ಪ್ರಚಲಿತ

ಕಾಂಗ್ರೆಸ್‌‌ಗೆ ದೇಶ ಒಗ್ಗಟ್ಟಾಗಿರುವುದು ಬೇಕಿಲ್ಲ: ಪ್ರಲ್ಹಾದ ಜೋಶಿ

ದೇಶ ಒಡೆದು ತಮ್ಮ ಗುರಿ ಸಾಧನೆ ಮಾಡುವ ಸಂಚು ಕಾಂಗ್ರೆಸ್ ಪಕ್ಷದ್ದೇನೋ ಎನ್ನುವ ಸಂದೇಹ ಸಾರ್ವಜನಿಕರಲ್ಲಿ ಮನೆ ಮಾಡಿದೆ. ಇದಕ್ಕೆ ಕಾರಣ ಅವರು ನೀಡುವ ಬೇಕಾಬಿಟ್ಟಿ ಹೇಳಿಕೆಗಳು, ದೇಶದ ಜನರ ಬಗ್ಗೆ ಅವರು ಆಡುವ ದ್ವೇಷದ ಮಾತುಗಳು, ಮುಸಲ್ಮಾನರ ಓಲೈಕೆ, ಹಿಂದೂಗಳ ಮೇಲಿನ ತಾತ್ಸಾರ. ಇದಕ್ಕೂ ಮುಖ್ಯವಾಗಿ ಅವರು ದೇಶದ್ರೋಹಿಗಳಿಗೆ, ಭಯೋತ್ಪಾದಕರಿಗೆ ನೀಡುತ್ತಿರುವ ಬೆಂಬಲ.

ಕಾಂಗ್ರೆಸ್ ನಾಯಕರು ಈ ದೇಶದ ಬಹುಸಂಖ್ಯಾತರ ಮೇಲೆ ದೇಶಕ್ಕೆ ಸ್ವಾತಂತ್ರ್ಯ ಬಂದ ಬಳಿಕದ ತಮ್ಮ ಎಪ್ಪತ್ತು ವರ್ಷಗಳ ಆಡಳಿತಾವಧಿಯಲ್ಲಿಯೂ ದೌರ್ಜನ್ಯ ಮಾಡಿಕೊಂಡೇ ಬಂದಿದ್ದಾರೆ. ಮುಸ್ಲಿಮ್ ಓಲೈಕೆ, ತುಷ್ಟೀಕರಣ ರಾಜಕೀಯ ಮಾಡುತ್ತಾ, ಧರ್ಮದ ಆಧಾರದಲ್ಲಿ ದೇಶವನ್ನು ವಿಭಜಿಸಿ ಆ ಮೂಲಕ ತಮ್ಮ ಬೇಳೆ ಬೇಯಿಸಿಕೊಂಡು ಬಂದ ರಾಜಕೀಯ ಪಕ್ಷ ಭಾರತದಲ್ಲಿ ಇದೆ ಎಂದಾದರೆ ಅದು ಕಾಂಗ್ರೆಸ್ ಎಂದು ಪುಟ್ಟ ಮಕ್ಕಳೂ ಸಹ ಹೇಳಬಹುದು ಎನ್ನುವುದು ನಿರ್ವಿವಾದ.

ದೇಶದಲ್ಲಿ ಲೋಕಸಭಾ ಚುನಾವಣೆ ಆರಂಭವಾಗಿದೆ. ಚುನಾವಣಾ ಪ್ರಚಾರ ಕಾರ್ಯಕ್ರಮಗಳಲ್ಲಿಯೂ ಕಾಂಗ್ರೆಸ್ ಬಹುಸಂಖ್ಯಾತರ ತಾತ್ಸಾರ, ಮುಸ್ಲಿಂ ತುಷ್ಟೀಕರಣ, ಭಾರತೀಯರ ವಿರುದ್ಧ ಹೇಳಿಕೆಗಳು, ಉಗ್ರರ ಪರ ಭಾಷಣ ಮೊದಲಾದವುಗಳನ್ನು ಮಾಡುತ್ತಲೇ ಬಂದವರು.

ಕೆಲ ದಿನಗಳ ಹಿಂದೆ ಕಾಂಗ್ರೆಸ್‌ನ ಚಿಕ್ಕಪ್ಪ ಸ್ಯಾಮ್ ಪಿತ್ರೋಡಾ ಭಾರತೀಯರನ್ನು ಚರ್ಮದ ಬಣ್ಣದ ಆಧಾರದಲ್ಲಿ ಹೀಯಾಳಿಸಿದ್ದರು. ಭಾರತೀಯರು ಆಫ್ರಿಕಾದವರ ಹಾಗೆ ಕಾಣುತ್ತಾರೆ ಎನ್ನುವ ಮೂಲಕ ತಮ್ಮ ನಾಲಿಗೆ ಹರಿಯ ಬಿಟ್ಟಿದ್ದರು. ಅವರ ಈ ಟೀಕೆಗೆ ಪ್ರಧಾನಿ ಮೋದಿ ಸೇರಿದಂತೆ ಇನ್ನೂ ಹಲವಾರು ರಾಷ್ಟ್ರ ಭಕ್ತರು ಸರಿಯಾದ ತಿರುಗೇಟು ನೀಡಿದ್ದಾರೆ.

ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು ಸಹ ಕಾಂಗ್ರೆಸ್ ಪಕ್ಷಕ್ಕೆ ತಿರುಗೇಟು ನೀಡಿದ್ದು, ಕಾಂಗ್ರೆಸ್ ಪಕ್ಷ ಅಧಿಕಾರ ಹಿಡಿಯಲು ಸಂಪೂರ್ಣ ದೇಶವನ್ನು ಒಡೆಯುವುದಕ್ಕೂ ಹಿಂದೆ ಮುಂದೆ ನೋಡುವುದಿಲ್ಲ ಎಂದಿದ್ದಾರೆ.

ಸ್ಯಾಮ್ ಪಿತ್ರೋಡಾ ಜನಾಂಗೀಯ ನಿಂದನೆಗೆ ಪ್ರತಿಕ್ರಿಯೆ ನೀಡಿದ ಜೋಶಿ, ಕಾಂಗ್ರೆಸ್ ಮತ್ತು ಇಂಡಿ ಒಕ್ಕೂಟಕ್ಕೆ ದೇಶ ಒಗ್ಗಟ್ಟಾಗಿ ಇರುವುದು ಇಷ್ಟವಿಲ್ಲ. ಕೈ ನಾಯಕ ಡಿ.ಕೆ. ಸುರೇಶ್ ಭಾರತ ಎರಡು ತುಂಡಾಗುವ ಹಾಗೆ, ಸ್ಯಾಮ್ ಪಿತ್ರೋಡಾ ಮನುಷ್ಯನ ಬಣ್ಣದ ಮೇಲೆ ಹೇಳಿಕೆ ನೀಡಿದ್ದಾರೆ. ಇದು ದೇಶ ಒಗ್ಗಟ್ಟಿನಿಂದಿರುವುದು ಕಾಂಗ್ರೆಸ್ ಪಕ್ಷಕ್ಕೆ ಇಷ್ಚವಿಲ್ಲ ಎಂಬುದಕ್ಕೆ ಸಾಕ್ಷಿ ಎಂದು ಅವರು ಆರೋಪಿಸಿದ್ದಾರೆ.

Tags

Related Articles

Close