ಪ್ರಚಲಿತ

ದಕ್ಷಿಣ ಕೋರಿಯಾದ ಜನರ ತವರು ಮನೆ ಅಯೋಧ್ಯೆ!! ಅಯೋಧ್ಯೆಯ ರಾಜಕುಮಾರಿ ಶ್ರೀರತ್ನ ದಕ್ಷಿಣ ಕೋರಿಯಾದ ಮಾಹಾರಾಣಿಯಾದ ಗೌರವಾರ್ಥ ಉತ್ತರ ಪ್ರದೇಶದಲ್ಲಿ ಸ್ಮಾರಕ ನಿರ್ಮಿಸಲಿದೆ ಯೋಗಿ ಸರಕಾರ!!

ದಂತಕಥೆಗಳ ಪ್ರಕಾರ, ಅಯೋಧ್ಯೆಯ ರಾಜಕುಮಾರಿ ಶ್ರೀರತ್ನ 48 AD ಅಲ್ಲಿ ಕೋರಿಯಾ ಸಮುದ್ರದ ಮೂಲಕ ದಕ್ಷಿಣ ಕೋರಿಯಾಕ್ಕೆ ಪಯಣಿಸುತ್ತಾಳೆ ಮತ್ತು ದಕ್ಷಿಣ ಕೋರಿಯಾದ ಗಮ್ಗ್ವಾನ್ ಗಯಾದ ರಾಜ ಕಿಮ್ ಸುರೋ ಅವರನ್ನು ವಿವಾಹವಾಗುತ್ತಾಳೆ. ವಿವಾಹದ ಬಳಿಕ ರಾಜಕುಮರಿ ಸುರಿರತ್ನಾ ಕೋರಿಯಾದ ರಾಣಿ ಹೂ ಹ್ವಾಂಗ್ ಓಕ್ ಎಂದು ಕರೆಯಲ್ಪಡುತ್ತಾಳೆ. ಇವರಿಗೆ ಒಟ್ಟು ಹತ್ತು ಗಂಡು ಮಕ್ಕಳು. ರಾಜ ಕಿಮ್ ಸುರೊ ಜೊತೆಗೂಡಿ ರಾಣಿ ಹೂ, ದಕ್ಷಿಣ ಕೊರಿಯಾದ ಪ್ರಸ್ತುತ ಗಿಮ್ಮೆ ಪ್ರಾಂತ್ಯದ ಪ್ರದೇಶದಲ್ಲಿನ ಕರಾಕ್ ಸಾಮ್ರಾಜ್ಯವನ್ನು ಸ್ಥಾಪಿಸುತ್ತಾರೆ. ಅಂದಿನಿಂದ ಇಂದಿನವೆರೆಗೂ ಈ ಪ್ರದೇಶದ ಜನರು ತಮ್ಮ ಮಾತೃ ಬೇರುಗಳು ಭಾರತದಲ್ಲಿವೆ ಎಂದು ಬಲವಾಗಿ ನಂಬುತ್ತಿದ್ದಾರೆ. ಕೋರಿಯಾದ ಕೊರಿಯನ್ ಭಾಷೆಯ ಮೂಲ ತಮಿಳು ಎಂದು ಹೇಳಲಾಗುತ್ತದೆ. ಅಲ್ಲಿನ ಹೆಚ್ಚಿನ ಶಬ್ದಗಳು ಅಮ್ಮ (ಓಮ್ಮಾ), ಅಪ್ಪಾ, ಅನ್ನಿ (ಉನ್ನಿ), ನಾಲ್ (ನಾಲ್ ಅಥವಾ ದಿನ) ತಮಿಳು ಮೂಲದಿಂದ ಬಂದಿವೆ.

ಗಿಮ್ಮೆ ಪ್ರದೇಶದ ಲಕ್ಷಾಂತರ ಜನರು ಅಯೋಧ್ಯೆಯನ್ನು ತಮ್ಮ ತವರು ಮನೆಯೆಂದು ಪರಿಗಣಿಸುತ್ತಾರೆ. ಆದ್ದರಿಂದಲೇ ಪ್ರತಿವರ್ಷವೂ ನೂರಾರು ದ.ಕೊರಿಯನ್ನರು ಅಯೋಧ್ಯೆಗೆ ಭೇಟಿ ಕೊಡುತ್ತಿರುತ್ತಾರೆ. ಭಾರತ ಮತ್ತು ದಕ್ಷಿಣ ಕೋರಿಯಾದ ಈ ಅವಿನಾಭಾವ ಮತ್ತು ಭಾವನಾತ್ಮಕ ಸಂಬಂಧವನ್ನು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಉತ್ತರ ಪ್ರದೇಶದ ಯೋಗಿ ಸರಕಾರವು ಅಯೋಧ್ಯೆಯಲ್ಲಿ ರಾಣಿ ಹೂಹ್ವಾಂಗ್ ಹೆಸರಿನಲ್ಲಿ ಸ್ಮಾರಕ ಪಾರ್ಕ್ ಒಂದನ್ನು ನಿರ್ಮಾಣ ಮಾಡಲಿದೆ. ಅಯೋಧ್ಯೆಯಲ್ಲಿ ರಾಣಿ ಸ್ಮಾರಕ ಉದ್ಯಾನವನ ನಿರ್ಮಾಣಕ್ಕಾಗಿ ಉತ್ತರ ಪ್ರದೇಶ ಸರ್ಕಾರವು ದಕ್ಷಿಣ ಕೊರಿಯಾದ ಸರಕಾರದೊಂದಿಗೆ ಚರ್ಚೆಗಳನ್ನು ಅಂತಿಮಗೊಳಿಸಿದೆ ಎನ್ನಲಾಗಿದೆ.

ದಕ್ಷಿಣ ಕೋರಿಯಾದ ಅಧಿಕಾರಿಗಳು ಉನ್ನತ ಸಭೆ ನಡೆಸಲು ದೀಪಾವಳಿ ಸಮಯದಲ್ಲಿ ಅಯೋಧ್ಯೆಗೆ ಭೇಟಿ ನೀಡಲಿದ್ದಾರೆ. ಅದಕ್ಕೂ ಮುಂಚಿತವಾಗಿ ಈ ಉದ್ಯಾನವನ ನಿರ್ಮಾಣದ ಕೆಲಸ ಕಾರ್ಯಗಳು ಪ್ರಾರಂಭವಾಗಲಿವೆ ಎಂದು ವರದಿಗಳು ತಿಳಿಸಿವೆ. 2016 ರಲ್ಲಿ ಪ್ರಧಾನಿ ಮೋದಿ ದಕ್ಷಿಣ ಕೊರಿಯಾಕ್ಕೆ ಭೇಟಿ ನೀಡಿದ್ದಾಗ, ಎರಡೂ ದೇಶಗಳ ನಡುವಿನ ಪ್ರಾಚೀನ ಸಂಬಂಧಗಳಿಗೆ ಗೌರವ ಸಲ್ಲಿಸುವ ಸಲುವಾಗಿ ಅಯೋಧ್ಯೆಯಲ್ಲಿ ಸ್ಮಾರಕಗಳನ್ನು ನಿರ್ಮಿಸಲು ಎರಡು ದೇಶಗಳೂ ಒಪ್ಪಿಕೊಂಡಿದ್ದವು. ಈಗ ಅಯೋಧ್ಯೆಯ ರಾಮ ಕಥಾ ಸಂಗ್ರಹಾಲಯ ನಿರ್ಮಾಣಗೊಳ್ಳುತ್ತಿರುವ ಜಾಗದ ಪಕ್ಕದಲ್ಲೇ ರಾಣಿ ಹೂ ಹ್ವಾಂಗ್ ನ ಸ್ಮಾರಕ ನಿರ್ಮಿಸಲು ಯೋಗಿ ಸರಕಾರ ಜಾಗ ನಿಗದಿ ಪಡಿಸಿದೆ ಎಂದು ಮೂಲಗಳು ತಿಳಿಸಿವೆ.

ಕೆಲವು ಇತಿಹಾಸಕಾರರು ಹೂ ಹ್ವಾಂಗ್, ಕನ್ಯಾಕುಮಾರಿಯ ಪಾಂಡ್ಯ ರಾಜ್ಯ ಅಯುಥದ ರಾಜಕುಮಾರಿ ಸೀಂಬವಲಮ್ ಆಗಿದ್ದಳು ಎನ್ನುತ್ತಾರೆ. ಪಾಂಡ್ಯ ರಾಜರು ಅನ್ಯ ದೇಶಗಳೊಂದಿಗೆ ಬಲವಾದ ವ್ಯಾಪಾರ ಸಂಬಂಧವನ್ನು ಹೊಂದಿದ್ದರು. ಅದರ ಫಲವಾಗಿಯೆ ಅಯುಥದ ರಾಜಕುಮಾರಿಯನ್ನು ಕೋರಿಯಾದ ರಾಜನಿಗೆ ವಿವಾಹ ಮಾಡಿ ಕೊಡಲಾಯಿತು. ಬಲ್ಲವರ ಪ್ರಕಾರ ಎರಡು ಸಾವಿರ ವರ್ಷಗಳ ಹಿಂದೆ ಕನ್ಯಾಕುಮಾರಿಯನ್ನು ಅಯುಥಾ ಎಂದು ಕರೆಯಲಾಗುತ್ತಿತ್ತು ಮತ್ತು ಅಯೋಧ್ಯೆಯನ್ನು ಸಾಕೇತ ಎನ್ನಲಾಗುತ್ತಿತ್ತು. ಆದರೆ ಭಾರತದ ಸರಕಾರಗಳು ಅಯುಥಾವನ್ನು ಅಯೋಧ್ಯೆ ಎಂದು ತಪ್ಪಾಗಿ ಭಾವಿಸಿದ್ದರಿಂದ ಕೊರಿಯನ್ನರು ಅಯೋಧ್ಯಾವನ್ನು ತಮ್ಮ ತವರೆಂದು ಪರಿಗಣಿಸುತ್ತಾರೆ ಎನ್ನುವುದು ಇತಿಹಾಸಕಾರ ಅಂಬೋಣ. ಅದೇನೆ ಆಗಿರಲಿ ಕೋರಿಯಾದ ಬೇರುಗಳು ಭಾರತದಲ್ಲಿ ಇವೆ ಎನ್ನುವುದು ಮಾತ್ರ ಸೂರ್ಯ ನಷ್ಟೆ ಸತ್ಯ.

ಈ ಸ್ಮಾರಕ ಉದ್ಯಾನದಲ್ಲಿ ರಾಜಕುಮಾರಿಯ ಸಮುದ್ರ ಪ್ರಯಾಣದಿಂದ ಹಿಡಿದು ಆಕೆ ರಾಜ ಸುರೋನನ್ನು ವಿವಾಹವಾಗುವರೆಗಿನ ಎಲ್ಲಾ ಚಿತ್ರಣಗಳು ಇರಲಿವೆ ಎನ್ನಲಾಗಿದೆ. ಭಾರತೀಯ ಮತ್ತು ಕೊರಿಯನ್ ಸಾಂಸ್ಕೃತಿಕ ಪರಂಪರೆಯನ್ನು ಬಿಂಬಿಸುವ ಈ ಸ್ಮಾರಕ ಭಾರತದ ಜೊತೆ ಕೋರಿಯಾದ ತಾಯಿ ಬೇರಿನ ಸಂಬಂಧಗಳನ್ನು ಅನಾವರಣಗೊಳಿಸಲಿದೆ. ಜಗತ್ತಿನ ಯಾವ ಮೂಲೆಯನ್ನು ತಡಕಾಡಿದರೂ ಅಲ್ಲಿನ ಬೇರುಗಳು ಸನಾತನ ಭಾರತವನ್ನು ಬಂದು ಸೇರುತ್ತವೆ. ಸನಾತನ ಭಾರತಿ ವಿಶ್ವದ ಹಲವಾರು ಭಾಷೆ, ಮತ, ಜನಾಂಗ, ಸಂಸ್ಕೃತಿ, ತಂತ್ರಜ್ಞಾನಗಳ ಜನನಿ. ಪ್ರಪಂಚದ ಎಲ್ಲಾ ನಾಗರಿಕತೆಗಳ ಮೂಲ ಸನಾತನ ಭಾರತದಲ್ಲಿದೆ. ಇದನ್ನು ಪುಷ್ಟೀಕರಿಸುವ ನಿದರ್ಶನಗಳು ಮತ್ತೆ ಮತ್ತೆ ದೊರೆಯುತ್ತಿವೆ ಅಷ್ಟೆ.

-ಶಾರ್ವರಿ

Tags

Related Articles

Close