ಪ್ರಚಲಿತ

ಅಯೋಧ್ಯಾ ಬಾಲ ರಾಮ ವಿಗ್ರಹ ಕೆತ್ತನೆಗೆ ಕರ್ನಾಟಕದ ಇಬ್ಬರು ಶಿಲ್ಪಿಗಳು

ಮುಂದಿನ ವರ್ಷ ಜನವರಿಯಲ್ಲಿ ದೇಶದ ಬಹು ಕೋಟಿ ಜನರು ಕಾತರದಿಂದ ಕಾಯುತ್ತಿರುವ ಶ್ರೀರಾಮ ಜನ್ಮ ಭೂಮಿ ಅಯೋಧ್ಯೆಯ ರಾಷ್ಟ್ರ ಮಂದಿರ ರಾಮ ಮಂದಿರದ ಕಾರ್ಯ ಸಂಪೂರ್ಣಗೊಂಡು ಲೋಕಾರ್ಪಣೆಯಾಗಲಿದೆ ಎನ್ನುವ ಮಾಹಿತಿಯನ್ನು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಈಗಾಗಲೇ ನೀಡಿದ್ದಾರೆ.

ಈ ಹಿನ್ನೆಲೆಯಲ್ಲಿ ರಾಮ ಮಂದಿರ ನಿರ್ಮಾಣ ಕಾರ್ಯಗಳು ಸಹ ವೇಗ ಪಡೆದಿವೆ. ಈ ವರ್ಷದ ಡಿಸೆಂಬರ್ ತಿಂಗಳೊಳಗಾಗಿ ರಾಮ ಮಂದಿರದ ಗರ್ಭ ಗುಡಿ ನಿರ್ಮಾಣ ಕಾರ್ಯ ಸಂಪೂರ್ಣಗೊಳಿಸಿ ಬಾಲರಾಮನ ವಿಗ್ರಹದ ಪ್ರಾಣ ಪ್ರತಿಷ್ಟೆ ಕಾರ್ಯವನ್ನು ಸಂಪನ್ನಗೊಳಿಸುವ ನಿಟ್ಟಿನಲ್ಲಿಯೂ ಕೆಲಸಗಳು ಭರದಿಂದ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ರಾಜಸ್ಥಾನದ ಓರ್ವ ಶಿಲ್ಪಿ ಮತ್ತು ಕರ್ನಾಟಕದ ಇಬ್ಬರು ಶಿಲ್ಪಿಗಳು ಏಕಕಾಲಕ್ಕೆ ಪ್ರತ್ಯೇಕವಾಗಿ ಬಾಲರಾಮನ ವಿಗ್ರಹ ಕೆತ್ತನೆ ಕಾರ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.

ಈ ಬಗ್ಗೆ ವಿಎಚ್‌ಪಿಯ ಕೇಂದ್ರೀಯ ಸಹ ಕಾರ್ಯದರ್ಶಿ, ರಾಮ ಮಂದಿರ ನಿರ್ಮಾಣ ಕಾರ್ಯದ ಉಸ್ತುವಾರಿ ಗೋಪಾಲ್ ಅವರು ಮಾಹಿತಿ ನೀಡಿದ್ದಾರೆ. ಮೂರ್ತಿ ನಿರ್ಮಾಣ ಕಾರ್ಯ ಮುಗಿದ ಬಳಿಕ, ಅವುಗಳ ಪ್ರತಿಷ್ಟೆ, ಲೋಕಾರ್ಪಣೆಗೂ ಮುನ್ನ ಈ ವಿಗ್ರಹಗಳ ಪರಿಶೀಲನೆ ನಡೆಸಲಾಗುವುದು. ಶಿಲ್ಪಶಾಸ್ತ್ರ ಸಮ್ಮತವಾಗಿರುವ ಪ್ರತಿಮೆಯನ್ನು ಆಯ್ದು ಪ್ರತಿಷ್ಟೆ ಮಾಡಲಾಗುವುದು. ಒಬ್ಬ ಶಿಲ್ಪಿಯನ್ನೇ ಈ ಕಾರ್ಯಕ್ಕೆ ನೇಮಕ ಮಾಡಿದರೆ ಒಂದು ವೇಳೆ ಆ ಪ್ರತಿಮೆಯಲ್ಲೇನಾದರೂ ಲೋಪವಾದ ಪಕ್ಷ ಮತ್ತೊಂದರ ನಿರ್ಮಾಣಕ್ಕೆ ಮತ್ತೆ ಆರು ತಿಂಗಳು ಸಮಯ ಹಿಡಿಯುತ್ತದೆ.‌ ಈ ಹಿನ್ನೆಲೆಯಲ್ಲಿ ಮೂರು ಜನ ಶಿಲ್ಪಿಗಳಿಗೆ ಈ ಕೆಲಸವನ್ನು ವಹಿಸಿರುವುದಾಗಿ ಅವರು ಹೇಳಿದ್ದಾರೆ.

ಎಲ್ಲಾ ಅಡೆತಡೆಗಳನ್ನು ಮೀರಿ ಸುಂದರವಾದ ಶ್ರೀರಾಮ ಮಂದಿರದೊಳಗೆ ವಿರಾಜಮಾನನಾಗಬೇಕು ಎನ್ನುವ ಉದ್ದೇಶದಿಂದ ಇಂತಹ ನಿರ್ಣಯ ತೆಗೆದುಕೊಳ್ಳಲಾಗಿದೆ. ಒಂದು ವಿಗ್ರಹವನ್ನು ಗರ್ಭಗುಡಿಗೆ ಬಳಸಿ, ಉಳಿದ ಎರಡು ವಿಗ್ರಹಗಳನ್ನು ಮಂದಿರದ ಬೇರೆ ಕಡೆಗಳಲ್ಲಿ ಬಳಕೆ ಮಾಡಲಾಗುವುದು ಎಂದು ಅವರು ತಿಳಿಸಿದ್ದಾರೆ

Tags

Related Articles

Close