ಪ್ರಚಲಿತ

ಸ್ವಾತಂತ್ರ್ಯ ಶತಮಾನದ ಸಮಯದಲ್ಲಿ ಭಾರತ ವಿಶ್ವದ ಅಗ್ರಗಣ್ಯ ರಾಷ್ಟ್ರವಾಗಬೇಕು: ಅಮಿತ್ ಶಾ

ನಮ್ಮ ದೇಶವನ್ನು ವಿಶ್ವದ ನಂ.1 ರಾಷ್ಟ್ರವನ್ನಾಗಿಸಲು, ಅಗ್ರಗಣ್ಯವಾಗಿಸುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಪಣ ತೊಟ್ಟಿದೆ. ಇದಕ್ಕಾಗಿ ಶ್ರಮವಹಿಸಿ ಕಾರ್ಯ ನಿರ್ವಹಿಸುತ್ತಿದೆ.

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಗುಜರಾತ್‌ನ ಕಲೋಲ್‌ನಲ್ಲಿ ಹೊಸದಾಗಿ ನಿರ್ಮಾಣ ಮಾಡಲಾಗಿರುವ ಶ್ರೀ ಸ್ವಾಮಿ ನಾರಾಯಣ ವಿಶ್ವ ಮಂಗಲ ಗುರುಕುಲದ ವೈದ್ಯಕೀಯ ಕಾಲೇಜನ್ನು ಉದ್ಘಾಟಿಸಿ ಮಾತನಾಡಿ, ಭಾರತ ತನ್ನ ಸ್ವಾತಂತ್ರ್ಯ ದಿನದ ಶತಮಾನದ ಆಚರಣೆಯನ್ನು ಮಾಡುವ ಸಂದರ್ಭದಲ್ಲಿ ಪ್ರತಿಯೊಂದು ಕ್ಷೇತ್ರದಲ್ಲಿಯೂ ಮೊದಲ ಸ್ಥಾನದಲ್ಲಿ ಇರುವಂತಾಗಬೇಕು. ಆ ವಿಶ್ವಾಸ ನಮಗಿದೆ ಎಂದು ಹೇಳಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಎನ್‌ಡಿಎ ಸರ್ಕಾರ ಭಾರತದ ಸಮಗ್ರ, ಸರ್ವತೋಮುಖ ಪ್ರಗತಿಯನ್ನು ಸಾಧಿಸಲು ಬದ್ಧವಾಗಿದೆ ಎಂದು ಅವರು ಭರವಸೆ ನೀಡಿದ್ದಾರೆ.

ಶಿಕ್ಷಣ ಕ್ಷೇತ್ರದಲ್ಲಿಯೂ ಭಾರತ‌ ದೊಡ್ಡ ಮಟ್ಟದಲ್ಲಿ ಪ್ರಗತಿ ಸಾಧಿಸಿದೆ. ಆಧುನಿಕತೆಗೆ ಒಗ್ಗಿಕೊಂಡಂತೆ ಶಿಕ್ಷಣ ಕ್ಷೇತ್ರದಲ್ಲಿ ಮಹತ್ವದ ಪ್ರಗತಿ, ಬದಲಾವಣೆಗಳು ಸಾಧ್ಯವಾಗಿದೆ. ಕಳೆದ ಹತ್ತು ವರ್ಷಗಳ ಅವಧಿಯಲ್ಲಿ ನಮ್ಮ ಸರ್ಕಾರ ಭಾರತದಲ್ಲಿ ವೈದ್ಯಕೀಯ ಶಿಕ್ಷಣ ಕ್ಷೇತ್ರವನ್ನು ಒಳಗೊಂಡ ಹಾಗೆ ಇತರ ವಿಷಯಗಳಲ್ಲಿನ ಉನ್ನತ ಶಿಕ್ಷಣ ಕ್ಷೇತ್ರದ ವ್ಯಾಪ್ತಿ ವಿಸ್ತರಿಸುವ ಜೊತೆಗೆ ಪಠ್ಯಕ್ರಮದಲ್ಲಿಯೂ ಬದಲಾವಣೆ ತಂದಿದೆ ಎಂದು ಅವರು ಹೇಳಿದ್ದಾರೆ.

ನವ ಉದ್ಯಮ, ಯುವ ಉದ್ಯಮಿಗಳಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿಯೂ ನಮ್ಮ ಸರ್ಕಾರ ಹಲವಾರು ಕಾರ್ಯಗಳನ್ನು ಮಾಡಿದೆ. ಅವರನ್ನು ಪ್ರೋತ್ಸಾಹಿಸುವ ಸಲುವಾಗಿ ಅದಕ್ಕೆ ಪೂರಕವಾದ ಪರಿಸರ ನಿರ್ಮಾಣಕ್ಕೂ ಗಮನ ಹರಿಸಲಾಗಿದೆ. ಸ್ಟಾರ್ಟ್‌ಅಪ್ ಗಳ ಅಗತ್ಯತೆಯನ್ನು ಮತ್ತು ಮಹತ್ವವನ್ನು ಸಹ ಅವರು ಇದೇ ಸಂದರ್ಭದಲ್ಲಿ ಒತ್ತಿ ಹೇಳಿದರು.

ಜೊತೆಗೆ ವಿದ್ಯಾರ್ಥಿಗಳಲ್ಲಿ ಭಾಷಾ ಕೀಳರಿಮೆ ಹೊರಟು ಹೋಗಬೇಕು. ಈ ನಿಟ್ಟಿನಲ್ಲಿ ನಮ್ಮ ಸರ್ಕಾರ ಹೊಸ ಶಿಕ್ಷಣ ನೀತಿಯನ್ನು ಜಾರಿಗೆ ತಂದಿರುವುದಾಗಿದೆ‌. ಇದು ಸ್ಥಳೀಯ ಭಾಷೆಗಳಲ್ಲಿಯೇ ವೈದ್ಯಕೀಯ ಶಿಕ್ಷಣ ಪಡೆಯುವುದಕ್ಕೂ ವಿದ್ಯಾರ್ಥಿಗಳಿಗೆ ಅನುಕೂಲ ಒದಗಿಸುತ್ತದೆ ಎಂದು ಅವರು ತಿಳಿಸಿದ್ದಾರೆ.

Tags

Related Articles

Close