ಪ್ರಚಲಿತ

ಬಿಗ್ ಬ್ರೇಕಿಂಗ್! ಸಿಎಂ ಎದುರಲ್ಲೇ ಕಿತ್ತಾಡಿಕೊಂಡ ಸಚಿವರುಗಳು! ಕಾಂಗ್ರೆಸ್‍ಗೆ ಶಾಪವಿಟ್ಟ ಸ್ವಾಮೀಜಿ! ಧರ್ಮ ವಿಭಜನೆಗೆ ಮತ್ತೆ ಸಂಕಷ್ಟ!

ತಾನು ತೋಡಿದ ಖೆಡ್ಡಾಕ್ಕೆ ತಾನೇ ಬೀಳೋದು ಅಂದ್ರೆ ಇದೇ ಅಲ್ವಾ? ಲಿಂಗಾಯತ ವೀರಶೈವರು ಭಾರತೀಯ ಜನತಾ ಪಕ್ಷದ ಪರವಾಗಿ ಇದ್ದಾರೆ ಎಂಬ ಏಕೈಕ ಕಾರಣಕ್ಕಾಗಿ ಅದನ್ನು ಒಡೆಯಲು ಮುಂದಾಗಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ನೀರಾವರಿ ಸಚಿವ ಎಂ.ಬಿ.ಪಾಟೀಲ್ ಈಗ ಅಕ್ಷರಷಃ ಇಕ್ಕಟ್ಟಿಗೆ ಸಿಲುಕಿದ್ದಾರೆ. ಧರ್ಮ ವಿಭಜನೆಯ ಕಾರ್ಯವನ್ನು ಮುಂದಿಟ್ಟುಕೊಂಡು ಆಟ ಆಡಲು ಶಸ್ತ್ರ ಸನ್ನದ್ಧರಾದ ಕಾಂಗ್ರೆಸ್ ಸರ್ಕಾರಕ್ಕೆ ಈಗ ಅದೇ ಧರ್ಮ ಅವರ ರಾಜಕೀಯ ಅಂತ್ಯಕ್ಕೂ ನಾಂದಿ ಹಾಡುವ ಲಕ್ಷಣಗಳೂ ಗೋಚರಿಸುತ್ತಿದೆ.

ಇಂದು ನಡೆಯಿತು ಪ್ರತ್ಯೇಕ ಧರ್ಮದ ಬಗ್ಗೆ ಸಭೆ…

ಇಂದು ಲಿಂಗಾಯತ ಜಾತಿಯನ್ನು ಪ್ರತ್ಯೇಕ ಧರ್ಮವನ್ನಾಗಿಸುವ ವಿಚಾರದ ಮೇಲೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸಂಪುಟ ಸಭೆಯನ್ನು ಕರೆದಿದ್ದರು. ಈ ಸಭೆಯಲ್ಲಿ ಲಿಂಗಾಯತ ಜಾತಿಯನ್ನು ಹಿಂದೂ ಧರ್ಮದಿಂದ ಪ್ರತ್ಯೇಕ ಧರ್ಮವನ್ನಾಗಿ ಮಾಡಬೇಕೋ ಬೇಡವೋ ಎಂಬ ವಿಚಾರದ ಮೇಲೆ ಚರ್ಚೆ ನಡೆದಿತ್ತು. ನ್ಯಾ.ನಾಗಮೋಹನ್ ದಾಸ್ ಅವರ ವರದಿಯನ್ನು ಕೇಂದ್ರಕ್ಕೆ ಶಿಫಾರಸ್ಸು ಸಲ್ಲಿಸುವ ವಿಚಾರವಾಗಿ ಇಂದಿನ ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ನಡೆದಿತ್ತು. ಆದರೆ ಮುಖ್ಯಮಂತ್ರಿಗಳಿಗೆ ಈ ಧರ್ಮ ಸಂಕಟ ಮಾತ್ರ ಬಹಳನೇ ಉರುಳಾಗಿ ಹೋಗಿದೆ.

ಸಿಎಂ ಎದುರೇ ಕಿತ್ತಾಡಿಕೊಂಡ ಸಚಿವರುಗಳು..!

ಇನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆದಿದ್ದ ಲಿಂಗಾಯತ ಪ್ರತ್ಯೇಕ ಧರ್ಮದ ವಿಚಾರವಾಗಿದ್ದ ಸಭೆಯಲ್ಲಿ 2 ಬಣಗಳ ಸಚಿವರ ನಡುವೆಯೇ ಭಾರೀ ಕಿತ್ತಾಟವೇ ನಡೆದಿತ್ತು. ಇಬ್ಬರು ಸಚಿವರು ಪ್ರತ್ಯೇಕ ಧರ್ಮದ ಪರವಾಗಿ ನಿಂತಿದ್ರೆ ಮತ್ತಿಬ್ಬರು ಸಚಿವರು ಪ್ರತ್ಯೇಕ ಧರ್ಮದ ವಿರೋಧ ಧ್ವನಿಯನ್ನು ಎತ್ತಿದ್ದರು. ಲಿಂಗಾಯತ ಪ್ರತ್ಯೇಕ ಧರ್ಮದ ಪರವಾಗಿ ಎಂ.ಬಿ.ಪಾಟೀಲ್ ಹಾಗೂ ಸಚಿವ ವಿನಯ್ ಕುಲಕರ್ಣಿ ಬ್ಯಾಟಿಂಗ್ ಮಾಡಿದ್ರೆ, ಯಾವುದೇ ಕಾರಣಕ್ಕೂ ಧರ್ಮವನ್ನು ಒಡೆಯಲು ನಾವು ಬಿಡೋದಿಲ್ಲ ಎಂದು ಸಚಿವ ಈಶ್ವರ್ ಖಂಡ್ರೆ ಹಾಗೂ ಎಸ್.ಎಸ್.ಮಲ್ಲಿಕಾರ್ಜುನ್ ಅಬ್ಬರಿಸಿದ್ದರು. ಈ ಸಚಿವರುಗಳ ಕಿತ್ತಾಟವನ್ನು ಕಂಡ ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ದಂಗಾಗಿ ಹೋಗಿದ್ದರು. ಯಾಕಪ್ಪಾ ನನಗೆ ಈ ಧರ್ಮದ ವಿಚಾರ ವಿಚಾರ ಬೇಕಿತ್ತು ಎಂದು ತಲೆಬಿಸಿ ಮಾಡಿಕೊಂಡಿದ್ದರು.

ಬಿಡೋದೇ ಇಲ್ಲ ಎಂದ ಮಲ್ಲಿಕಾರ್ಜುನ..!

ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಲಿಂಗಾಯತ ಪ್ರತ್ಯೇಕ ಧರ್ಮದ ವಿರುದ್ಧವಾಗಿ ಮಾತನಾಡಿದ್ದಾರೆ. ಯಾವುದೇ ಕಾರಣಕ್ಕೂ ಕೇಂದ್ರಕ್ಕೆ ಲಿಂಗಾಯತ ಪ್ರತ್ಯೇಕ ಧರ್ಮದ ವಿಚಾರವಾಗಿ ಕೇಂದ್ರಕ್ಕೆ ಶಿಫಾರಸ್ಸು ಸಲ್ಲಿಸಬಾರದು ಎಂದು ಕಿಡಿಕಾರಿದ್ದಾರೆ. ಲಿಂಗಾಯತ ಪ್ರತ್ಯೇಕ ಧರ್ಮ ಯಾವುದೇ ಕಾರಣಕ್ಕೂ ಆಗಬಾರದು. ನಾವೆಲ್ಲಾ ಒಂದೇ ಧರ್ಮದಲ್ಲಿ ಇರಬೇಕು. ಧರ್ಮ ಒಡೆಯುವ ವಿಚಾರಕ್ಕೆ ಅಡಿಪಾಯ ಹಾಕಿದವರೇ ನೀವು. ಎಲ್ಲಾ ಹಾಳ್ ಮಾಡಕ್ ಹತ್ತೀರಿ. ಧರ್ಮವನ್ನು ಒಡೆಯುವ ಕೆಲಸಕ್ಕೆ ನಾವು ಬೆಂಬಲ ನೀಡೋದಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.

ಸಚಿವ ಮಲ್ಲಿಕಾರ್ಜುನ ಅವರ ಮಾತಿಗೆ ಧ್ವನಿಗೂಡಿಸಿದ ಈಶ್ವರ್ ಖಂಡ್ರೆ ಪ್ರತ್ಯೇಕ ಧರ್ಮದ ವಿಚಾರ ಬಿಟ್ಟು ಬಿಡಿ. ಇದು ಯಾರಿಗೂ ಒಳ್ಳೆಯದಲ್ಲಿ. ನೀವು ಹೊರಗೆ ಹೋಗಿ ಏನು ಮಾತನಾಡಿಕೊಂಡು ಬಂದಿದ್ದೀರಿ ಎಂದು ನನಗೆ ಗೊತ್ತಿದೆ ಎಂದು ಹೇಳಿದ್ದಾರೆ.

ಸವಾಲೆಸೆದ ಎಂಬಿ ಪಾಟೀಲ್..!

ವಿರೋಧಿ ಬಣದ ಈ ಸಚಿವರ ಮಾತಿಗೆ ಕೆಂಡಾಮಂಡಲವಾದ ಲಿಂಗಾಯತ ಪ್ರತ್ಯೇಕ ಧರ್ಮದ ಪರವಾಗಿರುವ ಎಂಬಿ ಪಾಟೀಲ್ “ನಿಮ್ಮಿಂದ ಆಗದಿದ್ರೆ ಹೇಳಿ ನಾವು ಮಾಡಿ ತೋರಿಸ್ತೇವೆ. ನೀವು ಸುಮ್ಮನೆ ಅಡ್ಡ ಬಂದು ತೊಂದ್ರೆ ನೀಡಬೇಡಿ. ಎಲ್ಲಾ ನಿಮ್ಮಿಂದಾಗೆ ಹಾಳಾಗಿದ್ದು. ನಿಮ್ಮ ಅಗತ್ಯವೇ ಇಲ್ಲ. ಲಿಂಗಾಯತ ಅನ್ನೋದು ಬಸವಣ್ಣನ ಧರ್ಮ. ಅದು ಪ್ರತ್ಯೇಕವಾಗಲೇ ಬೇಕು” ಎಂದು ಆರ್ಭಟಿಸಿದ್ದಾರೆ. ಪಾಟೀಲರ ಈ ಮಾತಿಗೆ ಸಚಿವ ವಿನಯ್ ಕುಲಕರ್ಣಿ ಕೂಡ ಬೆಂಬಲಿಸಿ ಮಾತಿಗಿಳಿದಿದ್ದಾರೆ.

ಸಿಡಿದೆದ್ದ ಸಿಎಂ.!

ತನ್ನದೇ ಸಂಪುಟದ ಸಚಿವರುಗಳ ಇಂತಹ ವರ್ತನೆಯನ್ನು ನೋಡಿ ಬೇಸತ್ತ ಮುಖ್ಯಮಂತ್ರಿ ಸಿದ್ದರಾಮಯ್ಯ ಸಚಿವರನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ. ಸಲಹೆ ನೀಡ್ರಪ್ಪಾ ಅಂತಂದ್ರೆ ಸಣ್ಣ ಮಕ್ಕಳ ತರಹ ಕಿತ್ತಾಡ್ತೀರಾ. ಗುದ್ದಾಡೋದ್ರಿದ್ದ ಸಮಸ್ಯೆಗೆ ಪರಿಹಾರ ಸಿಗೋದಿಲ್ಲ. ಈ ವರ್ತನೆ ನಮಗೆ ಬೇಕಾಗಿಲ್ಲ. ಎಲ್ಲರೂ ಒಗ್ಗಟ್ಟಾಗಿ ಒಂದು ನಿರ್ಣಯಕ್ಕೆ ಬನ್ನಿ ಎಂದು ಅಬ್ಬರಿಸಿದ್ದಾರೆ.

ಜಾಣ್ಮೆ ಮೆರೆದ ಉಳಿದ ಸಚಿವರುಗಳು…

ಇನ್ನು ಸಂಪುಟ ಸಭೆಯಲ್ಲಿ ಭಾಗವಹಿಸಿದ್ದ ಉಳಿದ ಸಚಿವರುಗಳು ಜಾಣ್ಮೆಯನ್ನು ಮೆರೆದಿದ್ದಾರೆ. ಸಚಿವರುಗಳ ಕಿತ್ತಾಟವನ್ನು ಕಂಡಂತಹ ಉಳಿದ ಸಚಿವರುಗಳು ತಟಸ್ಥವಾಗಿದ್ದರು. ನಿಮ್ಮ ಅಭಿಪ್ರಾಯ ಹೇಳ್ರಪ್ಪಾ ಎಂದು ಕೇಳಿದ್ರೆ ನೀವೇ ನೋಡ್ಕೊಳ್ಳಿ ಸಾರ್ ಎಂದು ಮುಖ್ಯಮಂತ್ರಿಯ ವಿವೇಚನೆಗೆ ಬಿಟ್ಟಿದ್ದಾರೆ. ಈ ಮೂಲಕ ಪ್ರತ್ಯೇಕ ಲಿಂಗಾಯತ ಧರ್ಮದ ಪರವಾಗಿ 3 ಸಚಿವರುಗಳು ಹಾಗೂ ವಿರೋಧವಾಗಿ ಇಬ್ಬರು ಸಚಿವರುಗಳು ತಮ್ಮ ವಾದವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮುಂದೆ ಇಟ್ಟಿದ್ದಾರೆ.

ಶಾಪ ಇಟ್ಟ ರಂಭಾಪುರಿ ಶ್ರೀಗಳು..!

ಇನ್ನು ಪ್ರತ್ಯೇಕತೆಯ ವಿಚಾರವಾಗಿ ಸುದ್ಧಿಗೋಷ್ಟಿ ನಡೆಸಿದ ರಂಭಾಪುರಿ ಶ್ರೀಗಳು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. “ಬಸವಣ್ಣ ಕೇವಲ ಧರ್ಮ ಪ್ರಚಾರಕರಾಗಿದ್ದರು ಅಷ್ಟೆ. ಅವರು ಪ್ರತ್ಯೇಕ ಧರ್ಮ ಮಾಡಬೇಕು ಎಂದು ಎಂದೂ ಹೇಳಿಲ್ಲ. ಬಸವಣ್ಣನವರು ಹುಸಿ ನುಡಿಯಬೇಡ ಎಂದಿದ್ದರು. ಆದರೆ ರಾಜಕೀಯ ನಾಯಕರು ಮಾತ್ರ ಸುಳ್ಳನ್ನೇ ಹೇಳುತ್ತಿದ್ದಾರೆ. ಲಿಂಗಾಯತ ಪ್ರತ್ಯೇಕ ಧರ್ಮ ಸಾಧ್ಯನೇ ಇಲ್ಲ. ನಾವು ಶಾಂತಿಯುತ ಧರ್ಮಕ್ಕೆ ನಾಂದಿ ಹಾಡಬೇಕಾಗುತ್ತದೆ. ಸಿಎಂಗೆ ಎಲ್ಲವೂ ಗೊತ್ತಿದೆ. ಆದರೆ ಅವರು ಗೊತ್ತಿಲ್ಲದ ಹಾಗೆ ಮಾಡುತ್ತಿದ್ದಾರೆ ಅಷ್ಟೇ. ಖಾವಿ ಹಾಕಿದವರು ಎಲ್ಲರೂ ಸ್ವಾಮಿಗಳು ಆಗಲ್ಲ. ನಾವು ಸುಮ್ಮನಿದ್ದೇವೆ ಎಂದು ನಮ್ಮ ತಾಳ್ಮೆಯನ್ನು ಪರೀಕ್ಷಿಸಬೇಡಿ. ನಮ್ಮ ತಾಳ್ಮೆ ದೌರ್ಬಲ್ಯವಲ್ಲ. ನಾವು ತಾಳ್ಮೆಯ ಕಟ್ಟೆಯನ್ನು ಒಡೆದರೆ ನಿಮ್ಮಿಂದ ಅದನ್ನು ಊಹಿಸಲೂ ಸಾಧ್ಯವಿಲ್ಲ. ಮಠಾಧೀಶರು ಸ್ವಾರ್ಥಕ್ಕಾಗಿ ಹೋರಾಟ ಮಾಡುತ್ತಿದ್ದಾರೆ ಅಷ್ಟೆ. ಕಾಂಗ್ರೆಸ್ ಪಕ್ಷ ಉಳಿಯಬೇಕಾದರೆ ಸುಮ್ಮನಿದ್ದು ಬಿಡಿ. ಒಂದು ವೇಳೆ ಲಿಂಗಾಯತ ಪ್ರತ್ಯೇಕ ಧರ್ಮಕ್ಕೆ ಕೇಂದ್ರಕ್ಕೆ ಶಿಫಾರಸ್ಸು ಮಾಡಿದ್ದೇ ಆದ್ರೆ ನಾವು ಕಾಂಗ್ರೆಸ್ ವಿರುದ್ಧ ಪಾಠ ಕಳಿಸಬೇಕಾಗುತ್ತದೆ. ಕಾಂಗ್ರೆಸ್ ನಾಶ ಆಗೋ ದಿನ ದೂರ ಇಲ್ಲ” ಎಂದು ಹೇಳಿದ್ದಾರೆ. ಹುಬ್ಬಳ್ಳಿಯಲ್ಲಿ ಮಾತನಾಡಿದ ರಂಭಾಪುರಿ ಶ್ರೀಗಳು ಕಾಂಗ್ರೆಸ್ ವಿರುದ್ಧ ಹರಿಹಾಯ್ದಿದ್ದಾರೆ.

ಒಟ್ಟಾರೆ ಮುಖ್ಯಮಂತ್ರಿ ಸಿದ್ದರಾಮಯ್ಯರೇ ತಮ್ಮ ರಾಜಕೀಯ ಲಾಭಕ್ಕಾಗಿ ಹುಟ್ಟು ಹಾಕಿದ್ದ ಲಿಂಗಾಯತ ಪ್ರತ್ಯೇಕ ಧರ್ಮದ ವಿಚಾರ ಇದೀಗ ಸ್ವತಃ ತಾವೇ ಇಕ್ಕಟ್ಟಿಗೆ ಸಿಲುಕಿದ್ದಾರೆ. ರಾಜಕೀಯ ಬೇಳೆ ಬೇಯಿಸಲು ಮುಂದಾದ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ತಾವೇ ಪೇಚಿಗೆ ಸಿಲುಕಿದ್ದು ಕಾಂಗ್ರೆಸ್ ಪಕ್ಷ ಇದೇ ಧರ್ಮ ವಿಭಜನೆಯ ಮೂಲಕ ಸರ್ವನಾಶ ಆಗೋ ಭೀತಿಯೂ ಎದುರಾಗಿದೆ.

-ಸುನಿಲ್ ಪಣಪಿಲ

Tags

Related Articles

Close