ಪ್ರಚಲಿತ

ರಕ್ಷಣಾ ಸಹಕಾರ ಭಾರತ – ಅಮೆರಿಕಾ ನಡುವಿನ ಸಂಬಂಧದ ಮುಖ್ಯ ಕೊಂಡಿ: ರಾಜನಾಥ್ ಸಿಂಗ್

ಭಾರತ ಮತ್ತು ಅಮೆರಿಕಾ ಗಳ ನಡುವಿನ ರಕ್ಷಣಾ ಸಹಕಾರ ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ಸಂಬಂಧದ ಪ್ರಮುಖ ಕೊಂಡಿಗಳಲ್ಲಿ ‌ಒಂದು ಎಂದು ರಕ್ಷಣಾ ಸಚಿವ ರಾಜನಾಥ್ ‌ಸಿಂಗ್ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಭಾರತ – ಅಮೆರಿಕ ‘2+2’ ಸಂವಾದ ಕಾರ್ಯಕ್ರಮ ನವದೆಹಲಿಯಲ್ಲಿ ನಡೆದಿದ್ದು, ಇದರಲ್ಲಿ ಭಾಗವಹಿಸಿ ಮಾತನಾಡಿದ ಅವರು ಈ ಮೇಲಿನ ಹೇಳಿಕೆ ನೀಡಿದ್ದಾರೆ. ಈ ಕಾರ್ಯಕ್ರಮದಲ್ಲಿ ಭಾರತದ ಪರ ಕೇಂದ್ರ ಸಚಿವರಾದ ರಾಜ ನಾಥ್ ಸಿಂಗ್ ಮತ್ತು ಎಸ್. ಜೈ ಶಂಕರ್ ಭಾಗವಹಿಸಿದ್ದರೆ, ಅಮೆರಿಕ ಪರವಾಗಿ ಅಮೆರಿಕದ ಸೆಕ್ರೆಟರಿ ಅ್ಯಂಟನಿ ಬ್ಲಿಂಕೆನ್ ಮತ್ತು ರಕ್ಷಣಾ ಕಾರ್ಯದರ್ಶಿ ಲಾಯ್ಡ್ ಅಸ್ಟಿನ್ ಭಾಗವಹಿಸಿದ್ದರು.

ರಕ್ಷಣಾ ವಲಯದಲ್ಲಿ ಸಾಮರ್ಥ್ಯ ವರ್ತನೆಯ ಕ್ಷೇತ್ರಗಳಲ್ಲಿ ನಾವು ಅಮೆರಿಕದ ಜೊತೆಗೆ ನಿಕಟವಾಗಿ ಸಂಪರ್ಕ ಇರಿಸಿಕೊಳ್ಳಲು, ಜೊತೆಯಾಗಿ ಕೆಲಸ ಮಾಡಲು ಬಯಸುವುದಾಗಿ ಅವರು ಹೇಳಿದ್ದಾರೆ.

ರಕ್ಷಣಾ ಕೈಗಾರಿಕೆಗಳ ಸಂಬಂಧವನ್ನು ಹೆಚ್ಚಿಸುವ ಮೂಲಕ ಜಾಗತಿಕವಾಗಿ ಕಾರ್ಯತಂತ್ರದ ವ್ಯಾಪ್ತಿ ಹೆಚ್ಚಿಸಲು, ಇಂಡೋ – ಪೆಸಿಫಿಕ್ ‌ನಲ್ಲಿನ ತೊಡಗಿಸಿಕೊಳ್ಳುವಿಕೆ ಹೆಚ್ಚಿಸಿಕೊಳ್ಳಲು, ಪ್ರಮುಖ ಖನಿಜಗಳು ಮತ್ತು ಉನ್ನತ ತಂತ್ರಜ್ಞಾನದಂತಹ ಪ್ರಮುಖ ಕ್ಷೇತ್ರಗಳಲ್ಲಿ ಅಮೆರಿಕದ ಜೊತೆಗೆ ನಿಕಟವಾಗಿ ಸಂಬಂಧ ಸಾಧಿಸಲು ಬಯಸುವುದಾಗಿ ರಾಜ ನಾಥ್ ಸಿಂಗ್ ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಉಭಯ ರಾಷ್ಟ್ರಗಳ ನಡುವೆ ಮಹತ್ವದ ಚರ್ಚೆ ನಡೆದಿರುವುದಾಗಿಯೂ ಅವರು ಹೇಳಿದ್ದಾರೆ.

ಇದೇ ಸಂದರ್ಭದಲ್ಲಿ ಮಾತನಾಡಿದ ಎಸ್. ಜೈ ಶಂಕರ್ ಅವರು, ಭಾರತದ ಪ್ರಧಾನಿ ಮೋದಿ ಅವರು ಮತ್ತು ಅಮೆರಿಕದ ಅಧ್ಯಕ್ಷ ಜೋ ಬೈಡನ್ ಅವರ ಮುಂದಾಲೋಚನೆಗಳನ್ನು ಮುನ್ನಡೆಸಲು ಮತ್ತು ಜಾಗತಿಕ ಕಾರ್ಯಸೂಚಿ ರಚಿಸಲು ಸಿಕ್ಕ ಅವಕಾಶ ಇದಾಗಿದೆ. ತಂತ್ರಜ್ಞಾನಗಳು, ನಾಗರಿಕ ಬಾಹ್ಯಾಕಾಶ ಸಹಯೋಗ, ಖನಿಜ ಕ್ಷೇತ್ರಗಳಿಗೆ ಸಂಬಂಧಿಸಿದ ಹಾಗೆ ಪರಸ್ಪರ ಸಹಕಾರವನ್ನು ಎದುರು ನೋಡುತ್ತಿರುವುದಾಗಿ ತಿಳಿಸಿದ್ದಾರೆ.

ಅಮೆರಿಕ ಪರ ಬ್ಲಿಂಕೆನ್ ಮಾತನಾಡಿ, ಉಭಯ ದೇಶಗಳ ಪಾಲುದಾರಿಕೆಯನ್ನು ಬಲಪಡಿಸುವ ಮೂಲಕ ಸಮೃದ್ಧ, ಮುಕ್ತ, ಸುರಕ್ಷಿತವಾದ ಇಂಡೋ – ಪೆಸಿಫಿಕ್ ನಿರ್ಮಾಣವನ್ನು ಸಾಧಿಸಲು ಪ್ರಯತ್ನ ನಡೆಸುತ್ತಿದ್ದೇವೆ. ಜೊತೆಗೆ ಅಂತರಾಷ್ಟ್ರೀಯ ಶಾಂತಿ, ಭದ್ರತೆ, ಸಾರ್ವಭೌಮತ್ವ, ಪ್ರಾದೇಶಿಕ ಸಮಗ್ರತೆ, ಸ್ವಾತಂತ್ರ್ಯವನ್ನು ಉತ್ತೇಜಿಸಲು ನಮ್ಮ ಪ್ರಯತ್ನ ಸಾಗಿದೆ ಎಂದು ನುಡಿದಿದ್ದಾರೆ.

ಭಾರತ ಮತ್ತು ಅಮೆರಿಕ ನಡುವಿನ ಬಾಂಧವ್ಯವನ್ನು ಮತ್ತಷ್ಟು ಹೆಚ್ಚಿಸಲು, ಭವಿಷ್ಯ ಮತ್ತು ಸುರಕ್ಷಿತ ಪ್ರಪಂಚ ನಿರ್ಮಾಣದ ಗುರಿ ನಮ್ಮದು ಎಂದು ಆಸ್ಟಿನ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Tags

Related Articles

Close