ಪ್ರಚಲಿತ

ಪ್ರಧಾನಿ ಮೋದಿ ಮನ್ ಕಿ ಬಾತ್‌ನಲ್ಲಿ ಮಹಿಳೆಯರ ಬಗ್ಗೆ ಏನಂದ್ರು ಗೊತ್ತಾ?

ಮುಂದಿನ ಮಾರ್ಚ್ 8 ರ ಮಹಿಳಾ ದಿನಾಚರಣೆಯ ಪ್ರಯುಕ್ತ ಪ್ರಧಾನಿ ನರೇಂದ್ರ ಮೋದಿ ಅವರು ಶುಭಾಶಯಗಳನ್ನು ತಿಳಿಸಿದ್ದಾರೆ.

ನಿನ್ನೆ ನಡೆದ ಪ್ರಧಾನಿ ಮೋದಿ ಅವರ ಎರಡನೇ ಬಾರಿಯ ಸರ್ಕಾರದ ಕೊನೆಯ, 110 ನೇ ಸಂಚಿಕೆಯ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಭಾರತದ ಪ್ರಗತಿಯ ನಾಗಾಲೋಟಕ್ಕೆ ಮಹಿಳೆಯರು ನೀಡಿದ ಕೊಡುಗೆಗಳನ್ನು ನೆನಪಿಸಿಕೊಂಡು ಶ್ಲಾಘಿಸಿದ್ದಾರೆ.

ದೇಶದ ಮಹಿಳಾ ಶಕ್ತಿ ನೀಡಿದ ಕೊಡುಗೆಗಳಿಗೆ ನಾನು ಈ ಸಂದರ್ಭದಲ್ಲಿ ಧನ್ಯವಾದಗಳನ್ನು ಸಮರ್ಪಿಸುತ್ತಿದ್ದೇನೆ. ಮಹಿಳಾ ದಿನಾಚರಣೆ ಸ್ತ್ರೀಯರಿಗೆ ಧನ್ಯವಾದ ಸಲ್ಲಿಸುವುದಕ್ಕೆಂದೇ ಇರುವ ಒಳ್ಳೆಯ ದಿನ ಎನ್ನಬಹುದು. ಮಹಿಳೆಯರಿಗೆ ಪುರುಷರ ಹಾಗೆಯೇ ಸಮಾನ ಹಕ್ಕುಗಳು, ಅವಕಾಶಗಳು ದೊರೆತಾಗ ಸಮಾಜದ ಪ್ರಗತಿ ವೇಗ ಪಡೆಯುತ್ತದೆ. ಜಗತ್ತು ಸಮೃದ್ಧವಾಗುತ್ತದೆ. ಭಾರತದ ನಾರೀಶಕ್ತಿ ಇಂದು ಪ್ರತಿಯೊಂದು ಕ್ಷೇತ್ರದಲ್ಲಿಯೂ ಪ್ರಗತಿ ಸಾಧಿಸಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

ಪ್ರಸ್ತುತ ಗ್ರಾಮೀಣ ಭಾಗಗಳ ಮಹಿಳೆಯರು ಸಹ ಡ್ರೋನ್ ಪ್ರಯೋಗ ಮಾಡುತ್ತಾರೆ. ಡ್ರೋನ್ ದಿದಿ ಬಗ್ಗೆ ಪ್ರತಿ ಗ್ರಾಮದಲ್ಲಿಯೂ ಚರ್ಚೆಗಳು ನಡೆಯುತ್ತಿವೆ ಎಂದು ಈ‌ ಸ್ಕೀಮ್ ಕುರಿತು ಅವರು ತಮ್ಮ ಮನದಾಳ ಹಂಚಿಕೊಂಡಿದ್ದಾರೆ.

ಮಹಾರಾಷ್ಟ್ರದ ಗಡ್ಕರಿಯಲ್ಲಿ ಸರ್ಕಾರದ ಸಹಾಯ ಪಡೆದು ಆದಿವಾಸಿ ಸಮುದಾಯ ನಿರ್ಮಾಣ ಮಾಡಿರುವ ಹೋಮ್ ಸ್ಟೇ ಮತ್ತು ಅದರ ಸುತ್ತಲೂ ಬೆಳೆಸಲಾದ ಗಿಡಮೂಲಿಕೆಗಳ ಬಗ್ಗೆ ಮಾತನಾಡಿ, ಅಲ್ಲಿನ ಆದಿವಾಸಿ ಸಮುದಾಯವನ್ನು ಅಭಿನಂದಿಸಿದರು.

ಹಾಗೆಯೇ ಕರ್ನಾಟಕಕ್ಕೆ ಸಂಬಂಧಿಸಿದ ಹಾಗೆ ತಮ್ಮ ಗಾಯನದಿಂದ ಸಂಸ್ಕೃತಿ ಮತ್ತು ಜಾನಪದ ಲೋಕಕ್ಕೆ ತಮ್ಮದೇ ಆದ ಕೊಡುಗೆಗಳನ್ನು ನೀಡಿದ ಬಾಗಲಕೋಟೆಯ ವೆಂಕಪ್ಪ ಅಂಬಾಜಿ ಸುಬಾಟ್ಕರ್ ಅವರನ್ನು ಅಭಿನಂದಿಸಿದರು. ಇವರು ಸಾವಿರಕ್ಕೂ ಅಧಿಕ ಜನಪದ ಹಾಡುಗಳನ್ನು ಹಾಡುವುದರ ಜೊತೆಗೆ, ಅದೆಷ್ಟೋ ವಿದ್ಯಾರ್ಥಿಗಳಿಗೆ ಯಾವುದೇ ಶುಲ್ಕ ತೆಗೆದುಕೊಳ್ಳದೆ ವಿದ್ಯೆ ನೀಡಿದ್ದು, ಇವರು ಭಾರತೀಯ ಸಂಸ್ಕೃತಿಯನ್ನು ಶ್ರೀಮಂತಗೊಳಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ ಎಂದು ಪ್ರಧಾನಿ ಹರ್ಷ ವ್ಯಕ್ತಪಡಿಸಿದ್ದಾರೆ.

ಪ್ರತಿ ತಿಂಗಳ ಕೊನೆಯಲ್ಲಿ ಪ್ರಧಾನಿ ಮೋದಿ ಅವರು ಮನ್ ಕಿ ಬಾತ್‌ನಲ್ಲಿ ದೇಶದ ಆಗುಹೋಗುಗಳ ಬಗ್ಗೆ ಮಾತನಾಡುತ್ತಿದ್ದು, ತಮ್ಮ ಸರ್ಕಾರದ ಎರಡು ಅವಧಿಯಲ್ಲಿ ಒಟ್ಟು 110 ಮನ್ ಕಿ ಬಾತ್ ಕಾರ್ಯಕ್ರಮ ನಡೆಸಿದ್ದಾರೆ. ಇದೀಗ ಅವರ ಸರ್ಕಾರದ ಎರಡನೇ ಅವಧಿ ಕೊನೆಗೊಳ್ಳುತ್ತಿದ್ದು, ಮುಂದಿನ ಲೋಕಸಭಾ ಚುನಾವಣಾ ದೃಷ್ಟಿಯಿಂದ ಇದು ತಿಂಗಳ ಕೊನೆಯ ಮನ್ ಕಿ ಬಾತ್ ಕಾರ್ಯಕ್ರಮ ವಾಗಿದೆ.

ಮನ್ ಕಿ ಬಾತ್ 22 ಭಾರತೀಯ ಭಾಷೆಗಳು, 29 ಉಪಭಾಷೆಗಳ ಜೊತೆಗೆ 11 ವಿದೇಶಿ ಭಾಷೆಗಳಲ್ಲಿಯೂ ಪ್ರಸಾರವಾಗುವ ಮೂಲಕ ಜಗದ್ವಿಖ್ಯಾತಿ ಪಡೆದಿದೆ ಎನ್ನುವುದರಲ್ಲಿ ಸಂದೇಹ ಇಲ್ಲ.

Tags

Related Articles

Close