ಪ್ರಚಲಿತ

ಆಂತರಿಕ ವಿಷಯಗಳಲ್ಲಿ ಮೂಗು ತೂರಿಸುವ ಪಾಕಿಸ್ತಾನಕ್ಕೆ ಭಾರತದ ಖಡಕ್ ಎಚ್ಚರಿಕೆ

ಭಾರತದ ಮುಕುಟಮಣಿ ಎಂದೇ ಖ್ಯಾತಿ ಪಡೆದ ಜಮ್ಮು ಕಾಶ್ಮೀರದ ವಿಷಯದಲ್ಲಿ ಅನಗತ್ಯವಾಗಿ ಪಾಕಿಸ್ತಾನ ಸದಾ ಒಂದಿಲ್ಲೊಂದು ರಗಳೆಗಳನ್ನು ಮಾಡುತ್ತಾ, ಮೂಗು ತೂರಿಸುತ್ತಾ ಇರುತ್ತದೆ. ಭಾರತ ತನ್ನ ಆಂತರಿಕ ವಿಷಯಗಳಲ್ಲಿ ಮೂಗು ತೂರಿಸದಂತೆ ಪಾಕ್‌ಗೆ ಅದೆಷ್ಟೇ ತಾಕೀತು ಮಾಡಿದರೂ, ಪಾಪಿ ಪಾಕಿಸ್ತಾನ ಮಾತ್ರ ನಂದೆಲ್ಲಿಡ್ಲಿ ಎಂದುಕೊಂಡು ವಿವಾದಗಳನ್ನು ಮಾಡುತ್ತದೆ.

ಈ ವಿಷಯಕ್ಕೆ ಸಂಬಂಧಿಸಿದ ಹಾಗೆ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಯ 55 ನೇ ನಿಯಮಿತ ಅಧಿವೇಶನದ ಉನ್ನತ ಮಟ್ಟದ ಸೆಗ್ಮೆಂಟ್‌ನಲ್ಲಿ ಭಾರತ ‘ಪ್ರತ್ಯುತ್ತರ ಹಕ್ಕು’ ಚಲಾವಣೆ ಮಾಡಿದೆ.

ವಿಶ್ವಸಂಸ್ಥೆಯ ಭಾರತದ ಮೊದಲ ಕಾರ್ಯದರ್ಶಿ ಅನುಪಮಾ ಸಿಂಗ್ ಅವರು ಈ ಪ್ರತ್ಯುತ್ತರ ಹಕ್ಕು ಚಲಾಯಿಸಿದ್ದು, ಜಮ್ಮು ಮತ್ತು ಕಾಶ್ಮೀರಕ್ಕೆ ಸಂಬಂಧಿಸಿದ ವಿಷಯಗಳು ಭಾರತದ ಆಂತರಿಕ ವಿಷಯಗಳಾಗಿವೆ. ಭಾರತದ ಆಂತರಿಕ ವಿಷಯಗಳಲ್ಲಿ ಮೂಗು ತೂರಿಸುವ ಹಕ್ಕು ಪಾಕಿಸ್ತಾನಕ್ಕೆ ಇಲ್ಲ. ಈ ಸಂಬಂಧ ಪಾಕ್ ಯಾವುದೇ ಸ್ಥಾನವನ್ನು ಹೊಂದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಜಮ್ಮು ಕಾಶ್ಮೀರ ಮತ್ತು ಲಡಾಕ್‌ನ ಸಂಪೂರ್ಣ ಭಾಗಗಳು ಭಾರತ ದೇಶದ ಅವಿಭಾಜ್ಯ ಅಂಗಗಳಾಗಿವೆ. ಭಾರತದ ಬೇರ್ಪಡಿಸಲಾಗದ ಭಾಗಗಳಿವು ಎಂದೇ ಹೇಳಬಹುದಾಗಿದೆ. ಕೇಂದ್ರಾಡಳಿತ ಪ್ರದೇಶಗಳಾಗಿರುವ ಈ ಪ್ರದೇಶಗಳ ಸಾಮಾಜಿಕ, ಆರ್ಥಿಕ ಅಭಿವೃದ್ಧಿ ಮತ್ತು ಉತ್ತಮ ಆಡಳಿತವನ್ನು ಖಚಿತ ಪಡಿಸಿಕೊಳ್ಳಲು ಭಾರತ ಸರ್ಕಾರ ಸಾಂವಿಧಾನಿಕವಾಗಿ ಕ್ರಮಗಳನ್ನು ಕೈಗೊಂಡಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಪಾಕಿಸ್ತಾನ ಭಾರತದ ಜಮ್ಮು ಕಾಶ್ಮೀರದ ವಿಷಯವಾಗಿ ಸುಧೀರ್ಘವಾಗಿ ಉಲ್ಲೇಖಿಸಿದ್ದು, ಇದಕ್ಕೆ ಅವರು ಪ್ರತಿಕ್ರಿಯೆ ನೀಡಿರುವುದಾಗಿದೆ. ಪಾಕಿಸ್ತಾನ ಭಾರತಕ್ಕೆ ಸಂಬಂಧಿಸಿದ ಹಾಗೆ ಸುಳ್ಳು ಆರೋಪಗಳನ್ನು ಪ್ರಚಾರ ಮಾಡಲು, ಮಂಡಳಿಯ ವೇದಿಕೆಯನ್ನು ದುರುಪಯೋಗ ಮಾಡಿಕೊಂಡಿದೆ. ಇದು ಬೇಸರದ ವಿಷಯ. ಜಗತ್ತಿನೆಲ್ಲೆಡೆ ಭಯೋತ್ಪಾದನೆಯ ಮೂಲಕ ರಕ್ತ ಹರಿಸಿಕೊಂಡು ಮಾತನಾಡುವ ಪಾಕಿಸ್ತಾನದ ಬಗ್ಗೆ ಹೆಚ್ಚು ಗಮನ ನೀಡಲು ಭಾರತದಿಂದ ಸಾಧ್ಯವಿಲ್ಲ. ಪಾಕ್ ಸರ್ಕಾರ ಅವರ ನೈಜ ಹಿತಾಸಕ್ತಿಗಳನ್ನು ಪೂರೈಸುವಲ್ಲಿ ಸೋತಿದೆ ಎಂದೂ ಅವರು ಇದೇ ಸಂದರ್ಭದಲ್ಲಿ ತಿಳಿಸಿದ್ದಾರೆ.

Tags

Related Articles

Close