ಪ್ರಚಲಿತ

ಎಲ್ಲಾ ವರ್ಗದ ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮುನ್ನಡೆಯುವ ಪಕ್ಷ ಬಿಜೆಪಿ

ಕಳೆದ ಹತ್ತು ವರ್ಷಗಳಲ್ಲಿ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ದೇಶದಲ್ಲಿ ಸಾಕಷ್ಟು ಬದಲಾವಣೆಗಳಿಗೆ ಸಾಕ್ಷಿಯಾಗಿದೆ. ದೇಶಕ್ಕೆ ಸಂಬಂಧಿಸಿದ ಹಾಗೆ ಯಾವುದೇ ರಾಜಿ ಮಾಡಿಕೊಳ್ಳದ ಹಾಗೆ, ಅತ್ಯಂತ ನಿಷ್ಟೆಯಿಂದ ಪ್ರಧಾನಿ ಮೋದಿ ಸರ್ಕಾರ ಕೆಲಸ ಮಾಡುತ್ತಿದ್ದು, ಈ ಕಾರಣದಿಂದಲೇ ಭಾರತ ಇಂದು ವಿಶ್ವ ಪ್ರಿಯ ರಾಷ್ಟ್ರವಾಗಿದೆ ಎಂದರೆ ತಪ್ಪಾಗಲಾರದು.

ಖಾಸಗಿ ಮಾಧ್ಯಮವೊಂದು ಪ್ರಧಾನಿ ನರೇಂದ್ರ ಮೋದಿ ಅವರ ಸಂದರ್ಶನ ನಡೆಸಿದ್ದು, ಇದರಲ್ಲಿ ಬಿಜೆಪಿ ಅವಧಿಯಲ್ಲಿ ಭಾರತದಲ್ಲಾಗಿರುವ ಬದಲಾವಣೆಯ ಕುರಿತು ಮತ್ತು ಇನ್ನಿತರ ಹಲವಾರು ಮಹತ್ವದ ಸಂಗತಿಗಳ ಬಗ್ಗೆ ಅವರು ಮಾತನಾಡಿದ್ದಾರೆ‌.

ಈ ಬಾರಿಯ ಲೋಕಸಭಾ ಚುನಾವಣೆಗೆ ಸಂಬಂಧಿಸಿದ ಹಾಗೆ ಮಾತನಾಡಿರುವ ಅವರು, ದಕ್ಷಿಣ ಭಾರತದ ಎಲ್ಲಾ ರಾಜ್ಯಗಳಲ್ಲೂ ಬಹುಮತ ಸಾಧಿಸುವ ನಿಟ್ಟಿನಲ್ಲಿ ಬಿಜೆಪಿ ಅವಿರತ ಪ್ರಯತ್ನಗಳನ್ನು ನಡೆಸುತ್ತಿದೆ. ಈ ಪೈಕಿ ಕರ್ನಾಟಕದ ಪರಿಸ್ಥಿತಿ ಬಿಜೆಪಿ ಪರವಾಗಿ ಆಶಾದಾಯಕವಾಗಿದೆ. ಇನ್ನುಳಿದ ಹಲವು ರಾಜ್ಯಗಳಲ್ಲಿ ಈ ವರೆಗೆ ಬಿಜೆಪಿ‌ಗೆ ನಿರೀಕ್ಷಿತ ಪ್ರಮಾಣದಲ್ಲಿ ಯಶಸ್ಸು ದೊರೆತಿಲ್ಲ. ಆದರೆ ಕೇಂದ್ರದಲ್ಲಿ ಬಿಜೆಪಿ ನಡೆಸಿದ ಅಭಿವೃದ್ಧಿಯ ರಾಜಕಾರಣ, ಕೇರಳದಲ್ಲಿ ಕಮ್ಯುನಿಸ್ಟ್ ಸರ್ಕಾರ ನಡೆಸಿದ ಹಗರಣ ಸೇರಿದಂತೆ ಇನ್ನೂ ಹಲವು ಅಂಶಗಳು ಈ ಬಾರಿಯ ಚುನಾವಣೆಯಲ್ಲಿ ದಕ್ಷಿಣ ರಾಜ್ಯಗಳಲ್ಲಿ ಹೆಚ್ಚಿನ ಪ್ರಮಾಣ ದಲ್ಲಿ ಸ್ಥಾನಗಳನ್ನು ಪಡೆಯಲು ಬಿಜೆಪಿ‌ಗೆ ಸಹಾಯ ಮಾಡುವ ಬಗ್ಗೆ ಅವರು ಭರವಸೆ ವ್ಯಕ್ತಪಡಿಸಿದ್ದಾರೆ.

ಚುನಾವಣೆಯನ್ನು ಆಧರಿಸಿ ನಾವು ಸೇವಾ ಕೈಂಕರ್ಯವನ್ನು ನಡೆಸುತ್ತಿಲ್ಲ. ಕೇರಳದಲ್ಲಿ ಈ ಹಿಂದೆ ವಿಪತ್ತು ಬಂದಾಗಲೂ ಅಲ್ಲಿ ಸೇವೆಗೆ ತೊಡಗಿಸಿಕೊಂಡಿದ್ದು ನಮ್ಮ ಜನರೇ. ಇದು ಎಡಪಂಥೀಯರ ಬುಡ ಅಲ್ಲಾಡುವ ಹಾಗೆ ಮಾಡಿದೆ. ಇದು ಮತದಾರರ ಮನಸ್ಸನ್ನು ಬದಲಾವಣೆ ಮಾಡಿದೆ. ವಿರೋಧಿಗಳು ವರ್ತನೆ ಜನರ ವಿಶ್ವಾಸ ಕಳಕೊಳ್ಳುವ ಹಾಗೆ ಮಾಡಿದೆ ಎಂದು ಅವರು ಹೇಳಿದ್ದಾರೆ.

2014 ರ ನಂತರ ನಮಗೆ ಸಿಗುವ ಮತಗಳಲ್ಲಿ ಧನಾತ್ಮಕ ಬದಲಾವಣೆ ಸಾಧ್ಯವಾಗಿದೆ. ಇದರ ಅರ್ಥ ಜನರಿಗೆ ನಮ್ಮ ಮೇಲೆ ವಿಶ್ವಾಸ ಇದೆ ಎಂದು‌. ನಾವು ಈಗ ಹೇಗೆ ಜನರ ಅಭಿವೃದ್ಧಿಗಾಗಿ ಕೆಲಸ ಮಾಡುತ್ತಿದ್ದೇವೆಯೋ, ಮುಂದೆಯೂ ಹಾಗೆಯೇ ಕಾರ್ಯ ನಿರ್ವಹಿಸುವ ಭರವಸೆಯನ್ನು ಪ್ರಧಾನಿ ಮೋದಿ ಅವರು ಇದೇ ಸಂದರ್ಭದಲ್ಲಿ ನೀಡಿದ್ದಾರೆ.

ಕೊರೋನಾ ಸಮಯದಲ್ಲಿ ಕೇರಳದ ಎಡಪಂಥೀಯ ಸರ್ಕಾರ ಸುಳ್ಳು ಹವಾ ಸೃಷ್ಟಿ ಮಾಡಿತು. ಕೊರೋನಾ ಸಮಯದಲ್ಲಿ ಸಮರ್ಪಕವಾಗಿ ಕೆಲಸ ಮಾಡಿದೆವು ಎಂದು ಸುದ್ದಿ ಹಬ್ಬಿಸಿದರು. ಆದರೆ ನಿಜವಾಗಿಯೂ ಹೆಚ್ಚು ಮಂದಿ ಕೊರೋನಾ‌ದಿಂದ ಸತ್ತದ್ದು ಕೇರಳದಲ್ಲೇ. ಅವರು ಮಾಧ್ಯಮಗಳನ್ನು ಬಳಸಿ ಸುಳ್ಳು ಹಬ್ಬಿಸಿದರು. ಆದರೆ ನಿಜಕ್ಕೂ ಅವರು ಕೊರೋನಾ ನಿಯಂತ್ರಣ ಮಾಡುವುದರಲ್ಲಿ ವಿಫಲರಾದರು ಎಂದು ಪ್ರಧಾನಿ ಮೋದಿ ವ್ಯಂಗ್ಯವಾಡಿದ್ದಾರೆ.

ಭಾರತೀಯ ಜನತಾ ಪಕ್ಷ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಮುನ್ನಡೆಯುವ ಪಕ್ಷ. ದೇಶದ ಎಲ್ಲಾ ವರ್ಗಗಳನ್ನೂ ಒಟ್ಟಾಗಿ ತೆಗೆದುಕೊಂಡು ಹೋಗಬೇಕು ಎನ್ನುವುದು ಬಿಜೆಪಿಯ ಮೂಲ ಸಿದ್ಧಾಂತ ಎಂದು ಅವರು ತಿಳಿಸಿದ್ದಾರೆ.

ಕರಾವಳಿ ಭಾಗದ ಮೀನುಗಾರರ ಸಹಾಯಕ್ಕಾಗಿ ನಮ್ಮ ಸರ್ಕಾರ ಮೀನುಗಾರಿಕಾ ಇಲಾಖೆ ತಂದಿದ್ದೇವೆ. ಇದನ್ನು ಜನರು ಸ್ವಾಗತಿಸಿದ್ದಾರೆ. ಅವರ ಆರ್ಥಿಕ ಸ್ಥಿತಿ ಉತ್ತಮವಾಗಲು ಮತ್ತು ಅವರಿಗೆ ಆಧುನಿಕ ತಂತ್ರಜ್ಞಾನದ ಲಾಭ ದೊರೆಯಲು ನಮ್ಮ ಸರ್ಕಾರ ಎಲ್ಲಾ ವ್ಯವಸ್ಥೆಗಳನ್ನು ಕಲ್ಪಿಸುತ್ತದೆ ಎಂದು ಅವರು ನುಡಿದಿದ್ದಾರೆ.

Tags

Related Articles

Close