ಪ್ರಚಲಿತ

ಮೊದಲ ಮತ ಚಲಾಯಿಸಲು ಸಜ್ಜಾಗುತ್ತಿರುವ ಯುವ ಮತದಾರರಿಗೆ ಕೇಂದ್ರ ಸರ್ಕಾರ ಆರಂಭಿಸಿದೆ ರಾಷ್ಟ್ರೀಯ ಅಭಿಯಾನ

ಇನ್ನೇನು ಕೆಲವೇ ಸಮಯದಲ್ಲಿ ಭಾರತದಲ್ಲಿ ಲೋಕಸಭಾ ಚುನಾವಣೆ ನಡೆಯಲಿದೆ. ಈ ಚುನಾವಣೆಗಾಗಿ ಎಲ್ಲಾ ಪಕ್ಷಗಳೂ ಈಗಾಗಲೇ ಭರ್ಜರಿ ಪ್ರಚಾರ ಕಾರ್ಯದಲ್ಲಿ, ತಮ್ಮ ಅಭ್ಯರ್ಥಿಯ ಪರ ಪ್ರಚಾರ ನಡೆಸುವ ಕೆಲಸದಲ್ಲಿ ತೊಡಗಿಕೊಂಡಿವೆ. ಇನ್ನೂ ಕೆಲವು ಪಕ್ಷಗಳು ಈ ಬಾರಿ ಎಲ್ಲಿ, ಯಾರಿಗೆ ಟಿಕೆಟ್ ನೀಡಿದರೆ ಜಯ ಸಿಗಬಹುದು ಎನ್ನುವ‌ ಲೆಕ್ಕಾಚಾರ ನಡೆಸುತ್ತಿದ್ದು, ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆಯನ್ನು ನಡೆಸುತ್ತಿವೆ.

ಇದು ಪಕ್ಷಗಳಿಗೆ ಸಂಬಂಧಿಸಿದ ವಿಷಯವಾದರೆ, ಹೊಸ ಮತದಾರರಿಗೆ ಸಂಬಂಧಿಸಿದ ಹಾಗೆ ಕೇಂದ್ರ ಸರ್ಕಾರ ಆರಂಭ ಮಾಡಿರುವ ರಾಷ್ಟ್ರೀಯ ಅಭಿಯಾನವೊಂದರ ಮಾಹಿತಿ ಇಲ್ಲಿದೆ.

ಮುಂದಿನ ಲೋಕಸಭಾ ಚುನಾವಣೆಯಲ್ಲಿ ಮೊದಲ ಬಾರಿಗೆ ತಮ್ಮ ಹಕ್ಕು ಚಲಾವಣೆ ಮಾಡಲು ಮತ್ತು ಚುನಾವಣಾ ಪ್ರಕ್ರಿಯೆಯಲ್ಲಿ ಹೆಚ್ಚು ಆಸಕ್ತಿಯಿಂದ ಭಾಗವಹಿಸುವ ಹಾಗೆ ಮಾಡಲು ಕೇಂದ್ರದ ಪ್ರಧಾನಿ ಮೋದಿ ಸರ್ಕಾರ ಕಳೆದ ಮಂಗಳವಾರದಿಂದಲೇ ಹೊಸ ರಾಷ್ಟ್ರೀಯ ಅಭಿಯಾನ ಒಂದನ್ನು ಆರಂಭ ಮಾಡಿದೆ.

ಕೇಂದ್ರದ ಮಾಹಿತಿ ಮತ್ತು ಪ್ರಸಾರ ಸಚಿವಾಲಯ, ಕೇಂದ್ರ ಶಿಕ್ಷಣ ಸಚಿವಾಲಯಗಳು ‘ಬನೇಗಾ ದೇಶ್ ಮಹಾನ್, ಜಬ್ ಓಟ್ ಕರೇಂಗೆ ಹಮ್’ ಎಂಬ ಗೋವ ವಾಕ್ಯದ ಜೊತೆಗೆ ಉಪಕ್ರಮವೊಂದನ್ನು ಜಾರಿಗೆ ತಂದಿದೆ. ಈ ಬಾರಿ ಮತ ಚಲಾಯಿಸಲು ದೇಶದಲ್ಲಿ 1.85 ಕೋಟಿ ಯುವ ಮತದಾರರು ಅರ್ಹರಾಗಿದ್ದು, ಅವರನ್ನು ಗುರಿಯಾಗಿಸಿಕೊಂಡು ಈ ಉಪಕ್ರಮವನ್ನು ರೂಪಿಸಿರುವುದಾಗಿದೆ.

ಈ ಸಂಬಂಧ ಪ್ರಧಾನಿ ಮೋದಿ ಅವರು ತಮ್ಮ ಎಕ್ಸ್ ಖಾತೆಯಲ್ಲಿ ಟ್ವೀಟ್ ಮಾಡಿದ್ದು, ನಮ್ಮ ಚುನಾವಣಾ ಪ್ರಕ್ರಿಯೆಯಲ್ಲಿ ಮತ್ತಷ್ಟು ಯುವ ಮತದಾರರು ಭಾಗವಹಿಸುವ ಹಾಗೆ ಮಾಡೋಣ. ಇದೇ ಮೊದಲ ಬಾರಿಗೆ ಮತದಾರರಲ್ಲಿ ‌ತಮ್ಮದೇ ಆದ ಶೈಲಿಯಲ್ಲಿ ಮತದಾನದ ಸಂದೇಶವನ್ನು ಹರಡುವ ಹಾಗೆ, ಮತದಾನದಲ್ಲಿ ಭಾಗವಹಿಸುವಂತೆ ಯುವ ಮತದಾರರನ್ನು ಪ್ರೋತ್ಸಾಹಿಸಲು ಎಲ್ಲಾ ವರ್ಗದ ಜನರಿಗೆ ಕರೆ ನೀಡುತ್ತೇನೆ ಎಂದು ತಿಳಿಸಿದ್ದಾರೆ.

ಹಾಗೆಯೇ ಈ ಬಗ್ಗೆ ಕೇಂದ್ರ ಸಚಿವ ಅನುರಾಗ್ ಸಿಂಗ್ ಠಾಕೂರ್ ಅವರು ಸಹ ಮಾತನಾಡಿದ್ದು, ಭಾರತ ದೇಶವು ಪ್ರಜಾಪ್ರಭುತ್ವದ ಅತೀ ದೊಡ್ಡ ಹಬ್ಬಕ್ಕೆ ಸಜ್ಜಾಗುತ್ತಿದೆ. “ಮೇರಾ ಪೆಹ್ಲಾ ವೋಟ್ ದೇಶ್ ಕೇಲಿಯೇ’ ಅಭಿಯಾನಕ್ಕೆ ಸೇರಲು ಮತ್ತು ಯುವ ಮತದಾರರು ತಮ್ಮ ಪ್ರಜಾಸತ್ತಾತ್ಮಕ ಹಕ್ಕನ್ನು ಚಲಾವಣೆ ಮಾಡುವುದಕ್ಕೆ ಪ್ರೋತ್ಸಾಹಿಸಲು ನಾನು ನಿಮ್ಮೆಲ್ಲರಲ್ಲಿ ಮನವಿ ಮಾಡುತ್ತೇನೆ ಎಂದು ಹೇಳಿದ್ದಾರೆ.

Tags

Related Articles

Close