ಪ್ರಚಲಿತ

ಅನ್ನಭಾಗ್ಯದ ಹೆಸರಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಅನಗತ್ಯ ಗೊಂದಲ ಸೃಷ್ಟಿಸುತ್ತಿದೆ ಕಾಂಗ್ರೆಸ್: ಬಿ ಎಸ್ ವೈ

ಕರ್ನಾಟಕದಲ್ಲಿ ಕಳೆದ ವಿಧಾನಸಭಾ ಚುನಾವಣೆಗೂ ಮೊದಲು ಕಾಂಗ್ರೆಸ್ ನಾಯಕರು ಹಲವಾರು ಘೋಷಣೆ ಗಳ ಮೂಲಕವೇ ಮತ ಪಡೆದು ಗದ್ದುಗೆಗೆ ಏರಿದ್ದರು. ಆ ಮಹತ್ವದ ಘೋಷಣೆಗಳಲ್ಲಿ ರಾಜ್ಯದ ಜನರಿಗೆ ಹತ್ತು ಕೆಜಿ ಉಚಿತ ಅಕ್ಕಿ ನೀಡುವ ಭರವಸೆಯೂ ಸೇರಿತ್ತು.

ಆದರೆ ಗೆದ್ದು ಗದ್ದುಗೆ ಹತ್ತಿದ ಬಳಿಕ ರಾಜ್ಯದ ಕಾಂಗ್ರೆಸ್ ಸರ್ಕಾರ ‘ಕೇಂದ್ರ ಸರ್ಕಾರ ನಮಗೆ ಹೆಚ್ಚುವರಿ ಅಕ್ಕಿ ಪೂರೈಕೆ ಮಾಡುತ್ತಿಲ್ಲ. ಇದರಿಂದಾಗಿ ರಾಜ್ಯದ ಜನರಿಗೆ ಉಚಿತ ಅಕ್ಕಿ ನೀಡುವ ಭರವಸೆಯನ್ನು ಪೂರೈಸುವುದು ಸವಾಲಾಗಿ ಪರಿಣಮಿಸಿದೆ’ ಎಂದೆಲ್ಲಾ ಹೇಳಿ, ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದೆ. ಜೊತೆಗೆ ತಮ್ಮ ಲೋಪವನ್ನು ಮುಚ್ಚಿ ಹಾಕುವುದಕ್ಕಾಗಿ ಕೇಂದ್ರದ ಪ್ರಧಾನಿ ಮೋದಿ ನೇತೃತ್ವದ ಸರ್ಕಾರದ ಮೇಲೆ ಗೂಬೆ ಕೂರಿಸುವ ಕೆಲಸವನ್ನು ನಯವಾಗಿ ಮಾಡುತ್ತಿದೆ.

ಕೇಂದ್ರ ಸರ್ಕಾರದ ಹಿಡಿತದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಅಕ್ಕಿ ದಾಸ್ತಾನಿದೆ. ಆದರೆ ಅದನ್ನು ರಾಜ್ಯಕ್ಕೆ ಒದಗಿಸಿದೆ ಅನ್ಯಾಯ ಎಸಗುತ್ತಿದೆ ಎಂದು ಬೊಬ್ಬಿರಿಯುತ್ತಿದೆ. ಆದರೆ, ಕೇಂದ್ರ ಸರ್ಕಾರ ಪ್ರತಿ ರಾಜ್ಯಗಳಿಗೂ ಎಷ್ಟು ಪ್ರಮಾಣದಲ್ಲಿ ಅಕ್ಕಿ ಒದಗಿಸಬೇಕೋ, ಅಷ್ಟು ಪ್ರಮಾಣದಲ್ಲಿ ಒದಗಿಸಿ ತನ್ನ ಕಾರ್ಯವನ್ನು ನಿಷ್ಠೆಯಿಂದ ಮಾಡುತ್ತಿದೆ. ಕೇಂದ್ರ ಸರ್ಕಾರದಿಂದ ಕರ್ನಾಟಕ ರಾಜ್ಯದ ಪ್ರಜೆಗಳಿಗೆ ಯಾವ ಪ್ರಮಾಣದಲ್ಲಿ ಆಹಾರ ವಸ್ತುಗಳು ದೊರೆಯಬೇಕೋ, ಆ ಪ್ರಮಾಣದಲ್ಲಿ ಉಚಿತವಾಗಿ ನೀಡಬೇಕಾದದ್ದನ್ನು ಉಚಿತವಾಗಿ ಒದಗಿಸುವ ಕೆಲಸವನ್ನು ಸಹ ಪ್ರಧಾನಿ ಮೋದಿ ನೇತೃತ್ವದ ಸರ್ಕಾರ ಚಾಚೂ ತಪ್ಪದೆ ಮಾಡುತ್ತಿದೆ.

ಹೀಗಿದ್ದರೂ ಕಾಂಗ್ರೆಸ್ ಸರ್ಕಾರ ಚುನಾವಣಾ ಪೂರ್ವದಲ್ಲಿ ತನಗೆ ಈಡೇರಿಸಲಾಗದ ಭರವಸೆಗಳನ್ನೆಲ್ಲಾ ಜನರ ಮುಂದಿಟ್ಟು, ಸದ್ಯ ಸಂಕಷ್ಟದ ಪರಿಸ್ಥಿತಿಯನ್ನು ಮೈಮೇಲೆಳೆದುಕೊಂಡಿದೆ. ಜಟ್ಟಿ ಜಾರಿ ಬಿದ್ದರೂ ಮೀಸೆ ಮಣ್ಣಾಗಲಿಲ್ಲ ಎಂಬಂತೆ ತನ್ನ ಲೋಪವನ್ನು ಮರೆಮಾಚಲು ಕೇಂದ್ರ ಸರ್ಕಾರವನ್ನು ಜನರ ದೃಷ್ಟಿಯಲ್ಲಿ ತಪ್ಪಿತಸ್ಥ ಸ್ಥಾನದಲ್ಲಿ ನಿಲ್ಲಿಸುವ ಕೆಲಸವನ್ನು ಕಾಂಗ್ರೆಸ್ ಸರ್ಕಾರ ಮಾಡುತ್ತಿದೆ.

ಇನ್ನು ಕಾಂಗ್ರೆಸ್‌ನ ಭರವಸೆಗಳನ್ನೇ ಮುಂದಿಟ್ಟುಕೊಂಡು ಪ್ರತಿ ಪಕ್ಷಗಳು ಸಹ ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಳ್ಳುತ್ತಿವೆ. ಅನ್ನ ಭಾಗ್ಯ ಯೋಜನೆಗೆ ಸಂಬಂಧಿಸಿದಂತೆ ಬಿಜೆಪಿಯ ಹಿರಿಯ ನಾಯಕ, ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರು ಸಹ ಕಾಂಗ್ರೆಸ್‌ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ರಾಜ್ಯ ಸರ್ಕಾರ ಕರ್ನಾಟಕ ಬಡ ಜನತೆಗೆ ನೀಡಿದ ಅನ್ನಭಾಗ್ಯದ ಭರವಸೆಯನ್ನು ಈಡೇರಿಸುವ ಕೆಲಸವನ್ನು ಮಾಡಬೇಕು. ಈ ಯೋಜನೆಯನ್ನು ಜಾರಿಗೊಳಿಸಲೇ ಬೇಕು ಎಂದು ರಾಜ್ಯ ಸರ್ಕಾರದ ಕಿವಿ ಹಿಂಡಿದ್ದಾರೆ.

ಈ ಬಗ್ಗೆ ಸುದ್ದಿಗಾರರ ಜೊತೆಗೆ ಮಾತನಾಡಿರುವ ಅವರು, ಅನ್ನ ಭಾಗ್ಯ ಯೋಜನೆಯ ಜಾರಿಗೆ ಸಂಬಂಧಿಸಿದ ಹಾಗೆ ರಾಜ್ಯ ಕಾಂಗ್ರೆಸ್ ಸರ್ಕಾರ ಉದ್ದೇಶಪೂರ್ವಕವಾಗಿಯೇ ಜನರಲ್ಲಿ ಗೊಂದಲಗಳನ್ನು ಬಿತ್ತುವ ಕೆಲಸವನ್ನು ಮಾಡುತ್ತಿದೆ. ಜನತೆಗೆ ನೀಡಿದ ಭರವಸೆಯನ್ನು ಜಾರಿಗೆ ತರುವುದು, ಈಡೇರಿಸುವುದು ಸರ್ಕಾರದ ಹೊಣೆಗಾರಿಕೆಯಾಗಿದೆ ಎಂದು ತಿಳಿಸಿದ್ದಾರೆ.

ಹಾಗೆಯೇ ಸದ್ಯ ರಾಜ್ಯದಲ್ಲಿನ ಬಡ ಜನರಿಗೆ ದೊರೆಯುತ್ತಿರುವ ಉಚಿತ ಐದು ಕೆಜಿ ಅಕ್ಕಿಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಸರ್ಕಾರವೇ ನೀಡುತ್ತಿದೆ. ರಾಜ್ಯ ಕಾಂಗ್ರೆಸ್ ಸರ್ಕಾರ ತಾನು ನೀಡಿರುವ ಹತ್ತು ಕೆಜಿ ಉಚಿತ ಅಕ್ಕಿ ವಿತರಣೆಗೆ, ಅಕ್ಕಿಯನ್ನು ಖರೀದಿಸಿಯಾದರೂ ತರಲಿ, ಏನಾದರೂ ಮಾಡಲಿ. ಆದರೆ ಬಡ ಜನರಿಗೆ ಅನ್ನಭಾಗ್ಯದ ಅಕ್ಕಿಯನ್ನು ಪೂರೈಸಿಯೇ ತೀರಬೇಕು ಎಂದು ತೀಕ್ಷ್ಣವಾಗಿ ನುಡಿದಿದ್ದಾರೆ. ಆ ಮೂಲಕ ಬಿಜೆಪಿ ಸರ್ಕಾರ ಜನ ಪರವಾಗಿದ್ದು, ಜನರಿಗೆ ದೊರೆಯಬೇಕಾದ ಸೌಕರ್ಯಗಳನ್ನು ಅವರಿಗೆ ತಲುಪಿಸಿಯೇ ಸಿದ್ಧ, ತಲುಪುವಂತೆ ಮಾಡುವುದೇ ಬಿಜೆಪಿ ಸರ್ಕಾರದ ಗುರಿ ಎನ್ನುವುದನ್ನು ಮತ್ತೆ ಸ್ಪಷ್ಟಪಡಿಸಿದ್ದಾರೆ.

Tags

Related Articles

Close