ಪ್ರಚಲಿತ

ಹರಿಘಡವಾಗಿ ಬದಲಾಗಲಿದೆ ಅಲಿಘಡ: ಯುಪಿ ಸರ್ಕಾರದಿಂದ ಮಹತ್ವದ ನಿರ್ಧಾರ

ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯ ನಾಥ್ ಅವರ ಸರ್ಕಾರ ಹಲವಾರು ಮಹತ್ವದ ಮತ್ತು ದಿಟ್ಟ ಕ್ರಮಗಳ ಮೂಲಕವೇ ಭಾರತದಾದ್ಯಂತ ಹೆಸರುವಾಸಿಯಾಗಿದೆ. ಆ ರಾಜ್ಯದಲ್ಲಿ ಕೈಗೊಂಡ ಕೆಲವೊಂದು ಕ್ರಮಗಳು ನಿಜಕ್ಕೂ ದೇಶಕ್ಕೆ ಮಾದರಿ ಎಂಬಂತ್ತಿದ್ದು, ಇದರಲ್ಲಿ ಹಲವಾರು ನಗರಗಳ ಹೆಸರು ಬದಲಾವಣೆಯ ನೀತಿಯೂ ಒಂದು ಎನ್ನಬಹುದು.

ಈಗಾಗಲೇ ಸಿ ಎಂ ಯೋಗೀಜಿ ಅವರ ಸರ್ಕಾರ ಉತ್ತರ ಪ್ರದೇಶದಲ್ಲಿ ಈಗಾಗಲೇ ಬದಲಾಗಿ ಮುಸ್ಲಿಂ ಹೆಸರುಗಳಿಂದ ಗುರುತಿಸಲ್ಪಡುತ್ತಿದ್ದ ಹಲವಾರು ನಗರಗಳ ಹೆಸರನ್ನು ಬದಲಾಯಿಸಿ ಮರುನಾಮಕರಣ ಮಾಡಿರುವ ಸಂಗತಿ ಎಲ್ಲರಿಗೂ ಸಂಗತ. ಈಗ ಮತ್ತೊಂದು ನಗರದ ಹೆಸರನ್ನು ಬದಲಾವಣೆ ಮಾಡುವ ಮೂಲಕ ಯುಪಿ ಮತ್ತೊಮ್ಮೆ ಸುದ್ದಿಯಾಗಿದೆ.

ಉತ್ತರ ಪ್ರದೇಶದ ಅಲಿಘಡ ನಗರವನ್ನು ಹರಿಘಡ ಎಂಬುದಾಗಿ ಮರುನಾಮಕರಣ ಮಾಡಲು ಯೋಗಿ ಸರ್ಕಾರ ನಿರ್ಧರಿಸಿದೆ. ಅಲಿಘಡ ಮುನ್ಸಿಪಲ್ ಕಾರ್ಪೊರೇಶನ್ ಮರುನಾಮಕರಣ ಪ್ರಸ್ತಾವನೆಗೆ ಸಮ್ಮತಿ ಸೂಚಿಸಿದೆ. ಈ ಪ್ರಸ್ತಾಪವನ್ನು ಸರ್ಕಾರದ ಮುಂದಿಡಲಾಗಿದ್ದು, ಅಲಿಘಡ ಇನ್ನೇನು ಕೆಲವೇ ಸಮಯದಲ್ಲಿ ಹರಿಘಡವಾಗಿ ಬದಲಾಗಲಿದೆ. ಅಲ್ಲಿನ ಮುನ್ಸಿಪಲ್ ಕಾರ್ಪೊರೇಷನ್‌ನ ಎಲ್ಲಾ ಸದಸ್ಯರು ಈ ಪ್ರಸ್ತಾವನೆಗೆ ಸರ್ವಾನುಮತದಿಂದ ಸಮ್ಮತಿ ಸೂಚಿಸಿದ್ದಾರೆ.

ಈ ಬಗ್ಗೆ ಅಲ್ಲಿನ ಮುನ್ಸಿಪಲ್ ಕಾರ್ಪೊರೇಷನ್ ಮಾಹಿತಿ ನೀಡಿದ್ದು, ಇದು ನಮ್ಮ ಬಹುಕಾಲದ ಬೇಡಿಕೆಯಾಗಿದೆ. ಈ ನಗರದ ಹೆಸರಿನ ಮರುನಾಮಕರಣಕ್ಕೆ ನಾವು ಹಲವು ಬಾರಿ ಪ್ರಯತ್ನ ನಡೆಸಿದ್ದೇವೆ. ಹೋರಾಟ ಸಹ ನಡೆದಿತ್ತು. ಈ ಬಾರಿ ಮುನ್ಸಿಪಲ್ ಕೌನ್ಸಿಲ್ ಈ ಪ್ರಸ್ತಾವಕ್ಕೆ ‌ಸಮ್ಮತಿಸಿದೆ. ಸರ್ಕಾರ ಈ ಪ್ರಸ್ತಾವನೆಗೆ ಅಂಕಿತ ಹಾಕಿದಲ್ಲಿ ಈ ಮರುನಾಮಕರಣ ಪ್ರಕ್ರಿಯೆ ಪೂರ್ಣಗೊಳ್ಳಲಿದೆ ಎಂದು ತಿಳಿಸಿದೆ.

ಈ ಪಟ್ಟಣಕ್ಕೆ ಅಲಿಘಡ ಎಂಬ ಹೆಸರನ್ನು ಮೊಘಲರು ನೀಡಿದ್ದರು. ಆದರೆ ಹಿಂದೂ ಪುರಾಣಗಳಲ್ಲಿ ಅಲಿಘಡದ ಹೆಸರು ಹರಿಘಡ ಎಂದು ಉಲ್ಲೇಖವಾಗಿದ್ದು, ಇದೀಗ ಅದೇ ಹೆಸರನ್ನು ನಗರಕ್ಕೆ ಮತ್ತೆ ಇಡಲು ನಿರ್ಧರಿಸಿರುವುದಾಗಿದೆ. 1970 ರಿಂದಲೇ ಇದನ್ನು ಹರಿಘಡ ಎಂದು ಮರುನಾಮಕರಣ ಮಾಡಲು ಹೋರಾಟಗಳು ಸಹ ನಡೆದಿದ್ದು, ಈಗ ಈ ಪ್ರಸ್ತಾವನೆ ಸರ್ಕಾರಕ್ಕೆ ತಲುಪಿದೆ. ಸರ್ಕಾರದ ಅಧಿಕೃತ ಮುದ್ರೆ ಬಿದ್ದ ತಕ್ಷಣ ಈ ಪಟ್ಟಣ ಮತ್ತೆ ಹಳೆಯ ಹೆಸರಿನಿಂದ ವಿಜೃಂಭಿಸಲಿದೆ.

ಉತ್ತರ ಪ್ರದೇಶದಲ್ಲಿ ಅಲಹಾಬಾದ್ ನಗರವನ್ನು ಈ ಹಿಂದೆ ಪ್ರಯಾಗರಾಜ್ ಎಂದು ಮರುನಾಮಕರಣ ಮಾಡಿ ಸರ್ಕಾರ ಆದೇಶ ಹೊರಡಿಸಿತ್ತು. ಇದೀಗ ಅಲೀಘಡ ಸಹ ಹರಿಘಡವಾಗಿ ಬದಲಾಗುತ್ತಿದ್ದು ಸರ್ಕಾರದ ಈ ಕ್ರಮಕ್ಕೆ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗಿದೆ.

Tags

Related Articles

Close