ಪ್ರಚಲಿತ

ಜಾಗೃತ ಪೊಲೀಸ್ ಸಿಬ್ಬಂದಿಯಿಂದ ದೇಶದ ರಕ್ಷಣೆ: ಅಮಿತ್ ಶಾ

ನಮ್ಮ ರಾಷ್ಟ್ರದ ವೀರ ಯೋಧರು ಗಡಿಯಲ್ಲಿ ನಿಂತು ದೇಶವನ್ನು ರಕ್ಷಣೆ ಮಾಡುತ್ತಿದ್ದರೆ, ನಮ್ಮ ದೇಶದ ಪೊಲೀಸ್ ವ್ಯವಸ್ಥೆ ನಮ್ಮ ಸಮಾಜವನ್ನು, ಆಂತರಿಕದುಷ್ಟ ಶಕ್ತಿಗಳನ್ನು ನಿಗ್ರಹಿಸುವ, ಸಮಾಜದ, ಸಾರ್ವಜನಿಕ ಸ್ವಾಸ್ಥ್ಯ ಕೆಡದಂತೆ ರಕ್ಷಣೆ ಮಾಡುವ ಕೆಲಸವನ್ನು ಮಾಡುತ್ತಿದೆ. ಸಮಾಜಕ್ಕೆ ಕಂಟಕಪ್ರಾಯವೆನಿಸಿದ ಸಮಸ್ಯೆಗಳನ್ನು ತೊಡೆದು ಹಾಕುವಲ್ಲಿ ಪೊಲೀಸರ ಕರ್ತವ್ಯ ಪ್ರಶಂಸನೀಯ.

ಇಂದು ಪೊಲೀಸ್ ಸಂಸ್ಮರಣಾ ದಿನ. ಈ ಹಿನ್ನೆಲೆಯಲ್ಲಿ ದೆಹಲಿಯ ರಾಷ್ಟ್ರೀಯ ಪೊಲೀಸ್ ಸ್ಮಾರಕದಲ್ಲಿ ಹುತಾತ್ಮ ಯೋಧರಿಗೆ ಗೌರವ ನಮನವನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸಲ್ಲಿಸಿದರು.

ಬಳಿಕ ಮಾತನಾಡಿದ ಅವರು, ಕೆಚ್ಚೆದೆಯ ಪೊಲೀಸ್ ಸಿಬ್ಬಂದಿಗಳಿಂದಾಗಿ ಕಳೆದ ದಶಕದಲ್ಲಿ ಭಯೋತ್ಪಾದನೆ, ಉಗ್ರರ ದಾಳಿ, ಮಾವೋವಾದಿಗಳನ್ನು 65% ಗಳಷ್ಟು ಕಡಿಮೆ ಮಾಡಲು ಸಾಧ್ಯವಾಗಿದೆ. ಹಾಗೆಯೇ, ಭಯೋತ್ಪಾದನೆಯ ವಿರುದ್ಧ ಶೂನ್ಯ ಸಹಿಷ್ಣುತೆಯ ನೀತಿಯನ್ನು ಕಾಪಾಡಿಕೊಳ್ಳಲು ಕೇಂದ್ರ ಸರ್ಕಾರ ಕಟ್ಟುನಿಟ್ಟಾದ ಕಾನೂನುಗಳನ್ನು ಮಾತ್ರವಲ್ಲದೆ ಪೊಲೀಸ್ ವ್ಯವಸ್ಥೆಯನ್ನು ಸಹ ಆಧುನೀಕರಣ ಮಾಡುವಲ್ಲಿಯೂ ಗಮನಾರ್ಹ ಕೆಲಸ ಮಾಡಿರುವುದಾಗಿ ಹೇಳಿದ್ದಾರೆ.

ಜಾಗೃತ ಪೊಲೀಸ್ ಸಿಬ್ಬಂದಿ ಇಲ್ಲದೆ ಯಾವುದೇ ದೇಶ ಆಂತರಿಕ ಮತ್ತು ಬಾಹ್ಯ ಭದ್ರತೆ ಅಸಾಧ್ಯ. ಕಳೆದ ವರ್ಷದಲ್ಲಿ ಸುಮಾರು 188 ಪೊಲೀಸ್‌ ಸಿಬ್ಬಂದಿ ಹುತಾತ್ಮರಾಗಿದ್ದಾರೆ. ಈ ವರೆಗೆ ಮೂವತ್ತಾರು ಸಾವಿರ ಇನ್ನೂರೈವತ್ತು ಕೆಚ್ಚೆದೆಯ ಪೊಲೀಸರು ಹುತಾತ್ಮರಾಗಿದ್ದಾರೆ ಎಂದು ಅಮಿತ್ ಶಾ ಹೇಳಿದ್ದಾರೆ.

ದೇಶಕ್ಕಾಗಿ ಪೊಲೀಸ್‌ ಸಿಬ್ಬಂದಿ ಸಲ್ಲಿಸಿದ ತ್ಯಾಗ, ಸೇವೆಯನ್ನು ಸ್ಮರಿಸುವ ಸಲುವಾಗಿ ಪ್ರತಿ ವರ್ಷ ಅಕ್ಟೋಬರ್ 21 ನ್ನು ಪೊಲೀಸ್ ಸಂಸ್ಮರಣಾ ದಿನವಾಗಿ ಆಚರಣೆ ಮಾಡಲಾಗುತ್ತದೆ. ಪೊಲೀಸರ ತ್ಯಾಗ ರಾಷ್ಟ್ರೀಯ ಭದ್ರತೆ ಕಾಪಾಡುವ ನಿಟ್ಟಿನಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ ಎಂದು ಶಾ ತಿಳಿಸಿದ್ದಾರೆ.

Tags

Related Articles

Close