ಪ್ರಚಲಿತ

ಚಂದ್ರನ ಬಳಿಕ ಸೂರ್ಯನಲ್ಲಿಗೆ ಹೊರಟ ಇಸ್ರೋ

ಭಾರತದ ಹೆಮ್ಮೆಯ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೋ‌ವು ಸದಾ ಒಂದಿಲ್ಲೊಂದು ವಿಭಿನ್ನ ಪ್ರಯತ್ನಗಳನ್ನು ಮಾಡುವ ಮೂಲಕ ಸುದ್ದಿಯಲ್ಲಿರುತ್ತದೆ.

ಕೆಲ ದಿನಗಳ ಹಿಂದಷ್ಟೇ ಇಸ್ರೋ‌ವು ಬಹು ನಿರೀಕ್ಷಿತ ಚಂದ್ರಯಾನ -3 ಉಪಗ್ರಹವನ್ನು ಯಶಸ್ವಿಯಾಗಿ ಉಡಾವಣೆ ಮಾಡುವ ಮೂಲಕ ಎಲ್ಲರ ಪ್ರಶಂಸೆಗೆ ಪಾತ್ರವಾಗಿತ್ತು. ಚಂದ್ರನ ಸ್ಥಿತಿಗತಿಗಳ ಬಗ್ಗೆ ತಿಳಿಯುವ ನಿಟ್ಟಿನಲ್ಲಿ ಈ ನೌಕೆಯನ್ನು ಚಂದ್ರನಂಗಳಕ್ಕೆ ಕಳುಹಿಸಿದ್ದು, ಇದು ಆಗಸ್ಟ್ 23 ರಂದು ಚಂದ್ರನನ್ನು ಸೇರಲಿದೆ ಎನ್ನುವ ಮಾಹಿತಿಯನ್ನು ಸಹ ಇಸ್ರೋ ಈಗಾಗಲೇ ನೀಡಿದೆ.

ಈ ಮಹತ್ವದ ಸಾಧನೆಯ ಬಳಿಕ ಇಸ್ರೋ ಮತ್ತೊಂದು ಮಹತ್ವದ ಸಾಧನೆಯನ್ನು ಮೆರೆಯಲು ಯೋಜನೆ ರೂಪಿಸಿದೆ. ಚಂದ್ರನ ನಂತರ ಸೂರ್ಯನ ಅಧ್ಯಯನ ನಡೆಸಲು ಮುಂದಾಗಿರುವ ಸಂಸ್ಥೆ, ಇದಕ್ಕಾಗಿ ಉಪಗ್ರಹವೊಂದನ್ನು ‌ಸಹ ಸಿದ್ಧಗೊಳಿಸಿದೆ. ಆದಿತ್ಯನ ಅಂಗಳಕ್ಕೆ ಕಳುಹಿಸಲಿರುವ ನೌಕೆಯ ಚಿತ್ರವನ್ನು ಸಹ ಈಗಾಗಲೇ ಬಿಡುಗಡೆ ಮಾಡಲಾಗಿದೆ. ಈ ನೌಕೆಗೆ ಆದಿತ್ಯ – ಎಲ್1 ಎಂಬುದಾಗಿ ನಾಮಕರಣವನ್ನು ಮಾಡಲಾಗಿದೆ. ಚಂದ್ರನ ಬಳಿಕ ಸೂರ್ಯನ ಬಗೆಗೂ ಅಧ್ಯಯನ ಮಾಡಲು ಹೊರಟ ಇಸ್ರೋ ವಿಜ್ಞಾನಿಗಳ ಶ್ರಮ ಮತ್ತು ಕೆಲಸಕ್ಕೆ ಎಲ್ಲ ಕಡೆಯಿಂದ ಮೆಚ್ಚುಗೆ ವ್ಯಕ್ತವಾಗಿದೆ. ಜೊತೆಗೆ ಈ ಯೋಜನೆ ಸಹ ಯಶಸ್ವಿಯಾಗಲಿ ಎನ್ನುವ ಹಾರೈಕೆ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗುತ್ತಿದೆ.

ಈ ಯಾನಕ್ಕೆ ಸಂಬಂಧಿಸಿದ ಹಾಗೆ ಮಾಹಿತಿ ನೀಡಿರುವ ಇಸ್ರೋ ಮುಖ್ಯಸ್ಥ ಎಸ್. ಸೋಮನಾಥ ಅವರು, ಆದಿತ್ಯ-ಎಲ್1 ನೌಕೆಯನ್ನು ಸೂರ್ಯನ ಅಧ್ಯಯನಕ್ಕಾಗಿ ನಿರ್ಮಾಣ ಮಾಡಲಾಗಿದೆ. ಇದು ಸೌರ ಜ್ವಾಲೆ ಮತ್ತು ಸೌರ ಮಾರುತಗಳ ಪರಿವೀಕ್ಷಣೆ, ಪರಿಶೀಲನೆ ನಡೆಸಲಿದೆ. ಈ ಬಗ್ಗೆ ಮುಂಚಿತವಾಗಿ ಅಧ್ಯಯನ ನಡೆಸಿ, ಅದರ ಒಳಿತು ಕೆಡುಕುಗಳ ಬಗ್ಗೆ ಭೂಮಿಗೆ ಮಾಹಿತಿ ರವಾನಿಸುವ ಕೆಲಸವನ್ನು ಈ ನೌಕೆ ಮಾಡಲಿದೆ. ಸೌರ ಮಾರುತಗಳಿಂದಾಗಿ ಭೂಮಿ ಎದುರಿಸಬಹುದಾದಂತಹ ಅಪಾಯಗಳ ಮುನ್ವೆಚ್ಚರಿಕೆಯನ್ನು ಸಹ ಈ ನೌಕೆ ನೀಡಲಿದೆ ಎಂದು ತಿಳಿಸಿದ್ದಾರೆ.

ಹಾಗೆಯೇ ಸೂರ್ಯನ ವಿದ್ಯುತ್‌ ಕಾಂತೀಯ ಪ್ರಭಾವಗಳ ಬಗ್ಗೆ ಮುನ್ನೆಚ್ಚರಿಕೆ ನೀಡಿ, ಉಪಗ್ರಹಗಳು, ವಿದ್ಯುತ್ ಆಧರಿತ ಸಂವಹನ ವ್ಯವಸ್ಥೆಗಳನ್ನು ಅಪಾಯದಿಂದ ರಕ್ಷಣೆ ಮಾಡುವ ಹಿನ್ನೆಲೆಯಲ್ಲಿಯೂ ಆದಿತ್ಯ -ಎಲ್1 ಸಹಕಾರಿಯಾಗಲಿದೆ ಎಂದು ಸೋಮನಾಥ ಅವರು ಮಾಹಿತಿ ನೀಡಿದ್ದಾರೆ.

ಸೌರ ವ್ಯೂಹದ ಅತ್ಯಂತ‌ ದೊಡ್ಡ ಕಾಯ ಎಂದರೆ ಸೂರ್ಯ. ಹೈಡ್ರೋಜನ್ ಮತ್ತು ಹೀಲಿಯಂಗಳನ್ನು ಈ ಗ್ರಹ ಒಳಗೊಂಡಿದ್ದು, ಈ ಕಾರಣದಿಂದ ಸೂರ್ಯನ ಒಳ ಭಾಗ ವಿಪರೀತ ಶಾಖದಿಂದ ಕೂಡಿರುತ್ತದೆ. ಇದು ಸೂರ್ಯ‌ನನ್ನು ಉರಿಯುವ ಹಾಗೆ ಮಾಡುತ್ತದೆ. ಸೂರ್ಯ ಗ್ರಹದ ಒಳ ಪದರಗಳು 15 ಮಿಲಿಯನ್ ಡಿಗ್ರಿ ಸೆಲ್ಸಿಯಸ್ ಉಷ್ಣಾಂಶವನ್ನು ಹೊಂದಿರುತ್ತದೆ. ಒಳ ಮೈ ‌ಗೆ ಹೋಲಿಸಿದರೆ ಸೂರ್ಯನ ಹೊರ ಪದರದಲ್ಲಿ ಉಷ್ಣಾಂಶ ಕಡಿಮೆ. ಅಲ್ಲಿ ಐದು ಸಾವಿರದ ಐನೂರು ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ಇರುತ್ತದೆ.

ಸೂರ್ಯನ ಮಧ್ಯ ಭಾಗದಲ್ಲಿ ನಡೆಯುವ ನ್ಯೂಕ್ಲಿಯರ್ ಫ್ಯೂಷನ್ ಪ್ರಕ್ರಿಯೆಯಿಂದ ಶಾಖ ಹುಟ್ಟುತ್ತದೆ. ಇದೇ ಸೂರ್ಯನಿಗೆ ಶಕ್ತಿಯನ್ನು ನೀಡುತ್ತದೆ. ಆದಿತ್ಯನು ಸುಮಾರು ನಾನೂರೈವತ್ತು ಕೋಟಿ ವರ್ಷಗಳ ಹಿಂದೆ ಹುಟ್ಟಿದ್ದಾನೆ. ಈತ ಭೂಮಿಯಿಂದ ನೂರೈವತ್ತು ಮಿಲಿಯನ್ ಕಿಲೋ ಮೀಟರ್ ದೂರದಲ್ಲಿದ್ದಾನೆ.

ಒಟ್ಟಿನಲ್ಲಿ ಗ್ರಹಗಳ ಅಧ್ಯಯನ, ಅವುಗಳ ಕಾರಣಕ್ಕೆ ಭೂಮಿ ಎದುರಿಸಬಹುದಾದ ಸಂಕಷ್ಚಗಳ ಬಗ್ಗೆ ಮುನ್ನೆಚ್ಚರಿಕೆ ವಹಿಸುವ ಸಲುವಾಗಿ ಇಸ್ರೋ ಇರಿಸಿರುವ ಈ ಹೆಜ್ಜೆ ಪ್ರಶಂಸನಾರ್ಹ.ಅನ್ಯ ಗ್ರಹಗಳ ಬಗ್ಗೆ ತಿಳಿಯಲು, ಸಂಶೋಧನೆ ನಡೆಸಲು ಇಸ್ರೋ ವಿಜ್ಞಾನಿಗಳು ನಡೆಸುತ್ತಿರುವ ಇಂತಹ ಅಧ್ಯಯನ ಕಾರ್ಯಗಳು ಯಶಸೇವಿಯಾಗಲಿ. ಮತ್ತಷ್ಟು ಸಂಶೋಧನೆಗಳನ್ನು ನಡೆಸುವ ಮೂಲಕ ಇಸ್ರೋ ಭಾರತವನ್ನು ವಿಶ್ವದಲ್ಲೇ ಮಿಂಚುವಂತೆ ಮಾಡಲಿ. ಇಸ್ರೋದ ಸಾಧನೆ ವಿಶ್ವಕ್ಕೆ ಮಾದರಿಯಾಗಲಿ ಎಂಬ ಆಶಯ ನಮ್ಮದು.

Tags

Related Articles

Close