯಾದಿ ನಮ್ಮ ಪರಿಸರ ರಕ್ಷಣೆಗೆ ಬಹಳ ಮಹತ್ವದ ಅಂಶಗಳು ಸ್ಮಾರ್ಟ್ ಸಿಟಿಯಲ್ಲಿರುತ್ತವೆ.

3) ಪಿಪಿಪಿ ಮಾದರಿ:

ಈಗೀಗ ನಮ್ಮ ದೇಶದಲ್ಲಿ ಪಿಪಿಪಿ ಮಾದರಿಯಲ್ಲಿ ಯೋಜನೆಗಳು ಅನುಷ್ಠಾನಗೊಳ್ಳುತ್ತಿವೆ. ಪಬ್ಲಿಕ್-ಪ್ರೈವೇಟ್ ಪಾಲುದಾರಿಕೆಯಲ್ಲಿ ನಿಜಕ್ಕೂ ಸಮರ್ಪಕ ಯೋಜನೆಗಳು ಬರಲು ಸಾಧ್ಯ. ಪಿಪಿಪಿ ಮಾದರಿಯಲ್ಲಿ ಖಾಸಗಿ ಕ್ಷೇತ್ರದಿಂದ ಬಂಡವಾಳ ಹೂಡಿಕೆ ಹೆಚ್ಚುವುದಲ್ಲದೆ, ಸೇವೆಯ ಗುಣಮಟ್ಟವನ್ನೂ ಕಾಪಾಡಿಕೊಳ್ಳಲು ಸಾಧ್ಯ.

4) ಸುರಕ್ಷತೆ:

ರಸ್ತೆ ಗಲಾಟೆ, ಕಳ್ಳತನ, ದರೋಡೆ, ಮಹಿಳೆಯರು ಹಾಗೂ ವೃದ್ಧರ ಮೇಲೆ ಹಲ್ಲೆ ಇತ್ಯಾದಿ ಅಪರಾಧಗಳಿಗೆ ಆಸ್ಪದ ಕೊಡದಂಥ ಸುರಕ್ಷಿತ ವ್ಯವಸ್ಥೆಯನ್ನು ಸ್ಮಾರ್ಟ್ ಸಿಟಿಯಲ್ಲಿ ಕಲ್ಪಿಸಬೇಕಾಗುತ್ತದೆ. ನಗರದಾದ್ಯಂತ ಸಾರ್ವಜನಿಕ ಪ್ರದೇಶಗಳಲ್ಲಿ ಕ್ಯಾಮೆರಾ ಅಳವಡಿಸುವುದು; ರಾತ್ರಿ ಎಲ್ಲ ಕಡೆ ಸರಿಯಾದ ಬೆಳಕಿನ ವ್ಯವಸ್ಥೆ, ತುರ್ತು ಕರೆಗಳಿಗೆ ಕ್ಷಿಪ್ರ ಪ್ರತಿಸ್ಪಂದನೆ; ಪೆÇಲೀಸ್ ಕಟ್ಟೆಚ್ಚರ ಇತ್ಯಾದಿ ವ್ಯವಸ್ಥೆಗಳು ಸ್ಮಾರ್ಟ್ ಸಿಟಿಯಲ್ಲಿರುತ್ತವೆ.

5) ಆರ್ಥಿಕ ಸ್ವಾವಲಂಬನೆ:

ಸ್ಮಾರ್ಟ್ ಸಿಟಿ ತನ್ನ ಖರ್ಚು ವೆಚ್ಚಗಳೆಲ್ಲವನ್ನೂ ತಾನೇ ನಿಭಾಯಿಸಿಕೊಳ್ಳುವಷ್ಟು ಆರ್ಥಿಕ ಶಕ್ತಿ ಹೊಂದಿರಬೇಕಾಗುತ್ತದೆ. ಕೇಂದ್ರ ಅಥವಾ ರಾಜ್ಯ ಸರಕಾರದ ಸಹಾಯವಾಗಲೀ ನಿರೀಕ್ಷಿಸುವಂತಿಲ್ಲ.

6) ನಾಗರಿಕರ ಪಾತ್ರ:

ಸ್ಮಾರ್ಟ್ ಸಿಟಿಯಲ್ಲಿ ವಾಸಿಸುವ ಜನಸಾಮಾನ್ಯರು ತಮ್ಮ ಪ್ರದೇಶದ ಸ್ಥಳೀಯ ಸಮಸ್ಯೆಗಳ ವಿಷಯದಲ್ಲಿ ಉತ್ಸಾಹದಿಂದ ಪಾಲ್ಗೊಳ್ಳುವಂತಹ ವ್ಯವಸ್ಥೆ ರೂಪುಗೊಳ್ಳಬೇಕು. ಇದಕ್ಕಾಗಿ, ಚುನಾವಣೆ ವ್ಯವಸ್ಥೆಯಲ್ಲಿ ಸೂಕ್ತ ಬದಲಾವಣೆ ಬೇಕಾದರೆ ಮಾಡಬಹುದು.

7) ಸಾಮಾಜಿಕ ಸೌಲಭ್ಯಗಳು:

ಸ್ಮಾರ್ಟ್ ಸಿಟಿಯಲ್ಲಿ ಮೂಲಭೂತ ಸೌಕರ್ಯಗಳ ಜೊತೆಗೆ ಸಾಮಾಜಿಕ ಸೌಲಭ್ಯಗಳು ಜನರ ಕೈಗೆಟುಕುವಂತಿರಬೇಕು. ಶಾಲೆ, ಆಸ್ಪತ್ರೆ, ಕ್ರೀಡಾಂಗಣ, ಮನರಂಜನಾ ತಾಣ ಇತ್ಯಾದಿಗಳು ಅಗತ್ಯ ಪ್ರಮಾಣದಲ್ಲಿ ಸಾಕಷ್ಟು ಇರಲೇಬೇಕು.

8) ಸಾರಿಗೆ ವ್ಯವಸ್ಥೆ:

ಸ್ಮಾರ್ಟ್ ಸಿಟಿಯಲ್ಲಿರುವ ಪ್ರತಿಯೊಂದು ಪ್ರದೇಶದಿಂದ ಇತರ ಕಡೆಗೆ ಸಮರ್ಪಕ ಸಾರಿಗೆ ವ್ಯವಸ್ಥೆ ಇರಬೇಕು. ಮೆಟ್ರೋ ರೈಲು, ಬಸ್ಸುಗಳು ಎಲ್ಲಾ ಕಡೆ ತಲುಪುವಂತಿರಬೇಕು. ಜನರು ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಹೋಗಲು ಕಾರು, ಬೈಕು ಬಳಸುವ ಬದಲು ಸಾರ್ವಜನಿಕ ಸಾರಿಗೆ ಬಳಸುವಂತಾಗಬೇಕು.

9) ಹಸಿರು ಛಾಯೆ:

ಸ್ಮಾರ್ಟ್ ಸಿಟಿಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ಉದ್ಯಾನಗಳಂತಹ ಹಸಿರು ಪ್ರದೇಶಗಳು ಅತ್ಯಗತ್ಯ. ಪುನರ್ಬಳಕೆ ತಂತ್ರಜ್ಞಾನಗಳ ಯಥೇಚ್ಛ ಬಳಕೆ ಇತ್ಯಾದಿಗಳಿಂದ ಪರಿಸರ ಹಾನಿಯನ್ನು ತಡೆಗಟ್ಟಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು.

10) ಸೀಮಿತ ಜನಸಂಖ್ಯೆ:

ವಿಶ್ವದ ಕೆಲವೆಡೆ ಸ್ಮಾರ್ಟ್ ಸಿಟಿಗೆ ನಿರ್ದಿಷ್ಟ ವಿಸ್ತಾರ ಹಾಗೂ ಜನಸಂಖ್ಯೆ ನಿಗದಿ ಮಾಡಲಾಗಿದೆ. ಉದಾಹರಣೆಗೆ ಜಪಾನ್’ನ ಫುಜಿಸಾವದಲ್ಲಿ 47 ಎಕರೆಯಲ್ಲಿ ಸ್ಮಾರ್ಟ್ ಟೌನ್ ನಿರ್ಮಿಸಲಾಗಿದೆ. ಇಲ್ಲಿ 1 ಸಾವಿರ ಮನೆ ಹಾಗೂ 3 ಸಾವಿರ ಜನಸಂಖ್ಯೆ ಸೀಮಿತಗೊಳಿಸಲಾಗಿದೆ. ಭಾರತದ ವಿಷಯಕ್ಕೆ ಬಂದರೆ ಇದು ವರ್ಕೌಟ್ ಆಗುವುದಿಲ್ಲ. ಒಂದು ಸ್ಮಾರ್ಟ್’ಸಿಟಿ ಇಂತಿಷ್ಟು ವಿಸ್ತೀರ್ಣ ಹಾಗೂ ಜನಸಂಖ್ಯೆಯನ್ನು ನಿಗದಿ ಮಾಡಿ ಅದಕ್ಕೆ ತಕ್ಕಂತೆ ವ್ಯವಸ್ಥೆ ಕಲ್ಪಿಸಬೇಕಾಗುತ್ತದೆ.

ಈ ಎಲ್ಲ 10 ಅಂಶಗಳನ್ನು ಪೂರೈಸುವುದು ನಿಜಕ್ಕೂ ಕಷ್ಟವೇ ಸರಿ. ಆದರೆ, ಇವುಗಳಲ್ಲಿ ಕೆಲವನ್ನಾದರೂ ನಾವು ಸಾಧಿಸಿ ತೋರಿಸಿದರೆ ಸ್ಮಾರ್ಟ್ ಎನಿಸಿಕೊಳ್ಳಬಹುದು. ಇನ್ನು ಕೇಂದ್ರ ಸರ್ಕಾರ ಈಗಾಗಲೇ 100 ಸ್ಮಾರ್ಟ್ ಸಿಟಿಗಳ ಅಭಿವೃದ್ಧಿಗೆ 48,000 ಕೋಟಿ ವಿನಿಯೋಗಿಸುವುದಾಗಿ ಪ್ರಕಟಿಸಿದೆ. ಹಾಗೆ ನೋಡಿದರೆ ಈ ಹಣ ಏನೂ ಸಾಲದು. ರಾಜ್ಯ ಸರ್ಕಾರಗಳು ಮತ್ತು ಸ್ಥಳೀಯ ಸಂಸ್ಥೆಗಳು ಈ ಯೋಜನೆ ಜಾರಿಯಲ್ಲಿ ಮಹತ್ವದ ಪಾತ್ರ ವಹಿಸಬೇಕಿದೆ. ಖಾಸಗಿ ಸಹಭಾಗಿತ್ವದ ಬಗ್ಗೆಯೂ ಕೇಂದ್ರ ಸರ್ಕಾರ ಒಲವು ಪ್ರಕಟಿಸಿದ್ದು, ಹಾಗೆ ಬಂಡವಾಳ ಹೂಡುವ ಖಾಸಗಿ ಸಂಸ್ಥೆಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕಾದ ಹೊಣೆಗಾರಿಕೆಯೂ ರಾಜ್ಯ ಸರ್ಕಾರಗಳ ಮೇಲಿದೆ.

– ಅಲೋಖಾ

Tags

Related Articles

Close