ಪ್ರಚಲಿತ

ರಾಮ ಮಂದಿರ ವಿಷಯವನ್ನು ರಾಜಕೀಯಕ್ಕೆ ಬಳಸುತ್ತಿದೆ ಕಾಂಗ್ರೆಸ್

ಪ್ರಭು ಶ್ರೀರಾಮನ ರಾಷ್ಟ್ರ ಮಂದಿರದ ವಿಷಯದಲ್ಲಿಯೂ ಕಾಂಗ್ರೆಸ್ ‘ಒಲ್ಲದ ಗಂಡನಿಗೆ ಮೊಸರಿನಲ್ಲಿ ಕಲ್ಲು’ ಎಂಬಂತೆ ರಾಜಕೀಯ ಮಾಡಲು ಹೊರಟಿದೆ.

ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಪಕ್ಷ ಬಿಜೆಪಿಯ ಕನಸಾಗಿದ್ದ ಅಯೋಧ್ಯೆಯ ಶ್ರೀರಾಮ ಮಂದಿರ ನಿರ್ಮಾಣವನ್ನು ಸಾಕಾರಗೊಳಿಸಿದವರು. ತಮಗೆ ಸಿಕ್ಕ ಅವಕಾಶವನ್ನು ಸರಿಯಾಗಿ ಬಳಕೆ ಮಾಡಿ, ದ್ವೇಷ ರಾಜಕಾರಣಕ್ಕೆ ಅವಕಾಶ ಇಲ್ಲದ ಹಾಗೆ ಅಳೆದು ತೂಗಿ, ಸಕಾರಾತ್ಮಕ ರಾಜಕೀಯ ಮಾಡಿ ಮಾದರಿಯಾದ ವ್ಯಕ್ತಿ ಶಕ್ತಿ ಪ್ರಧಾನಿ ನಮೋ ಎಂದರೂ ಅತಿಶಯವಾಗಲಾರದು. ಬಹು ಜನರ ನಿರೀಕ್ಷೆಯ ಶ್ರೀರಾಮ ಮಂದಿರ ನಿರ್ಮಾಣ ವಿಚಾರದಲ್ಲಿಯೂ ಯಾವುದೇ ಸಮಸ್ಯೆ ಆಗದ ರೀತಿಯಲ್ಲಿ ಸಂಭಾಳಿಸಿ, ಕೊನೆಗೆ ಬಹುಕಾಲದ ಭಾರತದ ಕನಸನ್ನು ಸುಸೂತ್ರವಾಗಿ ರಾಮ ಮಂದಿರ ನಿರ್ಮಾಣದ ಮೂಲಕ ಸಾಕಾರಗೊಳಿಸಿದ ಅವರೋರ್ವ ವ್ಯಕ್ತಿ ಶಕ್ತಿಯೇ ಸರಿ.

ಇನ್ನು ರಾಮ ಮಂದಿರ ಉದ್ಘಾಟನೆ ಸೇರಿದಂತೆ ಅದಕ್ಕೆ ಸಂಬಂಧಿಸಿದ ಎಲ್ಲಾ ವಿಚಾರಗಳನ್ನು ನಿರ್ಧಾರ ಮಾಡುವುದು ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್. ಇದರಲ್ಲಿ ಮಂದಿರ ನಿರ್ಮಾಣಕ್ಕೆ ಕಾರಣವಾದ ಬಿಜೆಪಿ ಅಥವಾ ದೇಶ ಭಕ್ತ ಸಂಘಟನೆ ಆರ್ ಎಸ್ ಎಸ್ ‌ಗೆ ಪಾಲಿಲ್ಲ. ಟ್ರಸ್ಟ್ ಈ ದೇಶದ ಗಣ್ಯರನ್ನು ಪಕ್ಷಾತೀತವಾಗಿ ಕಾರ್ಯಕ್ರಮಕ್ಕೆ ಆಹ್ವಾನಿಸಿದೆ ಎನ್ನುವುದು ಸತ್ಯ. ಬಿಜೆಪಿಗರನ್ನು, ಆರ್ ಎಸ್ ಎಸ್‌ ನವರನ್ನು ಹೇಗೆ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿದೆಯೋ, ಹಾಗೆಯೇ ಕಾಂಗ್ರೆಸ್ ಪಕ್ಷದವರಿಗೂ ಆಹ್ವಾನ ನೀಡಲಾಗಿದೆ. ಇದೇ ಸತ್ಯ.

ಹೀಗಿದ್ದರೂ, ಕಾಂಗ್ರೆಸ್ ಮಾತ್ರ ಈ ವಿಚಾರದಲ್ಲಿ ಇಲ್ಲಸಲ್ಲದ ಸುಳ್ಳುಗಳನ್ನು ಸಮಾಜದಲ್ಲಿ ಬಿತ್ತಲು ಹೊರಟಿದೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಈ ಮಂದಿರದ ಸಂಬಂಧ ದ್ವೇಷ ರಾಜಕಾರಣ ಮಾಡಲು ಮುಂದಾಗಿದ್ದಾರೆ. ಜನರಿಗೆ ಕಾಂಗ್ರೆಸ್ ಮೇಲೆ ಅನುಕಂಪ ಹುಟ್ಟಬೇಕು ಎನ್ನುವ ಕಾರಣಕ್ಕೆ ರಾಮ ಮಂದಿರ ವಿಚಾರದಲ್ಲಿ ಬಿಜೆಪಿ ಮತ್ತು ಆರ್ ಎಸ್ ಎಸ್ ರಾಜಕೀಯ ಮಾಡುತ್ತಿದೆ ಎಂದು ದೂಷಿಸಿದ್ದಾರೆ. ಕಾಂಗ್ರೆಸ್ ನಾಯಕರನ್ನು ಸಹ ಈ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿದ್ದರೂ, ಅವರು ಈ ಕಾರ್ಯಕ್ರಮದಲ್ಲಿ ಭಾಗವಹಿಸುವುದಿಲ್ಲ ಎಂದು ಹೇಳಿಕೆ ನೀಡಿದ್ದು, ಇದು ಕಾಂಗ್ರೆಸ್ ರಾಮ ಮಂದಿರದ ವಿಷಯದಲ್ಲಿ ರಾಜಕೀಯ ಮಾಡುತ್ತಿದೆ ಎನ್ನುವುದಕ್ಕೆ ಸ್ಪಷ್ಟ ನಿದರ್ಶನವಾಗಿದೆ. ಹೀಗಿದ್ದರೂ ರಾಹುಲ್ ಬಿಜೆಪಿ ಮತ್ತು ಆರ್ ಎಸ್ ಎಸ್ ಅನ್ನು ಇದರಲ್ಲಿ ರಾಜಕೀಯ ಮಾಡುತ್ತಿರುವುದಾಗಿ ದೂಷಣೆ ಮಾಡುತ್ತಿರುವುದು ಜನರಿಗೆ ಹಾಸ್ಯಾಸ್ಪದ ವಿಷಯದ ಹಾಗೆ ಕಾಣುತ್ತಿದೆ.

ರಾಹುಲ್ ಈ ಕಾರ್ಯಕ್ರಮದ ಬಗ್ಗೆ ಮಾತನಾಡಿದ್ದು, ಇದು ಬಿಜೆಪಿ ಮತ್ತು ಆರ್‌ಎಸ್‌ಎಸ್‌ನ ಕಾರ್ಯಕ್ರಮವಾಗಿದೆ. ಕಾಂಗ್ರೆಸ್ ನಾಯಕರು ಇದರಲ್ಲಿ ಭಾಗವಹಿಸುವುದಿಲ್ಲ ಎಂದು ಹೇಳಿದ್ದಾರೆ. ಪ್ರಧಾನಿ ಮತ್ತು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸುತ್ತ ವಿನ್ಯಾಸ ಮಾಡಲಾದ ಕಾರ್ಯಕ್ರಮ ಇದಾಗಿದ್ದು, ನಾವಿದರಲ್ಲಿ ಭಾಗವಹಿಸುವುದಿಲ್ಲ ಎಂದು ಹೇಳಿದ್ದಾರೆ.

ಈ ಹಿಂದೆ ಕಾಂಗ್ರೆಸ್ ನಾಯಕರಾದ ಸೋನಿಯಾ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಮೊದಲಾದವರು ಸಹ ಈ ಕಾರ್ಯಕ್ರಮಕ್ಕೆ ತಮಗೆ ಬಂದ ಆಹ್ವಾನವನ್ನು ತಿರಸ್ಕರಿಸಿ, ನಾವಿದರಲ್ಲಿ ಭಾಗವಹಿಸುವುದಿಲ್ಲ ಎಂದು ಹೇಳಿದ್ದರು. ಇದಾದ ಬಳಿಕ ಈಗ ರಾಹುಲ್ ಗಾಂಧಿ ಸಹ ಇದನ್ನು ರಾಜಕೀಯಗೊಳಿಸಲು ಪ್ರಯತ್ನ ನಡೆಸಿದ್ದು ಸಾರ್ವಜನಿಕ ವಲಯದಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.

ಒಟ್ಟಿನಲ್ಲಿ ಇಂತಹ ಒಂದು ಪುಣ್ಯ ಕಾರ್ಯಕ್ರಮದಲ್ಲಿ ಭಾಗವಹಿಸಲು ಯೋಗ ಮತ್ತು ಯೋಗ್ಯತೆ ಎರಡೂ ಬೇಕು. ಆಹ್ವಾನವಿದ್ದರೂ ಕಾರ್ಯಕ್ರಮಕ್ಕೆ ಹೋಗುವುದಿಲ್ಲ ಎಂದು ಹೇಳಿದ ಕಾಂಗ್ರೆಸ್‌ಗೆ ಯೋಗ ಮತ್ತು ಯೋಗ್ಯತೆ ಎರಡೂ ಇಲ್ಲ ಎನ್ನುವುದು ಸತ್ಯ.

Tags

Related Articles

Close