ಪ್ರಚಲಿತ

ಇಂದು ಪ್ರಪಂಚವೇ ಭಾರತವನ್ನು ತಿರುಗಿ ನೋಡುವಂತಾಗಿದೆ: ಪ್ರಧಾನಿ ಮೋದಿ

ಮೂರು ದಿನಗಳ ಅಮೆರಿಕ ಪ್ರವಾಸ ದಲ್ಲಿರುವ ಪ್ರಧಾನಿ ಮೋದಿ ಅವರು ಯುಎಸ್‌ ಕಾಂಗ್ರೆಸ್‌ನ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಿದರು.

ಈ ಸಂದರ್ಭದಲ್ಲಿ ಅವರು ವೈವಿದ್ಯತೆಯಲ್ಲಿ ಭಾರತದ ಏಕತೆಯನ್ನು ಕುರಿತು ಸಾದರಪಡಿಸಿದರು. ಪ್ರಪಂಚದ ಎಲ್ಲಾ ರೀತಿಯ ನಂಬಿಕೆಗಳಿಗೂ ಭಾರತ ನೆಲೆವೀಡಾಗಿದೆ. ಭಾರತದಲ್ಲಿ ಎಲ್ಲವನ್ನೂ ಆಚರಣೆ ಮಾಡಲಾಗುತ್ತದೆ. ಭಾರತೀಯರ ಬದುಕುವ ವಿಧಾನವೇ ವೈವಿಧ್ಯತೆಯಿಂದ ಕೂಡಿದೆ. ಇದು ಭಾರತದ ನೈಸರ್ಗಿಕ ಜೀವನ ವಿಧಾನ ಸಹ ಹೌದು. ಪ್ರಸ್ತುತ ಭಾರತವನ್ನು ಪ್ರಪಂಚವೇ ತಿರುಗಿ ನೋಡುವಂತಾಗಿದ್ದು, ವಿಶ್ವ ವೇ ಭಾರತವನ್ನು ಹೆಚ್ಚು ಹೆಚ್ಚು ತಿಳಿದುಕೊಳ್ಳುವ ನೆಲೆಯಲ್ಲಿ ಪ್ರಯತ್ನ ಪಡುತ್ತಿರುವುದಾಗಿಯೂ ಪ್ರಧಾನಿ ಮೋದಿ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಹಾಗೆಯೇ ಭಾರತೀಯ ವೈವಿಧ್ಯತೆಗೆ ಸಂಬಂಧಿಸಿದ ಹಾಗೆಯೂ ಮಾತನಾಡಿದ ಅವರು, ಭಾರತದಲ್ಲಿ ಎರಡೂವರೆ ಸಾವಿರಕ್ಕೂ ಅಧಿಕ ರಾಜಕೀಯ ಪಕ್ಷಗಳಿವೆ. ಸುಮಾರು ಇಪ್ಪತ್ತು ವಿಧದ ರಾಜಕೀಯ ಪಕ್ಷಗಳು ಭಾರತದ ವಿವಿಧ ರಾಜ್ಯಗಳಲ್ಲಿ ಆಡಳಿತ ನಡೆಸುತ್ತಿವೆ. ಭಾರತದಲ್ಲಿ ಇಪ್ಪತ್ತೆರಡು ಅಧಿಕೃತ ಭಾಷೆಗಳು ಮತ್ತು ಸಾವಿರಾರು ಉಪಭಾಷೆಗಳು ಅಸ್ತಿತ್ವದಲ್ಲಿವೆ. ಆದರೂ ನಾವು ಒಂದೇ ಧ್ವನಿಯನ್ನು ಹೊಂದಿದ್ದೇವೆ. ಪ್ರತಿ ನೂರು ಮೈಲಿ ಗಳಿಗೆ ಎಂಬಂತೆ ನಮ್ಮ ಆಹಾರ ಪದ್ಧತಿ, ಪಾಕ ವಿಧಾನವೂ ಬದಲಾವಣೆಯಾಗುತ್ತಾ ಹೋಗುತ್ತದೆ. ಭಾರತದ ಇಂತಹ ವೈವಿಧ್ಯಮಯ ಜೀವನ ಕ್ರಮ ವಿಶ್ವ ಭಾರತದತ್ತ ತಿರುಗುವಂತೆ ಮಾಡಿದೆ. ಇಂದು ಜಗತ್ತು ಭಾರತವನ್ನು ಹೆಚ್ಚೆಚ್ಚು ತಿಳಿದುಕೊಳ್ಳುವಂತೆ ಮಾಡುತ್ತಿರುವುದಾಗಿಯೂ ಪ್ರಧಾನಿ ಮೋದಿ ಹರ್ಷ ವ್ಯಕ್ತಪಡಿಸಿದ್ದಾರೆ.

ಇನ್ನು ಪ್ರಧಾನಿ ಮೋದಿ ಅವರ ಅಮೆರಿಕ ಭೇಟಿ ಉಭಯ ದೇಶಗಳ ಬಾಂಧವ್ಯ ವೃದ್ಧಿಗೂ ಕಾರಣವಾಗಿದೆ. ಶ್ವೇತ ಭವನದ ಅಧಿಕಾರಿಗಳು ಹೇಳುವಂತೆ, ಪ್ರಧಾನಿ ಮೋದಿ ಅವರ ಈ ಭೇಟಿ ಎರಡೂ ದೇಶಗಳ ಸಂಬಂಧವನ್ನು ಸಮಗ್ರ ನೆಲೆಯಲ್ಲಿ ಎತ್ತರಕ್ಕೇರುವ ಹಾಗೆ ಮಾಡಿದೆ. ಇದಕ್ಕೆ ಪೂರಕ ಎಂಬಂತೆ ಹಲವಾರು ಉದ್ಯಮಗಳ ಆರಂಭ, ಹೊಸ ಹೊಸ ಒಪ್ಪಂದಗಳಿಗೂ ಸಾಕ್ಷಿಯಾಗಿದೆ. ಆ ಮೂಲಕ ಪ್ರಧಾನಿ ಮೋದಿ ಅವರೊಬ್ಬ ಪ್ರಭಾವಿ ವ್ಯಕ್ತಿ ಶಕ್ತಿ ಎನ್ನುವುದು ಮತ್ತೊಮ್ಮೆ ಸಾಬೀತಾಗಿದೆ.

ಭಾರತೀಯ ವಾಯುಪಡೆಗಾಗಿ ಜೆಟ್ ಎಂಜಿನ್‌ಗಳ ನಿರ್ಮಾಣಕ್ಕೆ ಎಚ್‌ಇಎಲ್ ಮತ್ತು ಜಿ ಏರೋಸ್ಪೇಸ್ ನಡುವೆ ಒಪ್ಪಂದಕ್ಕೆ ಸಹಿ ಮಾಡಲಾಗಿದೆ. ಅಹಮದಾಬಾದ್ ಮತ್ತು ಬೆಂಗಳೂರುಗಳಲ್ಲಿ ಅಮೆರಿಕದ ಎರಡು ಕನ್ಸುಲೇಟ್ ಜನರಲ್ ಸ್ಥಾಪನೆ, ಸಿಯಾಟಲ್ ನಲ್ಲಿ ಭಾರತದ ಬಾಹ್ಯಾಕಾಶ ಮಿಷನ್ ಸ್ಥಾಪನೆ, ಜಂಟಿ ಮಾನವ ಸಹಿತ ಬಾಹ್ಯಾಕಾಶ ಯಾನ, ಸೆಮಿಕಂಡಕ್ಟರ್ ತಂತ್ರಜ್ಞಾನ ಸೇರಿದಂತೆ ಇನ್ನೂ ಹಲವು ತಂತ್ರಜ್ಞಾನಗಳಿಗೆ ಸಂಬಂಧಿಸಿದ ಹಾಗೆ ಮಹತ್ವದ ಒಪ್ಪಂದಗಳು ಸಹ ನಡೆಯಲಿದ್ದು, ಇವೆಲ್ಲವೂ ಪ್ರಧಾನಿ ಮೋದಿ ಅವರ ಅಮೆರಿಕ ಭೇಟಿ ಮತ್ತು ಪ್ರಧಾನಿ ಮೋದಿ ಅವರ ಮೇಲೆ ಅಮೆರಿಕ ಇರಿಸಿರುವ ನಂಬಿಕೆಯಿಂದಲೇ ನಡೆಯುತ್ತಿವೆ ಎನ್ನುವುದು ಸಂತಸದ ವಿಷಯ.

ಹಾಗೆಯೇ ಭಾರತೀಯರಿಗೆ ಅನುಕೂಲವಾಗುವಂತೆ ಹೊಸ ಎಚ್-೧ಬಿ ವಿಸಾ ನಿಯಮವನ್ನು ಬದಲಾವಣೆ ಮಾಡಿ, ದೇಶದಲ್ಲಿಯೇ ಬದಲಾವಣೆಗೆ ಅವಕಾಶ ಮಾಡಿಕೊಡುವ ನಿಟ್ಟಿನಲ್ಲಿಯೂ ಚಿಂತನೆ ನಡೆಸಿದೆ. ಇದು ಮಹತ್ವದ ನಿರ್ಧಾರವಾಗಿದ್ದು, ಅಮೆರಿಕದಲ್ಲಿರುವ ಭಾರತೀಯರಿಗೆ ಈ ವ್ಯವಸ್ಥೆ ಹೆಚ್ಚು ಉಪಯುಕ್ತವಾಗಲಿದೆ.

ಒಟ್ಟಿನಲ್ಲಿ ಪ್ರಧಾನಿ ಮೋದಿ ಅವರ ಈ ಬಾರಿಯ ಅಮೆರಿಕ ಭೇಟಿ ಹಲವಾರು ಮಹತ್ವದ ಘಟನೆಗಳಿಗೆ ಸಾಕ್ಷಿಯಾಗಿದೆ. ಜೊತೆಗೆ ಮೊದಲೇ ಹೇಳಿದಂತೆ ಅಮೆರಿಕ ಮತ್ತು ಭಾರತದ ನಡುವಿನ ಸಂಬಂಧ ವೃದ್ಧಿಯ ವಿಷಯದಲ್ಲೂ ಮಹತ್ವ ಪಡೆದಿದೆ.

Tags

Related Articles

Close