ಪ್ರಚಲಿತ

ಅಮೆರಿಕಾದಲ್ಲಿ ಲೋಕಾರ್ಪಣೆಗೆ ‌ಸಜ್ಜಾಗಿ ನಿಂತ ಹಿಂದೂ ದೇವಾಲಯ

ಭಾರತ ಮಾತ್ರವಲ್ಲ, ವಿಶ್ವದ ಹಲವು ರಾಷ್ಟ್ರಗಳಲ್ಲಿ ಸನಾತನ ಹಿಂದೂ ಧರ್ಮವನ್ನು ಆಚರಿಸುವ, ಸನಾತನ ಹಿಂದೂ ಧರ್ಮದ ಮೇಲೆ ಅಭಿಮಾನ ಹೊಂದಿರುವ, ಪ್ರೀತಿಸುವ ಜನರಿದ್ದಾರೆ. ‌ಪ್ರಸ್ತುತ ಹಿಂದೂ ಧರ್ಮದ ಶ್ರೇಷ್ಠತೆಯನ್ನು ಅರಿತು, ಹಿಂದೂ ಧರ್ಮವನ್ನು ಸ್ವೀಕರಿಸಿದ ಹಲವು ವಿದೇಶಿಗರಿದ್ದಾರೆ. ಹಾಗೆಯೇ ಹಿಂದೂ ಧರ್ಮದ ದೇವತೆಗಳು, ಧಾರ್ಮಿಕ ನಂಬಿಕೆಗಳನ್ನು ಪೂಜಿಸುವವರು ದೇಶ ವಿದೇಶಗಳಲ್ಲಿ ಸಾಕಷ್ಟು ಜನರಿದ್ದಾರೆ ಎನ್ನುವುದು ಸಂತಸದ ವಿಷಯ.

ಹಿಂದೂ ಧರ್ಮದ ದೇವರುಗಳಿಗೆ ಆಲಯಗಳನ್ನು ನಿರ್ಮಾಣ ಮಾಡಿ ಪೂಜೆ ಸಲ್ಲಿಸುವ ಹಲವು ದೇಶಗಳಿವೆ. ಸದ್ಯ ಅಮೆರಿಕಾದ ನ್ಯೂ ಜೆರ್ಸಿಯಲ್ಲಿ ಹಿಂದೂ ದೇವಾಲಯವೊಂದು ಲೋಕಾರ್ಪಣೆಯಾಗಲಿದೆ. ಈ ದೇವಾಲಯವು ವಿಶ್ವದ ಎರಡನೇಯ ಅತಿ ದೊಡ್ಡ ಮತ್ತು ಕೈಯಿಂದಲೇ ಕೆತ್ತನೆ ಮಾಡಿದ ದೇವಾಲಯ ಎಂಬ ಕೀರ್ತಿಗೂ ಭಾಜನವಾಗಲಿದ್ದು, ಅಕ್ಟೋಬರ್ 8 ರಂದು ಈ ದೇವಾಲಯ ಸಾರ್ವಜನಿಕರ ಪ್ರವೇಶಕ್ಕೆ ತೆರೆದುಕೊಳ್ಳಲಿದೆ.

ಈ ದೇವಾಲಯವು ನ್ಯೂಯಾರ್ಕ್‌ನ ಟೈಮ್ಸ್ ಸ್ಕ್ವೇರ್‌ನಿಂದ ದಕ್ಷಿಣಕ್ಕೆ ಸುಮಾರು ತೊಂಬತ್ತು ಕಿಮೀ ಮತ್ತು ವಾಷಿಂಗ್ಟನ್ ಡಿಸಿ ‌ಯಿಂದ ಉತ್ತರ ಭಾಗಕ್ಕೆ ಸುಮಾರು ಇನ್ನೂರ ಎಂಬತ್ತೊಂಬತ್ತು ಕಿಮೀ ದೂರದಲ್ಲಿದೆ ಎಂದು ಮೂಲಗಳು ಹೇಳಿವೆ. ನ್ಯೂಜೆರ್ಸಿಯ ಲಿಟಲ್ ರಾಬಿನ್ಸ್ ವಿಲ್ಲೆ ಟೌನ್ ಶಿಪ್‌ನಲ್ಲಿರುವ ಸುಮಾರು ನೂರಾರು ಎಂಬತ್ತ ಮೂರು ಎಕರೆ ಪ್ರದೇಶದಲ್ಲಿ ನಿರ್ಮಾಣ ಮಾಡಲಾಗಿದೆ. ಇದು ಬಿಎಪಿಎಸ್ ಸ್ವಾಮಿ ನಾರಾಯಣ ಅಕ್ಷರಧಾಮ ದೇವಾಲಯವಾಗಿದೆ.

ಈ‌ ದೇಗುಲವನ್ನು ಅಮೆರಿಕಾದ 12,500ಕ್ಕೂ ಹೆಚ್ಚಿನ ಸ್ವಯಂಸೇವಕರು ನಿರ್ಮಾಣ ಮಾಡಿದ್ದಾರೆ. ಕಳೆದ ಹನ್ನೊಂದು ವರ್ಷಗಳಿಂದ ಈ ದೇವಾಲಯದ ನಿರ್ಮಾಣ ಕಾರ್ಯ ನಡೆಯುತ್ತಿದ್ದು, ಸದ್ಯ ಈ ಕಾಮಗಾರಿ ಪೂರ್ಣಗೊಂಡು ಲೋಕಾರ್ಪಣೆಗೆ ಸಿದ್ಧವಾಗಿದೆ. ಆ ಮೂಲಕ ಭಕ್ತರಿಗೆ ದರ್ಶನ ಭಾಗ್ಯ ನೀಡಲು ಸ್ವಾಮಿ ನಾರಾಯಣ ಅಕ್ಷರಧಾಮ ಸರ್ವ ಸನ್ನದ್ಧವಾಗಿದೆ.

ಇದು ಭಾರತದ ಹೊರತಾದಂತೆ ನಿರ್ಮಾಣವಾದ ವಿಶ್ವದ ಎರಡನೇ ಅತಿ ದೊಡ್ಡ ದೇಗುಲವಾಗಿದೆ. ಈ ದೇವಾಲಯವನ್ನು ಪ್ರಾಚೀನ ಧರ್ಮ ಗ್ರಂಥಗಳ ಆಧಾರವನ್ನು ಇರಿಸಿಕೊಂಡು ನಿರ್ಮಾಣ ಮಾಡಲಾಗಿದೆ. ಸುಮಾರು ಹತ್ತು ಸಾವಿರ ಪ್ರತಿಮೆಗಳನ್ನು ನಾವು ಈ ನೂತನ ದೇಗುಲದಲ್ಲಿ ಕಾಣಬಹುದಾಗಿದೆ. ಹಾಗೆಯೇ ಭಾರತೀಯ ಸಂಗೀತ ವಾದ್ಯಗಳು, ನೃತ್ಯ ಪ್ರಕಾರಗಳ ಕೆತ್ತನೆಯ ಮೂಲಕವೂ ಈ ದೇವಾಲಯದ ಆವರಣವನ್ನು ಕಲಾತ್ಮಕಗೊಳಿಸಲಾಗಿದೆ.

ಈ ಹೊಸ ದೇವಾಲಯವು ಸನಾತನ ಭಾರತೀಯ ಸಂಸ್ಕೃತಿಯ ವಿನ್ಯಾಸಗಳನ್ನು ಸಹ ಒಳಗೊಂಡಿದೆ. ವಿಶ್ವದ ಮೊದಲ ಅತಿ ದೊಡ್ಡ ದೇವಾಲಯ ಎಂಬ ಖ್ಯಾತಿಗೆ ಕಾಂಬೋಡಿಯಾದ ಅಂಕೋರ್ ವಾಟ್ ಭಾಜನವಾಗಿದ್ದು, ಆ ಬಳಿಕದ ‌ಸ್ಥಾನವನ್ನು ನ್ಯೂಜೆರ್ಸಿಯ ಈ ಹೊಸ ದೇವಾಲಯ ಅಲಂಕರಿಸಲಿದೆ. ಇದು ಸುಮಾರು ಐನೂರು ಎಕರೆ ಪ್ರದೇಶದಲ್ಲಿ ಹಬ್ಬಿದ್ದು, ಯುನೆಸ್ಕೋ ವಿಶ್ವ ಪಾರಂಪರಿಕ ತಾಣಗಳ ಪಟ್ಟಿಯಲ್ಲಿಯೂ ‌ಸ್ಥಾನ ಪಡೆದಿದೆ.

Tags

Related Articles

Close