ಪ್ರಚಲಿತ

ಬೇನಾಮಿ ಆಸ್ತಿ ಗಳಿಕೆಗೆ ಬಿತ್ತು ಬ್ರೇಕ್! ರಹಸ್ಯ ಮಾಹಿತಿದಾರರಿಗೆ ಪ್ರಧಾನಿ ಮೋದಿ ಕೊಡಲಿದ್ದಾರೆ 1 ಕೋಟಿ ರೂ ಬಹುಮಾನ!!!

ಬೇನಾಮಿ ಆಸ್ತಿ ಬಗ್ಗೆ ತನಿಖಾ ಸಂಸ್ಥೆಗಳಿಗೆ ಮಾಹಿತಿ ನೀಡುವ ರಹಸ್ಯ ಮಾಹಿತಿದಾರರಿಗೆ ಒಂದು ಕೋಟಿ ರೂ ಬಹುಮಾನ ನೀಡುವಂತೆ ಕೇಂದ್ರ ಸರಕಾರ ಚಿಂತನೆ ನಡೆಸುತ್ತಿದೆ. ಈ ಯೋಜನೆ ಮುಂದಿನ ತಿಂಗಳಿನಿಂದ ಜಾರಿಗೆ ಬರುವ ಸಾಧ್ಯತೆಯಿದ್ದು 15 ಲಕ್ಷದಿಂದ 1 ಕೋಟಿ ರೂ. ವರೆಗೆ ಬಹುಮಾನ ನೀಡಲಾಗುವುದು ಎಂದು ತೆರಿಗೆ ನಿರ್ದೇಶನ ಮಂಡಳಿಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಮಾಹಿತಿದಾರರು ನೀಡುವ ವಿವರ ಅಧಿಕೃತವಾಗಿರಬೇಕು ಹಾಗೂ ಮಾಹಿತಿದಾರನ ಗುರುತನ್ನು ರಹಸ್ಯವಾಗಿಡಲಾಗುವುದು, ಇಲಾಖೆಯು ಯಾವುದೇ ಕಾರಣಕ್ಕೂ ಮಾಹಿತಿದಾರನ ವಿವರವನ್ನು ಎಲ್ಲಿಯೂ ಬಹಿರಂಗಗೊಳಿಸುವುದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕಳೆದ ವರ್ಷ ಈ ಬೇನಾಮಿ ಆಸ್ತಿ ಕಾನೂನನ್ನು ಪರಿಚಯಿಸಲಾಗಿದ್ದು ನಿರ್ದೇಶನಾಲಯ, ಆದಾಯ ತೆರಿಗೆ ಇಲಾಖೆ ಮತ್ತು ಆದಾಯ ಗುಪ್ತಚರ ಇಲಾಖೆಗಳಿಂದ ಮಾಹಿತಿದಾರರಿಗೆ ಬಹುಮಾನ ನೀಡುವ ಪದ್ಧತಿ ಮೊದಲಿನಿಂದಲೂ ಇದೆ.

ಬೇನಾಮಿ ಆಸ್ತಿ ಹೊಂದಿದವರನ್ನು ಪತ್ತೆ ಹೆಚ್ಚುವುದು ಆದಾಯ ತೆರಿಗೆ ಇಲಾಖೆ ಹಾಗೂ ಆಡಳಿತ ವಿಭಾಗಕ್ಕೆ ತುಂಬಾ ಕಷ್ಟಕರವಾದ ಕೆಲಸವಾಗಿದೆ. ಹೀಗಾಗಿ ನಾವು ಮಾಹಿತಿ ದಾರರಿಂದ ವಿವರ ಪಡೆದರೆ ಕೆಲಸ ವೇಗವಾಗಿ ಮತ್ತು ಪರಿಣಾಮ ಕಾರಿಯಾಗಿ ಮುಗಿಯುತ್ತದೆ. ಒಂದು ವೇಳೆ ನಾವು ಮಾಹಿತಿದಾರರಿಗೆ ಸೂಕ್ತ ಬಹುಮಾನ ನೀಡಿದರೆ ದೇಶಾದ್ಯಂತ ಬೇನಾಮಿ ಆಸ್ತಿ ಹೊಂದಿರುವವರನ್ನು ಪತ್ತೆ ಹಚ್ಚುವುದು ಸುಲಭವಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸದ್ಯ ಈ ಯೋಜನೆಯನ್ನು ಜಾರಿಗೆ ತರಲು ನಿರ್ಧರಿಸಿದ್ದು,  ಪ್ರಸ್ತಾವನೆ ಹಣಕಾಸು ಇಲಾಖೆ ಬಳಿಯಿದೆ. ಒಂದು ಬಾರಿ ಹಣಕಾಸು ಇಲಾಖೆಯಿಂದ ಅನುಮೋದನೆ ಪಡೆದು ಹಣಕಾಸು ಸಚಿವರಿಂದ ಒಪ್ಪಿಗೆಯಾದರೇ, ಕೇಂದ್ರ ತೆರಿಗೆ ನಿರ್ದೇಶನ ಇಲಾಖೆ ಯೋಜನೆಯನ್ನು ಘೋಷಿಸುತ್ತದೆ. ಈ ಯೋಜನೆ ಅಕ್ಟೋಬರ್ ಅಥವಾ ನವೆಂಬರ್‍ನಲ್ಲಿ ಪ್ರಕಟವಾಗುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ. 2016 ನವೆಂಬರ್ 1 ರಿಂದ ಬೇನಾಮಿ ಆಸ್ತಿ ವಹಿವಾಟು ನಿಷೇಧ ತಿದ್ದುಪಡಿ ಜಾರಿಗೆ ಬಂದಿದ್ದು ಇದುವರೆಗೆ ಅನೇಕ ಬೇನಾಮಿ ಆಸ್ತಿಗಳು ಪತ್ತೆಯಾಗಿವೆ ಎಂದು ತಿಳಿಸಿದ್ದಾರೆ.

ಬೇನಾಮಿ ಆಸ್ತಿ ಎಂದರೇನು?

ನೈಜ ಖರೀದಿದಾರನ ಹೆಸರಲ್ಲದೇ ಬೇರೆಯವರ ಹೆಸರಲ್ಲಿ ನಿರ್ದಿಷ್ಟ ಆಸ್ತಿ ಇದ್ದರೆ ಅದು ಬೇನಾಮಿ ಆಸ್ತಿ. ಈ ಆಸ್ತಿ ಖರೀದಿ ವೇಳೆ ಖರೀದಿದಾರ ತನ್ನ ನೈಜ ಹೆಸರನ್ನು ಬಳಸದೇ ಬೇರೆಯವರ ಹೆಸರಲ್ಲಿ ಖರೀದಿಸಿರುತ್ತಾನೆ.  ಹೀಗೆ ಬೇರೆಯವರ ಹೆಸರಲ್ಲಿ ಖರೀದಿಸಿದ್ದಕ್ಕೆ ಬೇನಾಮಿ ಆಸ್ತಿ ಮತ್ತು ನೊಂದಾಯಿತ ವ್ಯಕ್ತಿಯನ್ನು ಬೇನಾಮರ್ ಎಂದು ಕರೆಯುತ್ತಾರೆ. ಇಂತಹ ಆಸ್ತಿಗಳಿಗೆ ಹಣ ಹೂಡಿದಾತ ನಿಜವಾದ ಮಾಲೀಕನಾಗಿರುತ್ತಾನೆ. ಬೇನಾಮಿ ಆಸ್ತಿಯಿಂದ ಹಣ ನೀಡಿದ/ನಿಜವಾದ ಮಾಲೀಕನಿಕೆ ನೇರ ಮತ್ತು ಪರೋಕ್ಷ ಲಾಭಗಳಿರುತ್ತವೆ.

ಬೇನಾಮಿ ಅಸ್ತಿಯ ಲಕ್ಷಣಗಳೇನು?

ಮಕ್ಕಳು ಅಥವಾ ಗಂಡ/ಹೆಂಡತಿ ಹೆಸರಿನಲ್ಲಿ ಆಸ್ತಿ ಹೊಂದಿದ್ದು, ಅದಕ್ಕಾಗಿ ಘೋಷಿತ ಆದಾಯ ಮೂಲಗಳಿಂದ ಹೊರತಾದ ಹಣ ಅಥವಾ ಇತರ ಗುಪ್ತ ಆದಾಯದಿಂದ ಖರೀದಿಸಿದ್ದರೆ, ಸಹೋದರ / ಸಹೋದರಿ ಅಥವಾ ಸಂಬಂಧಿಗಳೊಂದಿಗೆ ಜಂಟಿ ಖಾತೆಯಲ್ಲಿ ಆಸ್ತಿ ಹೊಂದಿದ್ದರೆ ಅದನ್ನು ನಿರ್ದಿಷ್ಟ ಆದಾಯೇತರ ಮೂಲಗಳಿಂದ ಖರೀದಿಸಿದ್ದರೆ, ನಿರ್ದಿಷ್ಟ ವ್ಯಕ್ತಿಯೊಬ್ಬ ತನಗೆ ನಂಬಿಕೆ ಇರುವ ಮೂರನೇ ವ್ಯಕ್ತಿಯ ಹೆಸರಲ್ಲಿ ಆಸ್ತಿ ಹೊಂದಿದ್ದರೆ ಅದು ಬೇನಾಮಿ. ಕಾನೂನಿನ ಪ್ರಕಾರ ನಿರ್ದಿಷ್ಟ ಆದಾಯೇತರ ಮೂಲಗಳಿಂದ ಆಸ್ತಿ ಖರೀದಿಸಿ ತಂದೆ ತಾಯಿ ಹೆಸರಲ್ಲಿ ಇಟ್ಟುಕೊಂಡಿದ್ದರೂ ಅದು ಬೇನಾಮಿ ಆಸ್ತಿ ಎಂದೇ ಪರಿಗಣಿತವಾಗುತ್ತದೆ. ಎಲ್ಲಾ ರೀತಿಯ ಸ್ಥಿರ ಚರಾಸ್ತಿಗಳು ಬೇರೆಯವರ ಹೆಸರಲ್ಲಿ ಖರೀದಿಸುವ ವಸ್ತುಗಳು, ಕಾನೂನು ದಾಖಲೆಗಳು, ಬ್ಯಾಂಕ್ ಖಾತೆಗಳು , ಹಣಕಾಸು ಭದ್ರತೆಗಳನ್ನೂ ಬೇನಾಮಿ ಎಂದು ಪರಿಗಣಿಸಲಾಗುತ್ತದೆ.

ನೂತನ ಕಾಯ್ದೆ ಪ್ರಕಾರ ಬೇನಾಮಿ ಆಸ್ತಿ ಹೊಂದಿದ್ದವರಿಗೆ ಭಾರೀ ಪ್ರಮಾಣದ ದಂಡ ವಿಧಿಸಬಹುದು. ಕಾಯ್ದೆ ಅನ್ವಯ ವ್ಯಕ್ತಿಯೊಬ್ಬ 1 ಕೋಟಿ ರೂ ಮೌಲ್ಯದಾಸ್ತಿ ಹೊಂದಿದ್ದರೆ, ಅದಕ್ಕೆ 7 ವರ್ಷ ಜೈಲು ಮತ್ತು 25 ಲಕ್ಷ ರೂ ದಂಡ ವಿಧಿಸಬಹುದಾಗಿದೆ. ಜೊತೆಗೆ ಆ ವ್ಯಕ್ತಿ ಆಸ್ತಿಯನ್ನೂ ಕಳೆದುಕೊಳ್ಳ ಬೇಕಾಗುತ್ತದೆ. ತಮ್ಮ ಮನೆಯ ಕೆಲಸದಾಳು ಅಥವಾ ಸಂಬಂಧಿ ಇತರರ ಹೆಸರಲ್ಲಿ ಕೃಷಿ ಜಮೀನು ಖರೀಸಿದ್ದರೂ ಕ್ರಮ ಶತಃ ಸಿದ್ಧ.

ಕಪ್ಪು ಹಣ ನಿಯಂತ್ರಣಕ್ಕೆ ಕೇಂದ್ರ ಸರಕಾರ ಇದೀಗ ಕೈಗೊಂಡ ಕ್ರಮಗಳ ರೀತಿಯಲ್ಲೇ ಬೇನಾಮಿ ಆಸ್ತಿ ಪತ್ತೆಗೆ ಹಲವು ರೀತಿಯ ಕ್ರಮಗಳನ್ನು ಕೈಗೊಳ್ಳಬಹುದು. ಪ್ರಮುಖವಾಗಿ ಬೇನಾಮಿ ನಿಯಂತ್ರಣ ಕಾಯ್ದೆಯನ್ನು ನಿರ್ದಾಕ್ಷಿಣವಾಗಿ ಅನ್ವಯಿಸಬಹುದು. ವ್ಯಕ್ತಿಗಳ ಲೆಕ್ಕರಹಿತ ಆದಾಯದಿಂದ ತೊಡಗಿ ಬೇನಾಮಿ ಆಸ್ತಿ ಹೊಂದಿದವರಿಗೆ ಸಂಕಷ್ಟದ ಸಮಯಗಳು ಕಾದಿವೆ ಎಂದೇ ಹೇಳಲಾಗುತ್ತಿದೆ. ಇದರೊಂದಿಗೆ ಬೇನಾಮಿ ಆಸ್ತಿ ಖರೀದಿಗೆ ಅಕ್ರಮ ವಿಧಾನದಲ್ಲಿ ಹಣದ ವಹಿವಾಟು ನಡೆಸಿದ್ದರೂ ಕೇಂದ್ರ ಸರಕಾರ ಅಂತಹವರ ಮೇಲೆ ಹೆಚ್ಚಿನ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ. ಬೇನಾಮಿ ಆಸ್ತಿಗಳ ವಿರುದ್ಧ ಇತ್ತೀಚೆಗೆ ತಿದ್ದುಪಡಿ ಮಾಡಿದ ಬೇನಾಮಿ ವ್ಯವಹಾರ ನಿಯಂತ್ರಣ ಕಾಯ್ದೆ(ಪಿಬಿಪಿಟಿ) ಜಾರಿಯಾಗಿದ್ದು ಈ ಕಾಯ್ದೆ ಪ್ರಕಾರ ಕಾನೂನು ಉಲ್ಲಂಘಿಸಿದಲ್ಲಿ ದಂಡ ಮತ್ತು ಜೈಲು ಶಿಕ್ಷೆಗೆ ಗುರಿಯಾಗುತ್ತಾರೆ. ಹೊಸ ಕಾನೂನಿನ ಪ್ರಕಾರ ಬೇನಾಮಿ ಆಸ್ತಿ ಹೊಂದಿದ ವ್ಯಕ್ತಿಗೆ ದಂಡದ ಜೊತೆ ಗರಿಷ್ಟ 7 ವರ್ಷ ಶಿಕ್ಷೆ ನೀಡಬಹುದು ಮತ್ತು ಮುಟ್ಟುಗೋಲು ಹಾಕಿಕೊಳ್ಳಬಹುದು. ಆಸ್ತಿ ವ್ಯಕ್ತಿಯೊಬ್ಬನ ಹೆಸರಿನಲ್ಲಿದ್ದು, ಅದರ ಮೌಲ್ಯವನ್ನು ಮತ್ತೊಬ್ಬ ಪಾವತಿ ಮಾಡಿದ್ದಲ್ಲಿ ಅದು ಬೇನಾಮಿ ಎಂದು ಪರಿಗಣಿಸಲಾಗುತ್ತದೆ. ಇದರೊಂದಿಗೆ ವ್ಯಕ್ತಿ ತಪ್ಪು ಮಾಹಿತಿ ಕೊಟ್ಟಿದ್ದಲ್ಲಿ ಆಸ್ತಿ ಮೇಲೆ ಮಾರುಕಟ್ಟೆ ಬೆಲೆಯ ಆಧಾರದಲ್ಲಿ ಶೇಕಡಾ 10 ರಷ್ಟು ದಂಡ  ಹಾಗೂ 5 ವರ್ಷಗಳವರೆಗೆ ಕಠಿಣ ಜೈಲು ಶಿಕ್ಷೆ ನೀಡಲಾಗುವುದು.

-ಪವಿತ್ರ

Tags

Related Articles

Close