ಪ್ರಚಲಿತ

ಸೂರ್ಯನ ಅಧ್ಯಯನಕ್ಕೆ ಆದಿತ್ಯ – L1 ಕಳುಹಿಸಿತು ಇಸ್ರೋ

ಚಂದ್ರಯಾನ -3 ರ ಬಳಿಕ ಇಸ್ರೋ ಇದೀಗ ಮತ್ತೊಂದು ಮಹತ್ವದ ಸಾಧನೆ ಮೆರೆದಿದೆ. ಚಂದ್ರನ ದಕ್ಷಿಣ ಭಾಗದಲ್ಲಿ ವಿಕ್ರಮ ಲ್ಯಾಂಡರ್, ಪ್ರಗ್ಯಾನ್ ರೋವರ್ ಇಳಿಸುವ ಮೂಲಕ ಸಾಧನೆ ಮಾಡಿದ್ದ ಇಸ್ರೋ, ಆ ಮೂಲಕ ಚಂದ್ರನ ದಕ್ಷಿಣ ಧ್ರುವ ತಲುಪಿದ ಮೊದಲ ರಾಷ್ಟ್ರ ಎನ್ನುವ ಖ್ಯಾತಿಗೂ ಭಾಜನವಾಗಿದೆ. ಅಂತಹ ಹೆಮ್ಮೆಯ ಇಸ್ರೋ ಈಗ ಸೂರ್ಯನ ಅಧ್ಯಯನಕ್ಕೆ ನೌಕೆ ಕಳುಹಿಸುವ ಮೂಲಕ ಮತ್ತೊಮ್ಮೆ ತನ್ನ ಸಾಮರ್ಥ್ಯ ಪ್ರದರ್ಶಿಸಿದೆ.

ಭಾರತದ ಹಿರಿಮೆ ಹೆಚ್ಚಾಗುವ ಮತ್ತೊಂದು ಮಹತ್ಕಾರ್ಯವನ್ನು ಇಂದು ಮಾಡಿದೆ. ಆದಿತ್ಯ-ಎಲ್1 ನೌಕೆಯನ್ನು ಸೂರ್ಯನ ಅಧ್ಯಯನ ನಡೆಸಲು ಇಸ್ರೋ ಇಂದು ಉಡಾವಣೆ ಮಾಡಿದೆ. ಆಂಧ್ರ ಪ್ರದೇಶದ ಶ್ರೀಹರಿಕೋಟಾದಿಂದ ಸೂರ್ಯನಲ್ಲಿಗೆ ಈ ನೌಕೆಯನ್ನು ಕಳುಹಿಸಲಾಗಿದೆ. ಪಿಎಸ್‌ಎಲ್‌ವಿ- ಸಿ57 ರಾಕೆಟ್ ಮೂಲಕ ಈ ನೌಕೆಯನ್ನು ಉಡಾಯಿಸಲಾಗಿದೆ.

ಇಂದು ಇಸ್ರೋ ಉಡಾವಣೆ ಮಾಡಿರುವ ನೌಕೆ ಎಲ್-1 ಬಿಂದುವಿನಲ್ಲಿ ನಿಯೋಜನೆಯಾಗಲಿದೆ. ಈ ನೌಕೆಯು ತನ್ನ 125 ದಿನಗಳ ಸುಧೀರ್ಘ ಪಯಣದ ನಂತರ ಸೂರ್ಯನನ್ನು ತಲುಪಲಿದೆ ಎಂದು ಇಸ್ರೋ ವಿಜ್ಞಾನಿಗಳು ಮಾಹಿತಿ ನೀಡಿದ್ದಾರೆ. ಭೂಮಿಯಿಂದ ಸುಮಾರು ಹದಿನೈದು ಲಕ್ಷ ಕಿಮೀ ಪ್ರಯಾಣದ ಬಳಿಕ ತನ್ನ ಗಮ್ಯವನ್ನು ತಲುಪಲಿದೆ. ಆ ಮೂಲಕ ಅತೀ ಹೆಚ್ಚು ಪ್ರಯಾಣ ನಡೆಸಿ ಗಮ್ಯ ತಲುಪುವ ಭಾರತದ ಮೊದಲ ನೌಕೆ ಎಂಬ ಹಿರಿಮೆಗೂ ಈ ನೌಕೆ ಪಾತ್ರವಾಗಲಿದೆ.

ಇಂದು ಶ್ರೀಹರಿಕೋಟಾದಿಂದ ಉಡಾವಣೆಯಾಗಲಿರುವ ರಾಕೆಟ್, ಆದಿತ್ಯ ಎಲ್-1 ನೌಕೆಯನ್ನು ಭೂಮಿಯ ಕೆಳ ಕಕ್ಷೆ‌ಗೆ ತಲುಪಿಸಲಿದೆ. ಅಲ್ಲಿ ಭೂಮಿಯ ಸುತ್ತ ಸುತ್ತಲಿರುವ ನೌಕೆಯು ಆ ಬಳಿಕ ಹಂತ ಹಂತವಾಗಿ ಧೀರ್ಘ ವೃತ್ತಾಕಾರದ ಕಕ್ಷೆಗೆ ಬದಲಾವಣೆ ಮಾಡಲಾಗುತ್ತದೆ. ನಿರ್ಧಿಷ್ಟವಾದ ಕಕ್ಷೆಗೆ ತಲುಪಿದ ಬಳಿಕ ಈ ನೌಕೆಯು ತನ್ನ ಎಂಜಿನ್ ಶಕ್ತಿಯ ಬಲವನ್ನು ಉಪಯೋಗಿಸಿಕೊಂಡು ಗುರುತ್ವಾಕರ್ಷಣೆಯ ಶಕ್ತಿಯನ್ನೂ ಮೀರಿ ಎಲ್-1 ಬಿಂದುವಿನ ಕಡೆಗೆ ತಳ್ಳಲ್ಪಡಲಿದೆ.

ಈ ನೌಕೆಯಲ್ಲಿ ಏಳು ಉಪಕರಣಗಳಿದ್ದು, ಬಗೆ ಬಗೆಯಲ್ಲಿ ಅವುಗಳು ಕೆಲಸ ಮಾಡಲಿವೆ. ಆದಿತ್ಯನ ಕೊರೋನಾ ಭಾಗ ಮತ್ತು ಅಲ್ಲಿಂದ ಹೊರಹೊಮ್ಮುವ ಸೌರ ಶಾಖದ ಅಧ್ಯಯನ, ನೇರಳೆ ವಿಕಿರಣಗಳ ಪ್ರಮಾಣದ ಅಧ್ಯಯನ, ಸೌರ ಗಾಳಿ ಮತ್ತು ಶಕ್ತಿಯುತ ಅಯಾನುಗಳ ಅಧ್ಯಯನ, ಸೂರ್ಯ ಹಾಗೂ ಭೂಮಿಯ ನಡುವಿನ ಗುರುತ್ವ ಬಲದಿಂದ ಉಂಟಾಗಿರುವ ಎಲ್-1ರ ಗುರುತ್ವ ಬಲ ಇತ್ಯಾದಿಗಳನ್ನು ಒಳಗೊಂಡಂತೆ ಹಲವು ರೀತಿಯ ಅಧ್ಯಯನಗಳನ್ನು ಈ ನೌಕೆಯ ಸಹಾಯದಿಂದ ಇಸ್ರೋ ಸಂಸ್ಥೆ ನಡೆಸಲಿದೆ.

ಈ ನೌಕೆಯ ಯಶಸ್ವಿ ಉಡಾವಣೆ, ಗಮ್ಯ ಸೇರ್ಪಡೆಗೆ ಯಾವುದೇ ಅಡ್ಡಿ ಆತಂಕ ಗಳು, ಸಮಸ್ಯೆಗಳು ಎದುರಾಗದಂತೆ ಇಸ್ರೋ ಮುಖ್ಯಸ್ಥ ಎಸ್. ಸೋಮನಾಥ್ ಆಂಧ್ರಪ್ರದೇಶದ ಚೆಂಗಾಲಮ್ಮ ಪರಮೇಶ್ವರಿ ದೇಗುಲಕ್ಕೆ ತೆರಳಿ ಪೂಜೆ ಸಹ ಸಲ್ಲಿಸಿತ್ತು. ಈ ಯೋಜನೆಯ ಯಶಸ್ಸಿಗಾಗಿ ಪ್ರಾರ್ಥನೆ ಸಲ್ಲಿಸಿತ್ತು.

Tags

Related Articles

Close