ಪ್ರಚಲಿತ

ಪ್ರಧಾನಿ ಮೋದಿ ಅಮೆರಿಕ ಪ್ರವಾಸ: ಖಲೀಸ್ತಾನಿಗಳೊಂದಿಗೆ ಸೇರಿ ಪಾಕಿಸ್ತಾನದಿಂದ ಟೂಲ್ ಕಿಟ್

ಜೂನ್ ೨೧ ರಂದು ವಿಶ್ವ ಯೋಗ ದಿನಾಚರಣೆಯಂದು ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಪ್ರವಾಸ ಆರಂಭಿಸಲಿದ್ದಾರೆ. ಅಮೆರಿಕಾದ ಅಧ್ಯಕ್ಷ ಜೋ ಬೈಡನ್ ಮತ್ತು ಅಮೆರಿಕಾದ ಪ್ರಥಮ ಮಹಿಳೆ ಜಿಲ್ ಬೈಡನ್ ಅವರ ಆಹ್ವಾನದ ಮೇರೆಗೆ ಪ್ರಧಾನಿ ಮೋದಿ ಅವರು ಈ ಯಾತ್ರೆ ನಡೆಸಲಿದ್ದಾರೆ.

ಈ ಸುಂದರ್ಭದಲ್ಲಿ ಅವರು ನ್ಯೂಯಾರ್ಕ್‌ ನಲ್ಲಿರುವ ವಿಶ್ವಸಂಸ್ಥೆಯ ಪ್ರಧಾನ ಕಚೇರಿಯಲ್ಲಿ ಅಂತಾರಾಷ್ಟ್ರೀಯ ಯೋಗ ದಿನದ ನೇತೃತ್ವ ವಹಿಸುವ ಮೂಲಕ ತಮ್ಮ ಅಮೆರಿಕ ಭೇಟಿಗೆ ಚಾಲನೆಯನ್ನು ನೀಡಲಿದ್ದಾರೆ ಎಂದು ಮೂಲಗಳು ಹೇಳಿವೆ. ಜೂನ್ ೨೪ ರಂದು ಅವರು ತಮ್ಮ ಅಮೆರಿಕ ಪ್ರವಾಸವನ್ನು ಮುಗಿಸಿ ಭಾರತಕ್ಕೆ ಹಿಂದಿರುಗಲಿದ್ದಾರೆ.

ಜೂನ್ ೨೧ ರಂದು ಅವರು ನ್ಯೂಯಾರ್ಕ್‌ನಲ್ಲಿ ನಡೆಯುವ ಯೋಗ ದಿನಾಚರಣೆಯ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಅವರ ಜೊತೆಗೆ ಹಲವಾರು ಗಣ್ಯರು ಭಾಗವಹಿಸಲಿದ್ದಾರೆ. ಯುನೈಟೆಡ್ ನೇಷನ್ಸ್‌ನ ಎತ್ತರದ ಕಟ್ಟಡದ ಮೇಲೆ ಈ ಕಾರ್ಯಕ್ರಮ ನಡೆಯಲಿದೆ. ಯೋಗ ದಿನಾಚರಣೆಯ ಕಾರ್ಯಕ್ರಮದ ನಂತರದಲ್ಲಿ ಪ್ರಧಾನಿ ಮೋದಿ ಅವರು ವಲಸಿಗರ ಕೂಟದಲ್ಲಿ ಭಾಗವಹಿಸಲಿದ್ದಾರೆ. ಆ ಬಳಿಕ ನ್ಯೂಯಾರ್ಕ್‌ ನಿಂದ ವಾಷಿಂಗ್ಟನ್ ಡಿಸಿಗೆ ಅವರು ಪ್ರಯಾಣ ಬೆಳೆಸಲಿದ್ದಾರೆ.

ಪ್ರವಾಸದ ಎರಡನೇ ದಿನವಾದ ಜೂನ್ ೨೨ ರಂದು ಪ್ರಧಾನಿ ಮೋದಿ ಅವರನ್ನು ಅಮೆರಿಕ ಅಧ್ಯಕ್ಷ ಜೋ ಬೈಡನ್ ಮತ್ತು ಪ್ರಥಮ ಮಹಿಳೆ ಜಿಲ್ ಬೈ ಡನ್ ಅವರು ಶ್ವೇತ ಭವನಕ್ಕೆ ಸ್ವಾಗತಿಸಲಿದ್ದಾರೆ. ಯಾತ್ರೆಯ ಮೂರನೇ ದಿನವಾದ ೨೩ ರಂದು ಜೋ ಬೈಡನ್ ಮತ್ತು ಜಿಲ್ ಬೈಡನ್ ಅವರೊಂದಿಗೆ ಔತಣಕೂಟ, ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಮತ್ತು ವಿದೇಶಾಂಗ ಕಾರ್ಯದರ್ಶಿ ಆ್ಯಂಟನಿ ಬ್ಲಿಂಕೆನ್ ಅವರೂ ಸಹ ಪ್ರಧಾನಿ ಮೋದಿ ಅವರನ್ನು ಔತಣ ಕೂಟಕ್ಕೆ ಆಹ್ವಾನಿಸಿದ್ದಾರೆ.

ಈ ಮೂರು ದಿನಗಳ ಅಮೆರಿಕ ಭೇಟಿ ಮುಗಿಸಿ, ಜೂನ್ ೨೪ ರಂದು ಪ್ರಧಾನಿ ಗಳು ಈಜಿಪ್ಟ್‌ನ ಕೈರೋ ಗೆ ತೆರಳಲಿದ್ದಾರೆ. ಮುಂದಿನ ಎರಡು ದಿನಗಳ ಕಾಲ ಪ್ರಧಾನಿ ಮೋದಿ ಅವರು ಈಜಿಪ್ಟ್ ಪ್ರವಾಸ ನಡೆಸಲಿದ್ದಾರೆ ಎಂಬುದಾಗಿ ಮೂಲಗಳು ತಿಳಿಸಿವೆ.

ಮೋದಿ ಪ್ರವಾಸ : ಪಾಕಿಸ್ತಾನದ ಟೂಲ್ ಕಿಟ್

ಪ್ರಧಾನಿ ಮೋದಿ ಅವರು ಅಮೆರಿಕ ಭೇಟಿ ಸಂದರ್ಭದಲ್ಲಿ ಮುಜುಗರವನ್ನು ಅನುಭವಿಸುವ ಹಾಗೆ ಮಾಡುವ ಸಲುವಾಗಿ ಪಾಕಿಸ್ತಾನ ಖಲೀಸ್ತಾನಿ ಪ್ರತ್ಯೇಕವಾದಿಗಳ ಜೊತೆಗೆ ಸೇರಿ ಸಂಚು ರೂಪಿಸಿರುವುದಾಗಿ ಗುಪ್ತಚರ ಇಲಾಖೆಗೆ ಮಾಹಿತಿ ಲಭ್ಯವಾಗಿದೆ. ಭಾರತದ ವಿರುದ್ಧ ಕುತಂತ್ರ ಹೂಡಲು ಅಮೆರಿಕದಲ್ಲಿರುವ ಖಲೀಸ್ತಾನಿಗಳ ಜೊತೆಗೆ ಪಾಕಿಸ್ತಾನ ಗುಪ್ತ ಸಭೆಗಳನ್ನು ನಡೆಸಿರುವುದಾಗಿಯೂ ಇಲಾಖೆಗೆ ಮಾಹಿತಿ ದೊರೆತಿರುವುದಾಗಿ ತಿಳಿದು ಬಂದಿದೆ.

ಈ ನಿಟ್ಟಿನಲ್ಲಿ ಪಾಕ್‌ನ ಗುಪ್ತಚರ ಸಂಸ್ಥೆ ಮೇಲಿಂದ ಮೇಲೆ ಸಭೆಗಳನ್ನೂ ನಡೆಸುತ್ತಿದೆ. ಜೊತೆಗೆ ಭಾರತದ ವಿರುದ್ಧ ಪಿತೂರಿ ಮಾಡಲು ಒಂದಷ್ಟು ಸಂಸ್ಥೆಗಳಿಗೆ ಆರ್ಥಿಕ ನೆರವನ್ನು ಸಹ ಪಾಕಿಸ್ತಾನ ನೀಡುತ್ತಿದೆ ಎಂಬುದನ್ನು ಗುಪ್ತಚರ ಇಲಾಖೆ ಕಂಡುಕೊಂಡಿದೆ. ಭಾರತ ಮತ್ತು ಅಮೆರಿಕ ಈ ಎರಡೂ ರಾಷ್ಟ್ರಗಳ ಮೇಲೆ ಪಾಕಿಸ್ತಾನ ನಿಗಾ ವಹಿಸಿದ್ದು, ಮೋದಿ ಭೇಟಿಗೆ ಹೇಗೆ ವಿಘ್ನ ಒಡ್ಡವುದು ಎಂಬುದಕ್ಕೆ ಲೆಕ್ಕಾಚಾರಗಳನ್ನು ಹಾಕುತ್ತಿರುವುದಾಗಿಯೂ ಗುಪ್ತಚರ ಇಲಾಖೆ ಕಂಡುಕೊಂಡಿದೆ.

ಮೋದಿ ಭೇಟಿ ವೇಳೆ ಪ್ರತಿಭಟನೆ ನಡೆಸುವವರನ್ನು ಒಂದು ಸ್ಥಳದಿಂದ ಇನ್ನೊಂದು ಪ್ರದೇಶಕ್ಕೆ ಒಯ್ಯಲು ಸಾರಿಗೆ ವ್ಯವಸ್ಥೆ, ಭಾರತದ ವಿರುದ್ಧದ ಕುತಂತ್ರಕ್ಕೆ ರೂಪುರೇಷೆಗಳನ್ನು ಸಿದ್ಧಪಡಿಸಲು ಪ್ರತ್ಯೇಕ ವೆಬ್‌ಸೈಟ್ ವ್ಯವಸ್ಥೆ ಸಹ ಮಾಡಲಾಗಿರುವುದಾಗಿ ಗುಪ್ತಚರ ಇಲಾಖೆಗೆ ಮಾಹಿತಿ ಲಭ್ಯವಾಗಿದೆ.

ಒಟ್ಟಿನಲ್ಲಿ ಪ್ರಧಾನಿ ಮೋದಿ ಮತ್ತು ಭಾರತದ ಏಳಿಗೆಯನ್ನು ಸಹಿಸಲಾಗದ ಪಾಕಿಸ್ತಾನ ಭಾರತದ ವಿರುದ್ಧ ಷಡ್ಯಂತ್ರ ರೂಪಿಸುತ್ತಿದೆ. ಪಾಕಿಸ್ತಾನದ ಆರ್ಥಿಕತೆ ಹದೆಗೆಟ್ಟಿದ್ದರೂ, ತಿನ್ನುವ ಕೂಳಿಗೆ ಗತಿ ಇಲ್ಲದಿದ್ದರೂ ಪಾಕಿಸ್ತಾನ ಭಾರತದ ವಿರುದ್ಧ ಕತ್ತಿ ಮಸೆಯುತ್ತಿರುವುದು ಹಾಸ್ಯಾಸ್ಪದವೂ ಹೌದು. ದುರಂತವೂ ಹೌದು.

Related Articles

Close