ಪ್ರಚಲಿತ

ಭಾರತದ ಪೂರ್ವ ನೀತಿಗೆ ಬಲಿಷ್ಟ ಡ್ರ್ಯಾಗನ್ ‘ಚೀನಾ’ಗೆ ಶುರುವಾಯ್ತು ಚಳಿ ಜ್ವರ!!!

ಗಡ ಗಡ ಎನ್ನುತ್ತಿದೆ ಚೀನಾ!

ಭಾರತದಲ್ಲಿ ಯಾವಾಗ ವಂಶಪಾರಂಪರ್ಯದ ಆಡಳಿತಕ್ಕೆ ಪೂರ್ಣವಿರಾಮ ಬಿದ್ದು, ನರೇಂದ್ರ ಮೋದಿಯವರ ಕೈಗೆ ಅಧಿಕಾರ ಸಿಕ್ಕಿತೋ ಅಂದಿನಿಂದ ಭಾರತವು ಅಭಿವೃದ್ಧಿಯ ಪಥದತ್ತ ಸಾಗುತ್ತಿರುವುದಲ್ಲದೇ ಭ್ರಷ್ಟಚಾರ ಮುಕ್ತ ಸರಕಾರ ನಡೆಸಿದ ಹಿರಿಮೆ ಇವರದ್ದಾಗಿದೆ. ಇದಷ್ಟೇ ಅಲ್ಲದೇ, ತಾನೇ ವಿಶ್ವದಲ್ಲೇ ಪ್ರಬಲಶಾಲಿ ರಾಷ್ಟ್ರ ಎಂದು ಮೆರೆಯುತ್ತಿದ್ದ ಚೀನಾದ ಸೊಕ್ಕನ್ನು ಮಟ್ಟ ಹಾಕುತ್ತಿರುವ ಮೋದಿಯವರ ಈ ಅಚಲ ನಿರ್ಧಾರವೇ ಚೀನಾಕ್ಕೆ ಸಿಡಿಲು ಬಡಿದಂತಾಗಿದ್ದಂತೂ ಮಾತ್ರ ಅಕ್ಷರಶಃ ನಿಜ!!

ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ಸಂದರ್ಭದಲ್ಲಿ ನರೇಂದ್ರ ಮೋದಿಯವರು ಸಾರ್ಕ್ ಸದಸ್ಯ ರಾಷ್ಟ್ರಗಳನ್ನು ಸಮಾರಂಭಕ್ಕೆ ಆಹ್ವಾನಿಸಿದ್ದಂತೂ ಚೀನಾಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸಿತ್ತು!! ಹೌದು… ಅದೇ ಸಂದರ್ಭದಲ್ಲಿ ನರೇಂದ್ರ ಮೋದಿಯವರು ದಕ್ಷಿಣ ಏಷಿಯಾದ ರಾಷ್ಟ್ರಗಳ ಜತೆ ಉತ್ತಮ ಬಾಂಧವ್ಯ ವೃದ್ಧಿಗೆ ನಾಂದಿ ಹಾಡಿದರು. ಅದೀಗ ಹೆಮ್ಮರವಾಗಿ ಫಲ ಕೊಡಲು ಪ್ರಾರಂಭಿಸಿದ್ದು, ವಿರೋಧಿ ರಾಷ್ಟ್ರಗಳು ಭಾರತದ ಕಡೆಗೊಮ್ಮೆ ತಿರುಗಿ ನೋಡುವಂತೆ ಮಾಡುತ್ತಿದೆ.

ಅಧಿಕಾರದ ಗದ್ದುಗೆಯನ್ನು ಪಡೆದಿರುವ ನರೇಂದ್ರಮೋದಿ ನೇತೃತ್ವದ ಎನ್.ಡಿ.ಎ ಸರ್ಕಾರ, ಪೂರ್ವ ದೇಶಗಳೊಂದಿಗಿನ ಸಂಬಂಧವನ್ನು ಉತ್ತಮಗೊಳಿಸಲು ಒತ್ತು ನೀಡುತ್ತಿದೆಯಲ್ಲದೇ ಏಷಿಯಾನ್ ಶೃಂಗಸಭೆಯಲ್ಲಿ ಭಾಗವಹಿಸಿ ಮಾತಾನಾಡಲು ಅವಕಾಶ ದೊರೆತಿರುವುದು ಹೆಮ್ಮೆ ಹಾಗೂ ಸಂತಸದ ವಿಷಯವಾಗಿತ್ತು ಎಂಬುವುದು ಎಲ್ಲರಿಗು ತಿಳಿದ ವಿಚಾರ. ಆದರೆ ಇದೀಗ ತಮ್ಮ ಸಂಬಂಧವನ್ನು ಉತ್ತಮಗೊಳಿಸುವುದಕ್ಕೋಸ್ಕರ ಜನವರಿ 26, 2018 ರ ಗಣರಾಜ್ಯೋತ್ಸವ ದಿನಾಚರಣೆಗೆ ಮುಖ್ಯ ಅತಿಥಿಗಳಾಗಿ ಆಗ್ನೇಯ ಏಷಿಯನ್ ಒಕ್ಕೂಟದ ಸದಸ್ಯರನ್ನು ಮೋದಿ ಆಹ್ವಾನಿಸಿದ್ದಾರೆ. ಈ ಮೂಲಕ ಆಗ್ನೇಯ ಏಷಿಯಾ ರಾಷ್ಟ್ರಗಳ ಎಲ್ಲಾ ಹತ್ತು ಸದಸ್ಯರಾಷ್ಟ್ರಗಳೊಂದಿಗೆ ಬಾಂಧವ್ಯ ಬೆಳೆಸುವ ಗುರಿ ಹೊಂದಿದ್ದಾರೆ. ಈ ಮೂಲಕ ಚೀನಾದ ದಕ್ಷಿಣ ಭಾಗದಲ್ಲಿನ ದೇಶಗಳನ್ನು ತನ್ನೊಂದಿಗೆ ಕೊಂಡೊಯ್ಯುವ ದೂರದೃಷ್ಟಿಯನ್ನು ಮೋದಿ ಹೊಂದಿದ್ದಾರೆ.

ಈ ಹಿಂದೆ ಆಗ್ನೇಯ ಏಷಿಯಾ ರಾಷ್ಟ್ರಗಳ ಎಲ್ಲಾ ಹತ್ತು ಸದಸ್ಯರಾಷ್ಟ್ರಗಳೊಂದಿಗೆ ಉತ್ತಮ ಸಂಬಂಧವನ್ನು ಬೆಳೆಸುವಲ್ಲಿ ಭಾರತ ಸತತ ಪ್ರಯತ್ನ ಮಾಡುತ್ತಿದ್ದು, ಇದೀಗ ಪ್ರಧಾನಿ ಮೋದಿಯವರಿಂದ ಎಲ್ಲವೂ ಯಶಸ್ವಿಯಾಗಲಿದೆ. ಚೀನಾದ ದಕ್ಷಿಣ ಭಾಗದಲ್ಲಿರುವ ದೇಶಗಳನ್ನು ತನ್ನತ್ತ ಸೆಳೆಯುವಲ್ಲಿ ಮೋದಿ ಸಫಲರಾಗುತ್ತಲೇ ಇದ್ದು, ಇದೀಗ “ಆಕ್ಟ್ ಈಸ್ಟ್” ನೀತಿಯ ಮೂಲಕ ದಕ್ಷಿಣ ಏಷ್ಯಾದ ಸಾರ್ಕ್ ಮತ್ತು ಆಗ್ನೇಯ ಏಷ್ಯಾದ ಏಷಿಯನ್ ಒಕ್ಕೂಟಗಳನ್ನು ಸೇರಿಸಿಕೊಂಡು ಭಾರತ ಚಾಣಾಕ್ಷ ರಾಜತಾಂತ್ರಿಕ ದೇಶವಾಗುತ್ತಿದೆ.

ಏನಿದು “ಆಕ್ಟ್ ಈಸ್ಟ್” ನೀತಿ??

ತೊಂಭತ್ತರ ದಶಕದ ಆರಂಭದ ಕಾಲಘಟ್ಟದಲ್ಲಿ ನಮ್ಮ ದೇಶ ಉದಾರೀಕರಣ ನೀತಿಗೆ ತೆರೆದುಕೊಂಡ ಅವಧಿ ಅದಾಗಿತ್ತು!! ಅಂದಿನ ಪ್ರಧಾನಮಂತ್ರಿ ನರಸಿಂಹ ರಾವ್ ಭಾರತದ ರಾಷ್ಟ್ರೀಯ ಹಿತಾಸಕ್ತಿ ಗಮನದಲ್ಲಿರಿಸಿಕೊಂಡು ಪ್ರತಿಪಾದಿಸಿದ ನೀತಿಯೇ “ಲುಕ್ ಈಸ್ಟ್”!!. ಏಷಿಯಾನ್ ಸದಸ್ಯರಾಷ್ಟ್ರಗಳು, ಜಪಾನ್, ದಕ್ಷಿಣ ಕೊರಿಯಾ ಸೇರಿ ಇತರೆ ಆಗ್ನೇಯ ಏಷ್ಯಾ ರಾಷ್ಟ್ರಗಳ ಜತೆಗೆ ದೀರ್ಘಕಾಲದ ದ್ವಿಪಕ್ಷೀಯ ಬಾಂಧವ್ಯ ಗಟ್ಟಿಗೊಳಿಸುವುದು ಈ ನೀತಿಯ ಮೂಲ ಉದ್ದೇಶವಾಗಿತ್ತು. ತದನಂತರದ ಸರ್ಕಾರಗಳ ಅವಧಿಯಲ್ಲಿ ಈ ಯೋಜನೆಗೆ ಅಷ್ಟೊಂದು ಪ್ರಾಮುಖ್ಯತೆಯೇ ಸಿಕ್ಕಿರಲಿಲ್ಲ. ಹಾಗಾಗಿ ಈ ಯೋಜನೆಯೂ ತಳಹಾದಿಯನ್ನು ಸೇರಿದ್ದಲ್ಲದೇ, ಈ ಒಂದು ನೀತಿ ಇತ್ತೆಂಬುವುದು ಕೂಡ ಅದೆಷ್ಟೋ ಜನರಿಗೆ ತಿಳಿದಿರಲಿಲ್ಲ ಅನ್ನೋದೆ ವಿಪರ್ಯಾಸ!!

ಆದರೆ.. ದಶಕಗಳ ಬಳಿಕ 2014ರಂದು ನಮ್ಮ ದೇಶದಲ್ಲಿ ಏಕಪಕ್ಷ ಬಹುಮತ ಪಡೆದು ಸರ್ಕಾರ ರಚಿಸಿದ್ದಲ್ಲದೇ ಇದರೊಂದಿಗೆ ಪೌರಾತ್ಯ ರಾಷ್ಟ್ರಗಳ ಜತೆಗಿನ ಬಾಂಧವ್ಯದ ಹೊಸ ಶಕೆ ಆರಂಭವಾಯಿತು. ಪ್ರಧಾನಮಂತ್ರಿ ನರೇಂದ್ರ ಮೋದಿ 2014ರಲ್ಲಿ ಏಷಿಯಾನ್ ಶೃಂಗಕ್ಕೋಸ್ಕರ ಮ್ಯಾನ್ಮಾರ್ ನ ರಾಜಧಾನಿ ನೇ ಪಿ ತಾವ್ ಗೆ ಭೇಟಿ ನೀಡಿದ ಸಂದರ್ಭ ಭಾರತದ “ಆಕ್ಟ್ ಈಸ್ಟ್ ಪಾಲಿಸಿ”ಯನ್ನು ಘೋಷಿಸಿದರು. ಆಗ್ನೇಯ ಏಷ್ಯಾ ರಾಷ್ಟ್ರಗಳ ಜತೆಗಿನ ಭಾರತದ ಬಾಂಧವ್ಯವನ್ನು ಇನ್ನಷ್ಟು ಗಟ್ಟಿಗೊಳಿಸುವ ಇರಾದೆ ಹಾಗೂ ಈ ಪ್ರಾಂತ್ಯದಲ್ಲಿ ಸಕ್ರಿಯ ಪಾತ್ರ ನಿಭಾಯಿಸುವ ಇಚ್ಛೆಯನ್ನು ಹೊಂದಿರುವ ಬಗ್ಗೆ ಪ್ರಧಾನಿ ಮೋದಿ ಅಂದು ವ್ಯಕ್ತಪಡಿಸಿದ್ದರು. ಅದರಂತೆ
ಭಾರತದ ನೀತಿಗಳೂ ಬದಲಾದವು.

ಭಾರತದ ಆಕ್ಟ್ ಈಸ್ಟ್ ಪಾಲಿಸಿಯಲ್ಲಿ ಮ್ಯಾನ್ಮಾರ್ ಗೆ ಯಾಕಿಷ್ಟು ಮಹತ್ವ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕಾದರೆ ಆ ದೇಶದ ಬಗ್ಗೆ ಕೊಂಚ ತಿಳಿದುಕೊಳ್ಳುವುದು ಸೂಕ್ತ. ಜೇಡ್(ಪಚ್ಚೆ ರತ್ನ) ಮತ್ತು ಜೆಮ್ಸ್(ರತ್ನದ ಹರಳು), ತೈಲ, ನೈಸರ್ಗಿಕ ಅನಿಲಗಳಿಂದ ಸಂಪದ್ಭರಿತವಾದ ನಾಡು ಮ್ಯಾನ್ಮಾರ್. ಅಂದಾಜು 5.1 ಕೋಟಿ ಜನಸಂಖ್ಯೆ. ಶ್ರೀಮಂತ ಸಾಂಸ್ಕೃತಿಕ ಪರಂಪರೆ, ವಿಶೇಷವಾಗಿ ಬೃಹತ್ ದೇವಾಲಯಗಳು ಪ್ರೇರಣಾದಾಯಿಯಾಗಿ ಗಮನಸೆಳೆಯುತ್ತವೆ. ಅಷ್ಟೇ ಅಲ್ಲದೇ ಜನಸಂಖ್ಯೆಯ ಶೇ.88 ಭಾಗವೂ ಬೌದ್ಧ ಮತಾನುಯಾಯಿಗಳು ತುಂಬಿ ತುಳುಕುತ್ತಿರುವಂತಹ ರಾಷ್ಟ್ರವಲ್ಲದೇ 30 ಲಕ್ಷದಷ್ಟು ಭಾರತೀಯ ಮೂಲದವರಿದ್ದಾರೆ. ಮ್ಯಾನ್ಮಾರ್ ಜನರ ಪಾಲಿಗೆ ನಮ್ಮ ಭಾರತ “ಪವಿತ್ರ ಯಾತ್ರಾ ದೇಶ”. ಅಲ್ಲದೆ, ಎರಡೂ ರಾಷ್ಟ್ರಗಳು ಬಲಿಷ್ಠ ಐತಿಹಾಸಿಕ, ಸಾಂಸ್ಕೃತಿಕ ಮತ್ತು ಧಾರ್ಮಿಕ ನಂಟನ್ನು ಕೂಡ ಹೊಂದಿವೆ.

ಇನ್ನು ಗಡಿಯ ವಿಚಾರಕ್ಕೆ ಬಂದರೆ, ಮ್ಯಾನ್ಮಾರ್ ಭಾರತ ಜತೆಗಷ್ಟೇ ಅಲ್ಲ, ಚೀನಾ, ಬಾಂಗ್ಲಾದೇಶ, ಥಾಯ್ಲೆಂಡ್ ಮತ್ತು ಲಾವೋಸ್ ಜತೆಗೂ ಗಡಿ ಹಂಚಿಕೊಂಡಿದೆ. ಭಾರತದ ಜತೆಗೆ 1,600 ಕಿ.ಮೀ. ಉದ್ದದ ಸೂಕ್ಷ್ಮ ಹಾಗೂ ಸುಲಭ ಬೇಧ್ಯ ಭೂಗಡಿಯನ್ನು ಹೊಂದಿರುವ ಏಕೈಕ ಆಗ್ನೇಯ ಏಷ್ಯಾ ರಾಷ್ಟ್ರ ಮ್ಯಾನ್ಮಾರ್. ಅಲ್ಲದೆ, ಬಂಗಾಳ ಕೊಲ್ಲಿಯ ಮೂಲಕ ಸಾಗರ ಸಂಪರ್ಕವನ್ನೂ ಅದು ಭಾರತದ ಜತೆಗೆ ಹಂಚಿಕೊಂಡಿದೆ. ನಮ್ಮ ದೇಶದ ಈಶಾನ್ಯದ ನಾಲ್ಕು ರಾಜ್ಯಗಳು- ಅರುಣಾಚಲ ಪ್ರದೇಶ, ನಾಗಾಲ್ಯಾಂಡ್, ಮಣಿಪುರ, ಮಿಜೋರಂಗಳು ಮ್ಯಾನ್ಮಾರ್ ಜತೆಗೆ ಗಡಿಯನ್ನು ಹಂಚಿಕೊಂಡಿವೆ.

ಆದರೆ ಪ್ರತಿ ಭಾರಿ ಒಂದಲ್ಲ ಒಂದು ಉಪಟಳವನ್ನು ಸೃಷ್ಟಿಸುತ್ತಿರುವ ಚೀನಾ ಭಾರತಕ್ಕೆ ಮುಳುವಾಗಿದ್ದಂತೂ ಖಂಡಿತಾ. ಇನ್ನು ಭಾರತದ ಸೇನೆಯನ್ನು ಸುತ್ತುವರಿದು ಕುಟುಕುವುದಕ್ಕಾಗಿ ಚೀನಾ ರೂಪಿಸುತ್ತಿರುವ “ಸ್ಟಿಂಗ್ ಆಫ್ ಪರ್ಲ್ಸ್” ನೀತಿಯನ್ನು ಎದುರಿಸುವುದಕ್ಕೆ ಮ್ಯಾನ್ಮಾರ್ ಸಹಕಾರ ಭಾರತಕ್ಕೆ ಅತೀ ಅಗತ್ಯ. ಚೀನಾ ಕೂಡ ಮ್ಯಾನ್ಮಾರ್ ಜತೆಗೆ ದೀರ್ಘಕಾಲದ ಬಲಿಷ್ಠ ಹಾಗೂ ನಿಕಟ ಬಾಂಧವ್ಯ ಹೊಂದಿದೆ. ಚೀನಾದ ವ್ಯಾಪಾರ ಚಟುವಟಿಕೆಗಳು, ಅದು ನೀಡುತ್ತಿರುವ ಹಣಕಾಸಿನ ನೆರವು ಮತ್ತು ಕೈಗಾರಿಕೆ, ಮೂಲಸೌಕರ್ಯ ಅಭಿವೃದ್ಧಿಯ ಪಾಲುದಾರಿಕೆಗಳು ಮ್ಯಾನ್ಮಾರ್ ಜತೆಗಿನ ಸಂಬಂಧವನ್ನು ಇನ್ನಷ್ಟು ನಿಕಟವಾಗಿಸಿದೆ. ಅಷ್ಟೇ ಅಲ್ಲದೇ, ಮ್ಯಾನ್ಮಾರ್ ನ ತೈಲ ಮತ್ತು ನೈಸರ್ಗಿಕ ಅನಿಲಗಳ ಮುಖ್ಯ ಬಳಕೆದಾರನಾಗಿರಲು ಚೀನಾ ಬಯಸುತ್ತಿದೆ. ಅಲ್ಲದೆ, ಮ್ಯಾನ್ಮಾರನ ಸೇನೆಗೆ ಜೆಟ್ ಫೈಟರ್, ನೌಕೆಗಳು ಮತ್ತು ಶಸ್ತ್ರಾಸ್ತ್ರಗಳನ್ನು ಪೂರೈಸುವ ಪ್ರಮುಖ ರಾಷ್ಟ್ರ ಚೀನಾವೇ ಆಗಿದೆ. ಚೀನಾದ ನೆರವಿನೊಂದಿಗೆ ಮ್ಯಾನ್ಮಾರ್ ಬಂಗಾಳ ಕೊಲ್ಲಿಯ ಕ್ಯೌಕ್ ಪ್ಯೂನಲ್ಲಿ ಆಳ ಸಮುದ್ರ ಬಂದರು ನಿರ್ಮಿಸಿದೆ. ಭಾರತದ ಸ್ವಾಧೀನವಿರುವ ಅಂಡಮಾನ್ ದ್ವೀಪಕ್ಕೆ ಸಮೀಪವಿರುವ ಮ್ಯಾನ್ಮಾರ್ ನಿಯಂತ್ರಣದ ಗ್ರೇಟ್ ಕೊಕೊ ದ್ವೀಪದಲ್ಲಿ ಸೇನಾ ನೆಲೆಯನ್ನು ಚೀನಾ ಸ್ಥಾಪಿಸಿದೆ.

ಪ್ರಧಾನಿ ಮೋದಿಯವರ “ಆಕ್ಟ್ ಈಸ್ಟ್” ನೀತಿಯ ಯಶಸ್ಸಿಗೆ ಆಗ್ನೇಯ ಏಷ್ಯಾ ರಾಷ್ಟ್ರಗಳ ಜತೆಗಿನ ಸಂಪರ್ಕವೇ ಮುಖ್ಯವಾದುದು. ಏಷಿಯಾನ್ ರಾಷ್ಟ್ರಗಳ ಜತೆಗಿನ ಭಾರತದ ಸಂಪರ್ಕಕ್ಕೆ ಮ್ಯಾನ್ಮಾರ್ ಹೆಬ್ಬಾಗಿಲು. ಉಭಯ ರಾಷ್ಟ್ರಗಳಲ್ಲಿ ಶಾಂತಿ ಸುವ್ಯವಸ್ಥೆ ಮತ್ತು ಅಭಿವೃದ್ಧಿ ಆಗಬೇಕು ಎಂದರೆ, ಎರಡೂ ದೇಶಗಳ ಭದ್ರತೆ, ರಾಷ್ಟ್ರೀಯ ಹಿತಾಸಕ್ತಿಗಳನ್ನು ಗಮನಿಸಿ ಮುಂದುವರಿಯಬೇಕಾಗುತ್ತದೆ. ಇತ್ತೀಚಿನ ವರ್ಷಗಳಲ್ಲಿ ಮ್ಯಾನ್ಮಾರ್ ಜತೆಗಿನ ಭಾರತದ ಬಾಂಧವ್ಯ ವೃದ್ಧಿಯಾಗುತ್ತಿದೆ. ಇನ್ನೊಂದೆಡೆ ಚೀನಾದ ಜತೆಗಿನ ಮ್ಯಾನ್ಮಾರ್ ನಂಟು ಕಡಿಮೆಯಾಗತೊಡಗಿದೆ.

ಅಲ್ಲದೆ, ಮ್ಯಾನ್ಮಾರ್ ಜತೆಗಿನ ರಕ್ಷಣಾ ಸಂಬಂಧವನ್ನು ಬಲಗೊಳಿಸಿರುವ ಭಾರತ ಈಗಾಗಲೇ ಹಲವು ಸಿಬ್ಬಂದಿಗೆ ಭಾರತದಲ್ಲಿ ತರಬೇತಿ ನೀಡಿದೆ. ಇವೆಲ್ಲದರ ಜತೆಗೆ ತ್ರಿಪಕ್ಷೀಯ ಹೆದ್ದಾರಿ ಯೋಜನೆ-ವಿಶೇಷವಾಗಿ ಮಣಿಪುರದ ಮೊರೇಹ್ ನಿಂದ ಥಾಯ್ಲೆಂಡ್ ನ ಮಾಯೆ ಸೋಟ್ ಮೂಲಕ ಮ್ಯಾನ್ಮಾರ್‍ಗೆ ಸಂಪರ್ಕ ಕಲ್ಪಿಸುವ ಈ ಯೋಜನೆ ಜಾರಿಗೆ ಭಾರತ ತನ್ನ ಬದ್ಧತೆ ಪ್ರದರ್ಶಿಸಿದೆ. ಇದು ಪೂರ್ಣಗೊಂಡಾಗ ಆಗ್ನೇಯ ಏಷ್ಯಾ ರಾಷ್ಟ್ರಗಳ ಜತೆಗೆ ಭಾರತವನ್ನು ಜೋಡಿಸುವ ಬಹುದೊಡ್ಡ ಸಂಪರ್ಕ ಸೇತುವಾಗಲಿದೆ. ಆಕ್ಟ್ ಈಸ್ಟ್ ನೀತಿ ಜಾರಿಯ ಹಿಂದೆ ಆಂತರಿಕ ಬೇಗುದಿ ನಿಜವಾಗಿಯೂ ಶುರುವಾಗಿದ್ದು ನೆರೆಯ ಚೀನಾ ದೇಶಕ್ಕೆ. ಚೀನಾ ಪತ್ರಿಕೆಯ ಅಂಕಣಕಾರರು ಲುಕ್ ಈಸ್ಟ್ ಪಾಲಿಸಿಯನ್ನು “ದಾರಿ ತಪ್ಪಿದ ಚೀನಾದ ಭಯ” ಎಂದು ಜರಿಯುತ್ತಾ, ಹೊಸಬಾಟಲಿಯಲ್ಲಿ ಹಳೆಯ ವೈನ್ ಎಂದು ಟೀಕಿಸಿದ್ದಾರೆ.

ಚೀನಾಕ್ಕೆ ಭಯ ಶುರುವಾಗಿದ್ದೇ ಈ ಅಭಿವೃದ್ಧಿಯಿಂದ!!

ಏಷ್ಯಾ ಖಂಡದಲ್ಲಿ ಹಿಂದೆ ಕೇವಲ ಚೀನಾ ಜಪಾನ್ ಅಮೆರಿಕ ಮಾತ್ರ ಪ್ರಭುತ್ವ ಸಾಧಿಸಿರುವ ರಾಷ್ಟ್ರಗಳಾಗಿತ್ತು. ಆದರೆ ಈಗ ಆ ಜಾಗದಲ್ಲಿ ಭಾರತವು ಹೊಸ ಗೂಗ್ಲಿ ಆಟಗಾರನಾಗಿ ಹೊರಹೊಮ್ಮಿರುವುದು ಹೆಮ್ಮೆಯ ವಿಚಾರವಾಗಿದೆ!! ಆಗ್ನೇಯ ಏಷ್ಯಾ ರಾಷ್ಟ್ರಗಳ ಒಕ್ಕೂಟ (ಏಷಿಯಾನ್) ವು ಕಳೆದ ಹದಿನೈದು ವರ್ಷಗಳಿಂದಲೂ ಚೀನಾದೊಂದಿಗೆ ಸಮುದ್ರ ವಿವಾದಗಳ ಬಗ್ಗೆ ಒಮ್ಮತದ ತೀರ್ಮಾನಕ್ಕೆ ಬರಲು ಸಾಧ್ಯವಾಗಿರಲಿಲ್ಲ. ಆದರೆ ಯಾವಾಗ ಡೊಕ್ಲಾಂ ಗಡಿ ವಿವಾದದ ಪ್ರದೇಶದಿಂದ ಚೀನಾ ಹಿಂದೆ ಸರಿದು ಸೋಲನ್ನೊಪ್ಪಿಕೊಂಡಿತೋ ತದನಂತರ ಚೀನಾಗೆ ಭಯ ಆರಂಭಿಸಿದೆ!! ಅಷ್ಟೇ ಅಲ್ಲದೇ, ರಷ್ಯಾ, ಅಮೆರಿಕ, ಜಪಾನ್, ಕೊರಿಯಾ, ಆಸ್ಟ್ರೇಲಿಯಾದಂಥ ಬಲಾಢ್ಯ ದೇಶಗಳೊಂದಿಗೆ ಭಾರತದ ವಿಶ್ವಾಸ ವರ್ಧನೆ, ದೇಶದೊಳಗೆ ನೋಟ್ ಬ್ಯಾನ್, ಜಿಎಸ್‍ಟಿಗಳ ಬಗ್ಗೆ ವಿಶ್ವಬ್ಯಾಂಕ್ ಮೆಚ್ಚುಗೆ ಸೂಚಿಸಿರುವುದು ಇವೆಲ್ಲವೂ ಕೂಡ ಚೀನಾಕ್ಕೆ ನುಂಗಲಾರದ ತುತ್ತಾಗಿವೆ.

ಚೀನಾ, ಏಷ್ಯಾದ ಮಾರುಕಟ್ಟೆಯನ್ನು ಕಳೆದುಕೊಳ್ಳುವ ಸಂಭವ ಹಾಗೂ ಭಾರತದ ವರ್ಚಸ್ಸಿನ ಎದುರು ಮಂಕಾಗುವ ಭಯದಿಂದ ದಕ್ಷಿಣ ಚೀನಾ ಸಮುದ್ರದ ವಿಚಾರದಲ್ಲಿ ಮಾತುಕತೆಯ ಮೂಲಕ ಇತ್ಯರ್ಥಕ್ಕೆ ಬಂದಿರುತ್ತದೆ. ಇದರೊಂದಿಗೆ ದಕ್ಷಿಣ ಚೀನಾ ಸಮುದ್ರದ ಒಡೆತನದ ವಿವಾದಗಳನ್ನು ಮಾತುಕತೆಯ ಮೂಲಕ ಇತ್ಯರ್ಥ ಮಾಡಿಕೊಳ್ಳಲು ಮುಂದಾಗಿರುವುದು ದಕ್ಷಿಣ ಚೀನಾ ಶಾಂತವಾಗುವ ಲಕ್ಷಣಗಳು ಗೋಚರಿಸುತ್ತಿದೆ. ಆದರೆ ಭಾರತ ಎಂದಿಗೂ ಆಕ್ರಮಣಶೀಲ ನಡೆ ಪ್ರದರ್ಶಿಸಿಲ್ಲ. ಬದಲಿಗೆ ಸಹಭಾಗಿತ್ವದ ಅಭಿವೃದ್ಧಿ ಚಿಂತನೆ ತೋರಿದೆ.

ಔಷಧ,ಜವಳಿ, ಐಟಿ-ಬಿಟಿ, ಸಿನಿಮಾ, ಇಸ್ರೋದ ಕೃತಕ ಗ್ರಹಗಳ ಸಂಪರ್ಕ ಮುಂತಾದ ಸಂಪನ್ಮೂಲಗಳ ಉದಾರೀಕರಣ ನೀತಿಯು ಎಲ್ಲಾ ದೇಶಗಳಿಗೂ ವಿಸ್ತರಿಸುತ್ತಾ ಹಿಂದೂ ಮಹಾಸಾಗರದ ಸಾಗರೋತ್ತರ ವ್ಯಾಪಾರ ಸಂಪರ್ಕ ಚೀನಾಗಿಂತ ಭಾರತದ ಮೇಲೆ ನಿಧಾನವಾಗಿ ವಿಶ್ವಾಸದ ಅಲೆ ಮೂಡುವಂತೆ ಮಾಡಿದೆ. ಏಷಿಯನ್ ದೇಶಗಳೊಂದಿಗೆ ವ್ಯಾಪಾರ ಮತ್ತು ಹೂಡಿಕೆ ಹೆಚ್ಚಾಗುತ್ತಿದೆ. ಭಾರತವು 31ನೇ ಆಗ್ನೇಯ ಏಷ್ಯಾ ಶೃಂಗಸಭೆಯ ವೇದಿಕೆಯನ್ನು ಚೆನ್ನಾಗಿ ಬಳಸಿಕೊಂಡಿದೆ. ಮುಂದಿನ ದಿನಗಳಲ್ಲಿ ಆರ್ಥಿಕ ವಹಿವಾಟು ಮತ್ತು ಹೆಚ್ಚಿನ ಸಂಪರ್ಕವನ್ನು ಭಾರತವು ಮುಂದುವರಿಸುತ್ತದೆ. ದಕ್ಷಿಣ ಮತ್ತು ಆಗ್ನೇಯ ದೇಶಗಳು ಚೀನಾದ ಮೇಲಿನ ಅವಲಂಬನೆಯನ್ನು ಕಡಿಮೆಯಾಗುವ ರೀತಿ ಸಾಗರೋತ್ತರ ಸಹಕಾರದ ವ್ಯಾಪಾರ ವಹಿವಾಟು ವೃದ್ಧಿಸಲು ಸಹಕಾರಿಯಾಗಿದೆ. ಮೋದಿಯವರು ಭಾರತದ ದೀರ್ಘಕಾಲದ ಕಡಲತೀರದ ಭದ್ರತೆಯೆಡೆ ಅಗತ್ಯ ಗಮನಹರಿಸುತ್ತಿರುವುದರಿಂದ ಭಾರತದ ಆಯಕಟ್ಟಿನ ಭದ್ರತೆ ಹೆಚ್ಚುತ್ತಿದೆ.

ಜಪಾನ್ ದೇಶವು ಯಾವಾಗ ಭಾರತದ ಅಭಿವೃದ್ಧಿಗೆ ಕೈಜೋಡಿಸಿ ಬುಲೆಟ್ ಟ್ರೇನ್ ತಂತ್ರಜ್ಞಾನದ ಮೂಲಕ ಹತ್ತಿರವಾದಾಗ ಚೀನಾ ದೇಶಕ್ಕೆ ಆಕ್ಟ್ ಈಸ್ಟ್ ಪರಿಣಾಮ ಅರ್ಥವಾಗಿದ್ದು. ಅಫ್ಘಾನಿಸ್ತಾನದ ರಾಜತಾಂತ್ರಿಕ ವ್ಯವಹಾರಗಳಿಗೆ ಭಾರತವು ಪಾಕಿಸ್ತಾನವನ್ನು ಅವಲಂಬಿಸಬೇಕಾಗಿತ್ತು. ಎರಡೂ ದೇಶಗಳ ನಡುವೆ ಪಾಕಿಸ್ತಾನದ ಉಪಟಳಕ್ಕೆ ಉಭಯ ದೇಶಗಳ ಸಂಪರ್ಕಕ್ಕೆ ತೊಂದರೆಯಾಗುತ್ತಿತ್ತು. ಈಗ ಭಾರತ ತನ್ನ ನೀತಿಗಳಿಂದಾಗಿ ಇರಾನ್ ಮಾರ್ಗವಾಗಿ ಅಫ್ಘಾನಿಸ್ತಾನಕ್ಕೆ ಸಂಪರ್ಕ ಕಲ್ಪಿಸಿದೆ. ಇತ್ತೀಚೆಗೆ ಮ್ಯಾನ್ಮಾರ್ ರೋಹಿಂಗ್ಯ ನಿರಾಶ್ರಿತರ ವಿಷಯದಲ್ಲಿ ಚೀನಾ ಭಾರತದಷ್ಟು ಸ್ಪಂದಿಸದಿರುವುದು, ಸಹಜವಾಗಿ ಮ್ಯಾನ್ಮಾರ್ ದೇಶಕ್ಕೆ ಭಾರತದ ಮೇಲೆ ವಿಶ್ವಾಸ ಮೂಡುತ್ತಿದೆ. ಅಷ್ಟೇ ಅಲ್ಲದೇ ಭಾರತದಲ್ಲಿ ಚೀನಿ ವಸ್ತುಗಳ ಮೇಲೆ ನಿಷೇಧವಿಧಿಸಿದ್ದು ಕೂಡ ಚೀನಾಕ್ಕೆ ಆರ್ಥಿಕ ಸಂಕಷ್ಟವನ್ನುಂಟು ಮಾಡಿತ್ತು!!

ಭಾರತ ಕ್ರಿಸ್ತಪೂರ್ವದಿಂದಲೂ ಪೂರ್ವ ದೇಶಗಳೊಂದಿಗೆ ಹೆಚ್ಚಾಗಿ ಸಂಪರ್ಕ ಹೊಂದಿರುವುದನ್ನು ಕಂಡಿದ್ದೇವೆ!! ಅದರ ಜೊತೆಗೆ ಚೀನಾವು ತನ್ನ ದರ್ಪವನ್ನು ಮೆರೆಯುತ್ತಿದ್ದು, ಪಾಕಿಸ್ತಾನವನ್ನು ಬಳಸಿಕೊಂಡು ಭಾರತಕ್ಕೆ ಅನ್ಯಾಯವನ್ನು ಎಸಗುತ್ತಿದ್ದಿದ್ದೂ ಗೊತ್ತಿದೆ!! ಅದರ ಜೊತೆಗೆ ಭಾರತದಲ್ಲಿ ತಮ್ಮ ವ್ಯವಹಾರವನ್ನು ಅಭಿವೃದ್ಧಿಪಡಿಸಲು ಹಲವಾರು ಯೋಜನೆಗಳು ಹಾಕಿದ್ದಲ್ಲದೇ ಅವೆಲ್ಲವೂ ಕೂಡ ವಿಫಲಗೊಂಡು ಇದೀಗ ಚೀನಾ ಹಲ್ಲು ಕಿತ್ತ ಹಾವಿನಂತಾಗಿದೆ ಎಂದರೆ ತಪ್ಪಾಗಲಾರದು!! ಸದಾ ಭಾರತಕ್ಕೆ ತೊಂದರೆಯನ್ನು ನೀಡ ಬಯಸುತ್ತಿದ್ದ ಚೀನಾ ಮೋದಿಯವರ ಯಶಸ್ವಿ ಅಭಿವೃದ್ಧಿ ಯೋಜನೆಗಳಿಂದ, ಅಚಲ ನಿರ್ಧಾರಗಳಿಂದ ಚೀನಾಕ್ಕೆ ಭಯ ಕಾಡಿದ್ದಂತೂ ನಿಜ!!

ಕೃಪೆ: ವಿಶ್ವವಾಣಿ

– ಅಲೋಖಾ

https://www.vishwavani.news/analysis-2-12-2017/

Tags

Related Articles

Close