ಪ್ರಚಲಿತ

ರಕ್ಷಣಾ ಪಡೆಗಳ ಉಪಯೋಗಕ್ಕೆ ತಯಾರಾಯ್ತು ‘ಉಗ್ರಂ’ ಅತ್ಯಾಧುನಿಕ ಅಸಾಲ್ಟ್ ರೈಫಲ್

ಇತ್ತೀಚಿನ ಕೆಲ ವರ್ಷಗಳಲ್ಲಿ ನಮ್ಮ ದೇಶದ ರಕ್ಷಣಾ ವ್ಯವಸ್ಥೆ ಹೆಚ್ಚು ಶಕ್ತಿಶಾಲಿಯಾಗುತ್ತಿದೆ‌. ಕೇಂದ್ರ ಸರ್ಕಾರ ಸಹ ರಕ್ಷಣಾ ಕ್ಷೇತ್ರಕ್ಕೆ ಹೆಚ್ಚಿನ ಸ್ವಾತಂತ್ರ್ಯ ಮತ್ತು ಆದ್ಯತೆ ನೀಡುತ್ತಿದೆ ಎನ್ನುವುದು ಸಂತಸದ ವಿಷಯ. ನಮ್ಮ ರಕ್ಷಣಾ ವ್ಯವಸ್ಥೆ ಬಲಗೊಂಡಾಗಲಷ್ಟೇ ನಮ್ಮ ದೇಶವಾಸಿಗಳು ನೆಮ್ಮದಿಯ ದಿನಗಳನ್ನು ಕಳೆಯುವುದು ಸಾಧ್ಯ ಎನ್ನುವುದರಲ್ಲಿ ಎರಡು ಮಾತಿಲ್ಲ. ಇದಕ್ಕೆ ಪೂರಕ ಅನುಕೂಲಗಳನ್ನು ನಮ್ಮ ಸೇನೆಗೆ ಕೇಂದ್ರ ಸರ್ಕಾರ ನೀಡುತ್ತಿದೆ ಎನ್ನುವುದರಲ್ಲಿಯೂ ಎರಡು ಮಾತಿಲ್ಲ.

ನಮ್ಮ ದೇಶದ ಹೆಮ್ಮೆಯ ಡಿಆರ್‌ಡಿಒ (ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ) 7.62×51 ಎಂಎಂ ಕ್ಯಾಲಿಬರ್‌ನ ಅತ್ಯಾಧುನಿಕವಾಗಿ ‌ವಿನ್ಯಾಸಗೊಳಿಸಲಾದ ‘ಉಗ್ರಂ’ ಎಂಬ ಅಸಾಲ್ಟ್ ರೈಫಲ್ ಅನ್ನು ಬಿಡುಗಡೆ ಮಾಡಿದೆ. ಈ ರೈಫಲ್ ಅನ್ನು ಸ್ಥಳೀಯವಾಗಿ ಮತ್ತು ಖಾಸಗಿ ಉದ್ಯಮ ಪಾಲುದಾರರ ಸಹಯೋಗದೊಂದಿಗೆ ವಿನ್ಯಾಸಗೊಳಿಸಿ, ಅಭಿವೃದ್ಧಿ ಮಾಡಿ ತಯಾರು ಮಾಡಲಾಗಿದೆ ಎಂದು ಮೂಲಗಳು ಮಾಹಿತಿ ನೀಡಿವೆ.

ಈ ರೈಫಲ್ ಅನ್ನು ಸಶಸ್ತ್ರ ಪಡೆಗಳು, ಅರೆ ಸೈನಿಕ ಪಡೆಗಳು, ರಾಜ್ಯ ಪೊಲೀಸ್ ಪಡೆಗಳು ಸೇರಿದಂತೆ ರಕ್ಷಣಾ ಪಡೆಗಳಿಗೆ, ಕಾರ್ಯಾಚರಣೆಯ ಅವಶ್ಯಕತೆಗಳಿಗಾಗಿ ಉಗ್ರಂ ಎಂಬ ಆಕ್ರಮಣಕಾರಿ, ಪವರ್ ಫುಲ್ ರೈಫಲ್ ಅನ್ನು ತಯಾರು ಮಾಡಲಾಗಿದೆ.

ಈ ಪರಿಣಾಮಕಾರಿ ರೈಫಲ್‌ನ ಮೊದಲ ಕಾರ್ಯಾಚರಣೆಯ ಮೂಲ ಮಾದರಿಯನ್ನು ಪುಣೆಯ ಡಿಆರ್‌ಡಿಒದ ಆರ್ಮಮೆಂಟ್ ಮತ್ತು ಯುದ್ಧ ಎಂಜಿನಿಯರಿಂಗ್ ವ್ಯವಸ್ಥೆಗಳ ಮಹಾ ನಿರ್ದೇಶಕ ಡಾ. ಶೈಲೇಂದ್ರ ವಿ. ಗಾಡೆ ಅನಾವರಣ ಮಾಡಿದ್ದಾರೆ.

ಅತ್ಯಂತ ಪವರ್ ಫುಲ್ ಆಗಿರುವ ಉಗ್ರಂ ರೈಫಲ್‌ನ ವಿಶಾಷತೆಯ ಬಗ್ಗೆ ಹೇಳುವುದಾದರೆ, ಇದು 500 ಮೀಟರ್‌ಗಳ ಪರಿಣಾಮಕಾರಿ ವ್ಯಾಪ್ತಿಯನ್ನು ಒಳಗೊಂಡಿದೆ. ನಾಲ್ಕು ಕೆಜಿ‌ಗಿಂತ ಕಡಿಮೆ ಭಾರವನ್ನು ಹೊಂದಿದೆ.

ಹೈದರಾಬಾದ್ ಮೂಲದ ದೀಪಾ ಆರ್ಮರ್ ಇಂಡಿಯಾ ಪ್ರೈ. ಲಿ‌. ಸಹಯೋಗದೊಂದಿಗೆ ಡಿಆರ್‌ಡಿಒ ಪುಣೆ ಮೂಲದ‌ ಸೌಲಭ್ಯ ಆರ್ಮಮೆಂಟ್ ರಿಸರ್ಚ್ ಮತ್ತು ಡೆವಲಪ್ಮೆಂಟ್ ಎಸ್ಟಾಬ್ಲಿಷ್‌ಮೆಂಟ್ ಈ ಪರಿಣಾಮಕಾರಿ ರೈಫಲ್ ಉಗ್ರಂ ಅನ್ನು ರೂಪಿಸಿದೆ.

ಒಟ್ಟಿನಲ್ಲಿ ನಮ್ಮ ದೇಶದ ರಕ್ಷಣಾ ವ್ಯವಸ್ಥೆಯೂ ಸಹ ಇತ್ತೀಚಿನ ಕೆಲ ವರ್ಷಗಳಿಂದ ಸ್ವದೇಶಿಕರಣಕ್ಕೆ ಹೆಚ್ಚು ಆದ್ಯತೆ ನೀಡುತ್ತಿದೆ. ಇದು ಯುದ್ದೋಪಕರಣಗಳ ತಯಾರಿಕೆಯಲ್ಲಿ ತೊಡಗಿಸಿಕೊಂಡ ಉದ್ಯಮಗಳಿಗೆ ಮತ್ತಷ್ಟು ಉತ್ತೇಜನ ನೀಡಿದ್ದು, ಅತ್ಯಂತ ಪರಿಣಾಮಕಾರಿ ಮತ್ತು ಅತ್ಯಾಧುನಿಕ ಉಪಕರಣಗಳನ್ನು ತಯಾರು ಮಾಡುವುದಕ್ಕೆ ಪ್ರೋತ್ಸಾಹ ನೀಡಿದೆ. ಇಂತಹ ಪ್ರೋತ್ಸಾಹದ ಪರಿಣಾಮವೇ ‘ಉಗ್ರಂ’ ನಂತಹ ಉಪಕರಣಗಳ ಅಭಿವೃದ್ಧಿ ಮತ್ತು ತಯಾರಿಕೆಗೆ ಮಾರ್ಗದರ್ಶಿಯಾಗುತ್ತಿದೆ ಎನ್ನುವುದರಲ್ಲಿ ಎರಡು ಮಾಡಿಲ್ಲ.

Tags

Related Articles

Close