ಪ್ರಚಲಿತ

ದೇಶಕ್ಕೇ ಮಾದರಿಯಾಯ್ತು ಉತ್ತರ ಪ್ರದೇಶದ ಸಿ ಎಂ ಯೋಗಿ ಸರ್ಕಾರದ ಈ ಯೋಜನೆ

ಪ್ರಕೃತಿ ನಮ್ಮೆಲ್ಲರ ಉಸಿರು ಉಳಿಸುವ ಬಹು ಮುಖ್ಯ ಅಂಶ. ಪ್ರಕೃತಿ ಉಳಿದರೆ ನಾವು ಉಳಿದೇವು, ಮರ ಗಿಡಗಳನ್ನು ಬೆಳೆಸಿದರೆ ನಾವು ನೆಮ್ಮದಿಯ ಜೀವನ ಸಾಗಿಸುವುದು ಸಾಧ್ಯ. ಮರ ಗಿಡಗಳನ್ನು ಕಡಿದು, ಪ್ರಕೃತಿ ನಾಶ ಮಾಡಿದೆವು ಎಂದಾದಲ್ಲಿ ನಮ್ಮ ಬದುಕು ಸಹ ಬರಡಾದೀತು ಎಂಬುದು ಬಲ್ಲವರ ಮಾತು.

ಈಗಾಗಲೇ ಕಾಡು, ಪ್ರಕೃತಿ ನಾಶದಿಂದ ವಾತಾವರಣದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿರುವುದು ಕಣ್ಣಾರೆ ಕಾಣುತ್ತಿದ್ದೇವೆ. ನಾವು ಈ ದುರಂತ ಪರಿಸ್ಥಿತಿಗೆ ಸಾಕ್ಷಿಗಳೂ ಆಗಿದ್ದೇವೆ. ಪರಿಸ್ಥಿತಿ ಕೈ ಮೀರುವ ಮೊದಲೆ ಮತ್ತೆ ಹಸಿರು ನೆಡುವ ದೃಷ್ಟಿಯಲ್ಲಿ ಸರ್ಕಾರಗಳು ಮತ್ತು ನಾವು ನೀವೆಲ್ಲರೂ ಕೈ ಜೋಡಿಸಿ ಕೆಲಸ ಮಾಡಿದಲ್ಲಿ ಮುಂದಿನ ನಮ್ಮ ಮತ್ತು ನಮ್ಮ ಮುಂದಿನ ಪೀಳಿಗೆಯ ಬದುಕನ್ನು ಹಸನಾಗಿಸುವುದು ಸಾಧ್ಯ. ಜೊತೆಗೆ ಇದು ಅನಿವಾರ್ಯತೆಯೂ ಹೌದು. ಹಾಗೆಯೇ ನಮ್ಮ ಮುಂದಿನ ತಲೆಮಾರಿಗೆ ನಾವು ಕೊ(ಬಿ)ಟ್ಟು ಹೋಗಬಹುದಾದ ಅಮೂಲ್ಯ ಆಸ್ತಿಯೂ ಹೌದು.

ಹಸಿರಿಲ್ಲದೆ ಬರಡಾಗುತ್ತಿರುವ ಭೂಮಿಗೆ ಹಸಿರಿನುಸಿರು ತುಂಬಿ ಮಾದರಿಯಾಗುವ ಕಾರ್ಯಕ್ಕೆ ಉತ್ತರ ಪ್ರದೇಶದ ಸಿ ಎಂ ಯೋಗಿ ಆದಿತ್ಯ ನಾಥ್ ಅವರ ಸರ್ಕಾರ ಸಿದ್ಧತೆ ನಡೆಸಿದೆ. ಈ ವರ್ಷದಲ್ಲಿ ಉತ್ತರ ಪ್ರದೇಶದಲ್ಲಿ ಸುಮಾರು 35 ಕೋಟಿ ಸಸಿಗಳನ್ನು ನೆಡುವ ಗುರಿಯನ್ನಿರಿಸಿಕೊಂಡು ಯೋಗಿ ಸರ್ಕಾರ ‘ಮೆಗಾ ಪ್ಲಾಂಟೇಷನ್ ಡ್ರೈವ್’ ಯೋಜನೆಗೆ ತೊಡಗಿದೆ. ಆ ಮೂಲಕ ಪರಿಸರ ಉಳಿಸುವ ನಿಟ್ಟಿನಲ್ಲಿ ಮಹತ್ಕಾರ್ಯ ಒಂದಕ್ಕೆ ಸರ್ಕಾರ ಸಿದ್ಧತೆ ನಡೆಸಿದ್ದು, ದೇಶದ ಇತರ ರಾಜ್ಯಗಳಿಗೂ ಮಾದರಿ ಎನಿಸುವಂತಹ ಹೆಜ್ಜೆಯೊಂದನ್ನು ಇರಿಸಿದೆ.

ಸದ್ಯ ಮೂವತ್ತು ಕೋಟಿ ಸಸಿಗಳನ್ನು ನೆಡಲಾಗಿದ್ದು, ಮುಂದಿನ ತಿಂಗಳ ಅಂದರೆ ಆಗಸ್ಟ್ 15 ರಂದು ಉಳಿದ 5 ಕೋಟಿ ಸಸ್ಯಗಳನ್ನು ನೆಡುವ ಮೂಲಕ ಒಟ್ಟು ಮೂವತ್ತೈದು ಸಾವಿರ ಗಿಡಗಳನ್ನು ನೀಡಲು ಅಲ್ಲಿನ ಸರ್ಕಾರ ಎಲ್ಲಾ ರೀತಿಯಲ್ಲಿಯೂ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದೆ. ಕಾರ್ಯಕ್ಕೆ ‘ಪೇಡ್ ಲಗಾವೋ, ಪೇಡ್ ಬಚಾವೋ’ ಎಂಬ ಥೀಮ್ ಅಡಿಯಲ್ಲಿ ಈ ಬೃಹತ್ ಯೋಜನೆಯನ್ನು ಸಾಕಾರಗೊಳಿಸಲು ಅಲ್ಲಿನ ಸರ್ಕಾರ ಮುಂದಾಗಿದೆ.

ಈಗಾಗಲೇ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯ ನಾಥ್ ಅವರು ಬೀಜನೂರು ಪ್ರದೇಶದ ವಿದುರ್ ಕುಟಿ ಆಶ್ರಮದಲ್ಲಿ ಗಿಡ ನೆಡುವ ಮೂಲಕ ಎರಡು ದಿನಗಳ ಹಿಂದಷ್ಟೇ ಈ ಯೋಜನೆಗೆ ಚಾಲನೆ ನೀಡಿದ್ದಾರೆ. ಹಾಗೆಯೇ ಈ ಅಭಿಯಾನದಲ್ಲಿ ರಾಜ್ಯದ ಪ್ರತಿಯೊಬ್ಬರೂ ಕರ ಜೋಡಿಸುವಂತೆಯೂ ಅವರು ಮನವಿ ಮಾಡಿದ್ದಾರೆ. ಈ ಅಭಿಯಾನ ನಡೆಸಲು ಸರ್ಕಾರದ ವಿವಿಧ ಸಚಿವಾಲಯಗಳಿಗೂ ಗುರಿ ನೀಡಲಾಗಿದ್ದು, ಸರ್ಕಾರದ ಎಲ್ಲಾ ವಿಭಾಗಗಳು ಸಹ ಇದನ್ನು ಒಂದು ತಪಸ್ಸು ಎಂಬಂತೆ ಒಗ್ಗಟ್ಟಿನಿಂದ ಕಾರ್ಯರೂಪಕ್ಕೆ ಯಶಸ್ವಿಯಾಗಿ ತರಲು ಸೂಚನೆ ನೀಡಲಾಗಿದೆ. ಕಳೆದ ವರ್ಷವೂ ಉತ್ತರ ಪ್ರದೇಶ ಮೂವತ್ತೈದು ಕೋಟಿ ಸಸಿಗಳನ್ನು ನೆಡುವ ಮೂಲಕ ದಾಖಲೆ ನಿರ್ಮಿಸಿತ್ತು. ಈ ಬಾರಿಯೂ ಮತ್ತದೇ ಗುರಿಯ ಜೊತೆಗೆ ಕೆಲಸ ಮಾಡಲು ಸರ್ಕಾರ ಸರ್ವ ರೀತಿಯಲ್ಲಿಯೂ ಕಾರ್ಯಗತವಾಗಿದೆ.

ಜನರಿಗೆ ಉಚಿತಗಳನ್ನು ನೀಡುವುದು, ಕೋಮು ಸಂಬಂಧಿ ಗಲಭೆಗಳಿಗೆ ಕಾರಣವಾಗುವಂತಹ ನೀತಿಗಳನ್ನು ಜಾರಿಗೊಳಿಸಿ, ಧರ್ಮ ಧರ್ಮಗಳ ನಡುವೆ ದ್ವೇಷ ಬಿತ್ತಿ ರಾಜಕಾರಣ ಮಾಡಲು ಹೊರಟ ಕರ್ನಾಟಕ ಕಾಂಗ್ರೆಸ್‌ನಂತಹ ಸರ್ಕಾರ ಉತ್ತರ ಪ್ರದೇಶದ ಇಂತಹ ಜನ ಸ್ನೇಹಿ ಆಡಳಿತವನ್ನು ನೋಡಿ ಕಲಿಯುವುದು ಬಹಳಷ್ಟಿದೆ.

ಇಡೀ ದೇಶದೆಲ್ಲೆಡೆ ಪ್ರಕೃತಿಗೆ ಇಂತಹ ಕೊಡುಗೆಗಳನ್ನು ನೀಡುವ ನಿಟ್ಟಿನಲ್ಲಿ ಉತ್ತರ ಪ್ರದೇಶದ ಯೋಗಿ ಸರ್ಕಾರದ ಹಾಗೆಯೇ, ದೇಶದ ಎಲ್ಲಾ ಸರ್ಕಾರಗಳೂ ಕಾರ್ಯ ಪ್ರವೃತವಾದಲ್ಲಿ ಭಾರತ ಮತ್ತೆ ಸಸ್ಯಶ್ಯಾಮಲೆಯಾಗಿ, ಹಸಿರಿನಿಂದ ಉಸಿರಾಡುವುದರಲ್ಲಿ ಸಂದೇಹವಿಲ್ಲ. ನಮ್ಮ ಭವಿತವ್ಯದ ದೃಷ್ಟಿಯಿಂದಲೂ ಇಂತಹ ಮಹೋನ್ನತ ಕಾರ್ಯಗಳು ನಡೆದಲ್ಲಿ ಬದುಕು ಸುಲಭ. ಇಲ್ಲದೇ ಹೋದಲ್ಲಿ ಪ್ರಕೃತಿ ಮತ್ತಷ್ಟು ಮುನಿದು ನಮ್ಮನ್ನು ವಿಪತ್ತಿಗೆ ಒಡ್ಡುತ್ತದೆ ಎನ್ನುವುದರಲ್ಲಿ ಸಂದೇಹವಿಲ್ಲ.

Tags

Related Articles

Close