ಪ್ರಚಲಿತ

ದೆಹಲಿ ಸಿ.ಎಂ. ಕೇಜ್ರೀವಾಲ್‌ಗಾಗಿ ಪ್ರತ್ಯೇಕ ಕಾನೂನು ಸಿದ್ಧಪಡಿಸಬೇಕೇ?: ಅನುರಾಗ್ ಸಿಂಗ್ ಠಾಕೂರ್

ಭ್ರಷ್ಟಾಚಾರದ ವಿರುದ್ಧ ತೊಡೆ ತಟ್ಟಿ ಜನರನ್ನು ಮರಳು ಮಾಡಿ, ಅಧಿಕಾರ ಪಡೆದುಕೊಂಡ ಅರವಿಂದ ಕೇಜ್ರಿವಾಲ್ ಸದ್ಯ ಭ್ರಷ್ಟಾಚಾರಕ್ಕೆ ಸಂಬಂಧಿಸಿದ ಹಾಗೆ ಇ.ಡಿ. ಅಧಿಕಾರಿಗಳಿಂದ ಬಂಧನಕ್ಕೆ ಒಳಪಟ್ಟ ವಿಷಯ ಎಲ್ಲರಿಗೂ ಗೊತ್ತು. ಆ ಮೂಲಕ ಅಧಿಕಾರದಲ್ಲಿ ಇರುವಾಗಲೇ ಬಂಧಿಸಲ್ಪಟ್ಟ ಮೊದಲ ಸಿ ಎಂ ಎಂಬ ಕುಖ್ಯಾತಿಯನ್ನು ಸಹ ಪಡೆದಿದ್ದಾರೆ.

ಈ ವಿಚಾರಕ್ಕೆ ಸಂಬಂಧಿಸಿದ ಹಾಗೆ ಕೇಂದ್ರ ಸಚಿವ ಅನುರಾಗ್ ಸಿಂಗ್ ಠಾಕೂರ್ ಅವರು ಅರವಿಂದ ಕೇಜ್ರಿವಾಲ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. 

ಭ್ರಷ್ಟ ಮದ್ಯ ನೀತಿ ಹಗರಣಕ್ಕೆ ಸಂಬಂಧಿಸಿದ ಆಪಾದನೆಯಲ್ಲಿ ಭ್ರಷ್ಟಾಚಾರಿ ಅರವಿಂದ ಕೇಜ್ರಿವಾಲ್ ಜೈಲು ಪಾಲಾಗಿದ್ದಾರೆ. ಅವರಿಗೆ ಮತ್ತು ಅವರ ಪಕ್ಷದ ಇತರರಿಗೆ ಭಾರತದಲ್ಲಿ ಬೇರೆಯೇ ಕಾನೂನು ರೂಪಿಸಬೇಕೇ ಎಂದು ಠಾಕೂರ್ ಕೇಳಿದ್ದಾರೆ. 

ದೆಹಲಿಯ ಆಮ್ ಆದ್ಮಿ ಪಕ್ಷದ ಅರವಿಂದ ಕೇಜ್ರಿವಾಲ್, ಮನೀಶ್ ಸಿಸೋಡಿಯಾ, ಹಾಗೂ ಇತರ ಇಬ್ಬರು ಸಹೋದ್ಯೋಗಿಗಳು ಭ್ರಷ್ಟಾಚಾರ, ಅಕ್ರಮ ಹಣ ವರ್ಗಾವಣೆ ಆರೋಪದಲ್ಲಿ ಜೈಲು ಸೇರಿದ್ದಾರೆ. ಅವರು ಅಕ್ರಮ ಮದ್ಯ ನೀತಿ ಪ್ರಕರಣಕ್ಕೆ ಸಂಬಂಧಿಸಿದ ಭ್ರಷ್ಟಾಚಾರದಲ್ಲಿ ಈ ಶಿಕ್ಷೆಗೆ ಗುರಿಯಾಗಿರುವುದಾಗಿದೆ ಎಂದು ಠಾಕೂರ್ ಗಮನ ಸೆಳೆದಿದ್ದಾರೆ.

ಕಳೆದ ಹತ್ತು ವರುಷಗಳ ಹಿಂದೆ ಅರವಿಂದ ಕೇಜ್ರಿವಾಲ್ ಅವರು ‘ನಾನು ನನ್ನ ಮಕ್ಕಳ ಮೇಲೆ ಪ್ರಮಾಣ ಮಾಡುತ್ತೇನೆ. ನಾನು ರಾಜಕೀಯಕ್ಕೆ ಬರಲಾರೆ’ ಎಂದು ಹೇಳಿದ್ದರು. ಆ ಬಳಿಕ ರಾಜಕೀಯವನ್ನು ಪ್ರವೇಶಿಸಿದರು. ಆ ಬಳಿಕ ನಾನು ಯಾವುದೇ ಕಾರಣಕ್ಕೂ, ಎಂದಿಗೂ ಕಾಂಗ್ರೆಸ್ ಜೊತೆಗೆ ಕೈ ಜೋಡಿಸಲಾರೆ ಎಂದು ಹೇಳಿದ್ದರು. ಈಗ ಕಾಂಗ್ರೆಸ್ ಜೊತೆಗೆ ಮೈತ್ರಿ ಮಾಡಿಕೊಂಡಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.

ಹಾಗೆಯೇ ಆಮ್ ಆದ್ಮಿ ಪಕ್ಷ ಎಂದಿಗೂ, ಯಾವುದೇ ಕಾರಣಕ್ಕೂ ಭದ್ರತೆ ಪಡೆಯುವುದಿಲ್ಲ ಎಂದು ಹೇಳಿದ್ದರು. ಆದರೆ ಈಗ ಎರಡು ರಾಜ್ಯಗಳಲ್ಲಿ ಭದ್ರತೆ ಪಡೆದುಕೊಂಡಿದ್ದಾರೆ. ಜೊತೆಗೆ ಬಹಳ ಮುಖ್ಯವಾಗಿ ನಾನು ಭ್ರಷ್ಟಾಚಾರದ ವಿರುದ್ಧ ಹೋರಾಡುತ್ತೇನೆ ಎಂದು ಹೇಳಿದ್ದ ಅರವಿಂದ ಕೇಜ್ರಿವಾಲ್ ಇಂದು ಭ್ರಷ್ಟಾಚಾರ ನಡೆಸುವ ಮೂಲಕ ಜೈಲು ಸೇರಿದ್ದಾಗಿ ಅವರು ತಿಳಿಸಿದ್ದಾರೆ. ಇಂತಹವರಿಗೆ ನಾವು ಪ್ರತ್ಯೇಕ ಕಾನೂನು ರೂಪಿಸಬೇಕೇ ಎಂದು ಅವರು ಪ್ರಶ್ನೆ ಮಾಡಿದ್ದಾರೆ.

ಅರವಿಂದ ಕೇಜ್ರಿವಾಲ್ ಅವರ ಆಮ್ ಆದ್ಮಿ ಪಕ್ಷ ಭ್ರಷ್ಟಾಚಾರ ಮಾಡಿದೆ. ಅವರಿಗಾಗಿ ಪ್ರತ್ಯೇಕವಾದ ಕಾನೂನು ಬೇಕೇ? ಅವರ ಮಾಜಿ ಉಪಮುಖ್ಯಮಂತ್ರಿ ಕಳೆದ ಹದಿನೆಂಟು ತಿಂಗಳುಗಳಿಂದ ಜೈಲು ವಾಸದಲ್ಲಿದ್ದಾರೆ. ಕೇಜ್ರಿವಾಲ್ ಅವರಿಗೆ ಕ್ಲೀನ್ ಚಿಟ್ ನೀಡಬೇಕೇ ಎಂದು ಠಾಕೂರ್ ಕೇಳಿದ್ದಾರೆ.

Tags

Related Articles

Close