ಪ್ರಚಲಿತ

ಉಗ್ರ ಚಟುವಟಿಕೆಗಳಿಗೆ ಆರ್ಥಿಕ ನೆರವು: ಕಣಿವೆ ರಾಜ್ಯದಲ್ಲಿ ಎಸ್‌ಐಎ ದಾಳಿ

ಭಯೋತ್ಪಾದನೆ ಮತ್ತು ಭಯೋತ್ಪಾದಕರಿಗೆ ನೆರವು ನೀಡುವವರು ಈ ಸಮಾಜಕ್ಕೆ ಅಂಟಿದ ಶಾಪ. ಭಾರತದ ಅನ್ನ ತಿಂದು, ಇಲ್ಲಿನ ಗಾಳಿ, ನೀರು ಸೇವಿಸಿ, ಇಲ್ಲೇ ಹುಟ್ಟಿ ಬೆಳೆದ ಕೆಲ ನಾಲಾಯಕ್ಕುಗಳು ಈ ದೇಶದ ವಿರುದ್ಧ ಕುಕೃತ್ಯಗಳನ್ನು ‌ನಡೆಸುವ, ಕುತಂತ್ರ ರೂಪಿಸುವ ಉಗ್ರರಿಗೆ ನೆರವು ನೀಡುವ ಮೂಲಕ ದೇಶದ್ರೋಹ ಎಸಗುತ್ತಿರುವುದು ದುರಂತ ಸತ್ಯ.

ಭಯೋತ್ಪಾದನೆಗೆ ಹಣಕಾಸಿನ ನೆರವು ನೀಡುವುದಕ್ಕೆ ಸಂಬಂಧಿಸಿದ ಹಾಗೆ ಕಣಿವೆ ರಾಜ್ಯ ಜಮ್ಮು ಕಾಶ್ಮೀರದಲ್ಲಿ ರಾಜ್ಯದ ವಿಶೇಷ ತನಿಖಾ ಸಂಸ್ಥೆ ಎಸ್‌ಐಎಯು ಕಾರ್ಯಾಚರಣೆ ನಡೆಸಿದೆ. ಈ ಸಂಬಂಧ ಹಲವು ಸ್ಥಳಗಳ ಮೇಲೆ ದಾಳಿ ನಡೆಸಿ, ಪರಿಶೀಲನೆ ನಡೆಸುತ್ತಿದೆ.

ಕಣಿವೆ ರಾಜ್ಯದ ಶ್ರೀನಗರ, ಅನಂತನಾಗ್ ಜಿಲ್ಲೆ, ಪುಲ್ವಾಮಾ ಜಿಲ್ಲೆ ಮೊದಲಾದೆಡೆಗಳಲ್ಲಿ ಭಯೋತ್ಪಾದಕರಿಗೆ ಆರ್ಥಿಕ ನೆರವು ಒದಗಿಸುತ್ತಿರುವ ಹಿನ್ನೆಲೆಯಲ್ಲಿ ದಾಳಿ ನಡೆಸಲಾಗುತ್ತಿದೆ ಎಂದು ಮೂಲಗಳು ಹೇಳಿವೆ. ಕಳೆದ ಬುಧವಾರ ಸಹ ಇದೇ ರೀತಿಯಲ್ಲಿ ಎಸ್‌ಐಎ ದಾಳಿ ನಡೆಸಿತ್ತು ಎಂಬುದಾಗಿ ಮೂಲಗಳು ತಿಳಿಸಿವೆ.

ಈ ದಾಳಿಯು ಅಪರಾಧದ ಮೂಲಕ ಆರ್ಥಿಕತೆ ಸಂಗ್ರಹ ಮಾಡುವುದು, ಆ ಹಣವನ್ನು ಭಯೋತ್ಪಾದಕರು, ಭಯೋತ್ಪಾದನಾ ಚಟುವಟಿಕೆ, ಪ್ರತ್ಯೇಕತೆ ಹೀಗೆ ಹತ್ತು ಹಲವು ಕಾನೂನು ಬಾಹಿರ ಮತ್ತು ಸಾಮಾಜಿಕ ಸ್ವಾಸ್ಥ್ಯ ಹಾಳು ಮಾಡುವಂತಹ ಕೃತ್ಯಗಳಿಗೆ ಬಳಕೆ ಮಾಡುತ್ತಿರುವವರ ವಿರುದ್ಧ ನಡೆದಿದೆ. ಕಾನೂನು ಬಾಹಿರ ಚಟುವಟಿಕೆಗಳನ್ನು ನಡೆಸುವವರ ವಿರುದ್ಧ ಈ ಕ್ರಮ ಕೈಗೊಳ್ಳಲಾಗಿದೆ ಎಂದು ತನಿಖಾ ಸಂಸ್ಥೆ ತಿಳಿಸಿದೆ.

ಈ ವಿಚಾರಕ್ಕೆ ಸಂಬಂಧಿಸಿದ ಹಾಗೆ ವಿಚಾರಣೆ ನಡೆಸಿ, ಅದರಲ್ಲಿ ಸಿಕ್ಕ ಮಾಹಿತಿಯ ಹಾಗೆ ಜಮ್ಮು ಕಾಶ್ಮೀರದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ. ಎರಡು ವರ್ಷಗಳಲ್ಲಿ 85 ಕೋಟಿ ರೂ. ಗಳನ್ನು ಸಂಗ್ರಹಿಸಲಾಗಿದೆ ಮತ್ತು ಹಣಕಾಸು ವಂಚನೆ ಮಾಡಲಾಗಿರುವ‌ ಬಗ್ಗೆ ಮಾಹಿತಿ ಸಿಕ್ಕಿರುವುದಾಗಿಯೂ ಪೊಲೀಸರು ಹೇಳಿದ್ದಾರೆ.

ಇಂತಹ ಚಟುವಟಿಕೆ ನಡೆಸುವವರು ಕಾನೂನಿನ ಕಣ್ಣು ತಪ್ಪಿಸುವ ಸಲುವಾಗಿ ಹೆಚ್ಚು ನಗದು ವ್ಯವಹಾರಗಳನ್ನೇ ನಡೆಸುತ್ತಿದ್ದಾರೆ. ಈ ಸಂಬಂಧ ತನಿಖೆ ನಡೆಸಲಾಗಿದ್ದು, ಇದರಲ್ಲಿ ತಿಳಿದು ಬಂದ ಅಂಶಗಳ ಆಧಾರದ ಮೇಲೆ ಕಾನೂನಿನಡಿ ಪ್ರಕರಣ ದಾಖಲು ಮಾಡಿರುವುದಾಗಿಯೂ ತನಿಖಾ‌ ಸಂಸ್ಥೆ ಮಾಹಿತಿ ನೀಡಿದೆ.

Tags

Related Articles

Close