ಪ್ರಚಲಿತ

ದೀಪಾವಳಿ ಸಂದರ್ಭದಲ್ಲಿ ಸ್ಥಳೀಯ ಉತ್ಪನ್ನಗಳನ್ನು ಖರೀದಿಗೆ ಸಿಎಐಟಿ ಕರೆ

ಭಾರತದಲ್ಲಿ ಹಬ್ಬಗಳ ಋತು ಆರಂಭವಾಗಿದೆ. ಹಬ್ಬಗಳೆಂದರೆ ಮನೆ – ಮನಗಳ ಸಂಭ್ರಮ ಹೆಚ್ಚಿಸುವುದರ ಜೊತೆಗೆ, ಭರ್ಜರಿಯಾಗಿ ವ್ಯಾಪಾರ ವ್ಯವಹಾರಗಳು ನಡೆಯುವ ಸಮಯ. ಹಬ್ಬಗಳ ಆಚರಣೆಗೆ ಅಗತ್ಯವಾದ ಸಾಮಾನು ಸರಂಜಾಮು ಖರೀದಿಯಲ್ಲಿ ಜನರು ತೊಡಗಿದ್ದರೆ, ಬೊಕ್ಕಸ ತುಂಬಿಸಿಕೊಳ್ಳುವ ಸಂತಸದಲ್ಲಿ ವ್ಯಾಪಾರಸ್ಥರು ಇರುತ್ತಾರೆ.

ಇನ್ನೇನು ನಾವು ದೀಪಗಳ ಹಬ್ಬ ದೀಪಾವಳಿಯನ್ನು ಆಚರಿಸಲಿದ್ದೇವೆ. ಮನೆ ಮನೆಗಳಲ್ಲಿ ದೀಪಗಳ ಸಾಲು ರಾರಾಜಿಸಲಿದೆ. ಹಬ್ಬದಡುಗೆ ತಯಾರಾಗಲಿದೆ. ಉಡುಗೊರೆಗಳ ವಿನಿಮಯ ನಡೆಯಲಿದೆ. ಹೊಸ ಉಡುಗೆ ಗಳ ಖರೀದಿಯೂ ಜೋರಾಗಲಿದೆ. ಆದರೆ ಈ ಎಲ್ಲದರ ಖರೀದಿಗೂ ‌ನಾವು ದೊಡ್ಡ ದೊಡ್ಡ ಅಂಗಡಿಗಳು, ಮಾಲ್‌ಗಳು, ವಿದೇಶಿ ವಸ್ತುಗಳು ಸಿಗುವ ಅಂಗಡಿಗಳ ಮೊರೆ ಹೋಗುತ್ತೇವೆ. ಆ ಮೂಲಕ ಸಿರಿವಂತರ ಮತ್ತು ವಿದೇಶಿಗರ ಶ್ರೀಮಂತಿಕೆ ಹೆಚ್ಚಿಸಲು ನಮ್ಮ ಕೊಡುಗೆಗಳನ್ನು ನೀಡುತ್ತೇವೆ‌. ಈ ಬರದಲ್ಲಿ ಸಣ್ಣ ವ್ಯಾಪಾರಿಗಳು, ಸ್ವದೇಶಿ ವಸ್ತುಗಳ ವ್ಯಾಪಾರಸ್ಥರು ಗಿರಾಕಿಗಳಿಲ್ಲದೆ, ಹೆಚ್ಚು ವ್ಯಾಪಾರವೂ ನಡೆಯದೆ, ಅತ್ತ ಹಬ್ಬವನ್ನೂ ಆಚರಿಸಲಾಗದೆ ಕತ್ತಲಿನಲ್ಲಿ ದುಃಖ ಪಡುವ ಪರಿಸ್ಥಿತಿ ನಿರ್ಮಾಣವಾಗುತ್ತದೆ ಎಂದರೆ ಅದು ಸುಳ್ಳಲ್ಲ.

ದೀಪಾವಳಿ ಹಬ್ಬದ ಸಂದರ್ಭದಲ್ಲಿ ದೇಶದಲ್ಲಿ ಸುಮಾರು ಐವತ್ತು ಸಾವಿರ ಕೋಟಿ ರೂ. ಗಳಷ್ಟು ವ್ಯಾಪಾರ ವಹಿವಾಟು ನಡೆಯುವ ಸಾಧ್ಯತೆ ಇದೆ ಎಂದು ಅಖಿಲ ಭಾರತದ ವ್ಯಾಪಾರಿಗಳ ಒಕ್ಕೂಟ ತಿಳಿಸಿದೆ.

ಸ್ವದೇಶಿ ಉತ್ಪನ್ನಗಳ ಖರೀದಿಗೆ ಪ್ರಧಾನಿ ಮೋದಿ ಅವರು ದೇಶದ ಜನರಿಗೆ ಕರೆ ನೀಡಿದ್ದು, ಈ ವೋಕಲ್ ಫಾರ್ ಲೋಕಲ್ ಅಭಿಯಾನಕ್ಕೆ ಅಖಿಲ ಭಾರತ ವ್ಯಾಪಾರಿಗಳ ಒಕ್ಕೂಟದ ಸಂಪೂರ್ಣ ಬೆಂಬಲ ಇರುವುದಾಗಿಯೂ ಒಕ್ಕೂಟ ಮಾಹಿತಿ ನೀಡಿದೆ. ಈ ದೀಪಾವಳಿ ಸಮಯದಲ್ಲಿ ಪ್ರಧಾನಿ ಮೋದಿ ಅವರ ವೋಕಲ್ ಫಾರ್ ಲೋಕಲ್‌ಗೆ ದೇಶದ ಒಂಬತ್ತು ಕೋಟಿ ಉದ್ಯಮಿಗಳ ಸಂಪೂರ್ಣ ಬೆಂಬಲ ಇದೆ ಎಂದು ಹೇಳಿದ್ದಾರೆ. ಹಾಗೆಯೇ ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರ ಮನವಿಗೆ ಓ ಗೊಟ್ಟು ಮಹಿಳೆಯರಿಗೂ ದೇಶದ ಮಾರುಕಟ್ಟೆ ಒದಗಿಸುವುದಾಗಿಯೂ ಒಕ್ಕೂಟ ಹೇಳಿದೆ.

ವಾಣಿಜ್ಯೋದ್ಯಮಿಗಳು, ಸಣ್ಣ ಗೂಡಂಗಜಿಗಳಲ್ಲಿ ವ್ಯವಹಾರ ನಡೆಸುವವರು, ಅಂಗಡಿಗಳಲ್ಲಿ ವಹಿವಾಟು ನಡೆಸುತ್ತಿರುವವರಿಗೆ ಸಂಪೂರ್ಣ ಬೆಂಬಲ ನೀಡುವ ಭರವಸೆಯನ್ನೂ ಒಕ್ಕೂಟ‌ ನೀಡಿದೆ. ಹಾಗೆಯೇ ಮಹಿಳೆಯರು ಮಾರಾಟ ಮಾಡುವ ವಸ್ತುಗಳನ್ನು ಖರೀದಿ ಮಾಡಿ, ಅವರ ಮನೆಗಳಿಗೂ ಭೇಟಿ ನೀಡುವಂತೆ ಒಕ್ಕೂಟ ಹೇಳಿದೆ.

ಸ್ಥಳೀಯ ಉತ್ಪನ್ನಗಳ ಬೆಂಬಲ ಮತ್ತು ಅವುಗಳಿಗೆ ಮಾರುಕಟ್ಟೆ ಒದಗಿಸುವ ಸಲುವಾಗಿ ‘ವೋಕಲ್ ಫಾರ್ ಲೋಕಲ್’ ಕರೆಯು ಪ್ರತಿಧ್ವನಿಸುತ್ತದೆ. ಗ್ರಾಹಕರು ಮೇಡ್ ಇನ್ ಇಂಡಿಯಾ ಅಂದರೆ ಭಾರತದಲ್ಲೇ ತಯಾರಾದ ವಸ್ತುಗಳ ಖರೀದಿಗೆ ಮಹತ್ವ ನೀಡುವಂತೆಯೂ ಒಕ್ಕೂಟ ಹೇಳಿದೆ. ಚೀನಾ ವಸ್ತುಗಳನ್ನು ಬಹಿಷ್ಕರಿಸುವಂತೆ ಹೇಳಿದ್ದು, ಇದರಿಂದ ಚೀನಾ ಗೆ ಸುಮಾರು ಒಂದು ಲಕ್ಷ ಕೋಟಿ ರೂ. ನಷ್ಟವಾಗಲಿದೆ ಎಂದು ಒಕ್ಕೂಟ ಅಭಿಪ್ರಾಯ ವ್ಯಕ್ತಪಡಿಸಿದೆ.

Tags

Related Articles

Close