ಪ್ರಚಲಿತ

ಯುಪಿಎ ಅವಧಿಯಲ್ಲಿ ದೇಶದ ಆರ್ಥಿಕ ಸ್ಥಿತಿ ಹೇಗಿತ್ತು ಗೊತ್ತೇ?

ದೇಶದ ಹಣಕಾಸು ಪರಿಸ್ಥಿತಿಗೆ ಸಂಬಂಧಿಸಿದ ಹಾಗೆ ಕೇಂದ್ರ ವಿತ್ತ ಸಚಿವೆ ‌ನಿರ್ಮಲಾ ಸೀತಾರಾಮನ್ ಅವರು ನಿನ್ನೆ ಲೋಕಸಭೆಯಲ್ಲಿ 59 ಪುಟಗಳ ಶ್ವೇತಪತ್ರ ಹೊರಡಿಸಿದ್ದಾರೆ.

ಕಳೆದ ಒಂದು ದಶಕದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್.ಡಿ.ಎ. ಆಡಳಿತದಲ್ಲಿ ಅದಕ್ಕೂ ಹಿಂದಿನ ಯುಪಿಎ ಸರ್ಕಾರ ಆಡಳಿತ ನಡೆಸುತ್ತಿದ್ದಾಗ ಇದ್ದ ಸಮಸ್ಯೆಗಳು, ಅಧಿಕಾರದ ಬಳಿಕ ಬಿಟ್ಟು ಹೋದ ಸಮಸ್ಯೆಗಳನ್ನು ಯಶಸ್ವಿಯಾಗಿ ಪರಿಹರಿಸಿದೆ. ಇದನ್ನು ಹೇಗೆ ಯಶಸ್ವಿಯಾಗಿ ನಿವಾರಣೆ ಮಾಡಲಾಗಿದೆ ಮತ್ತು ದೇಶವನ್ನು ಉನ್ನತವಾದ ಸುಸ್ಥಿರ ಬೆಳವಣಿಗೆಯ ಹಾದಿಯಲ್ಲಿ ಇರಿಸುವುದಕ್ಕಾಗಿ ಕೇಂದ್ರ ಸರ್ಕಾರ ಯಾವ ರೀತಿಯ ದಾರಿಯನ್ನು, ಕಠಿಣ ನಿರ್ಣಯಗಳನ್ನು ತೆಗೆದುಕೊಂಡಿದೆ ಎಂಬುದಾಗಿಯೂ ಅವರು ಶ್ವೇತಪತ್ರದಲ್ಲಿ ತಿಳಿಸಿದ್ದಾರೆ.

ಯುಪಿಎ ಅಧಿಕಾರಾವಧಿಯ ಬಳಿಕ ಅಂದರೆ 2014 ರಲ್ಲಿ ಕೇಂದ್ರದ ಆಡಳಿತ ಚುಕ್ಕಾಣಿಯನ್ನು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಒಕ್ಕೂಟ ವಹಿಸಿಕೊಂಡಿತು. ಈ ಸಂದರ್ಭದಲ್ಲಿ ದೇಶದ ಆರ್ಥಿಕತೆ ದುರ್ಬಲ ಸ್ಥಿತಿಗೆ ತಲುಪಿತ್ತು. ಹಾಗೆಯೇ ಸಾರ್ವಜನಿಕ ಹಣಕಾಸು ಕ್ಷೇತ್ರ ಅತ್ಯಂತ ಶೋಚನೀಯ ಸ್ಥಿತಿಯಲ್ಲಿತ್ತು. ಹಣಕಾಸು ನಿರ್ವಹಣಾ ಶೈಲಿ ಸರಿಯಾಗಿರಲಿಲ್ಲ ಎಂದೂ ಅವರು ಶ್ವೇತಪತ್ರದಲ್ಲಿ ಮಾಹಿತಿ ನೀಡಿದ್ದಾರೆ.

ದೇಶದಲ್ಲಿ 2014ಕ್ಕೂ ಮೊದಲು ಆರ್ಥಿಕ ವಿಚಾರದಲ್ಲಿ ಅಶಿಸ್ತು, ವ್ಯಾಪಕ ಭ್ರಷ್ಟಾಚಾರ ತಾಂಡವವಾಡುತ್ತಿತ್ತು. ಒಂದು ರೀತಿಯ ಆರ್ಥಿಕ ಮುಗ್ಗಟ್ಟಿನ ಸ್ಥಿತಿ ದೇಶದಲ್ಲಿ ನಿರ್ಮಾಣವಾಗಿತ್ತು ಎಂದು ಈ ಪತ್ರದಲ್ಲಿ ಹೇಳಲಾಗಿದೆ. ಆ ಸಂದರ್ಭದಲ್ಲಿ ಶ್ವೇತಪತ್ರ ಬಿಡುಗಡೆ ಮಾಡಿದ್ದಲ್ಲಿ ಆರ್ಥಿಕತೆಯ ನಕಾರಾತ್ಮಕ ನಿರೂಪಣೆ, ಹೂಡಿಕೆದಾರರು ವಿಶ್ವಾಸವನ್ನು ಇಳಿಸಿಕೊಳ್ಳುವ ಪರಿಸ್ಥಿತಿ ಎದುರಾಗುತ್ತಿತ್ತು ಎಂದು ಇದರಲ್ಲಿ ಹೇಳಿದ್ದಾರೆ.

ಆದರೆ ಎನ್‌ಡಿಎ ಸರ್ಕಾರ ರಾಜಕೀಯ ಮತ್ತು ಸ್ಥಿರತೆಯನ್ನು ಲಾಭವಾಗಿ ‌ಮಾಡಿಕೊಂಡು, ಈ ಅವಧಿಯಲ್ಲಿ ಆರ್ಥಿಕತೆಯ ಚೇತರಿಕೆಗೆ ಸೂಕ್ತವಾದ ಕಠಿಣ ಕ್ರಮಗಳನ್ನು ತೆಗೆದುಕೊಂಡಿತು. ಯುಪಿಎ‌ ಸರ್ಕಾರ ಆರ್ಥಿಕ ಒಳಿತು ಸಾಧಿಸುವ ದಾರಿಯಲ್ಲಿ ವಿಫಲತೆ ಕಂಡಿತು. ಆದರೆ ಎನ್‌ಡಿಎ ಸರ್ಕಾರ ತನ್ನ ಉತ್ತಮ ಆಡಳಿತದಿಂದ ಎಲ್ಲಾ ಸವಾಲುಗಳನ್ನು ಯಶಸ್ವಿಯಾಗಿ ನಿಭಾಯಿಸಿದೆ. 2047 ರ ಅವಧಿಯಲ್ಲಿ ಭಾರತ ಅಭಿವೃದ್ಧಿ ಹೊಂದಿದ ದೇಶಗಳ ಪಟ್ಟಿಗೆ ಸೇರಲು ಕೇಂದ್ರ ಸರ್ಕಾರ ಎಲ್ಲಾ ಸಿದ್ಧತೆ ನಡೆಸುತ್ತಿದೆ ಎಂದು ಶ್ವೇತಪತ್ರದಲ್ಲಿ ‌ವಿತ್ತ ಸಚಿವರು ಮಾಹಿತಿ ನೀಡಿದ್ದಾರೆ.

Tags

Related Articles

Close