ಪ್ರಚಲಿತ

ಯುದ್ಧ ನಾವು ಆರಂಭಿಸಿಲ್ಲ, ಆದರೆ ಮುಗಿಸುವವರು ನಾವೇ: ಇಸ್ರೇಲ್

ಇಸ್ರೇಲ್ ಮತ್ತು ಪ್ಯಾಲೆಸ್ತೇನ್ ಉಗ್ರರ ‌ನಡುವಿನ ಸಂಘರ್ಷ ನಡೆಯುತ್ತಿದ್ದು, ಈ ಯುದ್ಧವನ್ನು ನಾವು ಪ್ರಾರಂಭ ಮಾಡದೇ ಹೋದರೂ, ಇದನ್ನು ಕೊನೆಗೊಳಿಸುವವರು ಮಾತ್ರ ನಾವೇ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತ್ಯಾನಹು ತಿಳಿಸಿದ್ದಾರೆ.

ಕೆಲ ದಿನಗಳ ಹಿಂದಷ್ಟೇ ಪ್ಯಾಲೆಸ್ತೇನ್‌ನ ಹಮಾಸ್ ಉಗ್ರರು ಇಸ್ರೇಲ್ ವಿರುದ್ಧ ದಾಳಿ ನಡೆಸಿದ್ದರು. ಈ ಪಾಪಿ ಉಗ್ರ ವಿರುದ್ಧ ಪ್ರತೀಕಾರ ತೀರಿಸುವ ಶಪಥ ಮಾಡಿದ್ದ ಇಸ್ರೇಲ್, ಪ್ಯಾಲಿಸ್ತೇನ್ ಉಗ್ರರ ನೆಲೆಯಾದ ಗಾಜಾ ನಗರದ ಮೇಲೆ ವೈಮಾನಿಕ ದಾಳಿ ನಡೆಸಿತ್ತು. ಜೊತೆಗೆ ಅಲ್ಲಿನ ಅಲ್ ಅಮೀನ್ ಮೊಹಮ್ಮದ್ ಮಸೀದಿಯಲ್ಲಿ ಅಡಗಿದ್ದ ಉಗ್ರಗಾಮಿಗಳನ್ನು ಹೊಡೆದುರುಳಿಸಲು ಆ ಮಸೀದಿಯನ್ನೇ ಧ್ವಂಸ ಮಾಡುವ ಮೂಲಕ ನಿರ್ಣಾಯಕ ನಡೆಯನ್ನು ಪ್ರದರ್ಶಿಸಿತ್ತು.

ಹಮಾಸ್ ಉಗ್ರರ ಮೇಲಿನ ಈ ದಾಳಿಯನ್ನು ಬೆಂಬಲಿಸಿ ಅಮೆರಿಕ, ಭಾರತ ಸೇರಿದಂತೆ ವಿಶ್ವದ ಹಲವಾರು ರಾಷ್ಟ್ರಗಳು ಇಸ್ರೇಲ್ ಜೊತೆ ನಾವಿದ್ದೇವೆ ಎಂದು ಬಹಿರಂಗವಾಗಿ ಹೇಳಿದ್ದವು. ಇಸ್ರೇಲ್ ಮತ್ತು ಪ್ಯಾಲೆಸ್ತೇನ್ ಉಗ್ರರ ನಡುವಿನ ಈ ತಿಕ್ಕಾಟದ ಬಳಿಕ ಪ್ಯಾಲೆಸ್ತೇನ್‌ಗೆ ಇಂಧನ, ವಿದ್ಯುತ್, ಅಂತರ್ಜಾಲ ಹೀಗೆ ಎಲ್ಲಾ ವ್ಯವಸ್ಥೆಗಳನ್ನು ಕಡಿತಗೊಳಿಸುವ ಮೂಲಕ ಉಗ್ರ ರಿಗೆ ಮದ್ದೆರೆವ‌ ಕೆಲಸವನ್ನು ಸಹ ಇಸ್ರೇಲ್ ಮಾಡಿತ್ತು. ಅಮೆರಿಕ ಇಸ್ರೇಲ್‌ಗೆ ಸೇನಾ ನೆರವನ್ನು ನೀಡುವುದಾಗಿಯೂ ತಿಳಿಸಿತ್ತು.

ಈ ಎಲ್ಲಾ ಬೆಳವಣಿಗೆಗಳ ಬಳಿಕ ಇದೀಗ ಇಸ್ರೇಲ್ ಪ್ರಧಾನಿ ಈ ಸಂಬಂಧ ಹೇಳಿಕೆ ನೀಡಿದ್ದು, ಹಮಾಸ್ ಉಗ್ರ ವಿರುದ್ಧ ಪ್ರತೀಕಾರ ತೀರಿಸಲು ಮೂರು ಲಕ್ಷ ಸೈನಿಕರನ್ನು ಸಜ್ಜುಗೊಳಿಸಲಾಗಿದೆ. ಇಸ್ರೇಲ್ ಯುದ್ಧದಲ್ಲಿದೆ. ಇದನ್ನು ಇಸ್ರೇಲ್ ಬಯಸಿರಲಿಲ್ಲ. ಆದರೂ ಹಮಾಸ್ ಉಗ್ರರು ಈ ಯುದ್ಧವನ್ನು ನಮ್ಮ ಮೇಲೆ ಬಲವಂತವಾಗಿ ಹೇರಿದ್ದಾರೆ. ಇದನ್ನು ನಾವು ಆರಂಭ ಮಾಡಿಲ್ಲ, ಆದರೆ ಮುಗಿಸುವವರು ‌ನಾವೇ ಆಗಿರುತ್ತೇವೆ ಎಂದು ಅವರು ನುಡಿದಿದ್ದಾರೆ.

ಹಮಾಸ್ ನಡೆಸಿರುವ ಈ ವಿದ್ವಂಸಕ ಕೃತ್ಯಕ್ಕೆ ಬೆಲೆ ತೆರುತ್ತದೆ. ಜೊತೆಗೆ ಇದರ ಪರಿಣಾಮವನ್ನು ಸಹ ದೀರ್ಘ ಕಾಲದ ವರೆಗೆ ನೆನಪಿಟ್ಟುಕೊಳ್ಳುತ್ತದೆ. ನಮ್ಮ ಮೇಲೆ ದಾಳಿ ಮಾಡುವ ಮೂಲಕ ಹಮಾಸ್ ಉಗ್ರರು ಐತಿಹಾಸಿಕ ತಪ್ಪನ್ನು ಮಾಡಿದ್ದಾರೆ. ಇದು ಸಹ ಹಮಾಸ್ ಉಗ್ರರ ಗಮನಕ್ಕೆ ಬರಲಿದೆ. ಇದು ಪ್ಯಾಲೆಸ್ತೇನ್‌ಗೆ ಮತ್ತು ಇಸ್ರೇಲ್‌ನ ಇತರ ಶತ್ರುಗಳಿಗೆ ‌ಮುಂಬರುವ ದಶಕಗಳ ವರೆಗೆ ನೆನಪಿಟ್ಟುಕೊಳ್ಳುವಂತಹ ಪಾಠ ಕಲಿಸಲಿದೆ. ಅಂತಹ ಬೆಲೆಯನ್ನು ನಾವು ನೀಡುತ್ತೇವೆ ಎಂದು ನೇತ್ಯಾನಹು ಎಚ್ಚರಿಕೆ ನೀಡಿದ್ದಾರೆ.

Tags

Related Articles

Close