ಪ್ರಚಲಿತ

ಪ್ರಧಾನಿ ಮೋದಿ ಅವರ ಮೇಲೆ ವಿಶ್ವವೇ ನಂಬಿಕೆ ಇರಿಸಿದೆ: ಯೋಗಿ ಆದಿತ್ಯನಾಥ್

ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಪ್ರಧಾನಿ ಮೋದಿ ಮತ್ತು ಅವರ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಬೊಟ್ಟು ಮಾಡಿ ತೋರಿಸುವ ವಿರೋಧಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹತ್ರಾಸ್ ಮತ್ತು ಬುಲಂದ್‌ಶೆಹರ್‌ನಲ್ಲಿ ನಡೆದ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕಳೆದ ಹತ್ತು ವರ್ಷಗೊಲ ಹಿಂದೆ ದೇಶವನ್ನು ಆಳುತ್ತಿದ್ದ ಸರ್ಕಾರಗಳು ದೇಶದಲ್ಲಿ ಭಯೋತ್ಪಾದನೆಯ ಆಳ್ವಿಕೆಯನ್ನು ಅನಾವರಣ ಮಾಡುತ್ತಿದ್ದವು ಎಂದು ಹೇಳಿದ್ದಾರೆ. ಆ ಮೂಲಕ ವಿರೋಧ ಪಕ್ಷ ಕಾಂಗ್ರೆಸ್ ಅನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ಕೇಂದ್ರದಲ್ಲಿ ಉತ್ತಮ ಆಡಳಿತ ನಡೆಸುತ್ತಿದ್ದು, ವಿರೋಧಿಗಳು ಸುಖಾಸುಮ್ಮನೆ ಅವರ ಸರ್ಕಾರದ ವಿರುದ್ಧ ಬೊಟ್ಟು ಮಾಡಿ ತೋರಿಸುತ್ತಿದ್ದಾರೆ. ಇವರುಗಳು ಭಾರತದ ಅಭಿವೃದ್ಧಿಗೆ ತೊಡಕಿನ ಹಾಗೆ ಪರಿಣಮಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ವಿಕಸಿತ ಭಾರತ ಮತ್ತು ಸರ್ವಾಂಗೀಣ ಅಭಿವೃದ್ಧಿ ಪ್ರಧಾನಿ ಮೋದಿ ಅವರ ಭರವಸೆಯಾಗಿದೆ. ಅಭಿವೃದ್ಧಿ ಹೊಂದಿದ ನಮ್ಮ ದೇಶದಲ್ಲಿ ಪ್ರತಿಯೋರ್ವ ವ್ಯಕ್ತಿಯೂ, ಜಾತಿ, ಮತ, ಪಂಥ, ಸಮುದಾಯಗಳ ಯಾವುದೇ ತಾರತಮ್ಯ ಇಲ್ಲದೆ, ಎಲ್ಲಾ ಗೌರವಗಳನ್ನು, ಅವಕಾಶಗಳನ್ನು ಎಲ್ಲರೂ ಪಡೆಯುವಂತಾಗಬೇಕು. ಯಾವುದೇ ಜಾತಿಯ ತಾರತಮ್ಯ, ರಾಜವಂಶದ ಆಡಳಿತ ಇರಬಾರದು. ಎಲ್ಲರ ಅಭಿವೃದ್ಧಿ ಆಗಬೇಕು. ಇದು ಅಭಿವೃದ್ಧಿ ಹೊಂದಿದ ಭಾರತದ ಪರಿಕಲ್ಪನೆಯ ಆಧಾರ ಎಂದು ಅವರು ತಿಳಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರ ಪರಿಕಲ್ಪನೆ, ಭರವಸೆಗಳಲ್ಲಿ ಭಾರತಕ್ಕೆ ಮಾತ್ರವಲ್ಲ ಇಡೀ ವಿಶ್ವಕ್ಕೆ ನಂಬಿಕೆ ಇದೆ ಎಂದು ಅವರು ಹೇಳಿದ್ದಾರೆ.

ಉತ್ತರ ಪ್ರದೇಶದಲ್ಲಿ ಹಿಂದಿನ ಸರ್ಕಾರಗಳ ಆಳ್ವಿಕೆಯಲ್ಲಿ ಭಯೋತ್ಪಾದನೆ ಮೇಳೈಸುತ್ತಿತ್ತು. ಗಲಭೆ ನೀತಿಯನ್ನು ಅನುಸರಿಸಲಾಗುತ್ತಿತ್ತು ಎಂದು ಅವರು ತಿಳಿಸಿದ್ದಾರೆ. ಗಲಭೆ, ಕರ್ಫ್ಯೂ, ಕಾನೂನು ಬಾಹಿರ ಚಟುವಟಿಕೆಗಳು ಹೆಣ್ಣು ಮಕ್ಕಳು, ವ್ಯಾಪಾರಸ್ಥರಿಗೆ ಅಸುರಕ್ಷಿತ ವಾತಾವರಣವನ್ನು ಉಂಟು ಮಾಡಿತ್ತು. ಈಗ ಅಪರಾಧಿಗಳಿಗೆ ಶಿಕ್ಷೆ ಆಗುತ್ತಿದೆ. ಜನರು ಹೊಸ ಭದ್ರತೆಯಲ್ಲಿ ಜೀವಿಸುತ್ತಿದ್ದಾರೆ ಎಂದು ಅವರು ತಿಳಿಸಿದ್ದಾರೆ.

Tags

Related Articles

Close