ಪ್ರಚಲಿತ

ಭಾರತದ ಆಂತರಿಕ ವಿಷಯದಲ್ಲಿ ಮೂಗು ತೂರಿಸದಿರಿ: ಉಪರಾಷ್ಟ್ರಪತಿ ಖಡಕ್ ಮಾತು

ಭಾರತದ ಆಂತರಿಕ ವಿಷಯಗಳಿಗೆ ಮೂಗು ತೂರಿಸುವ ವಿದೇಶಗಳಿಗೆ ಉಪರಾಷ್ಟ್ರಪತಿ ಜಗದೀಪ್ ಧಂಖರ್ ಅವರು ತಕ್ಕ ಪ್ರತ್ಯುತ್ತರ ನೀಡಿದ್ದಾರೆ. 

ದೆಹಲಿಯ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರನ್ನು ಇ.ಡಿ. ಅಧಿಕಾರಿಗಳು ಅಕ್ರಮ ಮದ್ಯ ನೀತಿ ಹಗರಣಕ್ಕೆ ಸಂಬಂಧಿಸಿದ ಹಾಗೆ ಭ್ರಷ್ಟಾಚಾರ ಆರೋಪದಲ್ಲಿ ಬಂಧಿಸಿದ್ದು, ಈ ಬಗ್ಗೆ ವಿದೇಶಗಳು ಮೂಗು ತೂರಿಸಿ, ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದವು.

ಅಮೆರಿಕ, ಜರ್ಮನ್, ವಿಶ್ವಸಂಸ್ಥೆ ಈ ಪ್ರಕರಣಕ್ಕೆ ಸಂಬಂಧಿಸಿದ ಹಾಗೆ ಪ್ರತಿಕ್ರಿಯೆ ನೀಡಿದ್ದವು. ವಿದೇಶಗಳ ಪ್ರತಿಕ್ರಿಯೆಗೆ ತಕ್ಕ ಪ್ರತ್ಯುತ್ತರ ನೀಡಿರುವ ಉಪರಾಷ್ಟ್ರಪತಿ ಧಂಖರ್, ಭಾರತದ ಆಂತರಿಕ ವಿಷಯಗಳಿಗೆ ಮೂಗು ತೂರಿಸದಿರಿ. ಭಾರತಕ್ಕೆ ತನ್ನ ಸಮಸ್ಯೆಗಳನ್ನು ಸ್ವತಂತ್ರವಾಗಿ ಬಗೆಹರಿಸಲು ಸಾಮರ್ಥ್ಯ ಇದೆ ಎಂದು ಹೇಳಿದ್ದಾರೆ.

ದೃಢವಾದ ನ್ಯಾಯಾಂಗ ವ್ಯವಸ್ಥೆಯನ್ನು ಹೊಂದಿರುವ ಸಾರ್ವಭೌಮ ರಾಷ್ಟ್ರವಾಗಿ ಭಾರತದ ನಿಲುವನ್ನು ಅವರು ದೃಢಪಡಿಸಿರುವುದಾಗಿದೆ. ವಿಶ್ವದ ಯಾವುದೇ ರಾಷ್ಟ್ರಗಳು ಭಾರತಕ್ಕೆ ಕಾನೂನು ನಿಯಮಗಳ ಕುರಿತಂತೆ ಬೋಧನೆ ಮಾಡುವ ಅಗತ್ಯ ಇಲ್ಲ ಎಂದು ಅವರು ಭಾರತದ ದನಿಯಾಗಿ ಸ್ಪಷ್ಟವಾಗಿ ಹೇಳಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಜನತೆ ನಮಗೆ ಕಾನೂನಿನ ನಿಯಮಗಳ ಬಗ್ಗೆ ಪಾಠ ಮಾಡುತ್ತಿದ್ದಾರೆ. ಈ ಸಂಬಂಧ ಯುರೋಪಿಯನ್ ರಾಷ್ಟ್ರಗಳು ಅಭಿವೃದ್ಧಿ ಹೊಂದಿದ ತಮ್ಮೊಳಗೆ ಆಲೋಚಿಸಬೇಕಾಗಿದೆ. ಅವರು ಕೇವಲ ತಮ್ಮ ಆಂತರಿಕ ವಿಷಯಗಳನ್ನಷ್ಟೇ‌ ನೋಡಿಕೊಂಡರೆ ಉತ್ತಮ ಎಂದು ಅವರು ಕಠುವಾಗಿ ಹೇಳಿದ್ದಾರೆ. ಭಾರತಕ್ಕೆ ತನ್ನ ಆಂತರಿಕ ವಿಷಯ, ವ್ಯವಹಾರಗಳನ್ನು ಸಮರ್ಥವಾಗಿ, ಸ್ವತಂತ್ರವಾಗಿ ನಿರ್ವಹಣೆ ಮಾಡುವ ಶಕ್ತಿ ಇದೆ ಎಂದು ಅವರು ಪ್ರತಿಪಾದಿಸಿದ್ದಾರೆ.

ಕಾನೂನಿನ ಮುಂದೆ ಎಲ್ಲರೂ ಸಮಾನರು ಎನ್ನುವುದು ಭಾರತದ ಹೊಸ ರೂಢಿಯಾಗಿದೆ. ತಾವು ಕಾನೂನಿಗೂ ದೊಡ್ಡವರು ಎಂದು ಭಾವಿಸಿದವರನ್ನು ಕಾನೂನೇ ಹೊಣೆಗಾರರನ್ನಾಗಿ ಮಾಡುತ್ತದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

Tags

Related Articles

Close