ಪ್ರಚಲಿತ

ಅಟಲ್ ಪಿಂಚಣಿ ಯೋಜನೆಯ ಮಾಸಿಕ ಪಿಂಚಣಿ ಮಿತಿಯನ್ನು ದ್ವಿಗುಣಗೊಳಿಸಲು ಮೋದಿ ಸರಕಾರದ ಚಿಂತನೆ! ಪಿಂಚಣಿ ಮಿತಿಯನ್ನು 10 ಸಾವಿರ ರುಪಾಯಿಗಳಿಗೇರಿಸುವತ್ತ ಕೇಂದ್ರ ಸರಕಾರದ ಚಿತ್ತ!!

 

ತಮ್ಮ ನಿವೃತ್ತ ಜೀವನವನ್ನು ನೆಮ್ಮದಿಯಿಂದ ಕಳೆಯುವಂತಾಗಲು ಮೋದಿ ಅವರು 2015 ರ ಆರ್ಥಿಕ ವರ್ಷದಲ್ಲಿ ಅಟಲ್ ಪಿಂಚಣಿ ಯೋಜನೆಯನ್ನು ಜಾರಿಗೆ ತಂದರು. ಈಗ ಕೇಂದ್ರ ಸರ್ಕಾರವು ಪ್ರಧಾನ ಮಂತ್ರಿ ಅಟಲ್ ಪೆನ್ಷನ್ ಯೋಜನೆಯಲ್ಲಿ ಮಾಸಿಕ ಪಿಂಚಣಿ ಮಿತಿಯನ್ನು ದ್ವಿಗುಣಗೊಳಿಸುವ ನಿಟ್ಟಿನಲ್ಲಿ ಚಿಂತನೆ ನಡೆಸುತ್ತಿದೆ ಎಂದು ಹೇಳಲಾಗಿದೆ. ವರದಿಗಳ ಪ್ರಕಾರ, ಫಲಾನುಭವಿಗಳಿಗೆ ಸಂಬಂಧಿಸಿದಂತೆ ಪಿಂಚಣಿ ಮೌಲ್ಯವನ್ನು ಹೆಚ್ಚಿಸುವ ಅವಶ್ಯಕತೆಯಿದೆ ಎಂದು ಹಣಕಾಸು ಸೇವೆಗಳ ವಿಭಾಗದ ಜಂಟಿ ಕಾರ್ಯದರ್ಶಿ ಮದ್ನೇಶ್ ಕುಮಾರ್ ಮಿಶ್ರಾ ಹೇಳಿದ್ದಾರೆ. ಪ್ರಸ್ತುತ ತಿಂಗಳಿಗೆ 1000-5000 ರುಪಾಯಿ ಮಾಸಿಕ ಪಿಂಚಣಿ ನೀಡಲಾಗುತ್ತಿದೆ.

ಕೇಂದ್ರ ಸರಕಾರ ಪಿಂಚಣಿ ಮಿತಿಯನ್ನು ಏರಿಸಿದರೆ ಪ್ರತಿ ತಿಂಗಳು 10,000 ರೂಗಳಷ್ಟು ಮಾಸಿಕ ಪಿಂಚಣಿ ಫಲಾನುಭವಿಗಳಿಗೆ ದೊರೆಯಲಿದೆ. ಪಿಂಚಣಿ ನಿಧಿಯ ನಿಯಂತ್ರಕ ಮತ್ತು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಹೇಮಂತ್ ಜಿ. ಕಾಂಟ್ರಾಕ್ಟರ್ ಈ ಮಿತಿಯನ್ನು ಹೆಚ್ಚಿಸುವ ಪ್ರಸ್ತಾಪವನ್ನು ಹಣಕಾಸು ಸಚಿವಾಲಯಕ್ಕೆ ಕಳುಹಿಸಿದ್ದಾರೆ ಎಂದು ವರದಿಯಾಗಿದೆ. ಇದುವರೆಗೂ ಐದು ಸ್ಲಾಬ್ ಗಳಲ್ಲಿ ಹೆಚ್ಚೆಂದರೆ ಐದು ಸಾವಿರ ರುಪಾಯಿಗಳವರೆಗೆ ಪಿಂಚಣಿ ನೀಡಲಾಗುತ್ತಿತ್ತು ಆದರೆ 20-30 ವರ್ಷಗಳ ನಂತರ 5000 ರುಪಾಯಿಗಳು ಯಾವ ಲೆಕ್ಕಕ್ಕೂ ಬರುವುದಿಲ್ಲ. ಆದ್ದರಿಂದ ಪಿಂಚಣಿ ಮಿತಿಯನ್ನು ಹೆಚ್ಚಿಸಬೇಕೆಂದು ಪದೆ ಪದೆ ಅಹವಾಲುಗಳು ಕೇಳಿ ಬರುತ್ತಿವೆ.

ಈ ಅಹವಾಲುಗಳನ್ನು ಗಂಭೀರವಾಗಿ ಪರಿಗಣಿಸಿರುವ ಸರಕಾರ ಪಿಂಚಣಿ ಮಿತಿಯನ್ನು ಹತ್ತು ಸಾವಿರ ರುಪಾಯಿಗಳ ಗರಿಷ್ಟ ಮಿತಿಗೆ ಏರಿಸಲು ಚಿಂತನೆ ನಡೆಸಿದೆ. ಇದರ ಜೊತೆಗೆ ಪ್ರಾಧಿಕಾರವು ಇನ್ನೂ ಎರಡು ಬೇಡಿಕೆಗಳನ್ನು ಈಡೇರಿಸುವಂತೆ ಹಣಕಾಸು ಸಚಿವಾಲಕ್ಕೆ ಕೇಳಿಕೊಂಡಿದೆ. ಮೊದಲನೆಯದು ಯೋಜನೆಗೆ ಸ್ವಯಂ-ದಾಖಲಾತಿಯನ್ನು ಖಾತರಿಪಡಿಸುವುದು ಮತ್ತು ಎರಡನೆಯದಾಗಿ ಗರಿಷ್ಟ ವಯಸ್ಸಿನ ಮಿತಿಯನ್ನು ಈಗಿರುವ 40 ವರ್ಷಗಳಿಂದ 50 ವರ್ಷಗಳಿಗೇರಿಸುವುದು. ಯೋಜನೆಯ ಅನ್ವಯ 60 ವರ್ಷ ವಯಸ್ಸಾದ ಮೇಲೆ ಪಿಂಚಣಿ ಪಡೆಯಲು ಫಲಾನುಭವಿಯು ಕನಿಷ್ಠ 20 ವರ್ಷಗಳ ಪ್ರೀಮಿಯಂ ಅನ್ನು ಪಾವತಿ ಮಾಡಿರಬೇಕು.

ಪಿಂಚಣಿ ದ್ವಿಗುಣಗೊಳಿಸುವ ಪ್ರಸ್ತಾವನೆಗೆ ಕೇಂದ್ರ ಹಸಿರು ನಿಶಾನೆ ತೋರಿದರೆ, ಈ ಯೋಜನೆಗೆ ಒಳಪಟ್ಟ ಎಲ್ಲಾ ಫಲಾನುಭವಿಗಳಿಗೆ 60 ವರ್ಷ ವಯಸ್ಸಾದ ಬಳಿಕ ಹತ್ತು ಸಾವಿರ ರುಪಾಯಿ ಮಾಸಿಕ ಪಿಂಚಣಿ ದೊರೆಯಲಿದೆ. ಇಳಿವಯಸ್ಸಿನಲ್ಲಿ ಯಾರ ಹಂಗೂ ಇಲ್ಲದೆ, ಮಕ್ಕಳ ಮುಂದೆ ಕೈಯೊಡ್ಡದೆ ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಲು ಇದೊಂದು ಅತ್ಯುತ್ತಮ ಯೋಜನೆ. ಮೂರು ವರ್ಷಗಳಲ್ಲಿ APY ಅಡಿಯಲ್ಲಿ ಒಟ್ಟು 1.02 ಕೋಟಿ ಜನರು ನೋಂದಾಯಿಸಿಕೊಂಡಿದ್ದಾರೆ ಮಾತ್ರವಲ್ಲ, ಪ್ರಸಕ್ತ ಹಣಕಾಸು ವರ್ಷದ ಅಂತ್ಯದ ವೇಳೆಗೆ ಕನಿಷ್ಠ 60 ರಿಂದ 70 ಲಕ್ಷ ಹೊಸ ಚಂದಾದಾರರು ಯೋಜನೆಗೆ ಸೇರಲಿದ್ದಾರೆ ಎಂದು ಪ್ರಾಧಿಕಾರ ವರದಿ ಮಾಡಿದೆ. ಈ ಯೋಜನೆಗೆ ಪ್ರತಿ ವ್ಯಕ್ತಿ ಕೇವಲ 210 ರುಪಾಯಿಗಳ ಮಾಸಿಕ ಕಂತು ಕಟ್ಟಿದರೆ ಸಾಕು! ಇಳಿವಯಸ್ಸಿನಲ್ಲಿ ಯಾರ ಮುಲಾಜಿಲ್ಲದೆಯೂ ಸ್ವಾಭಿಮಾನದಿಂದ ಬದುಕುವಂತಾಗುವುದೆ ಅಚ್ಛೆ ದಿನ್ ಎಂದೆಣಿಸುವುದಿಲ್ಲವೆ ನಿಮಗೆ?

-ಶಾರ್ವರಿ

Tags

Related Articles

Close