ಪ್ರಚಲಿತ

ಶ್ರೀನಿವಾಸ ಕಲ್ಯಾಣ, ಶಿವಮೆಚ್ಚಿದ ಕಣ್ಣಪ್ಪನಂತಹಾ ಚಿತ್ರದಲ್ಲಿ ನಟಿಸಿದ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಬಾಯಲ್ಲಿ ಇಂಥಾ ಮಾತಾ ಛೇ?  

ದೇವರ ಚಿತ್ರದ ಮೂಲಕ ಇಡೀ ರಾಜ್ಯದ ಜನತೆಯಲ್ಲಿ ದೇವರ ಬಗ್ಗೆ ಭಯ ಭಕ್ತಿ ಉಂಟಾಗುವಂತೆ ಮಾಡಿದ ಡಾ. ರಾಜಕುಮಾರ್ ಅವರ ಪುತ್ರ ಶಿವರಾಜ್ ಕುಮಾರ್ ಅವರ ಬಾಯಲ್ಲಿ ಇಂಥಾ ಮಾತುಗಳು ಖಂಡಿತಾ ಬರಬಾರದಿತ್ತು. ಶ್ರೀನಿವಾಸ ಕಲ್ಯಾಣ, ಶಿವಮೆಚ್ಚಿದ ಕಣ್ಣಪ್ಪನಂತಹಾ ದೇವರ ಚಿತ್ರಗಳ ಮೂಲಕ ಮನೆಮಾತಾಗಿದ್ದ ಶಿವರಾಜ್ ಕುಮಾರ್ ಯಾಕಾಗಿ ಈ ರೀತಿ ಮಾತಾಡಿದ್ದಾರೆ? ಛೆ!! ಯಾವ ನಾಲಿಗೆಯಲ್ಲಿ ಇಂಥಾ ಮಾತುಗಳು ಬಂದಿದೆ? ಅಷ್ಟಕ್ಕೂ ಶಿವರಾಜ್ ಕುಮಾರ್ ಅವರಿಗೆ ಏನಾಗಿದೆ? ನಿಮಗೆ ಇದೆಲ್ಲಾ ಬೇಕಿತ್ತೇ? ಒಂದು ವೇಳೆ ನೀವು ಕೂಡಾ ಇನ್ನೊಬ್ಬರ ಮನಸ್ಸನ್ನು ನೋಯಿಸುವಂತೆ ಚಿತ್ರ ಮಾಡಿದರೆ ನಿಮ್ಮ ಚಿತ್ರವನ್ನೂ ನೋಡದಂತೆ ತಡೆಯಲು ಗೊತ್ತು ನಮಗೆ. ನಿಮ್ಮ ಮೇಲೆ ನಾವೆಷ್ಟು ಗೌರವ ಇಟ್ಟುಕೊಂಡಿದ್ದೆವು ಗೊತ್ತಾ? ಆದರೆ ನೀವು ಎಲ್ಲವನ್ನೂ ಕಳೆದುಕೊಂಡು ಬಿಟ್ಟರಲ್ಲಾ ಸ್ವಾಮಿ.. ಛೆ ನೀವು ಹೀಗೆ ಮಾಡಬಾರದಿತ್ತು…

ಅಷ್ಟಕ್ಕೂ ನೀವು ಏನಂದಿರಿ ಸ್ವಾಮಿ? ಹಿಂದೂಗಳ ಮನಸ್ಸಿಗೆ ನೋವನ್ನುಂಟು ಮಾಡುವ `ಪದ್ಮಾವತಿ’ ಚಿತ್ರದ ಪರ ಬ್ಯಾಟಿಂಗ್ ಮಾಡಿದರಲ್ಲ ಮಾನ್ಯ ಶಿವರಾಜ್ ಕುಮಾರ್ ಅವರೇ ಛೇ ನೀವು ಹೀಗೆ ಮಾಡಿದ್ದು ಸರಿಯೇ? ಪದ್ಮಾವತಿ ಸಿನಿಮಾ ಬಿಡುಗಡೆಗೂ ಮುನ್ನ ಚಿತ್ರದ ಬಗ್ಗೆ ನಿರ್ಧಾರ ಮಾಡುವುದು ಸರಿಯಲ್ಲ ಅಂದಿರಲ್ಲಾ ನಿಮಗೆ ಪದ್ಮಾವತಿ ಬಗ್ಗೆ ಗೊತ್ತೇ ಸ್ವಾಮಿ? ರಜಪೂತ ವಂಶದ ದಿಟ್ಟ ಮಹಿಳೆಯನ್ನು ಅವಮಾನಿಸಿ ಚಿತ್ರ ಮಾಡಿದರೆ ಅದಕ್ಕೆ ನೀವು ಬೆಂಬಲ ನೀಡುತ್ತೀರೆಂದರೆ ಏನರ್ಥ? ನಿಮ್ಮ ಚಿತ್ರವನ್ನು ಇಡೀ ದೇಶದ ಜನರು ತುಂಬು ಹೃದಯದಿಂದ ಸ್ವೀಕರಿಸಿದ್ದಾರೆ.

ಆದರೆ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಮಾಡಿರುದು ಯಾವ ಸಿನಿಮಾ ಎಂದು ಗೊತ್ತೇ ನಿಮಗೆ? ಅಷ್ಟಕ್ಕೂ ನಿಮಗೆ ಪದ್ಮಾವತಿ ಅಂದರೆ ಯಾರು ಎಂದು ಅವರ ಕಥೆ ಗೊತ್ತಿದೆಯೇ?ಪತ್ರಿಕಾಗೋಷ್ಠಿಯಲ್ಲಿ ಮಾತಾಡಿದ ನೀವು ಚಿತ್ರ ಕಲಾವಿದರನ್ನು ಯಾವತ್ತು ಟಾರ್ಗೆಟ್ ಮಾಡಬಾರದು. ಈ ರೀತಿ ಮಾಡೋದು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ ತಂದಂತೆ ಎಂದು ಹೇಳಿದ್ರಲ್ಲಾ ಸ್ವಾಮಿ ಚಿತ್ರವನ್ನು ವಿರೋಧಿಸುವವರಿಗೂ ಅಭಿವ್ಯಕ್ತಿ ಸ್ವಾತಂತ್ರ್ಯ ಇದೆ ಎನ್ನುವುದನ್ನು ಮರೆತಿರಾ?

ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಅವರ ನಟನೆ ಅದ್ಭುತ ಅನ್ನಿಸುತ್ತದೆ. ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಒಳ್ಳೆ ಸಿನಿಮಾ ಮಾಡಿರುತ್ತಾರೆ ಎನ್ನುವ ನಂಬಿಕೆ ನಿಮಗಿದ್ದರೆ ಅದು ನಿಮ್ಮಲ್ಲೇ ಇರಲಿ. ಇನ್ನೊಬ್ಬರ ಮೇಲೆ ಹೇರುವ ಪ್ರಯತ್ನ ಮಾಡಬೇಡಿ. ರಜಪೂತ ಮಹಿಳೆಯನ್ನು ಅವಮಾನಿಸಿ ಚಿತ್ರ ಮಾಡಿದರೆ ಅದು ಒಳ್ಳೆ ಚಿತ್ರವೆಂದು ಯಾವ ಆಧಾರದಲ್ಲಿ ಸರ್ಟಿಫಿಕೆಟ್ ಕೊಡುತ್ತೀರಿ ಸ್ವಾಮಿ? ತನಗೆ ಚಿತ್ರ ನಿರ್ದೇಶಿಸಲು ಗೊತ್ತಿದೆ, ದುಡ್ಡು ಹಾಕುವವರು ಸಿಗುತ್ತಾರೆ, ಹಣಕ್ಕಾಗಿ ಯಾವ ನಟನೆಗೂ ಸಿದ್ದರಿದ್ದಾರೆ ಎಂಬ ಕಾರಣಕ್ಕೆ ಒಬ್ಬರನ್ನು ಪ್ರೋತ್ಸಾಹಿಸುವುದು ಎಷ್ಟು ಸರಿ?

ಶಿವರಾಜ್ ಕುಮಾರ್ ಅವರೇ ಬನ್ಸಾಲಿ ಮಾಡಹೊರಟಿರುವುದು ಎಂಥಾ ಸಿನಿಮಾವನ್ನು ಗೊತ್ತೇ? ಆ ಚಿತ್ರಕ್ಕೆ ಪ್ರೋತ್ಸಾಹ ನೀಡುತ್ತೀರಲ್ಲಾ ಅಷ್ಟಕ್ಕೂ ನಿಮಗೆ ಪದ್ಮಾವತಿಯ ಕಥೆ ಗೊತ್ತಿದೆಯಾ ಸ್ವಾಮಿ? ರಾಣಿ ಪದ್ಮಾವತಿ ಸತ್ತ ಮೇಲೂ ಅಲ್ಲಾವುದ್ದೀನ್ ಖಿಲ್ಜಿಗೆ ಆಕೆಯನ್ನು ಮುಟ್ಟಲಾಗಲಿಲ್ಲ. ಏಕೆಂದರೆ, ಪ್ರಾಣಕ್ಕಿಂತ ಮಾನ ರಕ್ಷಣೆ ಮುಖ್ಯ ಎಂದು ಆಕೆ 16,000 ಮಹಿಳೆಯರೊಂದಿಗೆ ಚಿತೆಗೆ ಹಾರಿ ಪ್ರಾಣಾರ್ಪಣೆ ಮಾಡಿದ್ದಳು. ಆದರೆ, ಬನ್ಸಾಲಿ ಮಾಡಿದ್ದೇನು? ಖಿಲ್ಜಿ ಪಾತ್ರದೊಂದಿಗೆ ರಾಣಿ ಪದ್ಮಾವತಿಯ ಪಾತ್ರ ರೋಮಾನ್ಸ್ ಮಾಡುವ ದೃಶ್ಯಗಳನ್ನು ಚಿತ್ರೀಕರಿಸುವ ಮೂಲಕ ಇತಿಹಾಸವನ್ನೇ ಉಲ್ಟಾಪಲ್ಟಾ ಮಾಡಿದ್ದಾರೆ ಎಂದು ನಿಮಗೆ ಗೊತ್ತಿದೆಯೇ ಸ್ವಾಮೀ?

ಇಷ್ಟಕ್ಕೂ ಸುಮ್ಮನಾಗದ ಬನ್ಸಾಲಿ ಮಾಡಿದ್ದೇನು ಗೊತ್ತೇ? `ಪದ್ಮಾವತಿ ಐತಿಹಾಸಿಕ ಸತ್ಯವಲ್ಲ, ಅದೊಂದು ಕಾಲ್ಪನಿಕ ಪಾತ್ರ’ ಎಂದು ಐಸಿಹಾಸಿಕ ವೀರವನಿತೆಯನ್ನು ಅವಮಾನ ಮಾಡಿದ್ದಾರೆ. ನಿಮಗೆ ಒಮ್ಮೆ ಪುರ್ಸೊತ್ತು ಇದ್ದರೆ ಒಮ್ಮೆ, ಚಿತ್ತೋಡಗಢಕ್ಕೆ ಬಂದು ನೋಡಿ. ಅಲ್ಲಿ ರಾಣಿ ಬಿಟ್ಟುಹೋಗಿರುವ ನೆನಪುಗಳು ಹೆಜ್ಜೆ-ಹೆಜ್ಜೆಗೂ ನಿಮಗೆ ಸಿಗುತ್ತವೆ.

ಪದ್ಮಾವತಿಯ ಸೌಂದರ್ಯದ ಬಗ್ಗೆ ರಾಘವ್ ಚೇತನ್ ಎಂಬ ದೇಶದ್ರೋಹಿ ವಾಮಾಚರ ಮಾಡುವವನ ಮಾತು ಕೇಳಿದ್ದ ಕಾಮುಕ ಅಲ್ಲಾವುದ್ದೀನ್ ಖಿಲ್ಜಿ ತನ್ನ ಸೈನ್ಯದೊಂದಿಗೆ ಚಿತ್ತೋಡಕ್ಕೆ ದಾಳಿ ಮಾಡುತ್ತಾನೆ. ರಾಜ ರತನ್ ಸಿಂಗ್ ದಿಕ್ಕುತೋಚದಾದ. ಖಿಲ್ಜಿ ಪದ್ಮಾವತಿಯ ಮುಖದರ್ಶನಕ್ಕಾಗಿ ಪಟ್ಟುಹಿಡಿದ. ಪದ್ಮಾವತಿಯ ಮುಖದರ್ಶನದ ಮುಖಾಂತರ ರಕ್ತಪಾತವನ್ನು ತಪ್ಪಿಸಬಹುದಾದರೆ ಹಾಗೇ ಮಾಡುವುದು ಒಳಿತು ಎಂದು ನಿರ್ಧರಿಸಿ ಆಕೆಯೊಂದಿಗೆ ರ್ಚಚಿಸಿದ.

ಮೊದಲಿಗೆ ಪದ್ಮಾವತಿ ಇದಕ್ಕೆ ಒಪ್ಪಲಿಲ್ಲ. ರಜಪೂತ್ ಮಹಿಳೆಯರು ಪರಪುರುಷರ ಮುಂದೆ ಬಂದು ನಿಲ್ಲುವುದು ಸಂಪ್ರದಾಯಕ್ಕೆ ವಿರುದ್ಧವಾದುದು ಎಂದಳು. ಆದರೆ, ಯುದ್ಧ ನಡೆದರೆ ಸಾವಿರಾರು ಜನರ ಪ್ರಾಣ ಹೋಗಬಹುದು ಎಂಬ ಪತಿಯ ಕಳವಳಕ್ಕೆ ಸ್ಪಂದಿಸಿದ ಆಕೆ ಉಪಾಯ ಹೂಡಿ, ಕನ್ನಡಿಯಲ್ಲಿ ತನ್ನ ಪ್ರತಿಬಿಂಬ ನೋಡಿಕೊಂಡು ಖಿಲ್ಜಿ ತೆರಳಲಿ ಎಂದು ಸೂಚಿಸುತ್ತಾಳೆ. ಇದಕ್ಕೆ ಖಿಲ್ಜಿಯೂ ಒಪ್ಪಿಕೊಳ್ಳುತ್ತಾನೆ. ಇದಕ್ಕಾಗಿ ಅರಮನೆಯ ಕೋಣೆಯೊಂದು ಸಿದ್ಧಗೊಂಡಿತು.

ಪದ್ಮಾವತಿ ತನ್ನ ಕೆಲ ಸಖಿಯರೊಡನೆ ಅರಮನೆ ಎದುರಿಗೆ ಇರುವ ಪುಟ್ಟ ಕೊಳದ ಬಳಿ ನಿಂತು ಆ ಕೋಣೆಯಲ್ಲಿ ತನ್ನ ಪ್ರತಿಬಿಂಬ ಕಾಣುವಂತೆ ಮಾಡುತ್ತಾಳೆ. ಆಕೆ ಪ್ರತಿಬಿಂಬ ನೋಡುತ್ತಿದ್ದಂತೆ ರಾಣಿಯನ್ನು ಹೇಗಾದರೂ ಮಾಡಿ ಪಡೆಯಲೇಬೇಕು ಎಂಬ ಹುಚ್ಚುಹಠ ಖಿಲ್ಜಿಯಲ್ಲಿ ಜಾಗೃತವಾಯಿತು.

ವಾಪಸ್ ತೆರಳುವ ನಾಟಕ ಮಾಡಿದ ಖಿಲ್ಜಿಯನ್ನು ಬೀಳ್ಕೊಡಲು ರತನ್ ಸಿಂಗ್ ಅರಮನೆಯ ಮಹಾದ್ವಾರದವರೆಗೂ ಹೋದ. ಅರಮನೆಯ ಏಳೂ ದ್ವಾರಗಳನ್ನು ದಾಟುತ್ತಿದ್ದಂತೆ ರತನ್ ಸಿಂಗ್‍ನನ್ನು ಸೆರೆಹಿಡಿಯಲು ಸೂಚಿಸಿದ ಖಿಲ್ಜಿ `ರಾಣಿಯನ್ನು ಒಪ್ಪಿಸಿದರೆ ಮಾತ್ರ ನಿನ್ನ ಪ್ರಾಣ ಉಳಿಯುತ್ತದೆ’ ಎಂದ. ಸುದ್ದಿ ತಿಳಿಯುತ್ತಿದ್ದಂತೆ ರಾಣಿ ಚಿಂತಾಕ್ರಾಂತಳಾದಳು. ಆದರೆ, ಆಕೆ ಭಾರಿ ಚತುರೆ ಮತ್ತು ಧೈರ್ಯಶಾಲಿ ಕೂಡ. ತಡಮಾಡದೆ, ತನ್ನ ಸಂಬಂಧಿಕರಾದ ಗೋರಾ ಮತ್ತು ಆತನ ಮಗ ಬಾದಲ್‍ನನ್ನು ಕರೆಸಿಕೊಂಡಳು. ಮತ್ತೊಂದು ತಂತ್ರ ಹೂಡಿದ ರಾಣಿ ಖಿಲ್ಜಿಗೆ ಪತ್ರವೊಂದನ್ನು ರವಾನಿಸಿದಳು.

`ರತನ್ ಸಿಂಗ್ ಪ್ರಾಣಕ್ಕೆ ಅಪಾಯ ಮಾಡಬಾರದು. ರಾಣಿ ಪದ್ಮಾವತಿ ತನ್ನ ಸಖಿಯರೊಂದಿಗೆ ಬೆಳಗ್ಗೆ ಖಿಲ್ಜಿಯ ಬಿಡಾರದತ್ತ ಬರಲಿದ್ದಾಳೆ. ಆದರೆ ಖಿಲ್ಜಿಯನ್ನು ಭೇಟಿಮಾಡುವ ಮುನ್ನ ಕೆಲಸಮಯ ರತನ್ ಸಿಂಗ್‍ನೊಂದಿಗೆ ಏಕಾಂತದಲ್ಲಿ ಇರಲು ಬಯಸಿದ್ದಾಳೆ” ಎಂದು ಆ ಪತ್ರದಲ್ಲಿ ಬರೆದಿತ್ತು. ಇದನ್ನು ಓದಿದ ಖಿಲ್ಜಿ ತಾನು ಗೆದ್ದೇಬಿಟ್ಟೆ ಎಂದುಕೊಂಡ.

ಮರುದಿನ ಬೆಳಗ್ಗೆ ನೂರು ಪಲ್ಲಕ್ಕಿಗಳು ಖಿಲ್ಜಿಯ ಬಿಡಾರಕ್ಕೆ ಬಂದು ಇಳಿದವು. ರಾಣಿ ಕುಳಿತಿರುವಳೆನ್ನಲಾದ ಪಲ್ಲಕ್ಕಿಯನ್ನು ರತನ್ ಸಿಂಗ್‍ನನ್ನು ಬಂಧಿಸಿಟ್ಟಿದ್ದ ಕೋಣೆಯಲ್ಲೇ ಇಳಿಸಲಾಯಿತು. ಆ ಪಲ್ಲಕ್ಕಿಯಿಂದ ಇಳಿದ ಬಾದಲ್ “ನೀವು ಇಲ್ಲಿಂದ ಕೂಡಲೇ ತೆರಳಿ. ನಿಮಗಾಗಿ ಅಶ್ವ ಹೊರಗೆ ಕಾದಿದೆ. ನಮ್ಮ ಪ್ರಾಣದ ಬಗ್ಗೆ ಚಿಂತೆ ಮಾಡಬೇಡಿ” ಎಂದ. ಆ ನೂರೂ ಪಲ್ಲಕ್ಕಿಗಳನ್ನು ಚಿತ್ತೋಡಗಢದ ಸೈನಿಕರೇ ಮಾರುವೇಷ ಧರಿಸಿ ಹೊತ್ತುಕೊಂಡಿದ್ದರು. ರತನ್ ಸಿಂಗ್ ಕುದುರೆ ಏರಿ ಅರಮನೆಯತ್ತ ತೆರಳುತ್ತಿದ್ದಂತೆ ಆತನ ಸೈನಿಕರು ಖಿಲ್ಜಿ ಸೇನೆಯ ಮೇಲೆ ಮುಗಿಬಿದ್ದರು. ಖಿಲ್ಜಿಗೆ ಇದರ ಅರಿವಾಗುವಷ್ಟರ ಹೊತ್ತಿಗೆ ರತನ್ ಸಿಂಗ್ ಅರಮನೆ ಸೇರಿಯಾಗಿತ್ತು.

ಆದರೆ, ಇದರಿಂದ ಮತ್ತಷ್ಟು ಕೆರಳಿದ ಖಿಲ್ಜಿ ಮತ್ತೆ ಚಿತ್ತೋಡಗಢ ಕೋಟೆಯನ್ನು ಸುತ್ತುವರಿದ. ಈ ಮುತ್ತಿಗೆ ಏಳು ತಿಂಗಳ ಕಾಲ ಮುಂದುವರಿಯಿತು. ಅಷ್ಟೊತ್ತಿಗಾಗಲೇ ಕೋಟೆಯಲ್ಲಿ ಸಂಗ್ರಹಿಸಿಡಲಾಗಿದ್ದ ಜೀವನಾವಶ್ಯಕ ವಸ್ತುಗಳೆಲ್ಲ ಖಾಲಿಯಾಗಿದ್ದವು. ಮಾಡು ಇಲ್ಲವೆ ಮಡಿ ಹೋರಾಟ ನಡೆಸಲು ನಿರ್ಧರಿಸಿ ರತನ್ ಸೈನಿಕರು ಖಿಲ್ಜಿ ಸೇನೆಯೊಂದಿಗೆ ಕಾದಾಟಕ್ಕೆ ಇಳಿದರು.

ಆದರೆ, ದೆಹಲಿಯ ದೊಡ್ಡ ಸೈನ್ಯದೆದುರು ಸೋಲಿನ ಸುಳಿವು ಸಿಗುತ್ತಿದ್ದಂತೆ ರಾಣಿ ಪದ್ಮಾವತಿ ಸೇರಿದಂತೆ 16 ಸಾವಿರ ಮಹಿಳೆಯರು ಖಿಲ್ಜಿ ಕೈಗೆ ಸಿಗಬಾರದು ಎಂದು ನಿರ್ಧರಿಸಿ 30 ಅಡಿಯ ಅಗ್ನಿಕುಂಡವನ್ನು ಸಿದ್ಧಪಡಿಸಿದರು. 16 ಅಲಂಕಾರಗಳಿಂದ ಶೃಂಗರಿಸಿಕೊಂಡು, ಮಂಗಲಗೀತೆಗಳನ್ನು ಹಾಡುತ್ತ ಅಗ್ನಿಕುಂಡಕ್ಕೆ ಹಾರಿ ದೇಹಾರ್ಪಣೆ ಮಾಡತೊಡಗಿದರು. ಯುದ್ಧಮುಗಿಸಿ ಇನ್ನಾದರೂ ಪದ್ಮಾವತಿ ಸಿಗಬಹುದು ಎಂಬ ಮೋಹದಿಂದ ಅರಮನೆಯೊಳಗೆ ಹೊಕ್ಕಿದ ಖಿಲ್ಜಿಗೆ ಸಿಕ್ಕಿದ್ದು ಬರೀ ಬೂದಿ. ಶವವನ್ನೂ ಆತ ಮುಟ್ಟುವಂತಾಗಬಾರದೆಂದು ನಿರ್ಧರಿಸಿಯೇ ಮಹಿಳೆಯರು ಅಗ್ನಿಗೆ ತಮ್ಮನ್ನು ಸಮರ್ಪಿಸಿಕೊಂಡರು.

ಇಂಥಾ ಪದ್ಮಾವತಿಯನ್ನು ಖಿಲ್ಜಿ ಜೊತೆ ರೊಮಾನ್ಸ್ ಮಾಡುವಂತೆ ಚಿತ್ರಿಸಿದರೆ ಯಾರಿಗಾದರೂ ಹೊಟ್ಟೆ ಉರಿಯದೆ ಇರುತ್ತದೆಯೇ ಸ್ವಾಮಿ? ಪ್ರಾಚೀನ ಕಾಲದಲ್ಲಿ ಹಿಂದೂ ಪರಿವಾರದಲ್ಲಿನ ಕುಲಾಚಾರದ ಸ್ತ್ರೀಯರು ಸಮಾಜದ ಮುಂದೆ ನರ್ತಿಸುವುದಾಗಲಿ ಅಥವಾ ಹಾಡುವುದಾಗಲಿ ಮಾಡುತ್ತಿರಲಿಲ್ಲ, ಬದಲಾಗಿ ಪ್ರಸಂಗ ಬಂದಾಗ ಖಡ್ಗ ಹಿಡಿದು ಶತ್ರುಗಳು ನರ್ತಿಸುವಂತೆ ಮಾಡುವ ವೀರನಾರಿಯರಾಗಿದ್ದರು. ಆದರೆ ಸಂಜಯ ಲೀಲಾ ಬನ್ಸಾಲಿಯು `ಪದ್ಮಾವತಿ ಚಲನಚಿತ್ರದಲ್ಲಿ `ಘೂಮರ್ ಹಾಡಿನಲ್ಲಿ ಮಹಾರಾಣಿ ಪದ್ಮಾವತಿಯು ನರ್ತಿಸುತ್ತಿರುವುದನ್ನು ತೋರಿಸಿ ಪದ್ಮಾವತಿಗೆ ಘೋರ ಅಪಮಾನವಾಗಿದೆ. ಇದು ನನ್ನಂತಹಾ ನೂರಾರು ಹಿಂದೂಗಳ ಸಿಟ್ಟಿಗೆ ಕಾರಣವಾಗಿದೆ.

ಬನ್ಸಾಲಿಯವರು ಈ ಹಿಂದೆಯೂ `ಬಾಜೀರಾವ್-ಮಸ್ತಾನಿ ಚಲನಚಿತ್ರದಲ್ಲಿ ಬಾಜೀರಾವ್ ಪೇಶ್ವೆಯವರ ಪತ್ನಿ ಕಾಶೀಬಾಯಿ ನರ್ತಿಸುವಂತೆ ತೋರಿಸಿದ್ದಾರೆ. ರಾಣಿ ಪದ್ಮಾವತಿ ಅಥವಾ ಕಾಶೀಬಾಯಿಯವರ ಇತಿಹಾಸದ ಬಗ್ಗೆ ಇರುವ ಯಾವುದೇ ಗ್ರಂಥದಲ್ಲಿ `ಅವರು ನರ್ತಿಸುತ್ತಿದ್ದರು ಎಂಬ ಉಲ್ಲೇಖ ಅಥವಾ ಸಾಕ್ಷ್ಯಗಳಿಲ್ಲದಿರುವಾಗ ಕಾಲ್ಪನಿಕ ಕಥೆ ಕಟ್ಟಿ ಪ್ರತ್ಯಕ್ಷವಾಗಿ ಇತಿಹಾಸದಲ್ಲಿ ಪರಿವರ್ತನೆ ಮಾಡುವುದು ಎಷ್ಟು ಸರಿ ಸ್ವಾಮಿ ಶಿವರಾಜ್? ಇತಿಹಾಸವನ್ನು ತಿರುಚಲು ಬನ್ಸಾಲಿಗೆ ಹಕ್ಕು ಕೊಟ್ಟಿದ್ದು ಯಾರು?

ಶಿವರಾಜ್ ಕುಮಾರ್ ಅವರೇ ನೀವು ಅಭಿವ್ಯಕ್ತಿ ಸ್ವಾತಂತ್ರ್ಯದ ಬಗ್ಗೆ ಅಷ್ಟುದ್ದು ಭಾಷಣ ಬಿಗಿಯುತ್ತೀರಲ್ಲಾ ನಿಮಗೆ ಅಭಿವ್ಯಕ್ತಿ ಸ್ವಾತಂತ್ರ್ಯ ದುರುಪಯೋಗ ಆಗಬಾರದು ಎಂದು ಗೊತ್ತಿಲ್ಲವೇ? ಅಭಿವ್ಯಕ್ತಿ ಸ್ವಾಂತಂತ್ರ್ಯದ ಹೆಸರಲ್ಲಿ ಇತಿಹಾಸದಲ್ಲಿ ತಿರುಚಲು ಸಂವಿಧಾನ ಅವಕಾಶ ಕೊಟ್ಟಿಲ್ಲ. ಆ ರೀತಿ ಮಾಡಿದರೆ ಅದು ಸಂವಿಧಾನಾತ್ಮಕ ಅಧಿಕಾರದ ದುರುಪಯೋಗ ಹಾಗೂ ಭಾ.ದ.ಸಂ. ಕಲಂ `295 ಅ’ ಗನುಸಾರ ಶಿಕ್ಷಾರ್ಹ ಅಪರಾಧವಾಗಿದೆ ಎನ್ನುವುದನ್ನು ಅರ್ಥ ಮಾಡಿಕೊಳ್ಳಿ ಸ್ವಾಮಿ…

ಶಿವರಾಜ್ ಕುಮಾರ್ ಅವರೇ ಬೆಂಕಿ ಜೊತೆ ಸರಸವಾಡುವ ಯಾವುದೇ ಕೆಲಸಕ್ಕೂ ಕೈಯಾಡಿಸಬೇಡಿ. ಪದ್ಮಾವತಿ ಚಿತ್ರ ಎನ್ನುವುದು ಸೂಕ್ಷ್ಮ ವಿಚಾರ. ಇದರ ಬಗ್ಗೆ ಕೋಟ್ಯಂತರ ಹಿಂದೂಗಳು ರೊಚ್ಚಿಗೆದ್ದಿದ್ದಾರೆ. ಕೋಟ್ಯಂತರ ಹಿಂದೂಗಳ ವಿರೋಧ ಕಟ್ಟಿಕೊಳ್ಳುವ ಯಾವುದೇ ಕೆಲಸವನ್ನು ಮಾಡಬೇಡಿ. ನೀವೇ ಏನೇ ಅಂದರೂ ನಾವಂತೂ ಈ ಚಿತ್ರವನ್ನು ನೋಡುವುದಿಲ್ಲ. ಈ ಚಿತ್ರ ಪ್ರದರ್ಶನಗೊಳ್ಳದಂತೆ ಜನರು ಯಾವ ರೀತಿ ರೊಚ್ಚಿಗೆದ್ದಿದ್ದಾರೆ ಎಂದು ಗೊತ್ತೇ? ಗೊತ್ತಿಲ್ಲದಿದ್ದರೆ ಪೇಪರ್ ಓದುವ ಅಭ್ಯಾಸ ಮಾಡಿಕೊಳ್ಳಿ. ಅದು ಬಿಟ್ಟು ಜನರೊಂದಿಗೆ ವಿರೋಧ ಕಟ್ಟಿಕೊಳ್ಳುವ ಹುಚ್ಚುತನ ಬೇಡ.

ಡಾ. ರಾಜ್‍ಕುಮಾರ್ ಬಗ್ಗೆ ನಮಗೆ ಹೆಮ್ಮೆ ಇದೆ. ಅವರೊಬ್ಬ ಮೇರು ಕಲಾವಿದ. ಅವರು ಈ ದೇಶಕ್ಕೆ ಯಾವ ಯಾವ ಚಿತ್ರಗಳನ್ನು ಕೊಡುಗೆಯಾಗಿ ಕೊಟ್ಟಿದ್ದಾರೆ ಎಂದು ಗೊತ್ತಿದೆ ತಾನೆ? ಅವರ ಚಿತ್ರವನ್ನು ನೋಡಿದಾಗ ದೇವರ ಬಗ್ಗೆ ಭಯ, ಭಕ್ತಿ ಉಂಟಾಗುತ್ತಿತ್ತು. ಅವರ ಚಿತ್ರದ ಮೂಲಕ ಎಷ್ಟೋ ಮಂದಿ ಸರಿದಾರಿಗೆ ಬಂದಿದ್ದಾರೆ. ಅವರು ಸ್ವತಃ ಆದರ್ಶವಾಗಿ ಬದುಕಿದ್ದಲ್ಲದೆ ಆದರ್ಶತನದ ಚಿತ್ರವನ್ನು ಜಗತ್ತಿಗೆ ನೀಡಿದ್ದಾರೆ.

ಅಂಥವರ ಪುತ್ರನಾಗಿ, ಕರ್ನಾಟಕಕ್ಕೆ ಒಳ್ಳೊಳ್ಳೆ ಚಿತ್ರಗಳನ್ನು ನೀಡಿರುವ ತಾವುಗಳು ಪದ್ಮಾವತಿ ಚಿತ್ರವನ್ನು ಬೆಂಬಲಿಸುವ ಮೂಲಕ ಜೇನುಗೂಡಿಗೆ ಕಲ್ಲುಹೊಡೆಯಬೇಡಿ. ರಾಜ್‍ಕುಮಾರ್ ಕುಟುಂಬಕ್ಕಿರುವ ಗೌರವ, ಘನತೆಯನ್ನು ಯಾವುದೋ ಕೆಲಸಕ್ಕೆ ಬಾರದ ಚಿತ್ರಕ್ಕೆ ಪ್ರೋತ್ಸಾಹ ನೀಡುವ ಮೂಲಕ ಹಾಳು ಮಾಡಬೇಡಿ. ಒಂದಾ ಜನತೆಯ ಭಾವನೆಗೆ ಬೆಲೆಕೊಟ್ಟು ಪದ್ಮಾವತಿ ಚಿತ್ರವನ್ನು ವಿರೋಧಿಸಿ, ಅದು ಸಾಧ್ಯವಾಗದಿದ್ದರೆ ಬಾಯಿಗೆ ಬೀಗ ಹಾಕಿ ಸುಮ್ಮನಿರಿ…

source:http://publictv.in/actor-shivarajkumar-support-bollywood-film-padmavati/

-ಚೇಕಿತಾನ

Tags

Related Articles

Close