ಪ್ರಚಲಿತ

ಗಡಿ ಸಮಸ್ಯೆ ಮುಗಿಯದೆ ಪಾಕ್ ಜೊತೆಗಿಲ್ಲ ವ್ಯಾಪಾರ ಸಂಬಂಧ: ಭಾರತ

ಭಾರತದ ವಿರುದ್ಧ ಸದಾ ಕಾಲ ಸಂಚು ಹೂಡುವ, ಕಾಲು ಕೆರೆದು ಜಗಳಕ್ಕೆ ಬರುವ, ಅಂತರಾಷ್ಟ್ರೀಯ ವೇದಿಕೆಗಳಲ್ಲಿ ಭಾರತದ ವಿರುದ್ಧ ಮಾತನಾಡಿ ಮರ್ಯಾದೆ ಕಳೆದುಕೊಳ್ಳುವ ರಾಷ್ಟ್ರ ಪಾಕಿಸ್ತಾನ. ಭಾರತದ ಆಜನ್ಮ ಶತ್ರು ಎಂದೇ ಹೇಳಬಹುದಾದ ಪಾಕ್ ಜೊತೆಗಿನ ವ್ಯಾಪಾರ ಸಂಬಂಧದ ಬಗ್ಗೆ ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈ ಶಂಕರ್ ಅವರು ಮಾತನಾಡಿದ್ದಾರೆ.

ಗುಜರಾತ್‌ನ ಸೂರತ್‌ನಲ್ಲಿ ನಡೆದ ‘ದಕ್ಷಿಣ ಗುಜರಾತ್ ಚೇಂಬರ್ಸ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರಿ’ ಆಯೋಜನೆ ಮಾಡಿದ್ದ ‘ಭಾರತದ ಆರ್ಥಿಕ ಏರಿಕೆ’ ಶೃಂಗಸಭೆಯಲ್ಲಿ ಅವರು ಮಾತನಾಡುವ ವೇಳೆ ಈ ವಿಚಾರದ ಕುರಿತು ಸ್ಪಷ್ಟವಾಗಿ ಹೇಳಿರುವುದಾಗಿದೆ.

ಭಾರತ ಮತ್ತು ಪಾಕ್ ಗಡಿಯಲ್ಲಿ ಉದ್ವಿಗ್ನತೆ ಶಮನವಾಗದ ಹೊರತು ಪಾಕಿಸ್ತಾನದ ಜೊತೆಗೆ ಭಾರತ‌ ಯಾವುದೇ ಕಾರಣಕ್ಕೂ ವ್ಯಾಪಾರ ಸಂಬಂಧ ನಡೆಸುವುದಿಲ್ಲ ಎಂದು ಅವರು ಖಡಾಖಂಡಿತವಾಗಿ ಹೇಳಿದ್ದಾರೆ. ಜೊತೆಗೆ ಭಾರತ ಯಾವುದೇ ರೀತಿಯ ಭಯೋತ್ಪಾದನೆಯನ್ನು ಸಹ ಸಹಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಇದೇ ಸಭೆಯಲ್ಲಿ ಅರುಣಾಚಲ ಪ್ರದೇಶದ ಮೇಲೆ ತನ್ನ ಹಕ್ಕು ಸ್ಥಾಪಿಸಲು ಪ್ರಯತ್ನ ನಡೆಸುತ್ತಿರುವ ಚೀನಾದ ಮೇಲೆಯೂ ಸಚಿವರು ವಾಗ್ದಾಳಿ ನಡೆಸಿದ್ದಾರೆ. ಅರುಣಾಚಲ ಪ್ರದೇಶ ಭಾರತಕ್ಕೆ ಸೇರಿದ ಭೂಪ್ರದೇಶ. ಇದು ಮುಂದೆಯೂ ಭಾರತದ ರಾಜ್ಯವಾಗಿಯೇ ಇರಲಿದೆ. ಈ ಭೂ ಪ್ರದೇಶಗಳ ಹೆಸರು ಬದಲಾವಣೆ ಮಾಡುವುದರಿಂದ ಅರುಣಾಚಲ ಪ್ರದೇಶ ಭಾರತದ ಭೂಭಾಗ ಎನ್ನುವ ಸತ್ಯ ಅಳಿಸಿ ಹೋಗುವುದಿಲ್ಲ ಎಂದು ಅವರು ತಿಳಿಸಿದ್ದಾರೆ.

ಇನ್ನು ಚೀನಾವು ಅರುಣಾಚಲ ಪ್ರದೇಶದ ಮೂವತ್ತು ಪ್ರದೇಶಗಳ ಹೆಸರನ್ನು ಬದಲಾವಣೆ ಮಾಡಲು ಹೊರಟಿರುವುದರ ಬಗ್ಗೆ ಕೇಂದ್ರ ಸಚಿವ ಕಿರಣ್ ರಿಜಿಜು ಅವರು ಕೆಂಡಾಮಂಡಲವಾಗಿದ್ದಾರೆ. ಚೀನಾ ಭಾರತದ ಭೂಭಾಗಕ್ಕೆ ತನ್ನ ಹೆಸರುಗಳನ್ನು ನೀಡಿದ್ದು, ಇದನ್ನು ಖಂಡಿಸಿದ್ದಾರೆ.

ಈ ಬಗ್ಗೆ ಸಾಮಾಜಿಕ ಮಾಧ್ಯಮಗಳ ಮೂಲಕ ಪೋಸ್ಟ್‌ಗಳನ್ನು ಮಾಡಿರುವ ಅವರು, ಆಧಾರ ರಹಿತ ಹಕ್ಕುಗಳನ್ನು ಚೀನಾವು ಮುಂದಿಡುತ್ತಿದೆ. ಚೀನಾದ ಈ ನಡೆ ವಾಸ್ತವ ಸಂಗತಿಗಳನ್ನು, ಐತಿಹಾಸಿಕ ವಿಷಯಗಳನ್ನು ಬದಲಾವಣೆ ಮಾಡಲು ಸಾಧ್ಯವಿಲ್ಲ. ಅರುಣಾಚಲ ಪ್ರದೇಶ ಭಾರತದ ಭೂಭಾಗ. ಭಾರತದ ಅವಿಭಾಜ್ಯ ಅಂಗವಾಗಿದೆ. ಇಲ್ಲಿನ ಜನರು ಭಾರತದ ಪರಮ ಭಕ್ತರು ಎಂದು ಹೇಳಿದ್ದಾರೆ.

Tags

Related Articles

Close