ಪ್ರಚಲಿತ

ಮಧ್ಯಪ್ರದೇಶ ವಿಧಾನಸಭಾ ಅಧಿವೇಶನ: ನೆಹರೂ ಭಾವಚಿತ್ರಕ್ಕೆ ಕೊಕ್

ಮಧ್ಯ ಪ್ರದೇಶದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿದೆ. ಇದು ಕಾಂಗ್ರೆಸ್ ಪಕ್ಷಕ್ಕೆ ನುಂಗಲಾರದ ತುತ್ತಾಗಿದೆ. ಇದರ ನಡುವೆಯೇ ಕಾಂಗ್ರೆಸ್ ಉರಿ ಹೆಚ್ಚಾಗುವಂತಹ ಘಟನೆಯೊಂದು ಸಹ ಅಲ್ಲಿನ ವಿಧಾನಸಭಾ ಅಧಿವೇಶನ ಸಂದರ್ಭದಲ್ಲಿ ನಡೆದಿದ್ದು, ಇದರಿಂದ ಕಾಂಗ್ರೆಸ್‌ಗೆ ಮತ್ತೆ ಮುಖಭಂಗವಾದಂತಾಗಿದೆ‌.

ನಿನ್ನೆಯಷ್ಟೇ ರಾಜ್ಯದ ಹದಿನಾರನೇ ವಿಧಾನಸಭಾ ಅಧಿವೇಶನ ಆರಂಭವಾಗಿದ್ದು, ಈ ಸಂದರ್ಭದಲ್ಲಿ ಸ್ಪೀಕರ್ ಆಸನದ ಹಿಂಬದಿಯಲ್ಲಿ ಅಳವಡಿಸಲಾಗಿದ್ದ ನೆಹರೂ ಭಾವಚಿತ್ರಕ್ಕೆ ‌ಕೊಕ್ ನೀಡಿ, ಆಸ್ಥಾನದಲ್ಲಿ ಭಾರತದ ಸಂವಿಧಾನ ಶಿಲ್ಪಿ ಡಾ‌. ಬಿ. ಆರ್. ಅಂಬೇಡ್ಕರ್ ಅವರ ಭಾವಚಿತ್ರವನ್ನು ಬಿಜೆಪಿ ಅಳವಡಿಸಿದೆ.

ಈ ಘಟನೆ ಕಾಂಗ್ರೆಸ್ ಪಕ್ಷದ ನಾಯಕರಲ್ಲಿ ಅಸಮಾಧಾನ ಮೂಡಿಸಿದೆ. ಹಾಗೆಯೇ ನೆಹರೂ ಭಾವಚಿತ್ರವನ್ನು‌ ತೆರವು ಮಾಡಿದ್ದಕ್ಕೆ ಆಕ್ರೋಶ‌ ವ್ಯಕ್ತಪಡಿಸಿದೆ. ಮತ್ತೆ ಸದನದಲ್ಲಿ ನೆಹರೂ ಭಾವಚಿತ್ರ ಅಳವಡಿಸದಿದ್ದಲ್ಲಿ, ಕಾಂಗ್ರೆಸ್ ಪಕ್ಷದ ಶಾಸಕರೇ ಆ ಕೆಲಸ ಮಾಡಲಿರುವುದಾಗಿ ಕಾಂಗ್ರೆಸ್ ಹೇಳಿದೆ.

ಕೆಲ ದಿನಗಳ ಹಿಂದಷ್ಟೇ ಪಿಒಕೆ (ಪಾಕ್ ಆಕ್ಯುಪೈಡ್ ಕಾಶ್ಮೀರ್) ಗೆ ಸಂಬಂಧಿಸಿದ ಹಾಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ನೆಹರೂ ವಿರುದ್ಧ ವಾಗ್ದಾಳಿ ನಡೆಸಿದ್ದರು. ಪಿಒಕೆ ಸಮಸ್ಯೆ ಉದ್ಭವವಾಗಲು ನೆಹರೂ ಅವರೇ ಕಾರಣ. ಭಾರತದ ಮುಕುಟಮಣಿ ಜಮ್ಮು ಕಾಶ್ಮೀರದ ಜನರು ಇಂದು ಪಾಕಿಸ್ತಾನದಿಂದ ತೊಂದರೆ ಅನುಭವಿಸುತ್ತಿದ್ದಾರೆ ಎಂದರೆ ಅದಕ್ಕೆ ಅಂದು ನೆಹರೂ ಮಾಡಿದ ತಪ್ಪುಗಳೇ ಕಾರಣ ಎಂದು ನೆಹರೂ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು.

ಪಿಒಕೆ ಭಾರತಕ್ಕೆ ಸೇರಿದ್ದರೂ, ಆ ಪ್ರದೇಶಕ್ಕೆ ಸಂಬಂಧಿಸಿದ ಹಾಗೆ ದೇಶ ಹಲವಾರು ಸಮಸ್ಯೆಗಳನ್ನು ಎದುರಿಸುವಂತಾಯಿತು. ಆ‌ಸಮಯದಲ್ಲಿ ನೆಹರೂ ಕದನ ವಿರಾಮ ಘೋಷಣೆ ಮಾಡದೇ ಇದ್ದಿದ್ದರೆ ಪಿಒಕೆ ಸೃಷ್ಟಿಯಾಗುವ ಪ್ರಮೇಯವೇ ಬರುತ್ತಿರಲಿಲ್ಲ ಎಂಬುದಾಗಿಯೂ ಶಾ ಹೇಳಿದ್ದರು‌‌. ಸಂಸತ್ತಿನಲ್ಲಿ ಅಮಿತ್ ಶಾ ನೆಹರೂ ವಿರುದ್ಧ ವಾಗ್ದಾಳಿ ನಡೆಸಿದ್ದರು.

ಇದಾದ ಕೆಲವೇ ದಿನಗಳಲ್ಲಿ, ಮಧ್ಯ ಪ್ರದೇಶದಲ್ಲಿ ಸದನದಿಂದ ನೆಹರೂ ಚಿತ್ರಪಟಕ್ಕೆ ಕೊಕ್ ನೀಡಿರುವುದಾಗಿದೆ. ಸದ್ಯ ಮಧ್ಯ ಪ್ರದೇಶದಲ್ಲಿ ಬಿಜೆಪಿ ಆಡಳಿತದಲ್ಲಿ ಇದೆ ಎಂಬುದೂ ಈ ಘಟನೆಗೆ ಸಂಬಂಧಿಸಿದ ಹಾಗೆ ಮಹತ್ವ‌ ಪಡೆದಿದೆ.

Tags

Related Articles

Close