ಪ್ರಚಲಿತ

ಮಹಿಳಾ ಪೀಡಕರಿಗೆ ಸಿ ಎಂ ಯೋಗೀಜಿ ಖಡಕ್ ವಾರ್ನಿಂಗ್

ಸ್ತ್ರೀ ಪೀಡಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡುವ ಮೂಲಕ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಮತ್ತೊಂದು ಮಾದರಿ ನಡೆಯನ್ನು ಪ್ರದರ್ಶಿಸಿದ್ದಾರೆ.

ಯುಪಿಯಲ್ಲಿ ಮಹಿಳೆಯರನ್ನು ಪೀಡಿಸುವ ಕಾಮುಕರನ್ನು ಗುರಿಯಾಗಿಸಿಕೊಂಡು ಎಚ್ಚರಿಕೆಯ ಸಂದೇಶ ರವಾನಿಸಿರುವ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು, ಸ್ತ್ರೀಯರಿಗೆ ಕಿರುಕುಳ ನೀಡಿದವರನ್ನು ಯಮರಾಜ ನೋಡಿಕೊಳ್ಳುತ್ತಾನೆ ಎನ್ನುವ ಮೂಲಕ, ಮರಣ ದಂಡನೆಯಂತಹ ಕಠಿಣ ಶಿಕ್ಷೆಯ ಎಚ್ಚರಿಕೆ ನೀಡಿದ್ದಾರೆ.

ಕೆಲ ದಿನಗಳ ಹಿಂದೆ ಯುಪಿಯ ಅಂಬೇಡ್ಕರ್ ನಗರದಲ್ಲಿ ಬಾಲಕಿಗೆ ‌ಕಿರುಕುಳ ನೀಡಿ ಹತ್ಯೆ ನಡೆಸಿದ ಪ್ರಕರಣ ನಡೆದಿತ್ತು. ಈ ಹಿನ್ನೆಲೆಯಲ್ಲಿ ಮಾತನಾಡಿ ಇರುವ ಅವರು ಕಾಮುಕರಿಗೆ ಎಚ್ಚರಿಕೆಯ ಸಂದೇಶವನ್ನು ರವಾನಿಸಿದ್ದಾರೆ. ಕಿರುಕುಳ, ಅತ್ಯಾಚಾರ ಮಾಡುವುದು, ಸುಲಿಗೆ ಸೇರಿದಂತೆ ಯಾವುದೇ ರೀತಿಯಲ್ಲಿ ಮಹಿಳೆಯರನ್ನು ಪೀಡಿಸಿದರೆ, ಅಂತಹ ಆರೋಪಿಗಳನ್ನು ಯಮರಾಜನೇ ಕಾಯುತ್ತಿದ್ದಾನೆ ಎನ್ನುವ ಮೂಲಕ ಮಹಿಳಾ ಶೋಷಣೆಯ ವಿರುದ್ಧದ ತಮ್ಮ ಸರ್ಕಾರದ ಗಟ್ಟಿ ನಿಲುವನ್ನು ಎತ್ತಿ ಹಿಡಿದಿದ್ದಾರೆ. ಆ ಮೂಲಕ ಇತರ ರಾಜ್ಯಗಳಿಗೂ ಮಾದರಿಯಾಗಿದ್ದಾರೆ.

ಉತ್ತರ ಪ್ರದೇಶದ ಅಂಬೇಡ್ಕರ್ ನಗರದಲ್ಲಿ ಬೈಕ್‌ನಲ್ಲಿ ಬಂದ ಇಬ್ಬರು ಕಾಮುಕರು, ಬಾಲಕಿಯೊಬ್ಬಳ ದುಪ್ಪಟ್ಟಾ ಎಳೆಯುವ ಮೂಲಕ ಆಕೆಗೆ ಕಿರುಕುಳ ನೀಡಿದ್ದ ಘಟನೆ ಕಳೆದ ಶುಕ್ರವಾರ ವರದಿಯಾಗಿತ್ತು. ಈ ವೇಳೆ ನಿಯಂತ್ರಣ ಕಳೆದುಕೊಂಡು ರಸ್ತೆಗೆ ಬಿದ್ದ ಬಾಲಕಿಯ ಮೇಲೆ ಮತ್ತೊಂದು ಮೋಟಾರ್ ಸೈಕಲ್ ಹರಿಸಿ ಹತ್ಯೆ ಮಾಡಲಾಗಿತ್ತು. ಈ ಸಂಬಂಧ ಶನಿವಾರವೇ ಮೂವರು ಆರೋಪಿಗಳನ್ನು ಸಹ ಪೊಲೀಸರು ವಶಕ್ಕೆ ಪಡೆದಿದ್ದರು.

ಈ ಘಟನೆಯ ಗಂಭೀರತೆಯನ್ನು ಮನಗಂಡ ಯೋಗಿ ಅವರು, ಮುಂದಿನ ದಿನಗಳಲ್ಲಿ ಇಂತಹ ದುರಂತ ನಡೆಯ ಬಾರದು. ಮಹಿಳೆಯರಿಗೆ ರಕ್ಷಣೆ ನೀಡಬೇಕು ಎನ್ನುವ ಉದ್ದೇಶದಿಂದ, ಇಂತಹ ತಪ್ಪೆಸಗುವ ಆರೋಪಿಗಳಿಗೆ ಮರಣ ದಂಡನೆಯಂತಹ ಕಠಿಣ ಶಿಕ್ಷೆಯ ಎಚ್ಚರಿಕೆ ನೀಡಿರುವುದಾಗಿದೆ. ಮಹಿಳಾ ಪೀಡನೆಯಂತಹ ಕುಕೃತ್ಯ ಎಸಗಿದವರಿಗೆ ಯಮರಾಜನೇ ಕಾಯುತ್ತಿರುತ್ತಾನೆ ಎನ್ನುವ ಮೂಲಕ ಕಾಮುಕರಿಗೆ ಬಿಸಿ ಮುಟ್ಟಿಸುವ ಪ್ರಯತ್ನ ನಡೆಸಿದ್ದಾರೆ.

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಹೆಚ್ಚಿನ ಕ್ರಮ ಕೈಗೊಳ್ಳಲಾಗಿದೆ. ಅಲ್ಲದೆ ಕಾನೂನು ದುರುಪಯೋಗ ಮಾಡಿಕೊಳ್ಳುವುದಕ್ಕೂ ಯಾರಿಗೂ ಆಸ್ಪದ ನೀಡಲಾಗದು ಎನ್ನುವ ಮೂಲಕ ಆರೋಪಿಗಳಿಗೆ ಭಯ ಹುಟ್ಟಿಸಲು ಮುಂದಾಗಿದ್ದಾರೆ. ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯ‌ನಾಥ್ ಅವರ ಈ ನಿಲುವು ದೇಶದೆಲ್ಲೆಡೆ ಜಾರಿಯಾದಲ್ಲಿ ಮಹಿಳಾ ಪೀಡನೆ ಪ್ರಮಾಣ ಗಣನೀಯ ಪ್ರಮಾಣದಲ್ಲಿ ಇಳಿಕೆ ಕಾಣಬಹುದು ಎನ್ನುವುದರಲ್ಲಿ ಎರಡು ಮಾಡಿಲ್ಲ.

Tags

Related Articles

Close