ಪ್ರಚಲಿತ

ಉಚಿತ ಅಕ್ಕಿಗಾಗಿ ಬೀದಿ ಪಾಲಾಯ್ತಾ ಆಡಳಿತಾರೂಢ ಕಾಂಗ್ರೆಸ್?

ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಅಧಿಕಾರದ ಗದ್ದುಗೆ ಏರಿದ್ದರೂ, ಪ್ರತಿಭಟನೆ ಮಾಡುವ ಪರಿಸ್ಥಿತಿಯಿಂದ ಹೊರ ಬಂದಿಲ್ಲ ಎಂಬುದು ಖೇದಕರ.

ಪ್ರಸ್ತುತ ಕಾಂಗ್ರೆಸ್ ಪಕ್ಷದ ನಾಯಕರು ಅಲ್ಲಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡುವ ಮೂಲಕ, ರಾಜ್ಯದ ಜನತೆಯ ದೃಷ್ಟಿಯಲ್ಲಿ ಒಳ್ಳೆಯವರಾಗಲು ಪ್ರಯತ್ನ ಮಾಡುತ್ತಿದ್ದಾರೆ. ಅಂದ ಹಾಗೆ ತಾವು ಚುನಾವಣಾ ಪೂರ್ವದಲ್ಲಿ ನೀಡಿದ್ದ ಭರವಸೆಯನ್ನು ಕೇಂದ್ರದ ಮೋದಿ ಸರ್ಕಾರ ಈಡೇರಿಸಲಿ ಎನ್ನುವ ಉದ್ದೇಶದಿಂದ ಇದೀಗ ಕಾಂಗ್ರೆಸ್ ನಾಯಕರ ಪ್ರತಿಭಟನೆಯ ನಾಟಕ ನಡೆಯುತ್ತಿರುವುದು ರಾಜ್ಯದ ಜನರಿಗೆ ಉಚಿತ ಮನರಂಜನೆಯಾಗಿದೆ.

ಚುನಾವಣೆಗೂ ಮೊದಲು ಚುನಾವಣೆ ಗೆಲ್ಲಲು ಹತ್ತು ಕೆಜಿ ಅಕ್ಕಿಯನ್ನು ಬಡವರಿಗೆ ಅನ್ನಭಾಗ್ಯದ ಹೆಸರಿನಲ್ಲಿ ನೀಡುವುದಾಗಿ ಭರವಸೆಯನ್ನು ನೀಡಿದ್ದವರು ಕಾಂಗ್ರೆಸಿಗರು. ಇದಕ್ಕೆ ಪೂರಕವಾಗಿ ಅಕ್ಕಿ ದಾಸ್ತಾನಿದೆಯೋ, ಇಲ್ಲವೋ.. ಇಲ್ಲವಾದಲ್ಲಿ ಅದನ್ನು ಸಂಗ್ರಹ ಮಾಡುವ ದಾರಿ ಯಾವುದು? ನೀಡಿದ ಭರವಸೆ ಪೂರೈಕೆಗೆ ಪೂರಕ ವ್ಯವಸ್ಥೆ ಮಾಡಲು ಸಾಧ್ಯವೋ? ಎಂಬುದರ ಬಗ್ಗೆ ತಲೆಕೆಡಿಸಿಕೊಳ್ಳದೆ ಉಚಿತ ಘೋಷಣೆಯನ್ನೇನೋ ಮಾಡಿಯಾಯ್ತು. ಆದರೆ ಗೆದ್ದು ಗದ್ದುಗೆ ಹತ್ತಿದ ಬಳಿಕ ಅದೇ ಭರವಸೆಯನ್ನು ಈಡೇರಿಸುವಂತೆ ಜನರು ದಂಬಾಲು ಬಿದ್ದಾಗ, ಅಕ್ಕಿ ಸಂಗ್ರಹಿಸುವ ದಾರಿ ಕಾಣದೆ ಕಂಗಾಲಾಗಿ, ಕೊನೆಗೆ ಈ ತಪ್ಪನ್ನು ಕೇಂದ್ರದ ಮೋದಿ ಸರ್ಕಾರದ ತಲೆಗೆ ಕಟ್ಟುವ ಕಾಂಗ್ರೆಸ್‌ನ ಅಲ್ಪ ಬುದ್ಧಿಗೆ ಜನರೇ ಛೀ.. ಥೂ.. ಎನ್ನುವ ಸ್ಥಿತಿ ನಿರ್ಮಾಣವಾಗಿದೆ.

ಅಂದ ಹಾಗೆ ಪ್ರಸ್ತುತ ರಾಜ್ಯದ ಬಡ ಜನರಿಗೆ ನೀಡಲಾಗುತ್ತಿರುವ ಉಚಿತ ಐದು ಕೆಜಿ ಅಕ್ಕಿ ಕೇಂದ್ರದ ಮೋದಿ ಸರ್ಕಾರದ ಕೊಡುಗೆಯಾಗಿದೆ. ಉಚಿತವಾಗಿ ಕೇಂದ್ರ ಸರ್ಕಾರ ಅಕ್ಕಿ ನೀಡುತ್ತಿದ್ದರೂ ಅದಕ್ಕೆ ಈ ವರೆಗೂ ಯಾವುದೇ ಪ್ರಚಾರ ಬಯಸಿಲ್ಲ. ಆದರೆ ಇನ್ನೂ ಪೂರೈಸದ ಭರವಸೆಯ ಬಗ್ಗೆ ರಾಜ್ಯದ ಕಾಂಗ್ರೆಸ್ ಸರ್ಕಾರ ಮಾತ್ರ ಟಾಂಟಾಂ ಹೊಡೆಯುತ್ತಿರುವುದು ಹಾಸ್ಯಾಸ್ಪದ. ಅಲ್ಲದೆ ತಾನು ನೀಡಿದ ಭರವಸೆಯನ್ನು ಕೇಂದ್ರ ಸರ್ಕಾರ ಈಡೇರಿಸಬೇಕು, ಆದರೆ ಅದರ ಸಂಪೂರ್ಣ ಕ್ರೆಡಿಟ್ ಮಾತ್ರ ತನಗೆ ದಕ್ಕಬೇಕು ಎನ್ನುವ ಕಾಂಗ್ರೆಸ್‌ನ ಕೀಳು ಮಟ್ಟದ ಮನಸ್ಥಿತಿಗೆ ಏನೆನ್ನಬೇಕು?

ಕೇಂದ್ರ ಸರ್ಕಾರ ನೀಡಬೇಕಾದ್ದನ್ನು ಈಗಾಗಲೇ ಯಾವುದೇ ಬೇಧ ಇಲ್ಲದೆ ಜನರಿಗೆ ಕೊ ಒದಗಿಸುವ ಕೆಲಸ ಮಾಡಿದೆ. ರಾಜ್ಯದ ಕಾಂಗ್ರೆಸ್ ಸರ್ಕಾರ ನೀಡಿದ ಭರವಸೆಯನ್ನು ಈಡೇರಿಸುವಂತೆ ಪ್ರತಿಪಕ್ಷ ಬಿಜೆಪಿಯ ನಾಯಕರು ಸಹ ಕಾಂಗ್ರೆಸ್ ಅನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ. ಬಿಜೆಪಿಯ ತರಾಟೆಗೆ ಕಾಂಗ್ರೆಸ್ ನಾಯಕರು ಪ್ರತಿಕ್ರಿಯೆ ನೀಡಿದ್ದು, ಅನ್ನ ಭಾಗ್ಯ ಅಕ್ಕಿಯಲ್ಲಿ ಒಂದು ಕಾಳು ಅಕ್ಕಿ ಕಡಿಮೆಯಾದರೂ ಅದನ್ನು ಮುಟೇಟದಂತೆ ಹೇಳಿರುವ ಬಿಜೆಪಿ ನಾಯಕರು, ಕನ್ನಡಿಗರ ಮೇಲೆ ನಿಜವಾದ ಕಾಳಜಿ ಇದ್ದಲ್ಲಿ ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದು, ಅಕ್ಕಿ ನೀಡುವಂತೆ ತಿಳಿಸಲಿ ಎಂದು ಹೇಳಿದ್ದಾರೆ. ಕನ್ನಡಿಗರ ಮೇಲೆ ನೈಜ ಕಾಳಜಿ ಇರುವುದರಿಂದಲೇ ರಾಜ್ಯ ಬಿಜೆಪಿ ಕಾಂಗ್ರೆಸ್‌ನ ಅಕ್ಕಿ ಭಾಗ್ಯವನ್ನು ಬಡವರಿಗೆ ತಲುಪಿಸುವಂತೆ ಕಾಂಗ್ರೆಸ್‌ಗೆ ಒತ್ತಡ ಹೇರುತ್ತಿದೆ. ಕೇಂದ್ರ ಸರ್ಕಾರ ಈಗಾಗಲೇ ಜನರಿಗೆ ಏನನ್ನು ತಲುಪಿಸಬೇಕೋ, ಅದನ್ನು ನ್ಯಾಯಯುತವಾಗಿ ನೀಡುತ್ತಿದೆ. ಆದರೆ ಕಾಂಗ್ರೆಸ್ ಪಕ್ಷವೇ ಈಗ ಕೊಟ್ಟ ಮಾತು ತಪ್ಪಿ ನಡೆಯುತ್ತಿರುವುದು. ತಾನು ಕರ್ನಾಟಕದ ಜನತೆಗೆ ಮೋಸ ಮಾಡಿ, ಅದೆಲ್ಲವನ್ನೂ ಪ್ರಧಾನಿ ಮೋದಿ ಸರ್ಕಾರವೇ ಮಾಡುತ್ತಿದೆ ಎನ್ನುವುದಾಗಿ ಹಣೆಪಟ್ಟಿ ಕಟ್ಟಲು ಹೊರಟಿರುವುದು.

ಒಟ್ಟಿನಲ್ಲಿ ಬಿಜೆಪಿಯನ್ನು, ಕೇಂದ್ರ ಸರ್ಕಾರವನ್ನು ಬೀಳಿಸಲು ತಾನೇ ತೋಡಿದ ಗುಂಡಿಗೆ ತಾನೇ ಬಿದ್ದಂತಹ ಪರಿಸ್ಥಿತಿಯಲ್ಲಿ ಕಾಂಗ್ರೆಸ್ ಇದೆ. ಉಚಿತ ಅಕ್ಕಿ ನೀಡುವ ಭರವಸೆಯ ಮೂಲಕ ಕಾಂಗ್ರೆಸ್ ಸಮಾಜದ ಮುಂದೆ ಬೆತ್ತಲಾಗಿದೆ. ಈಡೇರಿಸಲು ಕಷ್ಟ ಸಾಧ್ಯವಾದ ಭರವಸೆಯನ್ನು ನೀಡಿ, ಗೆದ್ದು, ಇದೀಗ ಮೇಲೆ ನೋಡುವ ಸ್ಥಿತಿ ತಂದುಕೊಂಡಿರುವ ಕಾಂಗ್ರೆಸ್ ಪಕ್ಷದ ನಾಯಕರಿಗೆ ಏನೆನ್ನುವುದೋ?

Tags

Related Articles

Close