ಪ್ರಚಲಿತ

ನವೆಂಬರ್ ಒಂದರಂದು ಮಾತ್ರ ಕನ್ನಡ! ಆಮೇಲೆ ಎನ್ನಡ. . .! ಎಕ್ಕಡ. . .!

ಭಾರತದ ಅತ್ಯಂತ ಪ್ರಾಚೀನ ಭಾಷೆ ಕನ್ನಡ ಅವಸಾನ ಹೊಂದುತ್ತಿರುವುದು ಯಾರಿಂದ? ಕನ್ನಡ ಭಾಷಿಗರ ಸಂಖ್ಯೆ ದಿನೇದಿನೇ ಕಡಿಮೆಯಾಗಲು ಕಾರಣವೇನು? ಕನ್ನಡ ಮಾತಾಡಲು ಕನ್ನಡಿಗರಿಗೇಕೆ ಕೀಳರಿಮೆ? ಕನ್ನಡ ಭಾಷೆಗೆ ಈರೀತಿ ದುರ್ಗತಿ ಬರಲು ಯಾರು ಕಾರಣ? ಹೌದು! ಇಂಥದೊಂದು ಪ್ರಶ್ನೆ ಹಲವಾರು ವರ್ಷಗಳಿಂದ ತಲೆ ತಿನ್ನುತ್ತಿದೆ. ಕನ್ನಡದ ವಿದ್ವಾಂಸರು, ಸಾಹಿತ್ಯ ಪರಿಷತ್ತು ಸಮ್ಮೇಳನಗಳನ್ನು ನಡೆಸಿ ಉದ್ಗಂಡ ಭಾಷಣಗಳ ಮೂಲಕ, ಅಮೊಘ ಲೇಖನಗಳ ಮೂಲಕ ಕನ್ನಡಕ್ಕಾಗುವ ದುಃಸ್ಥಿತಿ ಬಗ್ಗೆ ಮಹಾನ್ ಗ್ರಂಥಗಳನ್ನು ರಚಿಸುವುದರಲ್ಲೇ ಮಗ್ನವಾಗಿದ್ದಾರೆ. ಮೂಲತಹ ಕನ್ನಡಕ್ಕೆ ಯಾರಿಂದ ನಿಜವಾದ ಸಮಸ್ಯೆ ಎನ್ನುವ ಸರಳ ಸತ್ಯವನ್ನು ಯಾರಿಂದಲೂ ಪತ್ತೆಹಚ್ಚಲು ಸಾಧ್ಯವಾಗಿಲ್ಲ.

ಹೌದು! ಈ ವಿಚಾರವನ್ನು ನಮಗೆ ಅರಗಿಸಲು ಸ್ವಲ್ಪ ಕಷ್ಟವಾಗಬಹುದು. ಆದರೂ ಅರಗಿಸಿಕೊಳ್ಳಲೇಬೇಕಿದೆ. ನಿಜವಾಗಿ ನೋಡುವುದಾದದರೆ ಕನ್ನಡಕ್ಕೆ ಕನ್ನಡಿಗರಿಂದಲೇ ಗಂಡಾಂತರ ಒದಗಿದೆ. ಕನ್ನಡಿಗರ ಮನೋಸ್ಥಿತಿ, ಅಂಧಾಭಿಮಾನ, ಕೀಳರಿಮೆ, ಮುಂತಾದುವುಗಳ ಕೊರತೆಯಿಂದ ಇಂದು ಕನ್ನಡಕ್ಕೆ ಈ ದುರ್ಗತಿ ಬಂದೊದಗಿದೆ. ಕನ್ನಡಿಗರ ಮನೋಸ್ಥಿತಿಯೇ ಬೇರೆ. ಕನ್ನಡ ಭಾಷೆಗೆ ಯಾವುದರಿಂದ ತೊಂದರೆ ಇದೆಯೋ ಅದರ ಬಗ್ಗೆ ಕನ್ನಡಿಗರಿಗೆ ಇದುವರೆಗೂ ಅರಿವಾಗುವುದೇ ಇಲ್ಲ.

ಇಲ್ಲಿ ನೀಡಿರುವ ಕೆಲವೊಂದು ಉದಾಹರಣೆಗಳನ್ನು ಗಮನಿಸಿದರೆ ಕನ್ನಡದ ಅವಸಾನಕ್ಕೆ ಕನ್ನಡಿಗರೇ ಯಾವ ರೀತಿ ಕಾರಣರಾಗುತ್ತಾರೆ ಎನ್ನುವುದನ್ನು ಸುಲಭವಾಗಿ ಅರ್ಥ ಮಾಡಿಕೊಳ್ಳಬಹುದು.

1. ಕರ್ನಾಟಕದಲ್ಲಿ ಯಾವುದೇ ತೀರ್ಥಕ್ಷೇತ್ರಗಳಿಗೆ ತೆರಳಿದರೂ ಅಲ್ಲಿ ಕನ್ನಡಕ್ಕಿಂತ ಅನ್ಯಭಾಷಿಗರಿಗೆ ಪ್ರಥಮ ಪ್ರಾಶಸ್ತ್ಯ ನೀಡಲಾಗುತ್ತದೆ. ಉದಾಹರಣೆಗೆ ಕೊಲ್ಲೂರು ಮೂಖಾಂಬಿಕ, ಶೃಂಗೇರಿ ಮುಂತಾದ ದೇಗುಲಕ್ಕೆ ಹೆಚ್ಚಾಗಿ ಕೇರಳಿಗರೇ ಅಧಿಕ ಸಂಖ್ಯೆಯಲ್ಲಿ ಬರುತ್ತಾರೆ. ನಾವೇ ಮುಂದಾಗಿ ಮಲಯಾಳಂ ಭಾಷೆಯಲ್ಲಿ ದೊಡ್ಡ ಫಲಕ ಅಳವಡಿಸಿ ಕೇರಳ ಮಾತಾಡಲು ಪ್ರತ್ಯಕ್ಷವಾಗಿ ಪ್ರೋತ್ಸಾಹಿಸುತ್ತೇವೆ. ಆದರೆ ಕೇರಳದಲ್ಲಿರುವ ಶಬರಿಮಲೆಗೋ, ತಿರುಪತಿಯಲ್ಲೋ ಕನ್ನಡದ ಫಲಕ ಕಾಣಲು ಸಾಧ್ಯವೇ? ಕನ್ನಡಿಗರು ಬೇರೆ ರಾಜ್ಯಗಳಿಗೆ ಹೆಚ್ಚಾಗಿ ತೆರಳಿದರೂ ಆ ರಾಜ್ಯದವರು ಅವರ ಭಾಷೆಯನ್ನು ಬಿಟ್ಟು ಕನ್ನಡವನ್ನು ಬಳಸುತ್ತಾರೆಯೇ? ಇದರಿಂದ ಕನ್ನಡ ಬೆಳೆಯುವುದಾದರೂ ಹೇಗೆ?

2. ತಮಿಳುನಾಡು, ಕೇರಳ, ಆಂಧ್ರದಿಂದ ಕರ್ನಾಟಕಕ್ಕೆ ಬಂದವರ ಜೊತೆ ಕನ್ನಡಿಗರು ತನ್ನ ಕನ್ನಡ ಭಾಷೆಯಲ್ಲಿ ಮಾತಾಡುತ್ತಾರೆಯೇ? ಖಂಡಿತಾ ಮಾತಾಡುವುದಿಲ್ಲ. ಕನ್ನಡಿಗರ ದೌರ್ಬಲ್ಯವೇನೆಂದರೆ ತನ್ನ ಎದುರಿರುವ ವ್ಯಕ್ತಿ ಯಾವ ಭಾಷೆ ಮಾತಾಡುತ್ತಾನೋ ಅದೇ ಭಾಷೆಯಲ್ಲಿ ಕನ್ನಡಿಗನೂ ಮಾತಾಡುತ್ತಾನೆ. ಆದರೆ ಬೇರೆ ಭಾಷೆಯವರು ಹಾಗಲ್ಲ. ತನಗೆ ಕನ್ನಡ ಬರುತ್ತಿದ್ದರೂ ತನ್ನ ಮಾತೃಭಾಷೆಯನ್ನು ಬಿಟ್ಟು ಬೇರೆ ಭಾಷೆಯನ್ನು ಮಾತಾಡುವುದೇ ಇಲ್ಲ. ಇಲ್ಲದೇ ಇದ್ದರೆ ಬೆಂಗಳೂರಿನ ಬೀದಿಬೀದಿಯಲ್ಲಿ ವ್ಯಾಪಾರ ಮಾಡುತ್ತಿರುವ ತಮಿಳರು ಹಲವಾರು ವರ್ಷಗಳಿಂದ ಕರ್ನಾಟಕದಲ್ಲೇ ಇದ್ದರೂ ತಮಿಳಲ್ಲಿ ಮಾತಾಡುತ್ತಿರುತ್ತಿರಲಿಲ್ಲ…

3. ಕರ್ನಾಟಕದಲ್ಲಿ ಹಾದಿಬೀದಿಯಲ್ಲಿ ತಮಿಳು, ಮಲಯಾಳಂ, ತೆಲುಗು ಭಾಷೆಯಲ್ಲಿನ ಫಲಕಗಳಿವೆ. ಆದರೆ ನಮಗೆ ಕಂಡಿದ್ದು ರಾಷ್ಟ್ರಭಾಷೆ ಹಿಂದಿಯ ಫಲಕ ಮಾತ್ರ. ನಮಗೆ ನಿಜವಾದ ಸಮಸ್ಯೆ ತಮಿಳು, ಮಲಯಾಳಂ, ತೆಲುಗುವಿನಿಂದ ಇದ್ದರೂ ನಮಗೆ ಹಿಂದಿ ಮಾತ್ರ ಅಲರ್ಜಿ…!

4. ಕನ್ನಡದಲ್ಲಿ ಎಂಥೆಂಥ ಹುಚ್ಚರಿದ್ದಾರೆಂದರೆ ನಮಗೆ ಹಿಂದೀ ಭಾಷಿಗರ ನಡುವೆ ಬದುಕಲು ಸಾಧ್ಯವಿಲ್ಲ… ಅದಕ್ಕಾಗಿ ಪ್ರತ್ಯೇಕ ಕರ್ನಾಟಕ ದೇಶ ಬೇಕೆಂದು ಕೇಳುವ ಪ್ರತ್ಯೇಕತವಾದಿಗಳೂ ಇದ್ದಾರೆ. ಇಂಥವರಿಗೆ ಕರ್ನಾಟಕದಲ್ಲಿ ಬೆಂಕಿ ಇಟ್ಟು ಮಾತ್ರ ಗೊತ್ತೇ ವಿನಃ ಕರ್ನಾಟಕಕ್ಕೆ ಹತ್ತುಪೈಸೆಯ ಉಪಕಾರ ಮಾಡಿದವರಲ್ಲ.

5. ಕನ್ನಡವನ್ನು ಮುಗಿಸಲು ಇವರಿಗಿಂತ ಬೇರೆ ವ್ಯಕ್ತಿಗಳೇ ಬೇಕಿಲ್ಲ. ಯಾಕೆಂದರೆ ಗ್ರಾಂಥಿಕ ಕನ್ನಡ ಇವರಿಗೆ ಬೇಕಿಲ್ಲ. ಯಾಕೆಂದರೆ ಇದರಲ್ಲಿ ಗುರುತಿಸಿಕೊಂಡವರು ತನ್ನನ್ನು ದ್ರಾವಿಡರೆಂದು ಗುರುತಿಸಿಕೊಂಡಿದ್ದು, ಸಂಸ್ಕøತ ಆರ್ಯಭಾಷೆ ಎಂದು ಆಡುಭಾಷೆಯಲ್ಲಿರುವ ಕನ್ನಡ ಮಾತ್ರ ಬೇಕು. ಕನ್ನಡದಲ್ಲೇ ಈ ರೀತಿ ಧ್ರುವೀಕರಣವಿದ್ದರೆ ಕನ್ನಡ ಅವಸಾನ ಹೊಂದದೆ ಇರುತ್ತದೆಯೇ? ಇಂಥವರ ಬರಹ ಹೇಗಿರುತ್ತದೆ ಎಂದರೆ ಇವರು ಸಂಸ್ಕøತಗೊಂಡ ಕನ್ನಡ ಬಳಸುವುದಿಲ್ಲ, ಪದಗಳಲ್ಲಿ ಉಚ್ಛಾರವಿರುವುದಿಲ್ಲ. ಕನ್ನಡದ ಪದದ ಮೂಲತ್ವವನ್ನು ಬಿಟ್ಟು ಇವರದ್ದು ಪದಶೈಲಿಯೇ ಬೇರೆ…!!!

6. ಕನ್ನಡ ಅವಸಾನ ಹೊಂದುತ್ತಿದೆ ಎಂಬ ವಿಷಯವನ್ನು ಸದಾ ಕನ್ನಡಿಗರಲ್ಲಿ ಬಿತ್ತುವುದು. ಇದರಿಂದ ನಕಾರಾತ್ಮಕ ಭಾವನೆ ಉಂಟಾಗಿ ಕನ್ನಡದ ಭಾಷೆಯ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ. ಕನ್ನಡದಿಂದ ಭವಿಷ್ಯದಲ್ಲಿ ಗಂಡಾಂತರ ಒದಗಿದೆ ಎಂಬ ಸುಳ್ಳನ್ನು ಪದೇಪದೇ ಬಿತ್ತುತ್ತಲೇ ಇರುವುದರಿಂದ ನೂರು ಸುಳ್ಳು ಹೇಳಿ ಅದನ್ನೇ ಸತ್ಯವನ್ನಾಗಿ ಮಾಡಿ ಕನ್ನಡವನ್ನು ನಾಶಮಾಡುವಂತಹಾ ಗುಪ್ತಕಾರ್ಯಸೂಚಿಯೊಂದು ರಹಸ್ಯವಾಗಿ ಕಾರ್ಯ ನಿರ್ವಹಿಸುತ್ತಿದೆ.

7. ಕನ್ನಡಿಗರಿಗೆ ಕನ್ನಡದ ಬಗ್ಗೆ ಅಭಿಮಾನವಿಲ್ಲ, ಬದಲಿಗೆ ಅವರಿಗಿರುವುದು ಅಂಧಾಭಿಮಾನ ಮಾತ್ರ. ಯಾಕೆಂದರೆ ಕನ್ನಡಕ್ಕಾಗಿ ಬೇರೆಯವರ ಜೊತೆ ಜಗಳ ಕಾಯುವುದು, ಕನ್ನಡದ ಬಗ್ಗೆ ಏನಾದರೂ ಅಂದರೆ ಬಸ್‍ಗಳಿಗೆ ಬೆಂಕಿ ಹಚ್ಚುವುದು, ಕಲ್ಲುಬಿಸಾಡುವುದು, ಹಲ್ಲೆ ನಡೆಸುವುದು, ಬೀದಿಗಿಳಿದು ದೊಂಬರಾಟ ನಡೆಸುವುದು ಅಷ್ಟೆ ಮಾಡುತ್ತಾರೆ.

8. ಕನ್ನಡ ಭಾಷೆಗಾಗಿ ಹೋರಾಟ ನಡೆಸುವವರಲ್ಲಿ ಹೆಚ್ಚಾಗಿ ಇರುವವರು ರೌಡಿಗಳೆಂದೂ ಹೇಳಬಹುದು. ಯಾಕೆಂದರೆ ಕನ್ನಡದ ಹೆಸರಲ್ಲಿ ಹಫ್ತಾ
ವಸೂಲಿ, ಚಂದಾ ವಸೂಲಿ, ರೌಡಿಸಂ ಮಾಡುತ್ತಾ ಹೊಟ್ಟೆ ಹೊರೆಯುತ್ತಾರೆಯೇ ಹೊರತು ಕನ್ನಡಭಿಮಾನವಿಲ್ಲ. ಯಾಕೆಂದರೆ ಕನ್ನಡ ಇವರಿಗೆ ಬರೇ ದಂಧೆಯಷ್ಟೇ.

9. ಕನ್ನಡ ಸಂಘಟನೆಗಳಲ್ಲಿ ಗುರುತಿಸಿಕೊಂಡವರಿಗೆ ಕನ್ನಡ ಒಂದು ದಂಧೆಯಾಗಿದೆ. ಕನ್ನಡದ ಹೆಸರಲ್ಲಿ ಭಯ ಹುಟ್ಟಿಸುವುದು, ಬಂದ್‍ಗೆ ಕರೆ ನೀಡುವುದು, ಕನ್ನಡದ ಹೆಸರಲ್ಲಿ ರಾಜಕೀಯ ಮಾಡುವುದು, ಕನ್ನಡದ ಹೆಸರಲ್ಲಿ ಹೋರಾಟದ ನಾಟಕವಾಡಿ ವಸೂಲಿಬಾಜಿ ನಡೆಸುವುದು, ಸುಖಾಸುಮ್ಮನೆ ಗಿಮಿಕ್ ಮಾಡುವುದು ಅಷ್ಟೇ ಕೆಲಸ. ಇಂಥವರಿಂದ ಕನ್ನಡದ ಉದ್ಧಾರ ಅಷ್ಟರಲ್ಲೇ ಇದೆ.

10. ಇಂದು ಕನ್ನಡದ ಹೋರಾಟದಲ್ಲಿ ಮುಂಚೂಣಿಯಲ್ಲಿರುವವರೆಲ್ಲಾ ತನ್ನನ್ನೇ ತಾನು ಮಾರಿಕೊಂಡಿದ್ದಾರೆ ಎಂದೇ ಹೇಳಬಹುದು. ಫೇಸ್‍ಬುಕ್‍ನಂಥಾ ಜಾಲತಾಣಗಳಲ್ಲಿ ಕನ್ನಡಭಿಮಾನ ಮೆರೆದು, ನಾಲ್ಕೈದು ಹೋರಾಟಗಳಲ್ಲಿ ಭಾಗವಹಿಸಿ, ಬೀದಿಬೀದಿಯಲ್ಲಿ ಭಾಷಣ ಹೊಡೆದು ಬಳಿಕ ರಾಜಕೀಯ ಮಾಡಿ ಹಣ ಮಾಡುವುದಕ್ಕೋಸ್ಕರ ತಮ್ಮನ್ನೇ ತಾವು ಮಾರಿಕೊಳ್ಳುತ್ತಾರೆ.

11. ಕನ್ನಡದ ಬಹುಬೇಡಿಕೆಯ ಚಿತ್ರನಟರೊಡನೆ ಅಂಧಾಭಿಮಾನಿಗಳಂತೆ ಅಲೆಯುವ ಕೆಲವು ಅಂಧಾಭಿಮಾನಿ ಕನ್ನಡಿಗರು ಅವರಿಗಾಗಿ ಜೀವ ಕೊಡಲೂ ತಯಾರಿದ್ದಾರೆ. ಆದರೆ ಅವರು ಬೇರೆ ಭಾಷೆಯಿಂದ ರಿಮೇಕ್ ಮಾಡಿ ಚಿತ್ರ ತಯಾರಿಸಿದ್ದರೂ ಅವರಲ್ಲಿ ಪ್ರಶ್ನಿಸಲು ಇವರಲ್ಲಿ ಧೈರ್ಯವಿಲ್ಲ.

12. ಕನ್ನಡದಲ್ಲಿ ತನ್ನದೇ ಚಿತ್ರಕಥೆಯನ್ನು ತಯಾರಿಸಿ ಚಲನಚಿತ್ರ ಮಾಡಲಾಗುವುದಿಲ್ಲ. ಅದಕ್ಕಾಗಿ ತಮಿಳು, ತೆಲುಗು, ಕೇರಳದಲ್ಲಿ ಬಂದಿರುವ ಪ್ರಸಿದ್ಧ ಚಿತ್ರಗಳನ್ನು ರಿಮೇಕ್ ಮಾಡಿ ಹೆಸರು ಗಳಿಸಿದರೆ ಕೆಲವರು ನಷ್ಟ ಅನುಭವಿಸುತ್ತಾರೆ. ಆದರೆ ಬೇರೆ ಭಾಷೆಯ ಚಿತ್ರಗಳನ್ನು ಡಬ್ಬಿಂಗ್ ಮಾಡಬೇಕು ಎಂದಾಗ ಮಾತ್ರ ಕನ್ನಡಕ್ಕೆ ಅಪಚಾರ ಆಗುತ್ತದೆ ಎಂದು ಬೀದಿಗಿಳಿದು ಹೋರಾಟ ನಡೆಸುತ್ತಾರೆ.

13. ಕೆಲವು ಕನ್ನಡಿಗರಿಗೆ ಕನ್ನಡ ಎನ್ನುವುದು ಒಂದು ದಂಧೆ, ಉಪಕಸುಬು ಅಷ್ಟೆ. ಕನ್ನಡದ ಹೆಸರಲ್ಲಿ ಬ್ಯ್ಲಾಕ್‍ಮೇಲ್ ಮಾಡಿ ಹಣ ಗಳಿಸುವುದು ಹೇಗೆ ಎನ್ನುವುದನ್ನು ಇವರಿಂದ ಕಲಿಯಬೇಕು. ಇಂಥಾ ಪ್ರಖಂಡ ಕನ್ನಡಿಗರ ಮೇಲೆ ವಿವಿಧ ಠಾಣೆಗಳಲ್ಲಿ ನೂರಾರು ಕೇಸುಗಳಿದ್ದರೂ ಪರವಾಗಿಲ್ಲ. ಮತ್ತೊಂದು ಕನ್ನಡದ ಹೆಸರಲ್ಲಿ ದಂಧೆ ನಡೆಸುತ್ತಾನೆ.

14. ಕನ್ನಡವನ್ನು ಇಂಗ್ಲೀಷ್ ಆಕ್ರಮಿಸಿಕೊಳ್ಳುತ್ತಿದೆ ಎಂಬ ಆತಂಕವನ್ನು ಹಲವಾರು ಮಂದಿ ವ್ಯಕ್ತಪಡಿಸುತ್ತಾರೆ. ಆದರೆ ಇವರ ಇಂಗ್ಲೀಷ್
ವ್ಯಾಮೋಹವೇ ಕನ್ನಡದ ಬಗ್ಗೆ ಕೀಳರಿಮೆಯನ್ನು ತಾಳುವಂತೆ ಮಾಡುತ್ತದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಕನ್ನಡ ಗೊತ್ತಿದ್ದರೂ ಕನ್ನಡ ಮಾತಾಡುವುದಿಲ್ಲ..

15. ದೃಶ್ಯವಾಹಿನಿಗಳಲ್ಲಿ ಕನ್ನಡ ಭಾಷೆ ಬಿಟ್ಟು ಬೇರೆ ಎಲ್ಲಾ ಭಾಷೆಗಳೂ ಬರುತ್ತದೆ ಎಂದು ಗೊತ್ತಿದೆ. ಆದರೆ ಈ ಬಗ್ಗೆ ಯಾವ ಹೋರಾಟವೂ ಇಲ್ಲ, ಯಾವ ಭಾಷಣವೂ ಇಲ್ಲ. ದೃಶ್ಯವಾಹಿನಿಗಳ ಸುಲಲಿತ, ಶುದ್ಧ ಕನ್ನಡ ಮಾತಾಡುವಂತೆ ಮಾಡಲು ಕನ್ನಡಿಗರಿಗೆ ಇದುವರೆಗೆ ಸಾಧ್ಯವಾಗಿಲ್ಲ.

16. ಇಂದು ತಾಲೂಕು, ಹೋಬಳಿ, ಜಿಲ್ಲಾ ಹಾಗೂ ರಾಜ್ಯಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನಗಳು ನಡೆಯುತ್ತದೆ. ಇದೊಂದು ಹಣ ಮಾಡುವ ದಂಧೆ ಎಂದರೂ ತಪ್ಪಾಗಲಾರದು. ಸಮ್ಮೇಳನದ ಹೆಸರಲ್ಲಿ ಕರ್ನಾಟಕದಿಂದ ಹಣ ಬಿಡುಗಡೆಗೊಳಿಸಿ, ಅದರಲ್ಲಿ ಸ್ವಲ್ಪ ಹಣವನ್ನು ಖರ್ಚು ಮಾಡಿಕೊಂಡು, ಸರಕಾರಕ್ಕೆ ಜಾಸ್ತಿ ಲೆಕ್ಕ ತೋರಿಸಿಕೊಂಡು ಉಳಿದ ಹಣವನ್ನು ಕಿಸೆಗೆ ಹಾಕುವ ದಂಧೆಯಾಗಿ ಬಿಟ್ಟಿದೆ. ಜೊತೆಗೆ ಕನ್ನಡ ಸಾಹಿತ್ಯ ಸಮ್ಮೇಳನಗಳು ಯುವಜನತೆಯ ಹೃದಯವನ್ನು ಮುಟ್ಟುವ ಕೆಲಸವನ್ನಂತೂ ಮಾಡುವುದೇ ಇಲ್ಲ. ಇಂದಿನ ಸಮ್ಮೇಳನಗಳೆಲ್ಲಾ ಕಾಟಾಚಾರಕ್ಕೆ ನಡೆಯುತ್ತದೆ.

17. ಮುಖ್ಯವಾಗಿ ವಿಷಯವೆಂದರೆ ಕನ್ನಡದಲ್ಲಿ ಹಲವಾರು ಸಕರಾತ್ಮಕ ವಿಚಾರಗಳಿವೆ. ಅವುಗಳ ಬಗ್ಗೆ ಹೆಮ್ಮೆ ಪಡುವುದನ್ನು ಬಿಟ್ಟು ಕನ್ನಡಿಗರಲ್ಲಿ ಋಣಾತ್ಮಕ ಭಾವನೆಗಳನ್ನು ಬಿತ್ತಲಾಗುತ್ತಿದೆ. ಇದರಿಂದ ಕನ್ನಡಕ್ಕೆ ಆತಂಕ ಉಂಟಾಗಿದೆ ಎಂಬ ಭಯ ಬಿತ್ತಲಾಗುತ್ತಿದೆ.

ಕನ್ನಡಕ್ಕೆ ಕನ್ನಡಿಗರಿಂದಲೇ ಕಂಟಕ ಎನ್ನುವುದನ್ನು ಸುಲಭವಾಗಿ ಅರ್ಥ ಮಾಡಿಕೊಳ್ಳಬಹುದು. ಕನ್ನಡಕ್ಕೆ ಬಂದ ಸಂಕಷ್ಟಕ್ಕೆ ಬೇರೆಯವರನ್ನು ದೂರಿ ಪ್ರಯೋಜನವಿಲ್ಲ. ಕನ್ನಡ ಗೊತ್ತಿದ್ದರೂ, ಕನ್ನಡದಲ್ಲಿ ಮಾತಾಡಲು ಆಗುತ್ತಿಲ್ಲ ಎಂದು ಬಹಿರಂಗವಾಗಿ ಹೇಳುವವರೂ ನಮ್ಮಲ್ಲಿದ್ದಾರೆ. ಅಂಧಾಭಿಮಾನ, ಗುಲಾಮಿ ಮನಸ್ಥಿತಿ ಇತ್ಯಾದಿಗಳಿಂದ ಕನ್ನಡಕ್ಕೆ ಅವಸಾನ ಬರುತ್ತಿದೆ. ಇಂಥವರಿಂದಲೇ ಕನ್ನಡಕ್ಕೆ ಇಂತಹಾ ದುರ್ಗತಿ ಬಂದೊದಗಿದೆ ಎಂದರೂ ತಪ್ಪಾಗಲಾರದು.

-ಚೇಕಿತಾನ

Tags

Related Articles

Close